Urdu   /   English   /   Nawayathi

ತೀವ್ರ ಅಸಮಾಧಾನಗೊಂಡ ಮೂವರಿಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ಚಿಂತನೆ..?

share with us

ಬೆಂಗಳುರು: 07 ಜೂನ್ (ಫಿಕ್ರೋಖಬರ್ ಸುದ್ದಿ) ಸಂಪುಟ ವಿಸ್ತರಣೆಯಿಂದ ಅಸಮಾಧಾನಗೊಂಡಿರುವ ಅತೃಪ್ತರ ಪೈಕಿ ತೀವ್ರ ಅಪಾಯಕಾರಿಯಾದ ಮೂವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಕಾಂಗ್ರೆಸ್ ಪಾಲಿಗೆ ಬಂದಿರುವ 22 ಸಚಿವ ಸ್ಥಾನಗಳ ಪೈಕಿ ಈಗಾಗಲೇ ಉಪಮುಖ್ಯಮಂತ್ರಿ ಹಾಗೂ 15 ಸಚಿವ ಸ್ಥಾನ ಭರ್ತಿ ಮಾಡಲಾಗಿದೆ. ಶೀಘ್ರವೇ ಎರಡನೆ ಹಂತದ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಇದರಲ್ಲಿ 6 ಸ್ಥಾನಗಳ ಪೈಕಿ ಮೂವರಿಗೆ ಸ್ಥಾನ ನೀಡುವ ಸಾಧ್ಯತೆಗಳಿವೆ.

ಸಚಿವ ಸ್ಥಾನ ವಂಚಿತರ ಪೈಕಿ ಎಂ.ಬಿ. ಪಾಟೀಲ್, ಎಚ್.ಕೆ. ಪಾಟೀಲ್, ಎಸ್.ಆರ್. ಪಾಟೀಲ್, ಬಿ.ಸಿ. ಪಾಟೀಲ್, ಎಂ.ಟಿ.ಬಿ. ನಾಗರಾಜ್, ಸತೀಶ್ ಜಾರಕಿಹೊಳಿ, ರೋಷನ್ ಬೇಗ್, ರಾಮಲಿಂಗಾರೆಡ್ಡಿ , ಲಕ್ಷ್ಮಿ ಹೆಬ್ಬಾಳ್ಕರ್, ರಹಿಂಖಾನ್, ಡಾ.ಅಜಯ್‍ಸಿಂಗ್, ಸಂಗಮೇಶ್ವರ್, ಡಾ.ಸುಧಾಕರ್ ಸೇರಿದಂತೆ 30ಕ್ಕೂ ಹೆಚ್ಚು ಮಂದಿ ಅತೃಪ್ತರು ಪ್ರತ್ಯೇಕ ಸಭೆಗಳನ್ನು ನಡೆಸಿ ವರಿಷ್ಠರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ. ನಿನ್ನೆ ರಾತ್ರಿ ಖಾಸಗಿ ಹೊಟೇಲ್‍ನಲ್ಲಿ ಸತೀಶ್ ಜಾರಕಿಹೊಳಿ, ಬಿ.ಸಿ. ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಹಲವರು ಪ್ರತ್ಯೇಕ ಸಭೆ ನಡೆಸಿ ವರಿಷ್ಠರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಖಾಡಕ್ಕಿಳಿದ ನಾಯಕರು:

ಅತೃಪ್ತರ ಈ ಎಲ್ಲಾ ಬೆಳವಣಿಗೆ ಕಾಂಗ್ರೆಸ್ ಪಾಳಯದಲ್ಲಿ ತಲೆನೋವಿಗೆ ಕಾರಣವಾಗಿದೆ. ಹಾಗಾಗಿ ಅತೃಪ್ತರನ್ನು ಸಮಾಧಾನಪಡಿಸಲು ಹಿರಿಯ ನಾಯಕರು ಅಖಾಡಕ್ಕಿಳಿದಿದ್ದಾರೆ.  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಪರಮೇಶ್ವರ್, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತಿತರರು ತಮ್ಮ ಭಾಗದ ಪ್ರಮುಖ ಅತೃಪ್ತ ಶಾಸಕರು, ಮುಖಂಡರೊಂದಿಗೆ ಮಾತುಕತೆಗೆ ಮುಂದಾಗಿದ್ದಾರೆ. ಅಲ್ಲದೆ ಈಗಾಗಲೇ ಅತೃಪ್ತರ ಮನವೊಲಿಕೆ ಜವಾಬ್ದಾರಿಯನ್ನು ನೂತನ ಸಚಿವರ ಹೆಗಲಿಗೆ ವಹಿಸಲಾಗಿದೆ.

ನಿರ್ಲಿಪ್ತವಾಗಿರುವ ಹೈಕಮಾಂಡ್:

ನಿನ್ನೆ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದಂತೆ ಅತೃಪ್ತ ಶಾಸಕರು ಹಾಗೂ ಅವರ ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆಗಿಳಿದರು. ಆದರೆ ಅಸಮಾಧಾನಗೊಂಡವರನ್ನು ಸಮಾಧಾನಪಡಿಸಲು ಕೇಂದ್ರ ನಾಯಕರಾಗಲೀ, ರಾಜ್ಯ ನಾಯಕರಾಗಲೀ ಮುಂದಾಗಲಿಲ್ಲ. ನಿನ್ನೆ ರಾತ್ರಿಯ ನಂತರ ಕೆಲ ಶಾಸಕರಿಗೆ ಕರೆ ಮಾಡಿ ಸಿದ್ದರಾಮಯ್ಯ, ಪರಮೇಶ್ವರ್ ಮಾತಕುತೆ ನಡೆಸಿದ್ದಾರೆ. ಆದರೆ ಇದಕ್ಕೆಲ್ಲ ಕಾರಣೀಭೂತರಾದ ಹೈಕಮಾಂಡ್ ಪರವಾಗಿ ಗುಲಾಂನಬಿ ಅಜಾದ್ ಆಗಲೀ, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಆಗಲೀ, ಎಐಐಸಿ ಅಧ್ಯಕ್ಷ ರಾಹುಲ್‍ಗಾಂಧಿ ಆಗಲೀ ಈವರೆಗೂ ಅತೃಪ್ತರ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲಿಲ್ಲ.

ಅತೃಪ್ತರಲ್ಲಿ ಪ್ರಮುಖವಾಗಿ ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್, ರೋಷನ್ ಬೇಗ್, ರಾಮಲಿಂಗಾರೆಡ್ಡಿ, ಎಸ್.ಆರ್. ಪಾಟೀಲ್‍ರಂತಹ ಹಿರಿಯ ಶಾಸಕರು ರಾಜ್ಯ ನಾಯಕರ ಮಾತಿಗೆ ಜಗ್ಗುವ ಸ್ಥಿತಿಯಲ್ಲಿಲ್ಲ. ಅವರನ್ನು ಸಮಾಧಾನಪಡಿಸಲು ಹೈಕಮಾಂಡ್ ಮಧ್ಯಪ್ರವೇಶ ಅತ್ಯಗತ್ಯ.  ಸಂಪುಟ ವಿಸ್ತರಣೆ ವಿಷಯದಲ್ಲಿ ರಾಜ್ಯ ನಾಯಕರಿಗೆ ಜವಾಬ್ದಾರಿ ನೀಡಿದ್ದು , ಇದರಿಂದಾಗುವ ಪರಿಣಾಮವನ್ನು ಕೂಡ ನೀವೇ ನಿಭಾಯಿಸಿ ಎಂದು ಹೈಕಮಾಂಡ್ ಹೇಳಿದೆ ಎನ್ನಲಾಗಿದೆ.
ಪರಿಸ್ಥಿತಿ ಬಿಗಡಾಯಿಸಿದಾಗ ಮಧ್ಯಪ್ರವೇಶ ಮಾಡುವ ಮೂಲಕ ಹೈಕಮಾಂಡ್ ತನ್ನ ಪ್ರಾಬಲ್ಯವನ್ನು ಮರು ಸ್ಥಾಪಿಸಿಕೊಳ್ಳುವ ಚಿಂತನೆ ನಡೆಸಿದೆ.

ಇತ್ತೀಚಿನ ದಿನಗಳಲ್ಲಿ ಎಐಸಿಸಿಗಿಂತಲೂ ಕರ್ನಾಟಕ ಕಾಂಗ್ರೆಸ್ ಸ್ಟ್ರಾಂಗ್ ಎಂಬ ಮಾತುಗಳು ಕೇಳಿಬಂದಿದ್ದವು. ವಿಧಾನಸಭೆ ಚುನಾವಣೆ ನಂತರ ಹೈಕಮಾಂಡ್ ಅತ್ಯಂತ ಚುರುಕಾಗಿ ಪ್ರತಿಕ್ರಿಯಿಸುತ್ತಿದ್ದು, ಮೈತ್ರಿ ಸರ್ಕಾರ ರಚನೆಯಲ್ಲಿ ತನ್ನ ಹಿಡಿತ ಸಾಧಿಸಿತ್ತು.  ಅದೇ ರೀತಿ ಸಂಪುಟ ವಿಸ್ತರಣೆಯ ನಂತರ ಬೆಳವಣಿಗೆ ನಿಭಾಯಿಸಲು ಸೂಕ್ತ ಸಮಯದಲ್ಲಿ ಮಧ್ಯ ಪ್ರವೇಶಿಸಿ ಮತ್ತಷ್ಟು ರಾಜ್ಯ ಕಾಂಗ್ರೆಸ್ ಮೇಲೆ ತನ್ನ ಹಿಡಿತ ಬಿಗಿಗೊಳಿಸಲು ಮುಂದಾಗಿದೆ.  ಅದಕ್ಕೂ ಮುನ್ನ ಪರಿಸ್ಥಿತಿಯನ್ನು ತಾವೇ ತಿಳಿಗೊಳಿಸಲು ರಾಜ್ಯ ಕಾಂಗ್ರೆಸಿಗರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا