Urdu   /   English   /   Nawayathi

ಯುವಜನರ ಮನಗೆದ್ದ ಐಪಿಎಸ್‌ ಅಧಿಕಾರಿ

share with us

ಜಮ್ಮು: 07 ಜೂನ್ (ಫಿಕ್ರೋಖಬರ್ ಸುದ್ದಿ) ಸದಾ ಗುಂಡಿನ ಮೊರೆತ, ಭದ್ರತಾ ಪಡೆಗಳತ್ತ ಕಲ್ಲೆಸೆತ... ಇಂತಹ ಸುದ್ದಿಗಳಿಂದ, ತನ್ನ ಪ್ರಕ್ಷುಬ್ಧ ಸ್ಥಿತಿಯಿಂದಲೇ ಗಮನ ಸೆಳೆಯುತ್ತಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯೊಬ್ಬರು ಸ್ಪರ್ಧಾತ್ಮಕ ಪರೀಕ್ಷೆಗೆ ಅಭ್ಯರ್ಥಿಗಳನ್ನು ಅಣಿಗೊಳಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ವಿಶೇಷ ಎಂದರೆ, ಈ ಅಧಿಕಾರಿ ಯಾವುದೇ ಕಾಲೇಜಿಗೆ ಹೋಗಿ ಪದವಿ ಪಡೆದು ಐಪಿಎಸ್‌ ಉತ್ತೀರ್ಣರಾಗಿಲ್ಲ. ಪರಿಸ್ಥಿತಿಯ ಒತ್ತಡದಿಂದಾಗಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಿಂದಲೇ ಪಡೆದು, ಐಪಿಎಸ್‌ ಪರೀಕ್ಷೆ ಪಾಸಾಗಿದ್ದಾರೆ.

ದಕ್ಷಿಣ ಜಮ್ಮುವಿನ ಎಸ್ಪಿ ಸಂದೀಪ್‌ ಚೌಧರಿ ಮೇಲೆ ತಿಳಿಸಿರುವ ಎರಡು ಕಾರಣಗಳಿಂದ ಗಮನ ಸೆಳೆಯುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆ ಬರೆದು, ಬದುಕು ಕಟ್ಟಿಕೊಳ್ಳ ಬಯಸುವವರ ಮನಸು ಗೆದ್ದಿದ್ದಾರೆ.

ಆಪರೇಷನ್‌ ಡ್ರೀಮ್ಸ್‌: ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳ ಬಯಸುವವರಿಗೆ ಮಾರ್ಗದರ್ಶನ ನೀಡುವ ಸಲುವಾಗಿಯೇ ‘ಆಪರೇಷನ್‌ ಡ್ರೀಮ್ಸ್‌’ ಹೆಸರಿನಲ್ಲಿ ಕಾರ್ಯಕ್ರಮ ರೂಪಿಸಿದ ಸಂದೀಪ್‌ ಚೌಧರಿ, ಬಡ, ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಿಗೆ ಮಾದರಿಯಾಗಿದ್ದಾರೆ.

‘ನನ್ನ ಕಚೇರಿಯಲ್ಲಿಯೇ ತರಬೇತಿ ಆರಂಭಿಸಿದಾಗ, ಸಬ್‌ ಇನ್ಸ್‌ಪೆಕ್ಟರ್‌ ಪರೀಕ್ಷೆ ತೆಗೆದುಕೊಳ್ಳಬಯಸಿದ್ದ 10 ಜನ ಅಭ್ಯರ್ಥಿಗಳು ತರಬೇತಿಗೆ ಹಾಜರಾದರು. ತರಬೇತಿಗೆ ಹಾಜರಾಗಲು ಬಯಸುವವರ ಸಂಖ್ಯೆ ಕ್ರಮೇಣ ಹೆಚ್ಚುತ್ತಾ ಹೋಯಿತು. ತರಬೇತಿಗೆ ಹಾಜರಾಗುವವರ ಪೈಕಿ 25 ಯುವತಿಯರೂ ಇರುವುದು ಸಂತಸ ಮತ್ತು ಹೆಗ್ಗಳಿಕೆಯ ವಿಷಯ’ ಎಂದು ಚೌಧರಿ ಹೇಳುತ್ತಾರೆ.

‘ತರಬೇತಿ ಪಡೆಯಲು ಬಯಸುವವರ ಸಂಖ್ಯೆ ಹೆಚ್ಚಿದಂತೆ ಅನಿವಾರ್ಯವಾಗಿ ನಾನು ಬೇರೆ ಸ್ಥಳ ಹುಡುಕಾಡಬೇಕಾಯಿತು. ಆಗ ಜಮ್ಮು ವಿಮಾನ ನಿಲ್ದಾಣ ರಸ್ತೆಗೆ ಹೊಂದಿಕೊಂಡಿರುವ ಖಾಸಗಿ ಸಮುದಾಯ ಭವನಕ್ಕೆ ತರಬೇತಿ ಸ್ಥಳಾಂತರಿಸಿದೆ. ಕಟ್ಟಡದ ಮಾಲೀಕರೂ ಸ್ಥಳ ನೀಡಿ ಪ್ರೋತ್ಸಾಹಿಸಿದ್ದು ವಿಶೇಷ’ ಎಂದೂ ಹೇಳುತ್ತಾರೆ.

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಗ್ಗೆ ನನಗೆ ನಂಬಿಕೆ ಇರಲಿಲ್ಲ. ಆದರೆ ಸಂದೀಪ್‌ ಚೌಧರಿ ಅವರಲ್ಲಿರುವ ಅರ್ಪಣಾ ಮನೋಭಾವ ನನ್ನ ದೃಷ್ಟಿಕೋನ ಬದಲಿಸಿತು
   - ಪ್ರೀತಿ, ತರಬೇತಿ ಪಡೆಯುತ್ತಿರುವ ಯುವತಿ

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا