Urdu   /   English   /   Nawayathi

ಎನ್‌ಸಿಪಿ ಹಿರಿಯ ನಾಯಕ ಛಗನ್‌ ಭುಜಬಲ್‌ ಮತ್ತೆ ಶಿವಸೇನೆ ತೆಕ್ಕೆಗೆ?

share with us

ಮುಂಬಯಿ: 23 ಮೇ (ಫಿಕ್ರೋಖಬರ್ ಸುದ್ದಿ) ಅಕ್ರಮ ಹಣ ವರ್ಗಾವಣೆ  ಪ್ರಕರಣದಲ್ಲಿ  ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿ  2 ವರ್ಷಗಳ ಕಾಲ ಜೈಲಿನಲ್ಲಿದ್ದ  ಎನ್‌ಸಿಪಿ  ಹಿರಿಯ ನಾಯಕ, ಮಾಜಿ  ಉಪ ಮುಖ್ಯಮಂತ್ರಿ  ಛಗನ್‌ ಭುಜಬಲ್‌ ಅವರು  ಎರಡು ವಾರಗಳ ಹಿಂದೆ  ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದರು. ಈ  ಬೆಳವಣಿಗೆಯ ಬಳಿಕ  ಛಗನ್‌ ಭುಜಬಲ್‌ ಅವರು  ಮತ್ತೆ  ರಾಜಕೀಯದಲ್ಲಿ ಸಕ್ರಿಯರಾಗಲಿದ್ದಾರೆಯೇ  ಎಂಬ  ಚರ್ಚೆಗಳು  ತೀವ್ರಗೊಂಡಿರುವ  ಬೆನ್ನಲ್ಲೇ  ಭುಜಬಲ್‌  ಅವರು  ತನ್ನ  ಮಾತೃಪಕ್ಷ  ಶಿವಸೇನೆಗೆ  ವಾಪಸಾಗಲಿದ್ದಾರೆ ಎಂಬ  ಗುಸು ಗುಸು  ರಾಜ್ಯದ  ರಾಜಕೀಯ ಪಡಸಾಲೆಯಲ್ಲಿ  ಹಬ್ಬಿದೆ. 

ಜೈಲಿನಿಂದ ಬಿಡು ಗಡೆಯಾಗಿ  ಹೊರಬಂದ  ಕೆಲವೇ ದಿನಗಳಲ್ಲಿ  ಭುಜಬಲ್‌ ಅವರ  ಪುತ್ರ  ಪಂಕಜ್‌ ಭುಜಬಲ್‌ ಅವರು  ಶಿವಸೇನೆ ವರಿಷ್ಠ  ಉದ್ಧವ್‌ ಠಾಕ್ರೆ ಅವರ  ನಿವಾಸ "ಮಾತೋಶ್ರೀ'ಗೆ  ಭೇಟಿ ನೀಡಿ  ಉದ್ಧವ್‌ ಅವರೊಂದಿಗೆ  ಮಾತುಕತೆ ನಡೆಸಿದಾಗಿನಿಂದ ಭುಜಬಲ್‌  ಶಿವಸೇನೆಗೆ ಮರಳಲಿದ್ದಾರೆ ಎಂಬ  ಬಗೆಗೆ  ವದಂತಿಗಳು  ಹರಡಲಾರಂಭಿಸಿದ್ದವು.  

ಈ ವದಂತಿಗೆ  ಪುಷ್ಟಿ ಎಂಬಂತೆ ಇದೀಗ  ಶಿವಸೇನೆ  ಕಾರ್ಯದರ್ಶಿ  ಮಿಲಿಂದ್‌ ನಾರ್ವೇಕರ್‌ ಅವರು  ರವಿವಾರದಂದು  ಛಗನ್‌ ಭುಜಬಲ್‌ ಅವರನ್ನು  ಭೇಟಿಯಾಗಿ  ಸಮಾಲೋಚನೆ ನಡೆಸಿರುವುದು  ಕುತೂಹಲಕ್ಕೆ  ಕಾರಣವಾಗಿದೆ. ಶಿವಸೇನೆಯಿಂದಲೇ  ತಮ್ಮ  ರಾಜಕೀಯ  ಆರಂಭಿಸಿದ್ದ  ಛಗನ್‌ ಭುಜಬಲ್‌  ಅವರು  1991ರಲ್ಲಿ  ಶಿವಸೇನೆ  ಸ್ಥಾಪಕ ಬಾಳಾ ಠಾಕ್ರೆ ಅವರೊಂದಿಗಿನ  ವೈಮನಸ್ಸಿನ  ಕಾರಣದಿಂದಾಗಿ  ಪಕ್ಷವನ್ನು  ತೊರೆದಿದ್ದರು. 

ಛಗನ್‌ ಭುಜಬಲ್‌ ಅವರನ್ನು  ಭೇಟಿಯಾಗಿ  ಸಮಾಲೋಚನೆ ನಡೆಸಿರುವುದನ್ನು  ನಾರ್ವೇಕರ್‌  ದೃಢಪಡಿಸಿದ್ದಾರೆ. ಸದ್ಯ ಭುಜಬಲ್‌ ಅವರು  ನಗರದ  ಆಸ್ಪತ್ರೆಯೊಂದರಲ್ಲಿ  ಚಿಕಿತ್ಸೆ  ಪಡೆಯುತ್ತಿದ್ದು  ಅಲ್ಲಿಗೇ ತೆರಳಿ  ಭುಜಬಲ್‌ ಅವರೊಂದಿಗೆ  ಮಾತುಕತೆ ನಡೆಸಿರುವುದಾಗಿ  ಅವರು  ಹೇಳಿದರು. ಆದರೆ  ಮಾತುಕತೆಯ  ವಿವರಗಳನ್ನು  ನೀಡಲು  ನಾರ್ವೇಕರ್‌ ನಿರಾಕರಿಸಿದರು. ಈರ್ವರು  ನಾಯಕರು ಸುಮಾರು  ಒಂದು ತಾಸಿಗೂ  ಅಧಿಕ ಸಮಯ  ಮಾತುಕತೆ ನಡೆಸಿದರು ಎನ್ನಲಾಗಿದೆ.  

ಭುಜಬಲ್‌  ಸಕ್ರಿಯ ರಾಜಕಾರಣಕ್ಕೆ ಮರಳುವುದಕ್ಕೂ ಮುನ್ನ ಠಾಕ್ರೆ  ಕುಟುಂಬ ದೊಂದಿಗಿನ  ತನ್ನ ಸಂಬಂಧವನ್ನು  ಸುಧಾರಿಸಿ ಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದವರ  ಆಪ್ತ ಮೂಲಗಳು ತಿಳಿಸಿವೆ.       

ಆದರೆ  ಶಿವಸೇನೆಯ ಮೂಲಗಳು  ಇದೊಂದು  ಸೌಹಾರ್ದ ಭೇಟಿ  ಎಂದಿದ್ದು  ಅನಾರೋಗ್ಯದ ಕಾರಣದಿಂದಾಗಿ  ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿರುವ  ಭುಜಬಲ್‌ ಅವರ ಯೋಗಕ್ಷೇಮವನ್ನು  ವಿಚಾರಿಸಲು ನಾರ್ವೇಕರ್‌ ಆಸ್ಪತ್ರೆಗೆ ಭೇಟಿ ನೀಡಿದ್ದರೇ ಹೊರತು ಭೇಟಿಯ ವೇಳೆ  ಯಾವುದೇ ರಾಜಕೀಯ ವಿಚಾರಗಳು  ಚರ್ಚೆಗೆ ಬರಲಿಲ್ಲ ಎಂದು ಸ್ಪಷ್ಟಪಡಿಸಿವೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا