Urdu   /   English   /   Nawayathi

ಸರ್ಕಾರ ರಚನೆ ಯತ್ನ ಸರಿ; ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸಮರ್ಥನೆ

share with us

ನವದೆಹಲಿ: 22 ಮೇ (ಫಿಕ್ರೋಖಬರ್ ಸುದ್ದಿ) "ಸಂಖ್ಯಾ ಬಲ ಇಲ್ಲದ ಹೊರತಾಗಿಯೂ ಕರ್ನಾಟಕದಲ್ಲಿ ಸರ್ಕಾರ ರಚಿಸಲು ಮುಂದಾಗಿದ್ದು ಸರಿಯಾಗಿಯೇ ಇದೆ'' ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸಮರ್ಥಿಸಿಕೊಂಡಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಕೂಟ ರಾಜ್ಯದ ಜನರು ನೀಡಿದ ಜನಾದೇಶವನ್ನು ವಂಚಿಸಿದೆ ಎಂದು ಟೀಕಿಸಿದ್ದಾರೆ. ಎರಡೂ ಪಕ್ಷಗಳು ತಮ್ಮ ತಮ್ಮ ಶಾಸಕರನ್ನು ಹೋಟೆಲ್‌ಗ‌ಳಲ್ಲಿ ಕೂಡಿ ಹಾಕಿದ್ದಾರೆ. ಇಂಥ ಸರ್ಕಾರ ಎಷ್ಟು ಸಮಯ ಸರ್ಕಾರ ನಡೆಸಲಿದೆ ಎನ್ನುವುದೇ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.

ಸೋಮವಾರ ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸೋತರೂ ಅದನ್ನು ವಿಜಯ ಎಂದುಕೊಂಡು ಸಂಭ್ರಮಾಚರಣೆ ಮಾಡುತ್ತಿದೆ. ಈ ಮೂಲಕ ಗೆಲುವು ತನ್ನದೇ ಎಂದು ವ್ಯಾಖ್ಯಾನಿಸುತ್ತಿದೆ. ಆದರೆ, ಸಂಭ್ರಮಾಚರಣೆ ಮಾಡುತ್ತಿರುವುದು ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳೇ ಹೊರತು ಕರ್ನಾಟಕದ ಜನತೆಯಲ್ಲ ಎಂದು ವ್ಯಂಗ್ಯವಾಡಿದರು. ಅಲ್ಲದೆ, 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಹೇಳಿಕೊಳ್ಳುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಅಮಿತ್‌ ಶಾ ತಿಳಿಸಿದ್ದಾರೆ.

ಅಪವಿತ್ರ ಮೈತ್ರಿ: ಕಾಂಗ್ರೆಸ್‌-ಜೆಡಿಎಸ್‌ ನಡುವಿನ ಮೈತ್ರಿ ಅಪವಿತ್ರವಾದುದು ಎಂದು ವಾಗ್ಧಾಳಿ ನಡೆಸಿದ ಅಮಿತ್‌ ಶಾ, ಎಚ್‌.ಡಿ.ದೇವೇಗೌಡರ ಪಕ್ಷ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ವಿರೋಧಿಸಿಯೇ ಪ್ರಚಾರ ನಡೆಸಿತ್ತು ಎಂದರು.

ಸಮರ್ಥನೆ: ಅಗತ್ಯ ಸಂಖ್ಯಾಬಲ ಇಲ್ಲದಿರುವ ಹೊರತಾಗಿಯೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸರ್ಕಾರ ರಚನೆಗೆ ಪ್ರಯತ್ನ ಮಾಡಿದ್ದು ಸರಿಯಾಗಿದೆ. ಬಿಜೆಪಿಗೆ ಅತ್ಯಂತ ಹೆಚ್ಚು ಸ್ಥಾನಗಳು ಲಭಿಸಿವೆ. ಬಹುಮತ ಸಾಬೀತು ಮಾಡಲು ಏಳು ಸ್ಥಾನಗಳು ಅಗತ್ಯವಾಗಿದ್ದವು. ಇದರ ಜತೆಗೆ ಕರ್ನಾಟಕದ ಜನರು ಕಾಂಗ್ರೆಸ್‌ ವಿರುದ್ಧವಾಗಿ ತೀರ್ಪು ನೀಡಿದ್ದಾರೆ. ಯಾವುದೇ ಪಕ್ಷಕ್ಕೆ ಬಹುಮತ ಬರಲಿಲ್ಲ ಎಂಬ ಕಾರಣಕ್ಕೆ ಮತ್ತೆ ಚುನಾವಣೆ ನಡೆಸುವುದು ಸೂಕ್ತವಲ್ಲ ಎಂದರು ಅಮಿತ್‌ ಶಾ.

ಶಾಸಕರನ್ನು ಹೋಟೆಲ್‌ಗ‌ಳಲ್ಲಿ ಯಾಕೆ ಬಂಧಿಸಿ ಇರಿಸಿದ್ದಾರೆ ಎಂಬ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರನ್ನು ಪ್ರಶ್ನಿಸಬೇಕಾಗಿದೆ. ಒಂದು ವೇಳೆ ಎರಡೂ ಪಕ್ಷಗಳ ಶಾಸಕರನ್ನು ಕೂಡಿ ಹಾಕಿರದೆ ಇದ್ದರೆ, ಯಾರಿಗೆ ಬೆಂಬಲ ನೀಡಬೇಕು ಎಂಬ ಬಗ್ಗೆ ಅವರವರ ಕ್ಷೇತ್ರಗಳ ಮತದಾರರು ಸೂಚಿಸುತ್ತಿದ್ದರು ಎಂದು ಅಮಿತ್‌ ಶಾ ಹೇಳಿದ್ದಾರೆ.

ಆರೋಪ ತಿರಸ್ಕಾರ:
ಗೋವಾ, ಮೇಘಾಲಯ, ಮಣಿಪುರಗಳಲ್ಲಿ ಅಗತ್ಯ ಬಹುಮತ ಇಲ್ಲದ ಹೊರತಾಗಿಯೂ ಸರ್ಕಾರ ರಚಿಸಿರುವುದನ್ನು ಅಮಿತ್‌ ಶಾ ಸಮರ್ಥಿಸಿಕೊಂಡಿದ್ದಾರೆ. ಗೋವಾ, ಮಣಿಪುರಗಳಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯ ಹಕ್ಕನ್ನೇ ಮಂಡಿಸಲಿಲ್ಲ ಎಂದು ಶಾ ಹೇಳಿದ್ದಾರೆ. ಕರ್ನಾಟಕದಲ್ಲಿ ಶಾಸಕರ ಮೇಲೆ ಪ್ರಭಾವ ಬೀರಲು ಕುದುರೆ ವ್ಯಾಪಾರ ನಡೆಸುವ ಯತ್ನ ನಡೆದಿತ್ತು ಎಂಬ ಆರೋಪಗಳನ್ನೂ ಶಾ ತಿರಸ್ಕರಿಸಿದ್ದಾರೆ.

ಸುಪ್ರೀಂಕೋರ್ಟ್‌ಗೆ ಮನವಿ
ಕರ್ನಾಟಕದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ಅನುವು ಮಾಡಿಕೊಟ್ಟಿರುವುದನ್ನು ಪ್ರಶ್ನಿಸಿ ಅಖೀಲ ಭಾರತ ಹಿಂದೂಮಹಾಸಭಾ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದೆ. ತುರ್ತಾಗಿ ಅರ್ಜಿಯನ್ನು ವಿಚಾರಣೆ ಮಾಡಬೇಕು. ರಾಜ್ಯಪಾಲರು ಕುಮಾರಸ್ವಾಮಿಗೆ ನೀಡಿರುವ ಆಹ್ವಾನವನ್ನು ತಿರಸ್ಕರಿಸಬೇಕು. ಚುನಾವಣೆ ನಂತರ ಎರಡೂ ಪಕ್ಷಗಳು ಮಾಡಿಕೊಂಡಿರುವ ಮೈತ್ರಿ ಅಸಾಂವಿಧಾನಿಕ ಎಂದೂ ಅದು ಅರ್ಜಿಯಲ್ಲಿ ತಿಳಿಸಿದೆ.

ಜಾತ್ಯತೀತ ಪಕ್ಷಗಳ ನೆರವಿನಿಂದ ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್‌ ಅಧಿಕಾರದಿಂದ ಕೆಳಗಿಳಿಸಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ -ಜೆಡಿಎಸ್‌ ಜತೆಗೆ ಮೈತ್ರಿ ಮಾಡಿರುವುದು ಆ ನಿಟ್ಟಿನ ಪ್ರಯತ್ನವಾಗಿದೆ.
- ಎ.ಕೆ.ಆ್ಯಂಟನಿ, ಕೇಂದ್ರದ ಮಾಜಿ ಸಚಿವ

ಮೈತ್ರಿ ಸರ್ಕಾರದಲ್ಲಿ ಜನರ ಹಿತ ಸಾಧನೆ ಸಾಧ್ಯವಿಲ್ಲ. ಕರ್ನಾಟಕದಲ್ಲಿ ನಡೆದ ಚುನಾವಣೆಯಲ್ಲಿ ಯಾವುದೇ ಒಂದು ಪಕ್ಷ ಸ್ವತಂತ್ರವಾಗಿ ಅಧಿಕಾರ ನಡೆಸಲು ಸಾಧ್ಯವಾಗಿಲ್ಲ.
- ನ್ಯಾ.ಎನ್‌.ಸಂತೋಷ್‌ ಹೆಗ್ಡೆ, ನಿವೃತ್ತ ಲೋಕಾಯುಕ್ತ

ಕರ್ನಾಟಕದಲ್ಲಿ ಯಾವ ಪಕ್ಷಕ್ಕೂ ಸರ್ಕಾರ ರಚಿಸಲು ಸಾಧ್ಯವಾಗದೇ ಇರುವ ಸ್ಥಿತಿಯಲ್ಲಿದೆ. ಹೀಗಾಗಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವುದೇ ಉತ್ತಮ ನಿರ್ಧಾರ. ಅದು ಪರಿಹಾರ ಅಲ್ಲವಾದರೂ, ಅನಪೇಕ್ಷಿತ ಘಟನೆ ತಡೆಯಲು ನೆರವಾಗುತ್ತದೆ.
- ಟಿ.ಎಸ್‌.ಕೃಷ್ಣಮೂರ್ತಿ, ನಿವೃತ್ತ ಮುಖ್ಯ ಚುನಾವಣಾ ಆಯುಕ್ತ

ಬಿಜೆಪಿಯಿಂದ 6,500 ಕೋಟಿ ವೆಚ್ಚ: ಆನಂದ್‌ ಶರ್ಮಾ
ಕರ್ನಾಟಕ ಚುನಾವಣೆಗಾಗಿ ಬಿಜೆಪಿ 6,500 ಕೋಟಿ ರೂ.ಗಳಿಗಿಂತಲೂ ಹೆಚ್ಚು ಖರ್ಚು ಮಾಡಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ನವದೆಹಲಿಯಲ್ಲಿ ಸೋಮವಾರ ಮಾತನಾಡಿದ ಕಾಂಗ್ರೆಸ್‌ ನಾಯಕ ಆನಂದ ಶರ್ಮಾ ಅವರು ಬಿಜೆಪಿ ವಿರುದ್ಧ ಇಂಥ ಗಂಭೀರ ಆರೋಪ ಮಾಡಿದ್ದಾರೆ. "ಒಟ್ಟಾರೆ ಸುಮಾರು 6,500 ಕೋಟಿ ರೂ.ಗಳನ್ನು ಬಿಜೆಪಿ ವೆಚ್ಚ ಮಾಡಿದೆ. 

ಚುನಾವಣೆಯ ವೆಚ್ಚಕ್ಕೆಂದು ಪ್ರತಿಯೊಬ್ಬ ಶಾಸಕನಿಗೆ ಬಿಜೆಪಿ ತಲಾ 20 ಕೋಟಿ ರೂ.ಗಳನ್ನು ನೀಡಿತ್ತು. ಉಳಿದ 400 ಕೋಟಿ ರೂ.ಗಳನ್ನು ಕಾಂಗ್ರೆಸ್‌-ಜೆಡಿಎಸ್‌ ಶಾಸಕರ ಖರೀದಿಗೆಂದು ಇಟ್ಟುಕೊಂಡಿತ್ತು' ಎಂದು ಶರ್ಮಾ ಹೇಳಿದ್ದಾರೆ. 

ಜತೆಗೆ, ಬಿಜೆಪಿ ಕರ್ನಾಟಕ ಚುನಾವಣೆಗಾಗಿ ಮಾಡಿದ ವೆಚ್ಚದ ಮೂಲದ ಬಗ್ಗೆ ತನಿಖೆಯಾಗಬೇಕು ಎಂದೂ ಒತ್ತಾಯಿಸಿದ್ದಾರೆ.  ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಸಂವಿಧಾನವನ್ನು ಗೌರವಿಸಬೇಕು ಎಂಬವ ಬಗ್ಗೆ ಯಾವುದೇ ಜ್ಞಾನ ಇಲ್ಲ ಎಂದು ಅವರು ಲೇವಡಿ ಮಾಡಿದ್ದಾರೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا