Urdu   /   English   /   Nawayathi

ಗೆದ್ದವರ ಸಂಭ್ರಮ, ಸೋತವರ ಪಲಾಯನ

share with us

ಬೆಂಗಳೂರು: ಮೇ 16 (ಫಿಕ್ರೋಖಬರ್ ಸುದ್ದಿ) ‘ಜೆಡಿಎಸ್‌ ಅಭ್ಯರ್ಥಿ ಮುನ್ನಡೆಯಲ್ಲಿದ್ದಾರೆ..., ಕಾಂಗ್ರೆಸ್ ಅಭ್ಯರ್ಥಿ ವಿಜಯಶಾಲಿಯಾದರು..., ಬಿಜೆಪಿ ಅಭ್ಯರ್ಥಿ ಮುನ್ನಡೆಯಲ್ಲಿದ್ದಾರೆ... ’ ಹೀಗೆ ಮೈಕ್‌ನಲ್ಲಿ ಕೂಗಿ ಹೇಳುತ್ತಿದ್ದಂತೆ ಮತ ಎಣಿಕೆ ಕೇಂದ್ರದ ಹೊರಗಿದ್ದ ಕಾರ್ಯಕರ್ತರು ಸಂಭ್ರಮಪಟ್ಟರು. ಸೋತ ಅಭ್ಯರ್ಥಿಗಳ ಬೆಂಬಲಿಗರು, ಕೇಂದ್ರದಿಂದ ಪಲಾಯನಗೈದರು.

ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆದ ವಸಂತನಗರದ ಮೌಂಟ್‌ ಕಾರ್ಮೆಲ್‌ ಕಾಲೇಜಿನ ಕೇಂದ್ರದಲ್ಲಿ ಕಂಡುಬಂದ ದೃಶ್ಯಗಳಿವು. ಮಹಾಲಕ್ಷ್ಮಿ ಲೇಔಟ್,  ಸರ್ವಜ್ಞನಗರ, ಹೆಬ್ಬಾಳ, ಕೆ.ಆರ್.ಪುರ ಹಾಗೂ ಸಿ.ವಿ. ರಾಮನ್ ನಗರ ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆ ಈ ಕೇಂದ್ರದಲ್ಲಿ ನಡೆಯಿತು.

ಬೆಳಿಗ್ಗೆ ಎಣಿಕೆ ಆರಂಭಕ್ಕೂ ಮುನ್ನವೇ ಕಾರ್ಯಕರ್ತರು, ತಮ್ಮ ತಮ್ಮ ಪಕ್ಷಗಳ ಬಾವುಟ ಹಿಡಿದುಕೊಂಡು ಕೇಂದ್ರಕ್ಕೆ ಲಗ್ಗೆ ಇಟ್ಟರು. ಅನುಮತಿ ಪತ್ರ ಇರುವವರನ್ನು ಮಾತ್ರ ಪೊಲೀಸರು ಕೇಂದ್ರದೊಳಗೆ ಬಿಟ್ಟರು. ಉಳಿದವರೆಲ್ಲ ಕೇಂದ್ರದ ಹೊರಗೆಯೇ ಸೇರಿ ಪ್ರತಿ ಸುತ್ತಿನ ಫಲಿತಾಂಶ ಕೇಳಿಸಿಕೊಂಡು ಘೋಷಣೆ ಕೂಗಿದರು. ಸ್ಥಳದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಬಾವುಟಗಳು ಸಮಪ್ರಮಾಣದಲ್ಲೇ ಹಾರಾಡುತ್ತಿದ್ದವು. ಆರಂಭದಲ್ಲಿ ಹೆಬ್ಬಾಳದ ಬೈರತಿ ಸುರೇಶ್ ಮುನ್ನಡೆಯಲ್ಲಿದ್ದ ಸುದ್ದಿ ಹೊರಬಿತ್ತು. ಆಗ ಕಾಂಗ್ರೆಸ್ ಕಾರ್ಯಕರ್ತರು, ರಸ್ತೆಗೆ ಬಂದು ಕುಣಿದಾಡಿದರು. ಇದರಿಂದ ವಾಹನಗಳ ಓಡಾಟಕ್ಕೆ ತೊಂದರೆ ಆಯಿತು. ಸ್ಥಳದಲ್ಲಿದ್ದ ಪೊಲೀಸರು, ಅವರೆಲ್ಲರನ್ನೂ ರಸ್ತೆಯಿಂದ ಸರಿಸಿದರು.

ಮಹಾಲಕ್ಷ್ಮಿ ಲೇಔಟ್‌ ಅಭ್ಯರ್ಥಿ ಕೆ. ಗೋಪಾಲಯ್ಯ (ಜೆಡಿಎಸ್‌), ಸರ್ವಜ್ಞನಗರದಲ್ಲಿ ಕೆ.ಜೆ.ಜಾರ್ಜ್ (ಕಾಂಗ್ರೆಸ್), ಹೆಬ್ಬಾಳದಲ್ಲಿ ಭೈರತಿ ಸುರೇಶ್, ಕೆ.ಆರ್.ಪುರದಲ್ಲಿ ಬೈರತಿ ಬಸವರಾಜು (ಕಾಂಗ್ರೆಸ್) ಹಾಗೂ ಸಿ.ವಿ. ರಾಮನ್ ನಗರದಲ್ಲಿ ಎಸ್‌.ರಘು (ಬಿಜೆಪಿ) ಗೆಲುವು ಸಾಧಿಸುತ್ತಿದ್ದಂತೆ ಕಾರ್ಯಕರ್ತರು ಜೈಕಾರ ಹಾಕಿ ಸಂಭ್ರಮಿಸಿದರು. ಗೆದ್ದವರಿಗೆ ಹೂವಿನ ಹಾರ ಹಾಕಿ ಕಾರ್ಯಕರ್ತರು ಶುಭಾಶಯ ಕೋರಿದರು.

ಸೋಲುಂಡ ಅಭ್ಯರ್ಥಿಗಳ್ಯಾರು ಮತ ಎಣಿಕೆ ಕೇಂದ್ರದತ್ತ ಸುಳಿಯಲಿಲ್ಲ. ಅವರ ಸೋಲಿನ ಸುದ್ದಿ ತಿಳಿದ ಕಾರ್ಯಕರ್ತರು ಸಹ ಕೇಂದ್ರದಿಂದ ಒಬ್ಬೊಬ್ಬರಾಗಿಯೇ ಕಾಲ್ಕಿತ್ತರು. ಅಂಥ ಕಾರ್ಯಕರ್ತರ ವಾಹನಗಳನ್ನು ನೋಡಿದ ಎದುರಾಳಿ ಪಕ್ಷದ ಕಾರ್ಯಕರ್ತರು, ಧಿಕ್ಕಾರ ಕೂಗಿದರು. ‘ಈ ಬಾರಿ ಗೆಲುವು ನಮ್ಮದೇ’ ಎಂದು ಕೈ ಮಾಡಿ ಹಂಗಿಸಿದರು. ಮಧ್ಯಪ್ರವೇಶಿಸಿದ ಪೊಲೀಸರು, ಕಾರ್ಯಕರ್ತರನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಿಸಿದರು.

ಕೆಲವರು ಕಾಂಪೌಂಡ್ ಹಾಗೂ ರಸ್ತೆ ವಿಭಜಕಗಳಲ್ಲಿ ಕುಳಿತು ಅಂತಿಮ ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ಹಲವರು ಮೊಬೈಲ್‌ನಲ್ಲಿ ಫಲಿತಾಂಶ ನೋಡುತ್ತ ಕುಳಿತಿದ್ದು ಕಂಡುಬಂತು. ಮಧ್ಯಾಹ್ನ ಬಿಸಿಲು ಹೆಚ್ಚಾದಾಗ ಮನೆ ಹಾಗೂ ಗಿಡಗಳ ಮರೆಯಲ್ಲಿ ಕಾರ್ಯಕರ್ತರು ನಿಂತುಕೊಂಡಿದ್ದರು. ಗಲಾಟೆ ಆಗಬಾರದೆಂಬ ಕಾರಣಕ್ಕೆ ಪೊಲೀಸರು, ಗುಂಪುಗಳನ್ನು ಚದುರಿಸುತ್ತಲೇ ಇದ್ದರು. ಶಾಂತಿಯುತವಾಗಿ ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿತು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا