Urdu   /   English   /   Nawayathi

ರಾಜ್ಯದಲ್ಲಿ ಇಂದು ಮತದಾನ ಹೇಗಿತ್ತು..? ಏನೇನಾಯ್ತು..? ಇಲ್ಲಿದೆ ಡೀಟೇಲ್ಸ್

share with us

ಬೆಂಗಳೂರು: 12 ಮೇ (ಫಿಕ್ರೋಖಬರ್ ಸುದ್ದಿ) ರಾಜ್ಯದ ಮುಂದಿನ ಐದು ವರ್ಷಗಳ ರಾಜಕೀಯ ಭವಿಷ್ಯವನ್ನು ತೀರ್ಮಾನಿಸಲಿರುವ 15ನೇ ವಿಧಾನಸಭೆ ಚುನಾವಣೆಗೆ ಇಂದು ನಡೆದ ಮತದಾನದ ವೇಳೆ ಕೆಲವು ಸಣ್ಣಪುಟ್ಟ ಘಟನೆ ಹೊರತುಪಡಿಸಿ ರಾಜ್ಯಾದ್ಯಂತ ಬಿರುಸಿನ ಮತದಾನ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಸಂಸದ ಶ್ರೀರಾಮುಲು ಸೇರಿದಂತೆ ಕಾಂಗ್ರೆಸ್, ಬಿಜೆಪಿ ,ಜೆಡಿಎಸ್ ಪಕ್ಷಗಳ ಅನೇಕ ನಾಯಕರ ರಾಜಕೀಯ ಭವಿಷ್ಯವನ್ನು ಮತದಾರರು ಬರೆದಿದ್ದಾರೆ.

ಕಣದಲ್ಲಿ ಬಿಜೆಪಿ 222, ಕಾಂಗ್ರೆಸ್ 222, ಜೆಡಿಎಸ್ 201, ಬಿಎಸ್‍ಪಿ 18, ಸಿಪಿಐಎಂ 19, ಎನ್‍ಸಿಪಿ 14, ಪಕ್ಷೇತರರು 1155 ಸ್ಪರ್ಧಾ ಕಣದಲ್ಲಿದ್ದಾರೆ. ಇದರಲ್ಲಿ ಪುರುಷರು 2436 ಹಾಗೂ ಮಹಿಳೆ 219 ಸೇರಿದಂತೆ ಒಟ್ಟು ಕಣದಲ್ಲಿ 2655 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.  ಇದೇ ಮೊದಲ ಬಾರಿಗೆ ಮತದಾರರು ತಾವು ಚಲಾಯಿಸಿದ ಮತದಾನವನ್ನು ಖಚಿತಪಡಿಸಿಕೊಳ್ಳಲು ವಿವಿಪ್ಯಾಟ್ ಕೂಡ ಅಳವಡಿಸಲಾಗಿತ್ತು.

ಶಾಂತಿಯುತ ಮತದಾನ:
224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ವಿಧಾನಸಭಾ ಕ್ಷೇತ್ರಗಳಲ್ಲಿ (ಜಯನಗರ ಮತ್ತು ರಾಜರಾಜೇಶ್ವರಿ ನಗರ) ಹೊರತುಪಡಿಸಿ ಮತದಾನದ ವೇಳೆ ಅಲ್ಲಲ್ಲಿ ವಿದ್ಯುನ್ಮಾನ ಯಂತ್ರಗಳ ತಾಂತ್ರಿಕ ಗೊಂದಲ, ಕಾರ್ಯಕರ್ತರ ನಡುವೆ ಘರ್ಷಣೆ, ನಕಲಿ ಮತದಾನಕ್ಕೆ ಯತ್ನ ಸೇರಿದಂತೆ ಬಹುತೇಕ ಕಡೆ ಮತದಾನ ಶಾಂತಿಯುತವಾಗಿ ನಡೆದಿದೆ. ಬೆಳಗ್ಗೆ 7 ಗಂಟೆಯಿಂದ ಆರಂಭವಾದ ಮತದಾನಕ್ಕೆ ಪ್ರಾರಂಭದಲ್ಲೇ ಉತ್ತಮ ಪ್ರತಿಕ್ರಿಯೆ ಕಂಡುಬಂದಿತು. ಎಲ್ಲೆಡೆ ಮತದಾರರು ಉತ್ಸಾಹದಿಂದಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ದೃಶ್ಯ ಎಲ್ಲೆಡೆ ಕಂಡುಬಂದಿತು.

ರಾಜಧಾನಿ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಬಳ್ಳಾರಿ, ಕಲ್ಬುರ್ಗಿ ಸೇರಿದಂತೆ ಬಹುತೇಕ ಎಲ್ಲ ಕಡೆ ನಿರೀಕ್ಷೆಗೂ ಮೀರಿದ ಮತದಾನವಾಗಿದೆ. ನಿನ್ನೆ ರಾಜ್ಯದ ನಾನಾ ಕಡೆ ಮಳೆಯಾಗಿದ್ದರಿಂದ ಮತದಾನಕ್ಕೆ ಅಡ್ಡಿಯಾಗಬಹುದೆಂಬ ಆತಂಕ ಎದುರಾಗಿತ್ತು. ಆದರೆ ಚಿಕ್ಕೋಡಿಯಲ್ಲಿ ಬೆಳಗ್ಗೆ ಜಿಟಿಜಿಟಿ ಮಳೆಯಾಯಿತಾದರೂ 9 ಗಂಟೆಯ ನಂತರ ಮತದಾನ ಪ್ರಾರಂಭವಾಯಿತು. ಉಳಿದಂತೆ ಮತದಾನಕ್ಕೆ ವರುಣಾನ ಅಡ್ಡಿಯಾಗಿರುವ ಎಲ್ಲಿಯೂ ವರದಿಯಾಗಿಲ್ಲ.

ಕೈ ಕೊಟ್ಟ ಮತಯಂತ್ರ:
ಕೆಲವು ಕಡೆ ವಿದ್ಯುನ್ಮಾನ ಯಂತ್ರ ಆರಂಭದಲ್ಲಿ ಮತದಾನಕ್ಕೆ ಅಡ್ಡಿಯಾಯಿತು. ಹಾಸನ ಜಿಲ್ಲೆ ಹೊಳೆನರಸೀಪುರದ ಪಡವಲಹಿಪ್ಪೆ ಮತಗಟ್ಟೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ ಕುಟುಂಬ ಸಮೇತ ಮತ ಚಲಾಯಿಸಲು ಹೋದಾಗ ತಾಂತ್ರಿಕ ದೋಷ ಕಂಡುಬಂದಿತು.  ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಕೂಡಲೇ ಮತಯಂತ್ರವನ್ನು ಬದಲಾಯಿಸಿದರು. ಮತಗಟ್ಟೆ ಸಂಖ್ಯೆ 197ರಲ್ಲಿ ಮತದಾನ ಮಾಡಲು ಬಂದ ವೇಳೆ ಇವಿಎಂ ಕೆಲ ಕಾಲ ಕೈ ಕೊಟ್ಟಿತು. ಬಳಿಕ ಗೌಡರು ತಮ್ಮ ಹಕ್ಕು ಚಲಾಯಿಸಿದರು.  ಧಾರವಾಡ ಸಂಸದ ಪ್ರಹ್ಲಾದ್ ಜೋಷಿ, ಹುಬ್ಬಳ್ಳಿಯ ಬೂತ್ ನಂ. 108ರಲ್ಲಿ ಮತದಾನ ಮಾಡಲು ಬಂದ ವೇಳೆ ಮತಯಂತ್ರ ಕೈ ಕೊಟ್ಟಿದ್ದರಿಂದ ಸುಮಾರು 20 ನಿಮಿಷಗಳ ಕಾಲ ಸರದಿಯಲ್ಲೇ ನಿಲ್ಲಬೇಕಾಯಿತು.   ನರಗುಂದದ ಮತಗಟ್ಟೆ 73ರಲ್ಲಿ ಇವಿಎಂ ಕೈ ಕೊಟ್ಟ ಕಾರಣ ಮತದಾನ ಅರ್ಧಗಂಟೆ ತಡವಾಗಿ ಆರಂಭವಾಯಿತು. ಇದರಿಂದ ಮತದಾರರು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.

ಬೆಳಗಾವಿಯ ಗ್ರಾಮೀಣ ಕ್ಷೇತ್ರದ ಮತಗಟ್ಟೆ 63ರಲ್ಲಿ ಮತಯಂತ್ರ ಕೈ ಕೊಟ್ಟಿದ್ದರಿಂದ ಮತದಾನ ತಡವಾಗಿ ಪ್ರಾರಂಭವಾಯಿತು. ಹುಬ್ಬಳ್ಳಿಯ ಮತಗಟ್ಟೆ 185ರಲ್ಲಿ ಇವಿಎಂ ಜೊತೆಗೆ ವಿವಿಪ್ಯಾಟ್ ಕೂಡ ತಾಂತ್ರಿಕ ತೊಂದರೆಗೊಳಗಾಗಿದ್ದರಿಂದ ಮತದಾನ ವಿಳಂಬವಾಯಿತು.  ಮಾನ್ವಿ ತಾಲ್ಲೂಕಿನ ಜಕ್ಕಲದಿಣ್ಣೆ ಗ್ರಾಮದ ಮತಗಟ್ಟೆಯಲ್ಲಿ ಇವಿಎಂನಲ್ಲಿ ಇನ್‍ವ್ಯಾಲಿಡ್(ಅನರ್ಹ) ಎಂಬ ದೋಷ ಕಂಡುಬಂದಿತು. ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 119ರಲ್ಲೂ ತಾಂತ್ರಿಕ ದೋಷ ಉಂಟಾಗಿ ಮತದಾನ ವಿಳಂಬವಾಯಿತು.   ರಾಯಚೂರಿನ ಲಿಂಗಸೂರಿನ ಕಡದರಗಡ್ಡಿ ಗ್ರಾಮಕ್ಕೆ ಸೇತುವೆ ನಿರ್ಮಾಣ ಮಾಡಬೇಕೆಂಬ ಬೇಡಿಕೆಗೆ ಜನಪ್ರತಿನಿಧಿಗಳು ಸ್ಪಂದಿಸದ ಕಾರಣ ಮತದಾರರು ಮತದಾನವನ್ನೇ ಬಹಿಷ್ಕರಿಸಿದ್ದಾರೆ.

ಮತದಾನ ನಡೆಸುವಂತೆ ಚುನಾವಣಾಧಿಕಾರಿಗಳು ಅಲ್ಲಿನ ಮತದಾರರ ಮನವೊಲಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ.  ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಎಂ.ರಾಜಣ್ಣ ಅವರಿಗೆ ರಕ್ತದೊತ್ತಡ ಉಂಟಾಗಿ ಮತಗಟ್ಟೆಯಿಂದಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ರಾಮನಗರದ ಹನುಮಂತನಗರ ಮತಗಟ್ಟೆ ಸಂಖ್ಯೆ 74ಎ ನಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದ ಪ್ರಮುಖ ಪಕ್ಷವೊಂದರ ಕಾರ್ಯಕರ್ತರನ್ನು 50 ಸಾವಿರ ನಗದು ಸಹಿತ ವಶಕ್ಕೆ ತೆಗೆದುಕೊಂಡಿದ್ದಾರೆ.   ಚಿಕ್ಕಮಗಳೂರು ಜಿಲ್ಲೆಯ ಮೂಡಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೋಟಮ್ಮ ಮತ ಚಲಾಯಿಸಲು ಬಂದಿದ್ದರು. ಆದರೆ ಇವಿಎಂ ಕೈಕೊಟ್ಟಿದ್ದರಿಂದ 20 ನಿಮಿಷ ಸರದಿಯಲ್ಲೇ ನಿಲ್ಲಬೇಕಾಯಿತು.

ಹೊಸಕೋಟೆಯಲ್ಲಿ ಮತ ಚಲಾಯಿಸಲು ಮತದಾರರು ಮತಗಟ್ಟೆಗೆ ಬಂದಿದ್ದರು. ಆದರೆ ಇವಿಎಂಗಳು ಸಂಪೂರ್ಣವಾಗಿ ಕೈಕೊಟ್ಟಿದ್ದರಿಂದ ಜನರು ಬೇಸತ್ತು ಹಿಂತಿರುಗಿರುವ ಘಟನೆಯೂ ನಡೆಯಿತು. ಬಳಿಕ ಚುನಾವಣಾ ಸಿಬ್ಬಂದಿಗಳು ಮನವೊಲಿಸುವಲ್ಲಿ ಪ್ರಯತ್ನಿಸಿದರಾದರೂ ಕೆಲವರು ಮತ ಚಲಾಯಿಸಿದರೆ, ಇನ್ನು ಕೆಲವರು ಮತದಾನ ಮಾಡದೇ ವಾಪಸ್ ಹೋದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا