Urdu   /   English   /   Nawayathi

ಗಾರ್ಮೆಂಟ್ಸ್ ನಲ್ಲಿ ನೌಕರರ ಜೊತೆ ರಾಹುಲ್ ಗಾಂಧಿ ಸಂವಾದ

share with us

ಬೆಂಗಳೂರು: 09 ಮೇ (ಫಿಕ್ರೋಖಬರ್ ಸುದ್ದಿ) ಬಿಜೆಪಿ ಸರ್ಕಾರದ ಅವೈಜ್ಞಾನಿಕ ನೋಟು ಅಮಾನೀಕರಣದ ನಿರ್ಣಯದಿಂದ ದೇಶದಲ್ಲಿ ಹಲವು ಗಾರ್ಮೆಂಟ್ಸ್ ಫ್ಯಾಕ್ಟರಿಗಳು ಮುಚ್ಚಿ ಹೋಗಿದ್ದು, ಬೆಂಗಳೂರಿನ ಹಲವು ಗಾರ್ಮೆಂಟ್ಸ್ ಫ್ಯಾಕ್ಟರಿಗಳ ಬಾಂಗ್ಲಾಕ್ಕೆ ವಲಸೆ ಹೋಗಿವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಆರೋಪಿಸಿದರು.
ನಗರದಲ್ಲಿಂದು ಖಾಸಗಿ ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಭೇಟಿ ನೀಡಿದ ಅವರು, ಅಲ್ಲಿ ಮಹಿಳೆಯರ ಕಾರ್ಯವೈಖರಿ ಪರಿಶೀಲಿಸಿದರು. ನಂತರ ಗಾರ್ಮೆಂಟ್ಸ್ ನೌಕರರ ಜತೆ ಸಂವಾದ ನಡೆಸಿ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.

ಬೃಹತ್ ಕೈಗಾರಿಕೆಗಳಿಗಿಂತಲೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಆರಂಭಿಸಿದರೆ ಹೆಚ್ಚು ಮಂದಿಗೆ ಉದ್ಯೋಗ ನೀಡಲು ಸಾಧ್ಯವಾಗುತ್ತದೆ. ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಹೆಚ್ಚು ಬದ್ಧತೆ ಹೊಂದಿದೆ ಎಂದು ಹೇಳಿದರು. ಗಾರ್ಮೆಂಟ್ಸ್ ಮಹಿಳೆಯರು ಮಕ್ಕಳು ಹಾಗೂ ಪರಿವಾರದ ಪೋಷಣೆಗೆ 10-15 ಗಂಟೆಗಳ ಕಾಲ ಕಷ್ಟಪಟ್ಟು ದುಡಿಯುತ್ತಾರೆ. ಅವರ ದುಡಿಮೆಗೆ ಪ್ರತಿಫಲ ಸಿಗುವುದು ಯಾವಾಗ ಎಂದರೆ ಅವರ ಮಕ್ಕಳು ಓದಿ ವಿದ್ಯಾವಂತರಾಗಿ ಅರ್ಹತೆಗೆ ತಕ್ಕ ಕೆಲಸ ಸಿಕ್ಕಾಗ ಮಾತ್ರ. ಕೇಂದ್ರದ ಈಗಿನ ನೀತಿಗಳನ್ನು ನೋಡಿದರೆ ಯುವಕರಿಗೆ ಉದ್ಯೋಗ ಸಿಗುವುದು ಅನುಮಾನವಿದೆ. ದೇಶದ ಗಡಿಯಲ್ಲಿ ಸೈನಿಕರು ಪ್ರಾಣ ಒತ್ತೆ ಇಟ್ಟು ದೇಶ ರಕ್ಷಿಸುತ್ತಾರೆ. ಇದೇ ರೀತಿ ದೇಶದ ಒಳಗೆ ಗಾರ್ಮೆಂಟ್ಸ್ ಮಹಿಳೆಯರು ಹಗಲಿರುಳು ದುಡಿದು ದೇಶದ ಆರ್ಥಿಕ ರಕ್ಷಣೆ ಮಾಡುತ್ತಾರೆ. ಇವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕೆಂದು ರಾಹುಲ್‍ಗಾಂಧಿ ಹೇಳಿದರು.

Garments--03

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಸಾಲ ಕೊಡಬೇಕು. ಆಗ ಉದ್ಯೋಗ ಸೃಷ್ಟಿ ಹೆಚ್ಚಾಗುತ್ತದೆ. ಕಾಂಗ್ರೆಸ್ ಸರ್ಕಾರ ರೈತರ ಮತ್ತು ಬಡವರ ಸಾಲವನ್ನು ಮನ್ನಾ ಮಾಡಿದಾಗ ಅದೇ ಶ್ರೀಮಂತ ವರ್ಗ ಅಪಹಾಸ್ಯ ಮಾಡಿತ್ತು. ಸಾಲ ಮನ್ನಾ ಮಾಡುವುದರಿಂದ ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗದೆ ಸೋಮಾರಿಗಳಾಗುತ್ತಾರೆ ಎಂದು ಆರೋಪಿಸಿದ್ದರು.

ಅದೇ ಬಿಜೆಪಿ ಸರ್ಕಾರ ಕಳೆದ ಒಂದು ವರ್ಷದಲ್ಲಿ ಶ್ರೀಮಂತ ಉದ್ಯಮಿಗಳ 2.50 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಇದರಿಂದ ಶ್ರೀಮಂತ ಉದ್ಯಮಿಗಳು ಸೋಮಾರಿಗಳಾಗುವುದಿಲ್ಲವೇ ಎಂದು ಪ್ರಶ್ನಿಸಿದರು. ನೀರವ್ ಮೋದಿ ಸಾವಿರಾರು ಕೋಟಿ ರೂ. ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿದ್ದಾರೆ, ಕರ್ನಾಟಕದಲ್ಲಿ ರೆಡ್ಡಿ ಸಹೋದರರು ಗಣಿ ಹಗರಣದಲ್ಲಿ 35 ಸಾವಿರ ಕೋಟಿ ಲೂಟಿ ಮಾಡಿದ್ದಾರೆ. ಇವರಲ್ಲಿ ಸಣ್ಣ ಪ್ರಮಾಣದ 100 ಕೋಟಿ ಹಣ ಕೈಗಾರಿಕೆಗಳಿಗೆ ಬಳಸಿದರೆ ಸಾವಿರಾರು ಕಾರ್ಖಾನೆಗಳನ್ನು ತೆರೆಯಬಹುದಿತ್ತು. ಲಕ್ಷಾಂತರ ಮಂದಿಗೆ ಉದ್ಯೋಗ ನೀಡಬಹುದಿತ್ತು ಎಂದು ಹೇಳಿದರು.  ಕೇಂದ್ರ ಸರ್ಕಾರ ಗಾರ್ಮೆಂಟ್ಸ್‍ನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಜಿಎಸ್‍ಟಿ ಮತ್ತು ನೋಟು ಅಮಾನೀಕರಣದಿಂದ ಗಾರ್ಮೆಂಟ್ಸ್ ಉದ್ಯಮ ನಲುಗಿ ಹೋಗಿದೆ. ಹಲವಾರು ಕಂಪೆನಿಗಳು ಬಾಂಗ್ಲಾ ದೇಶಕ್ಕೆ ವಲಸೆ ಹೋಗಿವೆ.

Garments--02

ಹಿರಿಯ ಕೈಗಾರಿಕೆ ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟ ರಕ್ಷಣೆಗೂ ಒತ್ತು ಕೊಡುತ್ತಿಲ್ಲ. ಹೀಗಾಗಿ ಚೀನಾ ಮತ್ತು ಬಾಂಗ್ಲಾ ದೇಶದೊಂದಿಗೆ ನಾವು ಗಾರ್ಮೆಂಟ್ಸ್ ಕ್ಷೇತ್ರದಲ್ಲಿ ಪೈಪೋಟಿ ನೀಡಲು ಕಷ್ಟವಾಗುತ್ತಿದೆ ಎಂದರು.  ಆಧಾರ್ ಸಂಖ್ಯೆ ಭವಿಷ್ಯ ನಿಧಿಗೆ ಜೋಡಣೆ ಮಾಡುವ ನಿಯಮದಿಂದ ಬಹಳಷ್ಟು ತಾಂತ್ರಿಕ ಸಮಸ್ಯೆ ಎದುರಾಗಿದ್ದು, ನೌಕರರು ತೊಂದರೆಗೆ ಒಳಗಾಗಿದ್ದಾರೆ ಎಂದು ಗಾರ್ಮೆಂಟ್ಸ್‍ನ ಮಹಿಳೆಯೊಬ್ಬರು ಗಮನಸೆಳೆದಾಗ, ಇದಕ್ಕೆ ಉತ್ತರಿಸಿದ ರಾಹುಲ್‍ಗಾಂಧಿ, ಯುಪಿಎ ಸರ್ಕಾರ ಜನರ ಅನುಕೂಲಕ್ಕಾಗಿ ಆಧಾರ್ ಯೋಜನೆಯನ್ನು ಪರಿಚಯಿಸಿತ್ತು. ಆದರೆ ಬಿಜೆಪಿ ಸರ್ಕಾರ ಅದನ್ನು ಮುಂದಿಟ್ಟುಕೊಂಡು ಜನರಿಗೆ ತೊಂದರೆಯಾಗುವಂತಹ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. 2019ರ ಲೋಕಸಭೆ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದಾಗ ಜನವಿರೋಧಿಯಾಗಿ ಬದಲಾಗಿರುವ ಜಿಎಸ್‍ಟಿ ಮತ್ತು ಆಧಾರ್ ಯೋಜನೆಗಳಿಗೆ ತಿದ್ದುಪಡಿ ಮಾಡಿ ಜನಪರವಾಗಿ ಬದಲಾವಣೆ ಮಾಡುವುದಾಗಿ ಭರವಸೆ ನೀಡಿದರು.

ಗಾರ್ಮೆಂಟ್ಸ್ ನೌಕರರಿಗೆ ರಿಯಾಯ್ತಿ ಬಸ್‍ಪಾಸ್:
ನಾವು ಏಳೆಂಟು ಸಾವಿರ ಸಂಬಳ ಪಡೆಯುವವರು, ಇದರಲ್ಲಿ 1200 ರೂ.ಗಳನ್ನು ಮಾಸಿಕ ಬಸ್‍ಪಾಸ್‍ಗೆ ನೀಡಬೇಕಾದಂತಹ ಪರಿಸ್ಥಿತಿ ಇದೆ. ಉಳಿದ ಹಣದಲ್ಲಿ ಮಕ್ಕಳನ್ನು ಓದಿಸುವುದು ಹೇಗೆ? ಜೀವನ ನಿರ್ವಹಣೆ ಕಷ್ಟ. ಈ ಹಿನ್ನೆಲೆಯಲ್ಲಿ ಉಚಿತ ಬಸ್‍ಪಾಸ್‍ನ್ನು ಗಾರ್ಮೆಂಟ್ಸ್ ನೌಕರರಿಗೆ ಒದಗಿಸುವಂತೆ ಮಹಿಳಯೊಬ್ಬರು ಮಾಡಿದ ಮನವಿಗೆ ಸಚಿವ ರಾಮಲಿಂಗಾರೆಡ್ಡಿ ಉತ್ತರಿಸಿ, ಈಗಾಗಲೇ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗಿದೆ. ಚುನಾವಣೆ ನಂತರ ಅಧಿಕೃತವಾಗಿ ಆದೇಶ ಹೊರಬೀಳಲಿದೆ. ಈ ತಿಂಗಳ ಅಂತ್ಯದಲ್ಲಿ ಗಾರ್ಮೆಂಟ್ಸ್‍ನೌಕರರಿಗೆ ರಿಯಾಯ್ತಿ ದರದಲ್ಲಿ ಬಸ್ ಪಾಸ್ ನೀಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಾರಿಗೆ ಇಲಾಖೆ ಜಂಟಿಯಾಗಿ ನಿರ್ಣಯ ಕೈಗೊಂಡಿದೆ ಎಂದು ಮಾಹಿತಿ ನೀಡಿದರು.

ಮಕ್ಕಳಿಗೆ ಉಚಿತ ಲ್ಯಾಪ್‍ಟಾಪ್, ಉಚಿತ ಬಸ್‍ಪಾಸ್‍ನಂತಹ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಮತ್ತೊಬ್ಬ ಮಹಿಳಾ ಕಾರ್ಮಿಕರು ಆಕ್ಷೇಪ ವ್ಯಕ್ತಪಡಿಸಿದಾಗ, ಚುನಾವಣೆ ನಂತರ ಎಲ್ಲಾ ಯೋಜನೆಗಳು ಹಂತ ಹಂತವಾಗಿ ಜಾರಿಗೊಳ್ಳಲಿವೆ ಎಂದರು.  ಅದಕ್ಕೆ ಲ್ಯಾಪ್‍ಟಾಪ್‍ನ್ನು ಕೆಲವರಿಗೆ ಮಾತ್ರ ಕೊಡುತ್ತಾರೆ. ಮತ್ತೆ ಕೆಲವರಿಗೆ ಕೊಡಲಾಗುತ್ತಿಲ್ಲ ಎಂದರು.  ಇದನ್ನು ಆಲಿಸಿದ ರಾಹುಲ್‍ಗಾಂಧಿ, ಸಿದ್ದರಾಮಯ್ಯ ಸರ್ಕಾರ ಈ ಎಲ್ಲಾ ವ್ಯತ್ಯಾಸ ಸರಿಪಡಿಸಿ ಗಾರ್ಮೆಂಟ್ಸ್ ನೌಕರರಿಗೆ ಅನುಕೂಲ ಕಲ್ಪಿಸಲಿದೆ ಎಂದು ಭರವಸೆ ನೀಡಿದರು.

ಮತ್ತೊಬ್ಬ ನೌಕರರು ಇಂದಿನ ಪರಿಸ್ಥಿತಿಯಲ್ಲಿ ಶಿಕ್ಷಣ ನೀಡುವುದೇ ದುಬಾರಿಯಾಗಿದೆ. ನಾವು ಕಡಿಮೆ ಸಂಬಳ ಪಡೆಯುವವರು. ಇಷ್ಟೊಂದು ಶುಲ್ಕವನ್ನು ಹೇಗೆ ಭರಿಸಲು ಸಾಧ್ಯ ಎಂದಾಗ, ರಾಮಲಿಂಗಾರೆಡ್ಡಿ ಜಾರಿಯಲ್ಲಿರುವ ಆರ್‍ಟಿಇ ಕಾಯ್ದೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು. ಆಗ ಮತ್ತೆ ನೌಕರರು ಈ ಕಾಯ್ದೆಯಡಿ ಎಲ್ಲರಿಗೂ ಅವಕಾಶ ಸಿಗುವುದಿಲ್ಲ ಎನ್ನುತ್ತಿದ್ದಂತೆ ಹೆಣ್ಣು ಮಕ್ಕಳಿಗೆ ಸ್ನಾತಕೋತ್ತರದವರೆಗೂ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು. ಸಂವಾದದ ವೇಳೆ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಅಶೋಕ್ ಗೆಹಲೋಟ್,ಬಿ.ಕೆ.ಹರಿಪ್ರಸಾದ್, ವಿ.ಆರ್.ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا