Urdu   /   English   /   Nawayathi

ಪ್ರಚಾರದ ಪರಾಕಾಷ್ಠೆ: ಕಾಲಿಗೆ ಚಕ್ರ ಕಟ್ಟಿಕೊಂಡ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರು

share with us

ಬೆಂಗಳೂರು: 05 ಮೇ (ಫಿಕ್ರೋಖಬರ್ ಸುದ್ದಿ) ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವಾರ ಬಾಕಿ ಉಳಿದಿರುವಂತೆ ಚುನಾವಣಾ ಪ್ರಚಾರ ಪರಾಕಾಷ್ಠೆ ತಲುಪಿದ್ದು, ಪ್ರಧಾನಿ ನರೇಂದ್ರಮೋದಿ ಸೇರಿದಂತೆ ಘಟಾನುಘಾಟಿ ನಾಯಕರುಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.

  • ಪ್ರಚಾರಕ್ಕೆ ಒಂದೇ ವಾರ ಬಾಕಿ
  • ಬಿರು ಬಿಸಿಲಿನಲ್ಲಿ ಪ್ರಚಾರದ ಅಬ್ಬರ
  • ಪ್ರಧಾನಿ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡರ ಪ್ರಚಾರ
  • ಶತಾಯ- ಗತಾಯ ಗೆಲ್ಲುವ ಕಸರತ್ತು
  • ಆರೋಪ- ಪ್ರತ್ಯಾರೋಪ ತಾರಕಕ್ಕೇ
  • ರಾಜ್ಯದ ವಿವಿಧ ಭಾಗಗಳಲ್ಲಿ ನಾಯಕರ ಪ್ರಚಾರದ ಭರಾಟೆ
  • ಕಾವೇರುತ್ತಿರುವ ಚುನಾವಣಾ ಕಣ

ಬಿಜೆಪಿ ಪ್ರಚಾರಕ್ಕೆ ಸವಾಸೇರು ಎಂಬಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹ ಬಿರುಸಿನ ಪ್ರಚಾರ ಕೈಗೊಂಡಿದ್ದು, ಬಾದಾಮಿಯಲ್ಲಿ ಅವರು ಇಡೀ ದಿನ ಅಬ್ಬರದ ಪ್ರಚಾರ ನಡೆಸಿದರು.

ಜೆಡಿಎಸ್ ನಾಯಕರು ಸಹ ಎರಡೂ ರಾಜಕೀಯ ಪಕ್ಷಗಳಿಗೆ ಸಡ್ಡು ಹೊಡೆಯುವಂತೆ ಪ್ರಚಾರ ನಡೆಸಿದ್ದು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಒಂದೆಡೇ ಪ್ರಚಾರ ನಡೆಸಿದರೇ, ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಚಿತ್ರದುರ್ಗ ಜಿಲ್ಲೆಯಲ್ಲಿಂದು ಜೆಡಿಎಸ್ ಪರ ಪ್ರಚಾರ ನಿರತರಾಗಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾ ಸಹ ಇಂದು ರಾಜ್ಯಕ್ಕೆ ಆಗಮಿಸಿ ಪ್ರಚಾರನಿರತರಾಗಿದ್ದು, ಇವರ ಜತೆ ಕೇಂದ್ರದ ಸಚಿವರುಗಳ ದಂಡೇ ರಾಜ್ಯಕ್ಕೆ ಆಗಮಿಸಿ, ಪ್ರಚಾರದಲ್ಲಿ ತೊಡಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸಹ ಇಂದು ಬೆಂಗಳೂರಿನಲ್ಲಿ ಬಿಜೆಪಿ ಪರ ಪ್ರಚಾರ ನಡೆಸುವ ಮೂಲಕ ಚುನಾವಣಾ ಕಾವು ತಾರಕಕ್ಕೇರಿದೆ.

ಶತಾಯಗತಾಯ ಚುನಾವಣೆಯಲ್ಲಿ ಗೆಲ್ಲಲೆಬೇಕು ಎಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ ನಾಯಕರುಗಳು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯದಲ್ಲಿ ಪ್ರಚಾರ ನಿರತರಾಗಿದ್ದಾರೆ.

ಕಾಂಗ್ರೆಸ್ ಮುಕ್ತ ಭಾರತಕ್ಕೆ ಪಣ ತೊಟ್ಟಿರುವ ಪ್ರಧಾನಿ ಮೋದಿ ಅವರು ಕಳೆದ ಒಂದು ವಾರದಲ್ಲಿ ಮೂರನೇ ಬಾರಿಗೆ ರಾಜ್ಯಕ್ಕೆ ಭೇಟಿ ನೀಡಿ ಬಿಜೆಪಿ ಪರ ಅಬ್ಬರದ ಪ್ರಚಾರ ನಡೆಸಿದ್ದಾರೆ.

ಮೋದಿ ಅವರು ಇಂದು ತುಮಕೂರು, ಶಿವಮೊಗ್ಗ, ಮಂಗಳೂರುಗಳಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದರು.

ಪ್ರಧಾನಿ ಮೋದಿ ಅವರ ಜತೆ ಜತೆಯಲ್ಲಿಯೇ ಬಿಜೆಪಿ ನಾಯಕರುಗಳ ದೊಡ್ಡ ದಂಡೆ ಪ್ರಚಾರ ನಿರತರಾಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸಚಿವರುಗಳಾದ ರಾಜನಾಥ್‌ಸಿಂಗ್, ಸ್ಮೃತಿ ಇರಾನಿ, ಸಾದ್ವಿ ನಿರಂಜನಜ್ಯೋತಿ, ಪ್ರಕಾಶ್‌ ಜಾವ್ಡೇಕರ್, ಡಿ.ವಿ. ಸದಾನಂದಗೌಡ, ಅನಂತಕುಮಾರ್ ಇವರುಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಚಾರ ನಡೆಸಿದ್ದಾರೆ.

ಸಂ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا