Urdu   /   English   /   Nawayathi

ನಾರದ ಮುನಿ, ಪಾನ್‌ ಶಾಪ್‌: BJP CMಗಳ ಹೇಳಿಕೆಗೆ ಕಾಂಗ್ರೆಸ್‌ ಖಂಡನೆ

share with us

ಹೊಸದಿಲ್ಲಿ: 01 ಮೇ (ಫಿಕ್ರೋಖಬರ್ ಸುದ್ದಿ) ಮಾಹಿತಿ ಕಣಜವಾಗಿರುವ ಗೂಗಲ್‌ ಅನ್ನು ಪೌರಾಣಿಕ ಪಾತ್ರವಾಗಿರುವ ನಾರದ ಮುನಿಯೊಂದಿಗೆ ಹೋಲಿಸಿರುವ ಗುಜರಾತ್‌ ಬಿಜೆಪಿ ಮುಖ್ಯಮಂತ್ರಿ ವಿಜಯ್‌ ರೂಪಾಣಿ ಹಾಗೂ "ಯುವ ಜನರು ಸರಕಾರಿ ಉದ್ಯೋಗಗಳಿಗೆ ಜೋತು ಬೀಳದೆ ಪಾನ್‌ ಶಾಪ್‌ ತೆರೆದು ಸ್ವಾವಲಂಬಿಗಳಾಗಲು ಯತ್ನಿಸಬೇಕು' ಎಂಬ ಹೇಳಿಕೆ ನೀಡಿರುವ ತ್ರಿಪುರ ಮುಖ್ಯಮಂತ್ರಿ ಬಿಪ್‌ಲಬ್‌ ಕುಮಾರ್‌ ದೇಬ್‌ ಅವರನ್ನು ಕಾಂಗ್ರೆಸ್‌ ವಕ್ತಾರೆ ರೇಣುಕಾ ಚೌಧರಿ ಅವರು ತೀವ್ರವಾಗಿ ಟೀಕಿಸಿದ್ದಾರೆ. ಈ ರೀತಿಯ ಹೇಳಿಕೆಗಳು ದೇಶದ ಘನತೆ ಗೌರವಗಳಿಗೆ ತಕ್ಕುದಾದುಲ್ಲ ಎಂದವರು ಹೇಳಿದ್ದಾರೆ.

ಗುಜರಾತ್‌ ಮುಖ್ಯಮಂತ್ರಿ ರೂಪಾಣಿ ಅವರು "ಮಾಹಿತಿ ಕಣಜವಾಗಿರುವ ಗೂಗಲ್‌ನ ಮೂಲ ಪರಿಕಲ್ಪನೆಯನ್ನು ಪೌರಾಣಿಕ ಪಾತ್ರವಾಗಿರುವ ನಾರದ ಮುನಿಯಲ್ಲಿ ಕಾಣಬಹುದಾಗಿದೆ. ನಾರದ ಮುನಿಗಳು ಎಂದಿಗೂ ಮಾನವತೆಗೆ ಹಾನಿ ಉಂಟುಮಾಡಬಲ್ಲಂತಹ ಮಾಹಿತಿಗಳನ್ನು ಬಹಿರಂಗಪಡಿಸಿದವರಲ್ಲ' ಎಂದು ಹೇಳಿದ್ದರು. 

ತ್ರಿಪುರ ಮುಖ್ಯಮಂತ್ರಿ ಬಿಪ್‌ಲಬ್‌ ದೇಬ್‌ ಅವರು, "ಯುವಕರು ಸರಕಾರಿ ನೌಕರಿಗೆ ಜೋತು ಬೀಳಬಾರದು; ಸ್ವಂತ ಪಾನ್‌ ಶಾಪ್‌ ತೆರೆದು ಸ್ವಾವಲಂಬಿಗಳಾಗಲು ಯತ್ನಿಸಬೇಕು' ಎಂದಿದ್ದರು. 

ಇನ್ನೊಂದು ವಿವಾದಾತ್ಮಕ ಹೇಳಿಕೆಯಲ್ಲಿ ಬಿಪ್‌ಲಬ್‌ ಅವರು "ಮಹಾಭಾರತದ ಕಾಲದಲ್ಲೇ ಭಾರತದಲ್ಲಿ ಇಂಟರ್‌ನೆಟ್‌ ಮತ್ತು ಸೆಟಲೈಟ್‌ ಸಂಪರ್ಕಗಳು ಇದ್ದವು; ಐಶ್ವರ್ಯಾ ರೈ ಭಾರತೀಯ ಮಹಿಳೆಯನ್ನು ಪ್ರತಿನಿಧಿಸುತ್ತಾರೆಯೇ ಹೊರತು ಮಿಸ್‌ ವರ್ಲ್ಡ್ ಡಯಾನಾ ಹೇಡನ್‌ ಅಲ್ಲ; ಮೆಕ್ಯಾನಿಕಲ್‌ ಇಂಜಿನಿಯರ್‌ಗಳು ಪೌರ ಸೇವೆಯನ್ನು ಆಯ್ದುಕೊಳ್ಳಬಾರದು; ಆದರೆ ಸಿವಿಲ್‌ ಇಂಜಿನಿಯರ್‌ಗಳು ಪೌರ ಸೇವೆ ಕೈಗೊಳ್ಳಬಹುದು' ಎಂದು ಹೇಳಿದ್ದರು. 

ಗುಜರಾತ್‌ ಮತ್ತು ತ್ರಿಪುರ ಮುಖ್ಯಮಂತ್ರಿಗಳ ಈ ರೀತಿಯ ವಿವಾದಾತ್ಮಕ ಹೇಳಿಕೆಗಳು ದೇಶದ ಘನತೆಗೆ ತಕ್ಕುದಾದುದಲ್ಲ ಎಂದು ಕಾಂಗ್ರೆಸ್‌ ವಕ್ತಾರೆ ರೇಣುಕಾ ಚೌಧರಿ ಖಂಡಿಸಿದ್ದರು. 

ಬಿಜೆಪಿ ಸಿಎಂ ಗಳು ಈ ರೀತಿಯ ಲಂಗುಲಗಾಮಿಲ್ಲದ ಹೇಳಿಕೆ ನೀಡುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಇದೇ ಮೇ 2ರಂದು ಈ ಸಿಎಂಗಳನ್ನು ದಿಲ್ಲಿಗೆ ಕರೆಸಿಕೊಂಡಿದ್ದಾರೆ ಎಂದು ಹಿರಿಯ ಬಿಜೆಪಿ ನಾಯಕರೋರ್ವರು ಹೇಳಿರುವುದು "ಕೇವಲ ಕಣ್ಣೊರೆಸುವ ತಂತ್ರ; ಏಕೆಂದರೆ ಬಿಜೆಪಿಯ ಸಿದ್ಧಾಂತಗಳು ಏನೆಂದು ಎಲ್ಲರಿಗೂ ಗೊತ್ತಿದೆ; ಬಿಜೆಪಿಯ ಈ ಇಬ್ಬರು ಸಿಎಂ ಗಳು ಇಡಿಯ ಲೋಕಕ್ಕೇ ತಮ್ಮ ಜ್ಞಾನವನ್ನು ಹಂಚುತ್ತಿದ್ದಾರೆ' ಎಂದು ರೇಣುಕಾ ಚೌಧರಿ ಹೇಳಿದರು. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا