Urdu   /   English   /   Nawayathi

ಸಿಎಂ ಮತ್ತು ಸಚಿವರ ಪರಮಾಪ್ತ ಅಧಿಕಾರಿಗಳ ಮೇಲೆ ಚುನಾವಣಾ ಆಯೋಗದ ಕಣ್ಣು

share with us

ಬೆಂಗಳೂರು: 07 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಸರ್ಕಾರ ಹಾಗೂ ಮುಖ್ಯಮಂತ್ರಿ ಸೇರಿದಂತೆ ಸಚಿವರಿಗೆ ಅತ್ಯಾಪ್ತರಾಗಿರುವ ಕೆಲವು ಅಧಿಕಾರಿಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಕೇಂದ್ರ ಚುನಾವಣಾ ಆಯೋಗ ಇಂಥವರನ್ನು ಚುನಾವಣಾ ಪ್ರಕ್ರಿಯೆಯಿಂದಲೇ ದೂರವಿಡಲು ಮುಂದಾಗಿದೆ. ಈಗಾಗಲೇ ಕೇಂದ್ರ ಗುಪ್ತದಳ ವಿಭಾಗಕ್ಕೆ ಸರ್ಕಾರ ಹಾಗೂ ಪ್ರಭಾವಿಗಳ ಜೊತೆ ಆತ್ಮೀಯತೆ ಹೊಂದಿರುವ ಅಧಿಕಾರಿಗಳ ವಿವರಗಳನ್ನು ನೀಡಬೇಕೆಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್‍ರಾವತ್ ಸೂಚಿಸಿದ್ದಾರೆ. ಆಯೋಗದ ಸೂಚನೆ ಮೇರೆಗೆ ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗುಪ್ತಚರ ವಿಭಾಗದ ಒಂದು ತಂಡ ಐಎಎಸ್, ಐಪಿಎಸ್, ಐಎಫ್‍ಎಸ್ ಹಾಗೂ ಕೆಎಎಸ್ ಸೇರಿದಂತೆ ವಿವಿಧ ಶ್ರೇಣಿಯ ಅಧಿಕಾರಿಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುವ 15 ದಿನಕ್ಕೂ ಮುನ್ನ ರಾಜ್ಯ ಸರ್ಕಾರ ವರ್ಗಾವಣೆ ಮಾಡಿರುವ ಅಧಿಕಾರಿಗಳ ಪಟ್ಟಿಯನ್ನು ಈಗಾಗಲೇ ಚುನಾವಣಾ ಆಯೋಗ ಪರಿಶೀಲನೆಗೆ ಒಳಪಡಿಸಿದೆ. ಐಎಎಸ್, ಐಪಿಎಸ್ ಸೇರಿದಂತೆ ಮತ್ತಿತರ ಅಧಿಕಾರಿಗಳನ್ನು ಎಲ್ಲಿಂದ ಯಾವ ಸ್ಥಳಕ್ಕೆ ವರ್ಗಾಯಿಸಲಾಗಿದೆ, ಅವರ ಸೇವಾ ಹಿನ್ನೆಲೆ, ಸರ್ಕಾರದ ಆಯ ಕಟ್ಟಿನಲ್ಲಿ ಹೊಂದಿರುವ ಬಾಂಧವ್ಯದ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಉನ್ನತ ಮಟ್ಟದಲ್ಲಿರುವ ಕೆಲವು ಸರ್ಕಾರಿ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೆಲವು ಸಚಿವ ಸಂಪುಟದ ಸಹದ್ಯೋಗಿಗಳ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಇಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕೆಂದು ಮನವಿ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗ ಇಂತಹ ಅಧಿಕಾರಿಗಳ ಚಲನವಲನಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ.

ಪ್ರಭಾವಿಯೊಬ್ಬರ ಫೋನ್ ತಲಾಷ್:
ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಗೃಹ ಇಲಾಖೆಯಲ್ಲಿ ಸಾಕಷ್ಟು ಪ್ರಭಾವಿಯಾಗಿದ್ದ ನಿವೃತ್ತ ಅಧಿಕಾರಿಯೊಬ್ಬರ ದೂರವಾಣಿ ಕರೆಗಳನ್ನು ಪರಿಶೀಲನೆಗೊಳಪಡಿಸಲು ಆಯೋಗ ಮುಂದಾಗಿದೆ. ಕಳೆದ ಒಂದು ತಿಂಗಳಿನಿಂದ ಇವರು ಗೃಹ ಇಲಾಖೆಯಲ್ಲಿ ಯಾವ ಯಾವ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ್ದರು. ವರ್ಗಾವಣೆಯಲ್ಲಿ ಇವರ ಪಾತ್ರವಿದೆಯೇ, ಇವರ ಜೊತೆ ಅನೂನ್ಯ ಸಂಬಂಧ ಹೊಂದಿರುವ ಅಧಿಕಾರಿಗಳು ಯಾರು ಎಂಬುದನ್ನು ಸಹ ಆಯೋಗ ಪರಿಶೀಲನೆ ಮಾಡುತ್ತಿದೆ ಎಂದು ತಿಳಿದುಬಂದಿದೆ.

ವಹಿವಾಟಿನ ಮೇಲೂ ಕಣ್ಣು:
ಇನ್ನು ಚುನಾವಣಾ ಆಯೋಗ ಈ ಬಾರಿ ಹಣದ ವಹಿವಾಟಿನ ಮೇಲೆ ವ್ಯಾಪಕ ಕಣ್ಣಿಟ್ಟಿದೆ. ನಗದು ರಹಿತ(ಕ್ಯಾಶ್ ಲೆಸ್) ವಹಿವಾಟು ಹೆಚ್ಚಾಗುತ್ತಿರುವುದರಿಂದ ಆಕಾಂಕ್ಷಿಗಳು ಮತದಾರರಿಗೆ ಆನ್‍ಲೈನ್, ಪೇಟಿಯಂ ಮೂಲಕ ಹಣವನ್ನು ಸಂದಾಯವಾಗಬಹುದೆಂಬ ಆರೋಪ ಕೇಳಿಬಂದಿದೆ. ಇದರ ಮೇಲೆ ಕಣ್ಣಿಟ್ಟಿರುವ ಆಯೋಗ ಕೆಲವು ನುರಿತ ಸೈಬರ್ ವಿಭಾಗದ ಅಧಿಕಾರಿಗಳನ್ನು ಬಳಸಿಕೊಳ್ಳಲು ಮುಂದಾಗಿದೆ. ಒಟ್ಟಿನಲ್ಲಿ ಈ ಬಾರಿಯ ಚುನಾವಣೆಯನ್ನು ಹಣ, ಹೆಂಡ, ಭ್ರಷ್ಟಾಚಾರದಿಂದ ಮುಕ್ತಗೊಳಿಸಿ ಮುಕ್ತ ಹಾಗೂ ಪಾರದರ್ಶಕ ಮತದಾನ ನಡೆಸಲು ಆಯೋಗ ಸರ್ವ ರೀತಿಯಲ್ಲೂ ಪಣ ತೊಟ್ಟಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا