Urdu   /   English   /   Nawayathi

ಯುವತಿ ಕಿಡ್ನಾಪ್ ಮಾಡಿದವರ ಮೇಲೆ ಪೊಲೀಸರ ಫೈರಿಂಗ್

share with us

ಬೆಂಗಳೂರು: 26 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಯುವತಿಯನ್ನು ಕಾರಿನಲ್ಲಿ ಅಪಹರಿಸಿ ಅನುಚಿತವಾಗಿ ವರ್ತಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳು ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ತಮಿಳುನಾಡಿನ ಧರ್ಮಪುರಿ ನಿವಾಸಿಗಳಾದ ಶಂಕರ್ (25) ಮತ್ತು ಸೆಲ್ವಕುಮಾರ್ (30) ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಆರೋಪಿಗಳು. ಬಂಧಿತರಿಂದ ಬಿಳಿ ಬಣ್ಣದ ಟಾಟಾ ಇಂಡಿಕಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆ ವಿವರ: ಕಳೆದ ಮಾರ್ಚ್ 18ರಂದು ಸರ್ಜಾಪುರ ರಸ್ತೆಯ ಕಸವನಹಳ್ಳಿ ರಸ್ತೆ ಬದಿ ನಿಂತಿದ್ದ ಯುವತಿಯನ್ನು ಬಿಳಿ ಬಣ್ಣದ ಟಾಟಾ ಇಂಡಿಕಾ ಕಾರಿನಲ್ಲಿ ಬಲವಂತವಾಗಿ ಅಪಹರಣಕಾರರು ಅಪಹರಿಸಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಕಂಟ್ರೋಲ್ ರೂಂ. 100ಕ್ಕೆ ವಿಷಯ ತಿಳಿಸಿದ್ದರು. ತಕ್ಷಣ ಮಾಹಿತಿ ಪಡೆದ ಪೊಲೀಸರು ಅಪಹರಣವಾಗಿರುವುದು ಈಜು ತರಬೇತಿ ನೀಡುವ ಯುವತಿ ಎಂಬ ಬಗ್ಗೆ ವಿಷಯ ಸಂಗ್ರಹಿಸಿ ಈ ವ್ಯಾಪ್ತಿಯಲ್ಲಿ ನಾಕಾಬಂದಿ ಹಾಕಿ ವಾಹನಗಳನ್ನು ತಪಾಸಣೆ ಮಾಡಿ ಆರೋಪಿಗಳ ಪತ್ತೆಗೆ ಕಾರ್ಯಪ್ರವೃತ್ತರಾಗಿದ್ದರು.

ಮಾರನೆ ದಿನ ಮಾ.19ರಂದು ಬೆಳಗ್ಗೆ ಅಪಹರಣಗೊಂಡಿದ್ದ ಯುವತಿ ಪತ್ತೆಯಾಗಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಸೆಂಟ್‍ಜಾನ್ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಆಸ್ಪತ್ರೆಗೆ ತೆರಳಿ ಯುವತಿಯಿಂದ ಹೇಳಿಕೆ ಪಡೆದುಕೊಂಡಿದ್ದರು.ಮಾ.18ರಂದು ರಾತ್ರಿ 10 ಗಂಟೆ ಸಮಯದಲ್ಲಿ ಕಸವನಹಳ್ಳಿ ಬಳಿ ನಿಂತಿದ್ದಾಗ ಟಾಟಾ ಇಂಡಿಕಾ ಕಾರಿನಲ್ಲಿ ನನ್ನನ್ನು ಬಲವಂತವಾಗಿ ಅಪಹರಿಸಿ ಅದರಲ್ಲಿ ಕುಳಿತಿದ್ದ ಇಬ್ಬರು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಅವರಿಂದ ತಪ್ಪಿಸಿಕೊಂಡು ಕಾರಿನಿಂದ ಇಳಿದು ತನ್ನ ಮಾವನ ಮನೆಗೆ ಹೋಗಿದ್ದಾಗಿ ಯುವತಿ ಹೇಳಿಕೆ ನೀಡಿದ್ದಳು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತರು ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್‍ಕುಮಾರ್ ಸಿಂಗ್ ಅವರು ಖುದ್ದಾಗಿ ಪ್ರಕರಣದ ಪ್ರಗತಿಯನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗಾಗಿ ತಮಿಳುನಾಡು ಮತ್ತು ಕೇರಳದ ಹಿರಿಯ ಪೊಲೀಸ್ ಅಧಿಕಾರಿಗಳ ಸಹಾಯ ಪಡೆದಿದ್ದರು. ಅಲ್ಲದೆ, ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ಮಾರ್ಗದರ್ಶನದಲ್ಲಿ ಐದು ತಂಡಗಳನ್ನು ರಚಿಸಲಾಗಿತ್ತು. ಈ ವಿಶೇಷ ತಂಡ ಆರೋಪಿಗಳು ತಮಿಳುನಾಡಿನಲ್ಲಿರುವ ಬಗ್ಗೆ ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದು ಅಲ್ಲಿಗೆ ತೆರಳಿ ಕಾರ್ಯಾಚರಣೆ ಕೈಗೊಂಡಾಗ ಅಲ್ಲಿಂದ ಆರೋಪಿಗಳು ಕೇರಳಾ ರಾಜ್ಯಕ್ಕೆ ಪರಾರಿಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ.

ಈ ತಂಡ ಕೇರಳಕ್ಕೆ ತೆರಳಿದ್ದು, ಅಲ್ಲಿಯೂ ಸಹ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಂಡು ಪುನಃ ಬೆಂಗಳೂರಿಗೆ ವಾಪಸಾಗಿದ್ದರು. ನಿನ್ನೆ ಬೆಳ್ಳಂದೂರು ಠಾಣೆ ವ್ಯಾಪ್ತಿಯಲ್ಲಿ ಜಾತ್ರೆ ನಡೆಯುತ್ತಿತ್ತು. ಈ ಸರಹದ್ದಿನಲ್ಲಿ ವಾಹನಗಳ ತಪಾಸಣೆ ಕರ್ತವ್ಯ ನಿರ್ವಹಿಸುತ್ತಿದ್ದ ಇನ್ಸ್‍ಪೆಕ್ಟರ್ ವಿಕ್ಟರ್ ಸೈಮನ್, ವೈಟ್‍ಫೀಲ್ಡ್ ಠಾಣೆಯ ಪಿಎಸ್‍ಐ ಸೋಮಶೇಖರ್ ಅವರಿಗೆ ಟಾಟಾ ಇಂಡಿಕಾ ಕಾರು ಬೆಂಗಳೂರಿನಲ್ಲಿ ಓಡಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಟಾಟಾ ಇಂಡಿಕಾದ ನಂಬರ್‍ನ ಜಾಡು ಹಿಡಿದು ಬೆನ್ನಟ್ಟಿದಾಗ ಈ ಕಾರಿನಲ್ಲಿದ್ದವರು ಬ್ಯಾರಿಕೇಡ್ ಹೊಡೆದುಕೊಂಡೇ ಹಾಡೋಸಿದ್ದಾಪುರ ಕಡೆಗೆ ತಪ್ಪಿಸಿಕೊಂಡು ಹೋಗುತ್ತಿದ್ದರು.

ತಕ್ಷಣ ಪೊಲೀಸರು ಈ ಕಾರನ್ನು ಬೆನ್ನಟ್ಟಿ ತಮ್ಮ ಜೀಪ್‍ನಿಂದ ಕಾರಿಗೆ ಗುದ್ದಿ ಅಡ್ಡಗಟ್ಟಿದ್ದಾರೆ. ಆರೋಪಿಗಳು ಕಾರಿನಿಂದ ಇಳಿದು ತೋಪಿನ ಕಡೆ ಓಡುತ್ತಿದ್ದಾಗ ಇವರನ್ನು ಬೆನ್ನಟ್ಟಿದ ಕಾನ್ಸ್‍ಟೆಬಲ್ ಮಹಾಂತೇಶ್ ಮುಳವಾಡ ಅವರ ಮೇಲೆ ಹಲ್ಲೆ ನಡೆಸಿ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾರೆ.
ಈ ವೇಳೆ ಇನ್ಸ್‍ಪೆಕ್ಟರ್ ಅವರು ತಮ್ಮ ಆತ್ಮ ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿ ಅವರಿಗೆ ಶರಣಾಗುವಂತೆ ಹೇಳಿದರೂ ಕಿವಿಗೊಡದೆ ಇವರ ಮೇಲೆಯೇ ಹಲ್ಲೆಗೆ ಮುಂದಾದಾಗ ಮತ್ತೊಮ್ಮೆ ಹಾರಿಸಿದ ಗುಂಡು ಆರೋಪಿ ಶಂಕರ್ ಕಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ.  ಇದೇ ವೇಳೆ ಪಿಎಸ್‍ಐ ಸೋಮಶೇಖರ್ ಅವರು ಹಾರಿಸಿದ ಗುಂಡು ಆರೋಪಿ ಸೆಲ್ವಕುಮಾರ್ ಎಡಗಾಲಿಗೆ ತಗುಲಿ ಕುಸಿದು ಬಿದ್ದಿದ್ದು, ಈ ವೇಳೆ ಇವರಿಬ್ಬರನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.   ಕಾರ್ಯಾಚರಣೆ ವೇಳೆ ಆರೋಪಿಗಳಿಂದ ಇರಿತಕ್ಕೊಳಗಾದ ಕಾನ್ಸ್‍ಟೆಬಲ್ ಮಹಾಂತೇಶ್ ಮುಳವಾಡ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا