Urdu   /   English   /   Nawayathi

ಚುನಾವಣಾ ಆಯೋಗದಿಂದ ಮತದಾರರಿಗೆ ಭರವಸೆ

share with us

ಬೆಂಗಳೂರು: 25 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸುವುದು ಹೇಗೆ ಮತ್ತು ಚಲಾಯಿಸಿದ ಮತದ ಸುರಕ್ಷತೆ ಹಾಗೂ ನಿಖರತೆ ಕುರಿತು ಪರಿಶೀಲಿಸ ಬಹುದಾದ ವಿವಿ ಪ್ಯಾಟ್ ಹಾಗೂ ಮತಯಂತ್ರಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಇಂದು ಭಾರತ ಚುನಾವಣಾ ಆಯೋಗ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಹಮ್ಮಿಕೊಂಡಿತ್ತು. ಇಂದು ಬೆಳಗ್ಗೆ 7 ಗಂಟೆಗೆ ಲಾಲ್‍ಬಾಗ್ ಉದ್ಯಾನವನದಲ್ಲಿ ನಡೆದ ಕಾರ್ಯಕ್ರಮಕ್ಕೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಚಾಲನೆ ನೀಡಿದರು. ಮತಯಂತ್ರಗಳಲ್ಲಿ ಅಳವಡಿಸಿರುವ ತಂತ್ರಾಂಶ ಬದಲಾಯಿಸಲು ಸಾಧ್ಯವಿಲ್ಲ. ಇದಕ್ಕೆ ಯಾವುದೇ ರೀತಿಯ ಇಂಟರ್‍ನೆಟ್, ಬ್ಲ್ಯೂ ಟೂತ್ ಅಥವಾ ಪೋರ್ಟ್ ಮೂಲಕ ಸಂಪರ್ಕ ಸಾಧ್ಯವಿಲ್ಲ. ಆದ್ದರಿಂದ ಮತಯಂತ್ರಗಳ ಕುರಿತು ಸಾರ್ವಜನಿಕರು ಅನುಮಾನ ಪಡಬೇಕಿಲ್ಲ ಎಂದು ತಿಳಿಸಿದರು. ಚುನಾವಣೆಗೆ ಬಳಸುವ ಮುನ್ನ ಮತಯಂತ್ರಗಳನ್ನು ಮೂರು ಹಂತಗಳಲ್ಲಿ ರಾಜಕೀಯ ಪಕ್ಷಗಳ ಸಮ್ಮುಖದಲ್ಲಿಯೇ ಪರಿಶೀಲನೆ ನಡೆಸಲಾಗುತ್ತದೆ ಹಾಗೂ ಅತ್ಯಂತ ಭದ್ರತೆಯಲ್ಲಿ ಅವುಗಳನ್ನು ಸಂರಕ್ಷಿಸಲಾಗುತ್ತದೆ ಎಂದು ವಿವರಿಸಿದರು.

ವಿವಿ ಪ್ಯಾಟ್ ಯಂತ್ರದಲ್ಲಿ ಮತದಾರರು ಮತ ಚಲಾಯಿಸಿದ ಕೂಡಲೇ ಅವರು ಮತ ಚಲಾಯಿಸಿದ ಅಭ್ಯರ್ಥಿಯ ವಿವರಗಳು ಲಭ್ಯವಾಗುತ್ತದೆ. ಇದು ಯಂತ್ರದ ಗಾಜಿನ ಕಿಂಡಿಯಲ್ಲಿ ಏಳು ಸೆಕೆಂಡುಗಳು ಮೂಡಿರುತ್ತದೆ. ಈ ಪ್ರಿಂಟ್‍ಔಟ್‍ಗಳನ್ನು ಅಗತ್ಯವಿದ್ದಲ್ಲಿ ಮತಯಂತ್ರದಲ್ಲಿ ದಾಖಲಾದ ಮತಗಳೊಂದಿಗೆ ಹೊಂದಿಕೆ ಮಾಡಲು ಚುನಾವಣಾಧಿಕಾರಿಗಳಿಗೆ ಅವಕಾಶವಿರುತ್ತದೆ ಎಂದು ಮತದಾರರ ಅನುಮಾನಗಳಿಗೆ ವಿವರಣೆ ನೀಡಿದರು.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ನಗರದ ಎಲ್ಲ ಪ್ರಮುಖ ಸ್ಥಳಗಳಲ್ಲಿ, ಉದ್ಯಾನವನಗಳಲ್ಲಿ, ಮಾಲ್‍ಗಳಲ್ಲಿ ಮತ್ತಿತರ ಜನನಿಬಿಡ ಪ್ರದೇಶಗಳಲ್ಲಿ ಈ ಕುರಿತು ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ತಿಳಿಸಿದರು. ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ, ಬೆಂಗಳೂರು ನಗರ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ಅರ್ಚನಾ ಮತ್ತಿತರರು ಹಾಜರಿದ್ದರು.

ಮತಯಂತ್ರ ಬಳಕೆ ಹೇಗೆ:

ನಾಗರೀಕರಲ್ಲಿ ಮತಯಂತ್ರ ಬಳಕೆ ಮಾಡುವುದು ಹೇಗೆ ಎಂಬುದರ ಕುರಿತು ತಿಳಿಸಿಕೊಡುವುದರ ಜತೆಗೆ ಮತಯಂತ್ರದ ಮೂಲಕ ಮತ ಚಲಾಯಿಸಿದ ಮತವನ್ನು ವಿವಿ ಪ್ಯಾಟ್ ಯಂತ್ರದಲ್ಲಿ ಖಾತ್ರಿಪಡಿಸಿಕೊಳ್ಳುವ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರಿಗೆ ಪರಿಚಯಿಸಲಾಯಿತು.  ವಿದ್ಯುನ್ಮಾನ ಮತಯಂತ್ರಗಳನ್ನು ಮತ್ತು ವಿವಿ ಪ್ಯಾಟ್‍ಗಳನ್ನು ಸ್ಥಳದಲ್ಲಿಟ್ಟು ಸಾರ್ವಜನಿಕರಿಗೆ ಅವುಗಳನ್ನು ಬಳಸಿ ನೋಡುವ ಅವಕಾಶ ನೀಡಿ ಅರಿವು ಮೂಡಿಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಜಾನಪದ ಕಲಾ ತಂಡ, ಬೀದಿನಾಟಕಗಳ ಮೂಲಕ ಚುನಾವಣೆ ಹಾಗೂ ಮತದಾನದ ಜಾಗೃತಿ ಕುರಿತು ರಚಿಸಿದ ಹಾಡುಗಳನ್ನು ಹಾಡುವ ಮೂಲಕ ಜನರನ್ನು ಆಕರ್ಷಿಸಲಾಯಿತು. ಜಂಟಿ ಸಿಇಒ ಸೂರ್ಯಸೇನ್ ಮತದಾರರಿಗೆ ಇವಿಎಂ ಹಾಗು ವಿವಿಪ್ಯಾಟ್ ಬಗ್ಗೆ ಸಮಗ್ರವಾಗಿ ವಿವರಿಸಿ ಸಾರ್ವಜನಿಕರ ಅನೇಕ ಅನುಮಾನಗಳನ್ನು ಬಗೆಹರಿಸಿದರು.

ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಸಾರ್ವಜನಿಕರು ಅನುಮಾನ ಪಡಬೇಕಿಲ್ಲ. ವಿವಿ ಪ್ಯಾಟ್ ಯಂತ್ರದಲ್ಲಿ ಮತದಾರ ಯಾವ ಅಭ್ಯರ್ಥಿ ಹಾಗೂ ಯಾವ ಕ್ರಮ ಸಂಖ್ಯೆಗೆ ಮತ ಚಲಾಯಿಸಿದ್ದಾರೆ ಎಂಬುದು ತಕ್ಷಣದಲ್ಲಿ ಗೋಚರಿಸಿತ್ತದೆ ಎಂದರು. ನಕಲಿ ಮತದಾನ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಶೇ.99.2ರಷ್ಟು ಚುನಾವಣಾ ಗುರುತಿನ ಚೀಟಿಯಲ್ಲಿ ಮತದಾರರ ಭಾವಚಿತ್ರವಿದ್ದು ,ಮತದಾರ ಪಟ್ಟಿಯಲ್ಲೂ ಸಹ ಮತದಾರರ ಭಾವಚಿತ್ರವಿರುತ್ತದೆ ಎಂದರು.

ಮತದಾನಕ್ಕೆ ತೊಂದರೆಯಾದ ಸಂದರ್ಭದಲ್ಲಿ ಮತದಾರ ತಕ್ಷಣವೆ ಮತಗಟ್ಟೆ ಅಧಿಕಾರಿಯನ್ನು ಸಂಪರ್ಕಿಸಿದಲ್ಲಿ ಅವರು ಮತದಾನಕ್ಕೆ ಅವಕಾಶ ಮಾಡಿಕೊಡುವರು ಎಂದರು. ಪ್ರತಿ ಹಳ್ಳಿಹಳ್ಳಿಗೂ ತೆರಳಿ ಆಧುನಿಕ ಮತಯಂತ್ರಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಿದ್ದು ,ಈ ಜಾಗ್ರತಿ ಕಾರ್ಯಕ್ರಮವನ್ನು ಏಪ್ರಿಲ್ ಅಂತ್ಯದವರೆಗೆ ನಡೆಸಲು ಉದ್ದೇಶಿಸಲಾಗಿದೆ. ಮತದಾನದ ದಿನದಂದು ಮತಗಟ್ಟೆಗಳ ಬಳಿ ವಿವಿ ಪ್ಯಾಟ್ ಬಗ್ಗೆ ತಿಳುವಳಿಕೆ ನೀಡಲಾಗುವುದು ಎಂದರು. ಒಂದು ಮತಯಂತ್ರದಲ್ಲಿ ಮತ ಚಲಾಯಿಸಿದರೆ ಅದು ಒಂದೆ ಪಕ್ಷಕ್ಕೆ ಹೋಗುತ್ತದೆ ಎಂಬುದು ನಿರಾಧಾರ. ಈ ಅನುಮಾನ ತಪ್ಪಿಸುವ ಸಲುವಾಗಿಯೆ ವಿವಿ ಪ್ಯಾಟ್ ಬಳಸುವ ಮೂಲಕ ಮತದಾರ ಯಾವ ಅಭ್ಯರ್ಥಿಗೆ ಮತ ಚಲಾಯಿಸಿದ್ದೇನೆ ಎಂಬುದನ್ನು ಯಂತ್ರದ ಡಿಸ್‍ಪ್ಲೆ ಮೂಲಕ ಮನದಟ್ಟು ಮಾಡಿಕೊಳ್ಳುವ ಜತೆಗೆ ಅಧಿಕೃತ ಚೀಟಿ ಯಂತ್ರದ ಬಾಕ್ಸ್‍ನಲ್ಲಿ ದಾಖಲೆಯಾಗಿ ಉಳಿಯುತ್ತದೆ ಎಂದರು. ಬಿಬಿಎಂಪಿ ಜಂಟಿ ಆಯುಕ್ತ ತಿಪ್ಪೇಸ್ವಾಮಿ ಈ ಸಂದರ್ಭದಲ್ಲಿ ಹಾಜರಿದ್ದರು.
ಕಬ್ಬನ್ ಪಾರ್ಕ್ ನಲ್ಲಿ ಮತದಾನ ಜಾಗೃತಿ :

ಕಬ್ಬನ್ ಪಾರ್ಕ್‍ನಲ್ಲಿ ಅಪರ ಮುಖ್ಯ ಚುನಾವಣಾಧಿಕಾರಿ ಡಾ.ಜಗದೀಶ್ ಮತದಾರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವಿವಿ ಪ್ಯಾಟ್ ಕುರಿತು ಬೆಂಗಳೂರು ಪೂರ್ವ ವಲಯ ಜಂಟಿ ಆಯುಕ್ತ ಡಾ.ಅಶೋಕ್ ಹೆಚ್ಚಿನ ಮಾಹಿತಿ ನೀಡಿದರು. ಬಿಇಎಲ್ ತಾಂತ್ರಿಕ ಸಿಬ್ಬಂದಿ ವಿವಿ ಪ್ಯಾಟ್ ಯಂತ್ರದ ವಿಶೇಷತೆ ಮತ್ತು ಮತದಾನ ಹಾಗೂ ಮತದಾನದ ಖಾತ್ರಿ ಕುರಿತಂತೆ ವಿವರವಾಗಿ ತಿಳಿಸಿದರು.  ಸ್ಯಾಂಕಿಟ್ಯಾಂಕ್ ಕೆರೆ ಆವರಣದಲ್ಲಿ ಹಮ್ಮಿಕೊಂಡಿದ್ದ ವಿದ್ಯುನ್ಮಾನ ಮತಯಂತ್ರ ಮತ್ತು ವಿವಿ ಪ್ಯಾಟ್ ಯಂತ್ರಗಳ ಕುರಿತ ಜಾಗೃತಿ ಕಾರ್ಯಕ್ರಮಕ್ಕೆ ಬಿಬಿಎಂಪಿ ಜಂಟಿ ಆಯುಕ್ತ (ಮಹದೇವಪುರ ವಲಯ)ರಾದ ವಾಸಂತಿ ಅಮರ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಬಿಎಂಪಿ ಜಂಟಿ ಆಯುಕ್ತ (ಪಶ್ಚಿಮ ವಲಯ) ಬಸವರಾಜ್ ಮತ್ತು ಇತರ ಅಧಿಕಾರಿಗಳು ಹಾಜರಿದ್ದರು.

ಮತದಾರರ ಪ್ರತಿಜ್ಞಾ ವಿಧಿ:

ಇದೇ ಸಂದರ್ಭದಲ್ಲಿ ವಿಜಯಾ ಕಾಲೇಜಿನ ಎನ್‍ಎಸ್‍ಎಸ್ ವಿದ್ಯಾರ್ಥಿಗಳಿಗೆ ಮುಖ್ಯ ಚುನಾವಣಾಧಿಕಾರಿಗಳು ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು ಹಾಗೂ ಈ ಯುವ ಮತದಾರರಿಗೆ ಮತದಾನದ ಪ್ರಾಮುಖ್ಯತೆ ಕುರಿತು ಮಾಹಿತಿ ಒದಗಿಸಿದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا