Urdu   /   English   /   Nawayathi

ನೀರವ್ ಮೋದಿ ಜೊತೆ ನಂಟು ಹೊಂದಿರುವ 144 ಕಂಪೆನಿಗಳ ಮೇಲೆ ಇಡಿ ಕಣ್ಣು

share with us

ಮುಂಬೈ/ನವದೆಹಲಿ: 24 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ(ಪಿಎನ್‍ಬಿ) 11,400 ಕೋಟಿ ರೂ.ಗಳ ವಂಚನೆ ಪ್ರಕರಣದ ತನಿಖೆ ಮತ್ತು ಶೋಧ ಕಾರ್ಯಾಚರಣೆಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮತ್ತಷ್ಟು ಚುರುಕುಗೊಳಿಸಿದ್ದು, ಈ ಭಾರೀ ಹಗರಣದ ಆಳ ಮತ್ತು ವಿಸ್ತಾರ ಹೆಚ್ಚುತ್ತಲೇ ಇದೆ. ಪಿಎನ್‍ಬಿ ವಂಚನೆ ಪ್ರಕರಣದ ಪ್ರಮುಖ ಸೂತ್ರಧಾರರಾದ ಡೈಮಂಡ್ ಮರ್ಚೆಂಟ್ ನೀರವ್ ಮೋದಿ ಮತ್ತು ಆತನ ಸೋದರ ಮಾವ ಮೆಹುಲ್ ಚೋಕ್ಸಿ ಜೊತೆ ನಂಟು ಹೊಂದಿರುವ 144 ಶಂಕಾಸ್ಪದ ಕಂಪನಿಗಳ ಮೇಲೆ ನಿಗಾ ಇಟ್ಟಿರುವ ಇಡಿ ಅಧಿಕಾರಿಗಳು ಅವರುಗಳ ವ್ಯವಹಾರಗಳ ಬಗ್ಗೆ ತನಿಖೆ ತೀವ್ರಗೊಳಿಸಿದೆ.
ಈ 140ಕ್ಕೂ ಹೆಚ್ಚು ಕಂಪನಿಗಳು ಈ ಇಬ್ಬರ ಅಣತಿಯಂತೆ ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್‍ಡಿಐ) ವಿಧಾನದ ಮೂಲಕ ಹಣಕಾಸು ಅವ್ಯವಹಾರಗಳನ್ನು ನಡೆಸಿವೆಯೇ ಎಂಬ ಬಗ್ಗೆ ಅಧಿಕಾರಿಗಳು ಭೂತ ಕನ್ನಡಿ ಹಿಡಿದು ಶೋಧಿಸುತ್ತಿದ್ಧಾರೆ.

ಮೋದಿ ಮತ್ತು ಚೋಕ್ಸಿ ಇಂಥ ಕಂಪನಿಗಳನ್ನು ಎಫ್‍ಡಿಐ ವಿಧಾನದ ಮೂಲಕ ಹಣ ದುರ್ಬಳಕೆಗೆ ವ್ಯಾಪಕವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪಗಳು ಹಾಗೂ ಈಗಾಗಲೇ ಬಂಧಿತರ ನೀಡಿರುವ ಸುಳಿವನ್ನಾಧರಿಸಿ ತನಿಖೆ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಬ್ರಹ್ಮಾಂಡ ಅವ್ಯವಹಾರಗಳು ಬೆಳಕಿಗೆ ಬರುವ ಸಾಧ್ಯತೆ ಇದೆ. ಜೊತೆಗೆ ಇನ್ನಷ್ಟು ಮಂದಿ ಬಲೆಗೆ ಬೀಳುವ ನಿರೀಕ್ಷೆಯೂ ಇದೆ.

ಈ ಹಗರಣದ ಪ್ರಮುಖ ಆರೋಪಿ ಡೈಮಂಡ್ ಕಿಂಗ್ ನೀರವ್ ಮೋದಿಗೆ ಸೇರಿದ 44 ಕೋಟಿ ರೂ. ಮೌಲ್ಯದ ಷೇರುಗಳು ಮತ್ತು ಬ್ಯಾಂಕ್ ಖಾತೆಗಳನ್ನು ಇಡಿ ಅಧಿಕಾರಿಗಳು ನಿನ್ನೆಯಷ್ಟೇ ಜಪ್ತಿ ಮಾಡಿದ್ದರು. ಅಲ್ಲದೇ ನೂರಕ್ಕೂ ಹೆಚ್ಚು ದುಬಾರಿ ವಿದೇಶಿ ವಾಚುಗಳ ಬೃಹತ್ ಸಂಗ್ರಹವನ್ನೂ ಮುಟ್ಟುಗೋಲು ಹಾಕಿಕೊಂಡಿದ್ದರು.

ಈ ಸಂಸ್ಥೆಗೆ ಸಂಬಂಧಿಸಿದ 30 ಕೋಟಿ ರೂ.ಗಳು ಇರುವ ಬ್ಯಾಂಕ್ ಖಾತೆಗಳು ಹಾಗೂ 13.86 ಕೋಟಿ ರೂ. ಬೆಲೆಬಾಳುವ ಷೇರುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೇ ದುಬಾರಿ ಆಮದು ಕೈಗಡಿಯಾರಗಳ ಸಂಗ್ರಹ, 178 ಉಕ್ಕಿನ ಕಪಾಟುಗಳು, 158 ಪೆಟ್ಟಿಗೆಗಳು, 60 ಇತರ ಕಂಟೈನರ್‍ಗಳನ್ನು ಸಹ ಸುಪರ್ದಿಗೆ ತೆಗೆದುಕೊಳ್ಳಲಾಗಿತ್ತು.   ಇಡಿ ಅಧಿಕಾರಿಗಳು ಮೊನ್ನೆ ನೀರವ್ ಮತ್ತು ಮೆಹುಲ್ ಚೋಕ್ಸಿ ಗ್ರೂಪ್‍ಗೆ ಸೇರಿದ 94.52 ಕೋಟಿ ರೂ. ಮೌಲ್ಯದ ಷೇರುಗಳು ಮತ್ತು ಮ್ಯೂಚುವಲ್ ಫಂಡ್‍ಗಳನ್ನು ಜಪ್ತಿ ಮಾಡಿದ್ದರು. ಅಲ್ಲದೇ ನೀರವ್ ಕಂಪನಿಗೆ ಸೇರಿದ 100 ಕೋಟಿ ರೂ. ಬೆಲೆಬಾಳುವ 9 ಐಷಾರಾಮಿ ಕಾರುಗಳನ್ನೂ ಸಹ ವಶಪಡಿಸಿಕೊಂಡಿದ್ದರು.

ಒಂದು ದುಬಾರಿ ರೋಲ್ಸ್‍ರಾಯ್ ಘೋಸ್ಟ್, ಒಂದು ಮರ್ಸಿಡಿಸ್ ಬೆಂಝ್, ಒಂದು ಪೋರ್ಶೆ ಪನಾಮೆರಾ, ಮೂರು ಹೋಂಡಾ ವೆರಿಯಂಟ್ಸ್, ಒಂದು ಟೊಯೊಟಾ ಫಾರ್ಚುನರ್ ಮತ್ತು ಒಂದು ಇನ್ನೋವಾ ಸೇರಿದಂತೆ ಕೋಟ್ಯಂತರ ರೂ. ಬೆಲೆಬಾಳುವ 9 ಲಕ್ಷುರಿ ಕಾರುಗಳನ್ನು ಇಡಿ ಅಧಿಕಾರಿಗಳು ದಾಳಿ ವೇಳೆ ಜಪ್ತಿ ಮಾಡಿದ್ದರು.   ಭಾರೀ ಹಗರಣದಲ್ಲಿ ತಮ್ಮ ವಿರುದ್ಧ ಪ್ರಕರಣಗಳು ದಾಖಲಾಗುವುದಕ್ಕೆ ಮೊದಲೇ ದೇಶದಿಂದ ಪರಾರಿಯಾಗಿರುವ ನೀರವ್ ಮತ್ತು ಚೋಕ್ಸಿಯನ್ನು ಬಂಧಿಸುವ ನಿಟ್ಟಿನಲ್ಲಿ ಸಿಬಿಐ ಈಗಾಗಲೇ ಇಂಟರ್‍ಪೋಲ್ ನೆರವು ಕೇಳಿದ್ದು, ತನಿಖೆ ಪ್ರಗತಿಯಲ್ಲಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا