Urdu   /   English   /   Nawayathi

ಯಲ್ಲಾಪುರ: ಸಕಲ ಸೌಲಭ್ಯವಿದ್ದರೂ ಸಿಬ್ಬಂದಿಯ ಕೊರತೆ

share with us

ಯಲ್ಲಾಪುರ: 07 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ಪಟ್ಟಣದ ಸರ್ಕಾರಿ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರಿದ್ದಾರೆ. ಅನೇಕ ಕೊರತೆಗಳ ನಡುವೆಯೂ ಉತ್ತಮ ವ್ಯವಸ್ಥೆ, ಚಿಕಿತ್ಸೆ ನೀಡುತ್ತಿದ್ದಾರೆ. ಅಲ್ಲದೇ ಸಂದರ್ಭ ಬಂದಾಗ ತಮ್ಮದೇ ರಕ್ತ ನೀಡಿ ರೋಗಿಯನ್ನು ಉಳಿಸಿದ ಉದಾಹರಣೆಗಳೂ ಇವೆ. 100 ಹಾಸಿಗೆ ಆಸ್ಪತ್ರೆಗೆ ಬೇಕಾದ ಕಟ್ಟಡವನ್ನು ಸುಮಾರು ₹ 6 ಕೋಟಿ ವೆಚ್ಚದಲ್ಲಿ ಕಟ್ಟಲಾಗಿದೆ. ಇದಕ್ಕೆ ಬೇಕಾದ ಸಲಕರಣೆಗಳು ಬರಬೇಕಾಗಿದೆ. ಅಲ್ಲದೇ ಪ್ರತ್ಯೇಕವಾಗಿ ಹಳೇ ಕಟ್ಟಡ, ಆಪರೇಷನ್ ಥಿಯೇಟರ್ ಅನ್ನು 95 ಲಕ್ಷ ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದೆ. 40 ಲಕ್ಷ ವೆಚ್ಚದಲ್ಲಿ ಶವಾಗಾರವನ್ನು ಹೊಸದಾಗಿ ಕಟ್ಟಲಾಗುತ್ತಿದೆ. ಇದರಲ್ಲಿ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮೊದಲ ಬಾರಿಗೆ ಕೋಲ್ಡ್ ಸ್ಟೋರೇಜ್ ವ್ಯವಸ್ಥೆಯೂ ರೂಪುಗೊಳ್ಳಲಿದೆ. ಆಸ್ಪತ್ರೆಯಲ್ಲಿ ಚಿಕ್ಕಪುಟ್ಟ ಶಸ್ತ್ರಚಿಕಿತ್ಸೆಯಿಂದ ಹಿಡಿದು, ಸಾಮಾನ್ಯ ರೋಗಗಳಿಗೆ ಎಲ್ಲ ರೀತಿಯ ಚಿಕಿತ್ಸೆ ಲಭ್ಯವಿದೆ. ಈ ಆಸ್ಪತ್ರೆ ಹೆಸರು ಮಾಡಿದ್ದೇ ಹೆರಿಗೆಗಳಿಂದ. ಇಲ್ಲಿ ಶಸ್ತ್ರಚಿಕಿತ್ಸಕ ಡಾ.ರಾಮಾ ಹೆಗಡೆ ಹಾಗೂ ಪ್ರಸೂತಿ ತಜ್ಞ ವೈದ್ಯ ಡಾ.ದೀಪಕ್ ಭಟ್ಟ ಅವರ ನೈಪುಣ್ಯದಿಂದಾಗಿ ತಿಂಗಳಿಗೆ 70ರಿಂದ 80 ಹೆರಿಗೆಗಳಾಗುತ್ತವೆ. ಆಸ್ಪತ್ರೆಯಲ್ಲಿ ಫಾರ್ಮಸಿ, ಎಕ್ಸ್‌ರೇ ಲ್ಯಾಬ್, ರಕ್ತ, ಮಲ ಮೂತ್ರ ತಪಾಸಣಾ ಪ್ರಯೋಗಾಲಯ ಎಲ್ಲವನ್ನು ಹೊಂದಿದ್ದು, ಉತ್ತಮ ಸಿಬ್ಬಂದಿ ಹೊಂದಿದೆ. ಔಷಧಿಗಳಿಗೆ ಯಾವುದೇ ಕೊರತೆ ಇಲ್ಲ. ತಜ್ಞ ವೈದ್ಯರಲ್ಲಿ ಸರ್ಜನ್, ಪ್ರಸೂತಿ ತಜ್ಞ, ಎಲುಬು ಮತ್ತು ಕೀಲು ತಜ್ಞರು, ಕಿವಿ, ಗಂಟಲು ಮೂಗು ತಜ್ಞರು, ನೇತ್ರತಜ್ಞರು, ಮಕ್ಕಳ ತಜ್ಞರು ಹಾಗೂ ಹಲ್ಲಿನ ತಜ್ಞರ ಹುದ್ದೆಗಳು ಮಂಜೂರಾಗಿವೆ. ಅವರಲ್ಲಿ ಇಬ್ಬರು ನಿವೃತ್ತಿ ಹೊಂದಿದ ಗುತ್ತಿಗೆ ಆಧಾರದ ವೈದ್ಯರಾಗಿದ್ದಾರೆ. ಮುಖ್ಯವಾಗಿ ಬೇಕಾದ ಫಿಸಿಷಿಯನ್ ಹಾಗೂ ಅರಿವಳಿಕೆ ತಜ್ಞರು ಬೇಕಾಗಿದ್ದಾರೆ. ಅಗತ್ಯವಿದ್ದ ಕೆಲವು ಸಂದರ್ಭದಲ್ಲಿ ಹೊರಗಿನಿಂದ ಕರೆಸಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಈ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಮಂಜೂರಿಯಾದರೂ ಇದಕ್ಕೆ ಬೇಕಾದ ಅಗತ್ಯ ಕಟ್ಟಡ, ಆರ್.ಒ. ವಾಟರ್ ಪ್ಲಾಂಟ್, ಜನರೇಟರ್, 24 ಗಂಟೆ ನೀರು ಪೂರೈಕೆ ಮಾಡುವ ಓವರ್ ಹೆಡ್ ಟ್ಯಾಂಕ್, ವಾಟರ್ ಸಂಪ್ ಇಲ್ಲ. ಈಗ 125 ಕೆ.ವಿ ಜನರೇಟರ್ ಖರೀದಿಸಿಲಾಗಿದೆ. ಸಾಮಾನ್ಯ ಆಂಬುಲೆನ್ಸ್ ಹಾಗೂ ನಗು ಮಗು ಆಂಬುಲೆನ್ಸ್ ಇವೆ.  

ಪ್ರತ್ಯೇಕ ವಾರ್ಡ್: ಕೊರೊನಾ ಚಿಕಿತ್ಸೆಗಾಗಿ 20 ಹಾಸಿಗೆಯ ಪ್ರತ್ಯೇಕ ವಾರ್ಡ್, ಜ್ವರ ತಪಾಸಣಾ ಕೇಂದ್ರ ತೆರೆಯಲಾಗಿದೆ. ಹೊರಗಿನಿಂದ ಬಂದವರ ನಿರಂತರ ಪರಿಶೀಲನೆ ನಡೆಸಲಾಗುತ್ತಿದೆ. ತಾಲ್ಲೂಕಿನಲ್ಲಿ 9 ಪ್ರಾಥಮಿಕ ಆರೊಗ್ಯ ಕೇಂದ್ರಗಳಿದ್ದು, ಎರಡು ವೈದ್ಯರ ಹುದ್ದೆಗಳು ಖಾಲಿ ಇವೆ. 47 ಆರೋಗ್ಯ ಸಹಾಯಕರಲ್ಲಿ 26, 10 ಲಿಪಿಕ ಸಿಬ್ಬಂದಿಯಲ್ಲಿ ಐವರು, ಮೂವರು ಶುಶ್ರೂಷಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ್ ಮಾಹಿತಿ ನೀಡಿದ್ದಾರೆ.

ಏಳು ವೈದ್ಯರು: 11 ವೈದ್ಯರಿರಬೇಕಾದಲ್ಲಿ ಏಳು ವೈದ್ಯರಿದ್ದಾರೆ. ಇಬ್ಬರು ಆಯುಷ್ ವೈದ್ಯರಿದ್ದಾರೆ. 24 ನರ್ಸ್‌ಗಳಿದ್ದಾರೆ. ಇಬ್ಬರು ಪ್ರಯೋಗಾಲಯ ತಂತ್ರಜ್ಞರು ಇರಬೇಕಾದಲ್ಲಿ ಒಬ್ಬರಿದ್ದಾರೆ. ಇಬ್ಬರು ಎಕ್ಸ್‌ರೇ ತಂತ್ರಜ್ಞರು, ಇಬ್ಬರು ಫಾರ್ಮಾಸಿಸ್ಟ್ ಇದ್ದಾರೆ. ಏಳು ಮಂದಿ ಕಚೇರಿ ಸಿಬ್ಬಂದಿ ಇರಬೇಕಾದಲ್ಲಿ ಒಬ್ಬರೇ ಕಾರ್ಯ ನಿರ್ವಹಿಸುತ್ತಿರುವುದು ಕಚೇರಿ ಕೆಲಸಕ್ಕೆ ತೊಂದರೆ ಆಗುತ್ತಿದೆ. 100 ಹಾಸಿಗೆ ಆಸ್ಪತ್ರೆಗೆ ಬೇಕಾದ ಸಿಬ್ಬಂದಿಯಲ್ಲಿ ಕೊರತೆ ಇದೆ. ಅಗತ್ಯವುಳ್ಳ 82 ಸಿಬ್ಬಂದಿ ಪೈಕಿ 40 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا