Urdu   /   English   /   Nawayathi

ಶಬೇ ಬರಾಅತ್, ಗುಡ್‌ಫ್ರೈಡೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ; ಉಲ್ಲಂಘಿಸಿದ್ರೆ ಮುಲಾಜಿಲ್ಲದೆ ಕಠಿಣ ಕ್ರಮ: ಭಾಸ್ಕರ್ ರಾವ್

share with us

ಬೆಂಗಳೂರು: 07 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಶಬೆ ಬರಾಅತ್ ಹಾಗೂ ಗುಡ್‌ಫ್ರೈಡೆಗಾಗಿ ಯಾರು ಕೂಡ ಮಸೀದಿ, ಚರ್ಚ್‌ಗಳಿಗೆ ತೆರಳದೆ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕು. ಅನಗತ್ಯವಾಗಿ ಚರ್ಚ್, ಮಸೀದಿಗಳಲ್ಲಿ ಸೇರಿದರೆ ಮುಲಾಜಿಲ್ಲದೆ ಬಂಧಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ. ಆರ್ಚ್ ಬಿಷಪ್ ಮಚಾಡೊ ಅವರು ಗುಡ್ ಫ್ರೈಡೆ ಪ್ರಾರ್ಥನೆಗೆ ಚರ್ಚ್‌ಗೆ ಬರದಂತೆ ಮನೆಯಲ್ಲೇ ಆಚರಿಸುವಂತೆ ಮನವಿ ಮಾಡಿರುವುದು ಸ್ವಾಗತಾರ್ಹವಾಗಿದೆ. ಅದೇ ರೀತಿ ವಕ್ಫ್ ಮಂಡಳಿ ಕೂಡ ಶಬೇ ಬರಾಅತ್ ಅನ್ನು ಮನೆಯಲ್ಲಿಯೇ ಆಚರಿಸುವಂತೆ ಕರೆ ನೀಡಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು. ಲಾಕ್‌ಡೌನ್ ಉಲ್ಲಂಘಿಸಿ ನಗರದಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ 17,384 ವಾಹನಗಳನ್ನು ನಗರ ಪೊಲೀಸರು ಇಲ್ಲಿಯವರೆಗೆ ವಶಪಡಿಸಿಕೊಂಡಿದ್ದಾರೆ. ಲಾಕ್‌ಡೌನ್ ಉಲ್ಲಂಘಿಸಿ ಅನಗತ್ಯವಾಗಿ ನಗರದ ವಿವಿಧೆಡೆ ಸಂಚರಿಸುತ್ತಿದ್ದ 16, 187 ಬೈಕ್‌ಗಳು, 554 ಆಟೋ, 646 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಅನಗತ್ಯ ವಾಹನ ಸಂಚಾರವನ್ನು ತಡೆಯಲು ನಗರದ ಬಹುತೇಕ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು ವಶಪಡಿಸಿಕೊಂಡಿರುವ ವಾಹನಗಳನ್ನು ಲಾಕ್‌ಡೌನ್ ಮುಗಿಯುವವರೆಗೆ ಅವುಗಳನ್ನು ವಾಪಸ್ ನೀಡುವುದಿಲ್ಲ ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ. ಮನೆಯ ಸುತ್ತಮುತ್ತ ಅಗತ್ಯ ವಸ್ತುಗಳಿಗೆ ವಾಹನ ತೆಗೆದುಕೊಂಡು ಹೋಗುವವರನ್ನು ಬಿಟ್ಟು ಅನಗತ್ಯವಾಗಿ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗುವ ವಾಹನ ಸವಾರರನ್ನು ತಡೆದು ಮುಲಾಜಿಲ್ಲದೆ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ತಿಳಿಸಿದರು. ನಗರದ ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣ, ಕೇಂದ್ರ-ಆಗ್ನೇಯ, ಈಶಾನ್ಯ ಹಾಗೂ ವೈಟ್‌ಫೀಲ್ಡ್ ಉಪ ವಿಭಾಗಗಳಲ್ಲಿ ವಾಹನ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ. ಯಾರೂ ಅನಗತ್ಯವಾಗಿ ವಾಹನಗಳನ್ನು ರಸ್ತೆಗೆ ತರದಂತೆ ಎಚ್ಚರ ವಹಿಸಲಾಗಿದೆ ಎಂದು ತಿಳಿಸಿದರು. ಅಗತ್ಯ ಸೇವೆಗಳಿಗೆ ಪಾಸ್ ಪಡೆದಿರುವವರು, ವೈದ್ಯಕೀಯ, ಅರೆವೈದ್ಯಕೀಯ ಸಿಬ್ಬಂದಿ ಸೇರಿ ಎಲ್ಲರೂ ಕಡ್ಡಾಯವಾಗಿ ಪಾಸ್‌ನ್ನು ತಪಾಸಣೆ ನಡೆಸುವ ಪೊಲೀಸರಿಗೆ ತೋರಿಸಬೇಕು ಎಂದು ತಿಳಿಸಿದ್ದಾರೆ. ನಕಲಿ ಪಾಸ್‌ಗಳನ್ನು ಇಟ್ಟುಕೊಂಡು ಸಂಚರಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು, ಯಾರು ನಕಲಿ ಪಾಸ್ ತಯಾರು ಮಾಡುವುದಾಗಲಿ ಅದನ್ನು ಬಳಸಿಕೊಂಡು ಓಡಾಡುವುದಾಗಲಿ ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಭಾಸ್ಕರ್ ರಾವ್ ಎಚ್ಚರಿಕೆ ನೀಡಿದರು.

ಕ, ಪ್ರ ವರದಿ 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا