Urdu   /   English   /   Nawayathi

ದ.ಕ.ದಲ್ಲೂ ಔಷಧ ರಹಿತ ಹಿಜಾಮ ಚಿಕಿತ್ಸೆ

share with us

ಉಳ್ಳಾಲ: 26 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಆಧುನಿಕತೆ ಅಬ್ಬರದಲ್ಲಿ ಹೊಸ ಹೆಸರಿನ ಕಾಯಿಲೆಗಳೂ ಕಾಡುತ್ತಿವೆ. ಅದಕ್ಕೆ ತಕ್ಕಂತೆ ವಿನೂತನ ಚಿಕಿತ್ಸಾ ಪದ್ಧತಿಗಳೂ ಅಸ್ತಿತ್ವದಲ್ಲಿವೆ. ಇವುಗಳಲ್ಲಿ ಸಾಧಾರಣ ಚಿಕಿತ್ಸೆಗಳಿಗಿಂತ ಭಿನ್ನವಾಗಿರುವ ಹಿಜಾಮ ಪದ್ಧತಿ ಕೆಲವು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸದ್ದು ಮಾಡುತ್ತಿದೆ. ಗ್ರೀಕ್ ಮೂಲದ ಪುರಾತನ ಚಿಕಿತ್ಸಾ ಪದ್ಧತಿ ಹಿಜಾಮ ಅರಬ್ ದೇಶಗಳಿಗೂ ವಿಸ್ತರಣೆಯಾಗಿ ಕೆಲದಶಕಗಳ ಹಿಂದೆ ಭಾರತಕ್ಕೂ ಕಾಲಿಟ್ಟಿತ್ತು. ಇಸ್ಲಾಂ ಗ್ರಂಥಗಳಲ್ಲಿ ಉಲ್ಲೇಖವಿರುವ ಈ ಚಿಕಿತ್ಸೆ ಕುರಿತ ಅರಬ್ಬೀ ಭಾಷೆಯ ಪುಸ್ತಕವನ್ನು ಭಾರತೀಯರಾದ ಹಕೀಂ ಅಜ್ಮಲ್ ಖಾನ್ ಉರ್ದುವಿಗೆ ಭಾಷಾಂತರರಿಸಿ ಭಾರತಕ್ಕೂ ಪರಿಚಯಿಸಿದ್ದರು. ನಮ್ಮ ದೇಶದಲ್ಲಿ ಇದು ಆಯುಷ್ ಇಲಾಖೆ ವ್ಯಾಪ್ತಿಗೊಳಪಟ್ಟಿರುವ ಯುನಾನಿ ಚಿಕಿತ್ಸಾ ಪದ್ಧತಿಯ ಅಧೀನದಲ್ಲಿದೆ. ಯುನಾನಿಯೊಂದಿಗೆ ಹಿಜಾಮ ಚಿಕಿತ್ಸೆ ದೆಹಲಿಯ ಕರೋಲ್ ಬಾಗ್ ಆಸ್ಪತ್ರೆಯಲ್ಲಿ ಆರಂಭಗೊಂಡಿದ್ದು, ಬಳಿಕ ತಿಬಿಯಾ ಕಾಲೇಜಿನಲ್ಲಿ ಚಾಲನೆ ದೊರೆಯಿತು. ದಕ್ಷಿಣ ಕನ್ನಡ ಜಿಲ್ಲಾಸ್ಪತ್ರೆ ವೆನ್ಲಾಕ್‌ನಲ್ಲಿ ಏಳು ವರ್ಷಗಳ ಹಿಂದೆ ರಾಜ್ಯದಲ್ಲೇ ಮೊದಲ ಬಾರಿ ಈ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ಆರಂಭಗೊಂಡಿರುವುದು ವಿಶೇಷ. ಡಾ.ಸಯ್ಯದ್ ಝಾಯಿದ್ ಹುಸೈನ್ ವೆನ್ಲಾಕ್‌ನಲ್ಲಿ ಹಿಜಾಮ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಮಾಹಿತಿ, ಅರಿವಿನ ಕೊರತೆ ಮತ್ತು ನೋವಿನ ಭಯ ಜನರಲ್ಲಿದೆ. ನಿಧಾನವಾಗಿ ಚಿಕಿತ್ಸಾ ಪದ್ಧತಿ ಕರಾವಳಿಯಲ್ಲಿ ಜನಪ್ರಿಯವಾಗುತ್ತಿದ್ದು, ಸದ್ಯ ವೆನ್ಲಾಕ್‌ನಲ್ಲಿ ತಿಂಗಳಿಗೆ ಸರಾಸರಿ 400 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ದೂರದೂರುಗಳಿಂದಲೂ ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲಲ್ಲಿ ಕ್ಯಾಂಪ್‌ಗಳನ್ನೂ ಏರ್ಪಡಿಸಲಾಗುತ್ತಿದೆ. ಮಂಗಳೂರಿನಲ್ಲಿ ಖಾಸಗಿ ಕ್ಲಿನಿಕ್‌ಗಳಲ್ಲೂ ಈ ಚಿಕಿತ್ಸೆ ಲಭ್ಯವಿದೆ. ಆದರೆ ಇದು ಸರ್ಕಾರದಿಂದ ಅಂಗೀಕೃತವಲ್ಲ ಮತ್ತು ದುಬಾರಿ ವೆಚ್ಚನ್ನೂ ಮಾಡಬೇಕಾಗುತ್ತದೆ.

72 ರೋಗಗಳಿಗೆ ಚಿಕಿತ್ಸೆ:  ಹಿಜಾಮದಲ್ಲಿ ಮಸಾಜ್ ಮತ್ತು ಬೆಂಕಿ ಹಿಜಾಮ ಎಂಬ ಚಿಕಿತ್ಸೆಗಳಿವೆ. ಥೈರಾಯ್ಡ, ಹಳೇ ಕಾಯಿಲೆ ಸಹಿತ 72 ರೋಗಗಳಿಗೆ ಹಿಜಾಮದಲ್ಲಿ ನೇರ ಚಿಕಿತ್ಸೆ ಇದೆ. ಆರೋಗ್ಯವಂತರೂ ಈ ಚಿಕಿತ್ಸೆ ಪಡೆಯಬಹುದು. ಅಪಾಯಕಾರಿ ರಕ್ತ ಹೊರಹೋಗಿ ಬೆನ್ನಿಗೆ ಆರಾಮ ಮತ್ತು ಕಣ್ಣಿನ ದೃಷ್ಟಿ ತೀಕ್ಷ್ಣಗೊಳಿಸಿ ರೋಗನಿರೋಧಕ ಶಕ್ತಿ ವೃದ್ಧಿಸಲು ಸಹಕಾರಿ. ಆರೋಗ್ಯ ವೃದ್ಧಿಗೂ ಸಹಕಾರಿ ಎನ್ನುತ್ತಾರೆ ವೈದ್ಯರು.

ಚಿಕಿತ್ಸೆ ಹೇಗೆ?: ಯುನಾನ್ ಎಂಬುದು ಗ್ರೀಕ್ ಪದವಾಗಿದ್ದು, ಆ ದೇಶದ ಒಂದೂವರೆ ಸಾವಿರ ವರ್ಷಗಳ ಹಿಂದಿನ ಚಿಕಿತ್ಸಾ ಪದ್ಧತಿ. ಹಿಜಾಮ ಎನ್ನುವುದು ಅರಬ್ಬೀ ಪದ. ಹಜಮ್ ಎಂದರೆ ಸೆಳೆದುಕೊಳ್ಳುವುದು ಎಂದರ್ಥ. ಈ ವಿಧಾನ ಬಳಸಿ ಮನುಷ್ಯನ ದೇಹದಲ್ಲಿ ನಿರ್ದಿಷ್ಟ ಬಿಂದುಗಳನ್ನು ಕೇಂದ್ರೀಕರಿಸಿ ಗಾಳಿ ಮೂಲಕ ಹಿಜಾಮ ಕಪ್ಸ್ ಜೋಡಿಸಲಾಗುತ್ತದೆ. ಹತ್ತು ನಿಮಿಷಗಳ ಬಳಿಕ ಕಪ್‌ಗಳನ್ನು ತೆಗೆದು ಚರ್ಮ ಸೆಳೆಯಲ್ಪಟ್ಟ ಜಾಗದಲ್ಲಿ ಚುಚ್ಚಿ ಮತ್ತೆ ಕಪ್ಸ್ ಅಳವಡಿಸಿ, ಕೆಟ್ಟ ರಕ್ತ ಮತ್ತು ನಿರುಪಯುಕ್ತ ತ್ಯಾಜ್ಯಗಳನ್ನು ಹೊರ ತೆಗೆಯಲಾಗುತ್ತದೆ. ಈ ವೇಳೆ ಮುಳ್ಳು ತಾಗಿದಾಗ ಆಗುವ ನೋವಷ್ಟೇ ಅನುಭವಕ್ಕೆ ಬರುತ್ತದೆ. 20-30 ನಿಮಿಷಗಳಲ್ಲಿ ಈ ಪ್ರಕ್ರಿಯೆ ಮುಗಿಯುತ್ತದೆ.

 ಇಂದು ಕಾಯಿಲೆಗಳಿಗಾಗಿ ಔಷಧ ಸೇವಿಸಿ ಸುಸ್ತಾಗಿರುವ ಜನರು ಔಷಧರಹಿತ ಚಿಕಿತ್ಸೆ ಎದುರು ನೋಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯುನಾನಿ ಪದ್ಧತಿ ಹಿಜಾಮ ಚಿಕಿತ್ಸೆ ಪಥ್ಯಾಧರಿತ, ಅಡ್ಡ ಪರಿಣಾಮವಿಲ್ಲದ ಪ್ರಭಾವಶಾಲಿ ಚಿಕಿತ್ಸಾ ಪದ್ಧತಿ ಎನಿಸಿದೆ.
– ಸಯ್ಯದ್ ಝಾಯಿದ್ ಹುಸೈನ್, ಹಿರಿಯ ವೈದ್ಯರು, ವೆನ್ಲಾಕ್ ಯುನಾನಿ ವಿಭಾಗ

ಆರೋಗ್ಯ ಕಾಪಾಡುವಲ್ಲಿ ಮತ್ತು ಕಾಯಿಲೆ ಗುಣಪಡಿಸುವಲ್ಲಿ ಯುನಾನಿ ಚಿಕಿತ್ಸೆ ವಿಭಿನ್ನವಾಗಿ ಕೆಲಸ ಮಾಡುತ್ತದೆ. ಅದರಲ್ಲೂ ಹಿಜಾಮ ಅತ್ಯಂತ ಪರಿಣಾಮಕಾರಿ. ಈ ಚಿಕಿತ್ಸೆ ಗ್ರಾಮೀಣ ಭಾಗಕ್ಕೂ ಪರಿಚಯಿಸುವ ನಿಟ್ಟಿನಲ್ಲಿ ವರ್ಷದಲ್ಲಿ 40ರಷ್ಟು ಶಿಬಿರ ನಡೆಸಲಾಗುತ್ತಿದೆ.
– ಡಾ.ಮೊಹಮ್ಮದ್ ಇಕ್ಬಾಲ್, ಆಯುಷ್ ಜಿಲ್ಲಾ ವೈದ್ಯಾಧಿಕಾರಿ

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا