Urdu   /   English   /   Nawayathi

ಪೊಲೀಸ್ ಆಯುಕ್ತರು, ಡಿಸಿಪಿಗೆ ನೋಟಿಸ್

share with us

ಮಂಗಳೂರು: 20 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸ್ಟೇಟ್‌ಬ್ಯಾಂಕ್ ಹಾಗೂ ಬಂದರು ಬಳಿ ಕಳೆದ ಡಿ.19ರಂದು ನಡೆದ ಘರ್ಷಣೆ ಹಾಗೂ ಗೋಲಿಬಾರ್‌ಗೆ ಸಂಬಂಧಿಸಿ ವಿಚಾರಣೆಗೆ ಹಾಜರಾಗಲು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಮತ್ತು ಡಿಸಿಪಿ ಅರುಣಾಂಗ್ಶುಗಿರಿ ಸಹಿತ 176 ಪೊಲೀಸ್ ಅಧಿಕಾರಿ-ಸಿಬ್ಬಂದಿಗೆ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಮ್ಯಾಜಿಸ್ಟ್ರೀಯಲ್ ತನಿಖಾಧಿಕಾರಿ ಜಗದೀಶ್ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ನಗರದ ಮಿನಿ ವಿಧಾನಸೌಧದಲ್ಲಿರುವ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತಾಲಯದ ನ್ಯಾಯಾಲಯದಲ್ಲಿ ಬುಧವಾರ ಮ್ಯಾಜಿಸ್ಟ್ರೀಯಲ್ ವಿಚಾರಣೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪೊಲೀಸ್ ಇಲಾಖೆಯಿಂದ ನಿಯುಕ್ತರಾಗಿರುವ ನೋಡಲ್ ಅಧಿಕಾರಿ, ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಬೆಳ್ಳಿಯಪ್ಪ ಪ್ರಕರಣದ ಬಗ್ಗೆ ಸಾಕ್ಷೃ ಹೇಳಲು ಸಿದ್ಧರಿರುವ 176 ಪೊಲೀಸರ ಪಟ್ಟಿಯನ್ನು ನೀಡಿದ್ದಾರೆ. ಮುಂದಿನ ವಿಚಾರಣೆಯ ದಿನಾಂಕವನ್ನು ಫೆ.25ಕ್ಕೆ ನಿಗದಿಪಡಿಸಲಾಗಿದ್ದು, ಆ ದಿನ 176 ಮಂದಿಯ ಪೈಕಿ 12 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಸಾಕ್ಷೃ ಹೇಳಲು ಅವಕಾಶ ನೀಡಲಾಗುವುದು. ಉಳಿದವರಿಗೆ ಹಂತ ಹಂತವಾಗಿ ಸಾಕ್ಷೃ ಹೇಳಲು ಅವಕಾಶ ಕಲ್ಪಿಸಲಾಗುವುದು. ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಮತ್ತು ಡಿಸಿಪಿ ಅರುಣಾಂಗ್ಶುಗಿರಿ ಹೆಸರು ಕೂಡ ಪಟ್ಟಿಯಲ್ಲಿವೆ. ಅವರು ಖುದ್ದು ಹಾಜರಾಗಿ ಹೇಳಿಕೆ ನೀಡಲು ನೋಟಿಸ್ ಜಾರಿಗೊಳಿಸಲಾಗುವುದು ಎಂದು ಜಗದೀಶ್ ತಿಳಿಸಿದ್ದಾರೆ. ಕಳೆದ ಡಿ.31ರಂದು ಘಟನೆ ನಡೆದ ಸ್ಥಳಗಳನ್ನು ಮಹಜರು ಮಾಡಲಾಗಿದೆ. ಜ.7, ಫೆ.6, ಫೆ.13ರಂದು ಸಾರ್ವಜನಿಕರ ಲಿಖಿತ ಸಾಕ್ಷೃ ಹೇಳಿಕೆ ಮತ್ತು ವಿಡಿಯೋ ದೃಶ್ಯಾವಳಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ 203 ಮಂದಿ ಸಾಕ್ಷೃ ನುಡಿದಿದ್ದರು. ಪೋಲಿಸರು 50 ವಿಡಿಯೋಗಳಿರುವ ಪೆನ್‌ಡ್ರೈವ್ ನೀಡಿದ್ದಾರೆ. ಸಾರ್ವಜನಿಕರು ಕೂಡ 1 ವಿಡಿಯೋ ಸಿಡಿ ನೀಡಿದ್ದಾರೆ. ಇಂದು ಮಾಜಿ ಮೇಯರ್ ಕೆ. ಅಶ್ರಫ್ ಲಿಖಿತ ಸಾಕ್ಷೃ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ ಈವರೆಗೆ 204 ಸಾಕ್ಷೃಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಜಗದೀಶ್ ತಿಳಿಸಿದರು. ರಾಜ್ಯ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಸಾರ್ವಜನಿಕರು ಅಥವಾ ಪೊಲೀಸರು ಖುದ್ದು ಸೆರೆ ಹಿಡಿದ ವಿಡಿಯೋ ದೃಶ್ಯಾವಳಿಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ. ಸಿಸಿಟಿವಿ ದೃಶ್ಯಾವಳಿ ಕೂಡ ನೀಡಬಹುದು. ಆದರೆ ಯಾವುದೇ ದೃಶ್ಯಾವಳಿಗಳು ಫಾರ್ವರ್ಡ್ ಆಗಿರಬಾರದು. ಏಕೆಂದರೆ ಅದರ ಮೂಲ ಎಲ್ಲಿಯದ್ದು ಎಂದು ಗುರುತು ಹಿಡಿಯಲಾಗದ ಕಾರಣ ಅದನ್ನು ತನಿಖೆಗೊಳಪಡಿಸಲು ಸಾಧ್ಯವಾಗದು ಎಂದು ಸ್ಪಷ್ಟಪಡಿಸಿದ ಜಗದೀಶ್, ಇಂದು ಅಶ್ರಫ್ ಫಾರ್ವರ್ಡ್ ಮಾಡಲಾದ ವಿಡಿಯೋವಿರುವ ಸಿಡಿಯನ್ನು ನೀಡಿದ್ದರು. ಅದನ್ನು ತನಿಖೆಗೊಳಪಡಿಸಲಾಗದ ಕಾರಣ ವಾಪಸ್ ನೀಡಲಾಗಿದೆ ಎಂದರು.

ಬಿಡುಗಡೆಯಾದವರಿಗೆ ಅವಕಾಶ:  ಈ ಘಟನೆಯಲ್ಲಿ ಅನೇಕ ಮಂದಿ ಗಾಯಗೊಂಡು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಜೈಲು ಸೇರಿದ್ದ ಹಲವರು ಜಾಮೀನು ಪಡೆದು ಹೊರ ಬಂದಿದ್ದಾರೆ. ಹೀಗೆ ಗಾಯಾಳು ಮತ್ತು ಜೈಲಿನಿಂದ ಬಿಡುಗಡೆಗೊಂಡವರು ಕೂಡ ಮುಂದಿನ ವಿಚಾರಣೆಯ ದಿನಗಳಲ್ಲಿ ಖುದ್ದು ಹಾಜರಾಗಿ ಹೇಳಿಕೆ ನೀಡಬಹುದು ಎಂದು ಜಗದೀಶ್ ತಿಳಿಸಿದರು.

24ಕ್ಕೆ ಹೈಕೋರ್ಟ್‌ಗೆ ಮಾಹಿತಿ: ಈವರೆಗೆ ಸಲ್ಲಿಕೆಯಾದ ಸಿಸಿ ಟಿವಿ ದೃಶ್ಯಾವಳಿ ಮತ್ತು ವಿಡಿಯೋದ ಸಿಡಿಗಳ ಸಂಖ್ಯೆ, ಸಾಕ್ಷೃಗಳ ಹೇಳಿಕೆ ಇತ್ಯಾದಿ ಬಗ್ಗೆ ವಿವರವಾದ ಮಾಹಿತಿಯನ್ನು ಫೆ.24ರಂದು ಹೈಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ಜಗದೀಶ್ ಹೇಳಿದರು.

ಮಾ.23ಕ್ಕೆ ವರದಿ ಸಲ್ಲಿಕೆ: ಪ್ರಕರಣದ ತನಿಖಾ ವರದಿಯನ್ನು ಮಾ.23ಕ್ಕೆ ಸಲ್ಲಿಸಲು ಹೈಕೋರ್ಟ್ ನಿರ್ದೇಶಿಸಿದೆ. ಅದರಂತೆ ಆ ದಿನ ವರದಿ ಸಲ್ಲಿಸಲು ಪ್ರಯತ್ನಿಸಲಾಗುವುದು. ಅದರೊಳಗೆ ವರದಿ ಸಲ್ಲಿಸಲು ಆಗದಿದ್ದರೆ, ಮುಂದಿನ ಬೆಳವಣಿಗೆ ಗಮನಿಸಿ ಕಾಲಾವಧಿ ವಿಸ್ತರಿಸುವ ಬಗ್ಗೆ ಹೈಕೋರ್ಟ್‌ಗೆ ಮನವಿ ಮಾಡಿಕೊಳ್ಳಲಾಗುವುದು ಎಂದವರು ಹೇಳಿದರು.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا