Urdu   /   English   /   Nawayathi

ರೈಲು ಸೇವೆ ಬಲವರ್ಧನೆಗೆ ಪಡೀಲ್ ಬೈಪಾಸ್ ಮಾರ್ಗ

share with us

ಮಂಗಳೂರು: 19 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಕರ್ನಾಟಕ ಕರಾವಳಿಯಲ್ಲಿ ರೈಲು ಸೇವೆ ಜನಪ್ರಿಯಗೊಳಿಸುವಲ್ಲಿ ಇತ್ತೀಚೆಗೆ ಘೋಷಣೆಯಾದ ಯಶವಂತಪುರ-ವಾಸ್ಕೊ(ಗೋವಾ)-ಯಶವಂತಪುರ (06587/ 06588) ಡೈಲಿ ರೈಲು ಮುಖ್ಯ ಪಾತ್ರ ವಹಿಸಬಹುದು ಎಂದು ನಿರೀಕ್ಷಿಸಲಾಗಿದೆ. ಇದು ಮಂಗಳೂರು ನಗರ ಸಂಪರ್ಕಿಸುವುದಿಲ್ಲ ಎನ್ನುವ ಆಕ್ಷೇಪಗಳಿವೆ. ಆದರೆ ಕರಾವಳಿ ಅಂದರೆ ಮಂಗಳೂರು ನಗರ ಮಾತ್ರವಲ್ಲ. ಎಲ್ಲ ರೈಲುಗಳು ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಬರಲೇಬೇಕು ಎನ್ನುವ ವಾದ ಅವೈಜ್ಞಾನಿಕ. ಈ ರೈಲು ಮಂಗಳೂರು ಜಂಕ್ಷನ್ ಮತ್ತು ಮಂಗಳೂರು ಸೆಂಟ್ರಲ್ ಪ್ರವೇಶಿಸದೆಯೇ ಪಡೀಲ್ ಬೈಪಾಸ್ ಮೂಲಕ ಸುರತ್ಕಲ್ ನಿಲ್ದಾಣಕ್ಕೆ ಸಂಪರ್ಕ ಪಡೆಯಲಿದೆ.

ಪಡೀಲ್ ಬೈಪಾಸ್ ಯಾಕೆ?: ಬೆಂಗಳೂರಿನಿಂದ ಮುಂಜಾನೆ ನಿಗದಿತ ಸಮಯಕ್ಕೆ ಮುಂಚಿತವಾಗಿಯೇ ಸುಮಾರು 5 ಗಂಟೆಗೆ (ತಲುಪಬೇಕಾದ ಸಮಯ 5.40) ಮಂಗಳೂರು ಜಂಕ್ಷನ್ ತಲುಪುವ ಬೆಂಗಳೂರು-ಕಾರವಾರ/ಕಣ್ಣೂರು ಎಕ್ಸ್‌ಪ್ರೆಸ್ ರೈಲು ಬೆಳಗ್ಗೆ ಸುಮಾರು 6 ಗಂಟೆಗೆ ಮಂಗಳೂರು ಸೆಂಟ್ರಲ್ ತಲುಪುತ್ತಿತ್ತು. ಬಳಿಕ ಬೋಗಿ ಕಳುಚುವುದು, ಇಂಜಿನ್ ಬದಲಾವಣೆ ಮತ್ತಿತರ ಕಾರಣಗಳಿಂದ ಸಾಕಷ್ಟು ಕಾಲಾವಕಾಶ ಪಡೆದು ಬೆಳಗ್ಗೆ 7.15ಕ್ಕೆ ಸುರತ್ಕಲ್ ತಲುಪುತ್ತಿತ್ತು. ಅಂದರೆ ಮುಂಜಾನೆ ಐದು ಗಂಟೆಗೆ ಮಂಗಳೂರು ನಗರ ವ್ಯಾಪ್ತಿ ಬಂದ ರೈಲು ಸುಮಾರು ಎರಡೂವರೆ ಗಂಟೆ ಕಾಲ ನಗರದಲ್ಲೇ ಇರುತ್ತಿತ್ತು. ಕೊಂಕಣ ರೈಲ್ವೆಗೆ ಬಂದ ಕೂಡಲೇ ಮತ್ತೆ ಕ್ರಾಸಿಂಗ್, ಸುರತ್ಕಲ್‌ನಿಂದ ಮತ್ತೆ ಗೋವಾ ಪ್ಯಾಸೆಂಜರ್ ಹಿಂದೆ ನಿಧಾನಗತಿಯಲ್ಲಿ ಸಾಗಬೇಕಾದ ಅನಿವಾರ್ಯತೆ. ಈ ಆಧ್ವಾನಗಳಿಂದ ಬಿಡುಗಡೆ ಪಡೆಯುವ ಸಲುವಾಗಿಯೇ ಪಡೀಲ್ ಬೈಪಾಸ್ ಮಾರ್ಗದ ಬೇಡಿಕೆ ಸೃಷ್ಟಿಯಾಗಿದೆ.

ರಾಜಧಾನಿ ಸಂಪರ್ಕ ರೈಲುಗಳು: ಕಳೆದ ಲೋಕಸಭಾ ಚುನಾವಣೆ ಸ್ವಲ್ಪ ಮೊದಲು ಆರಂಭಗೊಂಡ ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ- ಮಂಗಳೂರು ಸೆಂಟ್ರಲ್ (ನಂ.16585) ರಾತ್ರಿ ರೈಲು, ಮಂಗಳೂರು ಸೆಂಟ್ರಲ್ ನಿಲ್ದಾಣ ಮೂಲಕ ವಾರದಲ್ಲಿ ಮೂರು ದಿನ ಮೈಸೂರು ಮಾರ್ಗ ಹಾಗೂ ನಾಲ್ಕು ದಿನ ಶ್ರವಣಬೆಳಗೊಳ ಮಾರ್ಗ ಸಂಪರ್ಕಿಸುವ ಎರಡು ಕಾರವಾರ ರಾತ್ರಿ ಎಕ್ಸ್‌ಪ್ರೆಸ್‌ಗಳು (ನಂ.16523/16513) ಇವೆ. ವಾರದಲ್ಲಿ ತಲಾ ಮೂರು ದಿನ ಸಂಚರಿಸುವ ಯಶವಂತಪುರ-ಮಂಗಳೂರು ಜಂಕ್ಷನ್ (ಶ್ರವಣಬೆಳಗೊಳ ಮಾರ್ಗ) ಗೋಮಟೇಶ್ವರ ಎಕ್ಸ್‌ಪ್ರೆಸ್ ನಂ. 16575 ಹಾಗೂ ಬೆಂಗಳೂರು-ಕಾರವಾರ ರೈಲು. ಇವು ಕರಾವಳಿ ಕರ್ನಾಟಕದಿಂದ ರಾಜ್ಯ ರಾಜಧಾನಿ ಸಂಪರ್ಕಿಸುವ ರೈಲುಗಳು.

ನಷ್ಟದಲ್ಲಿ ವಿಜಯಪುರ ರೈಲು: ನಷ್ಟದ ನಡುವೆಯೂ ಮಂಗಳೂರು-ವಿಜಯಪುರ ರೈಲು (ನಂ.7327/ 7327) ಸೇವೆ ಆರು ತಿಂಗಳು ವಿಸ್ತರಿಸಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ ಈ ರೈಲು ಗಳಿಕೆ ಇಲ್ಲಿವರೆಗೆ 1.37 ಕೋಟಿ ರೂ. ಇದು 3.98 ಕೋಟಿ ರೂ. ಗಳಿಸ ಬೇಕಿತ್ತು. ಈ ರೈಲು ಪ್ರಯಾಣ ಸುದೀರ್ಘ(ಒಂದೂವರೆ ದಿನ) ಅವಧಿ ತೆಗೆದುಕೊಳ್ಳುತ್ತಿರುವುದೇ ಈ ರೈಲು ಹೆಚ್ಚು ಪ್ರಯಾಣಿಕರನ್ನು ತಲುಪದಿರಲು ಮುಖ್ಯ ಕಾರಣ.

ಬೆಂಗಳೂರು-ವಾಸ್ಕೋ ನಡುವೆ ಆರಂಭವಾಗಲಿರುವ ಹೊಸ ರೈಲಿನಿಂದ ಸುರತ್ಕಲ್‌ನಿಂದ ಕಾರವಾರ ತನಕದ ಪ್ರಯಾಣಿಕರಿಗೆ ಬೆಂಗಳೂರು ಸಂಪರ್ಕ ಸುಲಭವಾಗಲಿದೆ. ಅನಗತ್ಯ ವಿಳಂಬ ತಪ್ಪಲಿದೆ. ಜತೆಗೆ ಮಂಗಳೂರು ನಗರ ವಲಯದಲ್ಲೇ ಹೊಸ ರೈಲು ನಿಲ್ದಾಣ ಸ್ಥಾಪನೆಯ ಸಾಧ್ಯತೆಯನ್ನು ಇದು ತೋರಿಸಿದೆ.
ಗೌತಮ್ ಶೆಟ್ಟಿ ಕುಂದಾಪುರ ರೈಲ್ವೆ ಯಾತ್ರಿ ಸಂಘ

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا