Urdu   /   English   /   Nawayathi

ಅಕ್ರಮ-ಸಕ್ರಮದಡಿ 10,000 ಮಂದಿಗೆ ಹಕ್ಕು ಪತ್ರ ವಿತರಣೆ..!

share with us

ಬೆಂಗಳೂರು: 27 ಜನುವರಿ 2020 (ಫಿಕ್ರೋಖಬರ್ ಸುದ್ದಿ) ರಾಜ್ಯದ ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡಿರುವ ಆರ್ಥಿಕವಾಗಿ ಹಿಂದುಳಿದವರ ಮನೆಗಳನ್ನು ಸಕ್ರಮ ಮಾಡುತ್ತಿದ್ದು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ 10 ಸಾವಿರ ಮಂದಿಗೆ ನಾಳೆ ಹಕ್ಕು ಪತ್ರ ವಿತರಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದ 9ಸಾವಿರ ಹಾಗೂ ಗ್ರಾಮಾಂತರ ಜಿಲ್ಲೆಯ 1 ಸಾವಿರ ಅರ್ಹ ಫಲಾನುಭವಿಗಳಿಗೆ ನಾಳೆ ನಗರದ ಬಸವನಗುಡಿ ಕಾಲೇಜು ಮೈದಾನದಲ್ಲಿ ಹಕ್ಕು ಪತ್ರ ವಿತರಣೆ ಮಾಡಲಾಗುವುದು ಎಂದರು. ಭೂ ಕಂದಾಯ ಕಾಯ್ದೆ 1964ರ ಕಲಂ 94 (ಸಿ) ರಡಿ, 2015ಕ್ಕೂ ಮುನ್ನ ಅಕ್ರಮ ಮನೆ ಗಳನ್ನು ಸಕ್ರಮ ಮಾಡಲು 2.5 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು. ಅವುಗಳ ಪರಿಶೀಲನೆ ನಡೆಸಿದ್ದು, ರಾಜ್ಯಾದ್ಯಂತ 60 ಸಾವಿರ ಅರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಗರಿಷ್ಠ 4 ಚದರಡಿಗಳಷ್ಟು ಹಾಗೂ ನಗರ ಪ್ರದೇಶದಲ್ಲಿ 600 ಚದರಡಿ , ಬಿಬಿಎಂಪಿ ಸರಹದ್ದಿನ 18 ಕಿಲೋ ಮೀಟರ್ ಒಳಗೆ 1200 ಚದರಡಿ ಅನಧಿಕೃತ ಮನೆಗಳನ್ನು ಸಕ್ರಮ ಮಾಡಬಹುದಾಗಿದೆ. ಗ್ರಾಮೀಣ ಪ್ರದೇಶಕ್ಕೆ ಗರಿಷ್ಠ 3 ಸಾವಿರ , ನಗರ ಪ್ರದೇಶಕ್ಕೆ ಗರಿಷ್ಠ 5 ಸಾವಿರ ಶುಲ್ಕ ವಿಧಿಸಲಾಗುತ್ತಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಾಜಿ ಸೈನಿಕರು ಹಾಗೂ ವಿಕಲಚೇತನರಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗಿದೆ. ಕೆರೆ, ಗುಂಡುತೋಪು, ಸ್ಮಶಾನ, ಶಾಲಾ-ಕಾಲೇಜು ಆವರಣದಲ್ಲಿ ನಿರ್ಮಿಸಿದ ಮನೆಗಳನ್ನು ಸಕ್ರಮ ಮಾಡುವುದಿಲ್ಲ. ಜ.31 ರಂದು ಮಂಗಳೂರಿನಲ್ಲಿ ಹಕ್ಕು ಪತ್ರ ವಿತರಣೆ ಮಾಡಲಿದ್ದು, ಆನಂತರ ರಾಯಚೂರು, ಯಾದಗಿರಿ ಸೇರಿದಂತೆ ಇತರೆ ಜಿಲ್ಲೆಗಳಲ್ಲೂ ಹಕ್ಕುಪತ್ರ ನೀಡಲಾಗುವುದು ಎಂದರು. ನಾಳೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಕ್ಕು ಪತ್ರ ವಿತರಣೆ ಮಾಡಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರವಾರು ಕೌಂಟರ್ ತೆರೆದು ವಿತರಣೆ ಮಾಡಲಾಗುತ್ತದೆ. ನಾಳೆ ಮಧ್ಯಾಹ್ನ 12 ಗಂಟೆಗೆ ಹಕ್ಕು ಪತ್ರ ವಿತರಣಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ ಎಂದರು. ಹಕ್ಕು ಪತ್ರ ಪಡೆಯಲು ಬರುವ ಜನರ ಅನುಕೂಲಕ್ಕಾಗಿ ವಾಹನಗಳ ಪಾರ್ಕಿಂಗ್ ಹಾಗೂ ಊಟದ ಸೌಲಭ್ಯ ಒದಗಿಸಲಾಗಿದೆ. ಪತಿ-ಪತ್ನಿ ಇಬ್ಬರ ಹೆಸರಿನಲ್ಲಿ ಜಂಟಿಯಾಗಿ ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿ ಪೂರ್ಣ ಹಕ್ಕು ನೀಡಲಾಗುತ್ತದೆ. ಬಹಳ ವರ್ಷದಿಂದ ಹಕ್ಕುಪತ್ರಕ್ಕಾಗಿ ಬಡವರು ಕಾಯುತ್ತಿದ್ದರು, ಈಗ ಅದು ಸಾಕಾರಗೊಂಡಿದೆ ಎಂದರು.

# ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ:
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವತ್ತುಗಳನ್ನು ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ ಮಾಡಬೇಕೆಂಬ ಚಿಂತನೆ ಇದೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಜೊತೆ ಸಮಾಲೋಚನೆ ನಡೆಸಲಾಗುತ್ತಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಕಾವೇರಿ ಸಾಫ್ಟ್‍ವೇರ್‍ನಲ್ಲಿ ಕಾನೂನು ಬಾಹಿರ ನಿವೇಶನಗಳ ನೋಂದಣಿಗೆ ಅವಕಾಶವಿಲ್ಲ. ಕಾನೂನುಬದ್ಧವಾಗಿದ್ದರೆ ಮಾತ್ರ ನಿವೇಶನಗಳ ನೋಂದಣಿ ಮಾಡಲಾಗುತ್ತದೆ ಎಂದು ಹೇಳಿದರು.

# ಒಪ್ಪಂದ ಕೃಷಿ:
ಕೃಷಿ ಉತ್ಪಾದನೆ ಹಾಗೂ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಒಪ್ಪಂದ ಕೃಷಿಗೆ ಆದ್ಯತೆ ದೊರೆಯುತ್ತಿದ್ದು, ಅದನ್ನು ಕಾನೂನು ಬದ್ಧಗೊಳಿಸಲಾಗುವುದು. ಬೇಸಾಯ ಮಾಡದ ಜಮೀನು ಪಾಳು ಬಿಡುವುದನ್ನು ತಪ್ಪಿಸಲು ಸಾಮೂಹಿಕವಾಗಿ ರೈತರೇ ಮುಂದೆ ಬಂದು ಗುತ್ತಿಗೆ ನೀಡುವುದಾದರೆ ಅದನ್ನು ಕಾನೂನು ಬದ್ಧಗೊಳಿಸಲು ಉದ್ದೇಶಿಸಲಾಗಿದೆ. ಜಮೀನು ಗುತ್ತಿಗೆ ಕೊಡುವವರು ಮತ್ತು ತೆಗೆದುಕೊಳ್ಳುವವರು ವಾರ್ಷಿಕ ಗುತ್ತಿಗೆ ಆಧಾರದ ಮೇಲೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ ಎಂದರು. ಪರಿಸರಕ್ಕೆ ನೀಲಗಿರಿ ಮರಗಳು ಮಾರಕವಾಗಿರುವುದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅವುಗಳನ್ನು ತೆರವುಗೊಳಿಸಲು ನೋಟೀಸ್ ನೀಡಲಾಗುತ್ತಿದೆ. ಈಗಾಗಲೇ ಅರಣ್ಯ ಇಲಾಖೆಯಲ್ಲಿ ಸಾಕಷ್ಟು ಮರಗಳನ್ನು ತೆರವುಗೊಳಿಸಲಾಗಿದೆ.ಉಳಿದ ಮರಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ ಎಂದು ಹೇಳಿದರು.

# ಜಿಲ್ಲಾಧಿಕಾರಿಗಳ ವರದಿ:
ಕನಕಪುರ ತಾಲೂಕಿನ ಕಪಾಲ ಬೆಟ್ಟದಲ್ಲಿ ಉದ್ದೇಶಿತ ಏಸು ಕ್ರಿಸ್ತನ ಪ್ರತಿಮೆ ನಿರ್ಮಿಸುವ ಸಂಬಂಧ ಜಿಲ್ಲಾಧಿಕಾರಿಗಳಿಂದ ವರದಿ ಪಡೆಯಲಾಗುವುದು. ವರದಿ ಬಂದ ನಂತರ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು. ಯಾವುದೇ ರೀತಿಯ ಒತ್ತಡ ಇಲ್ಲ. 118 ಅಡಿ ಪ್ರತಿಮೆ ನಿರ್ಮಿಸುವ ಅನುಮತಿ ಪಡೆದಿರುವ ಬಗ್ಗೆ ಮಾಹಿತಿ ಇಲ್ಲ.  ಈ ಸಂಬಂಧ ಅಗತ್ಯ ದಾಖಲೆಗಳನ್ನು ಕಂದಾಯ ಇಲಾಖೆ ಟ್ರಸ್ಟ್‍ನಿಂದ ಕೇಳಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಮೂರ್ತಿ, ಬೆಂ.ಗ್ರಾ. ಜಿಲ್ಲಾಧಿಕಾರಿ ರವೀಂದ್ರ, ನಗರ ಅಪರ ಜಿಲ್ಲಾಧಿಕಾರಿ ರೂಪಾ ಉಪಸ್ಥಿತರಿದ್ದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا