Urdu   /   English   /   Nawayathi

194 ಕೋಟಿ ವೆಚ್ಚದಲ್ಲಿ ನಿರ್ಮಾಣ: ಖಾದರ್

share with us

ಮಂಗಳೂರು: 23 ಜನುವರಿ 2020 (ಫಿಕ್ರೋಖಬರ್ ಸುದ್ದಿ) ‘ಬಹುನಿರೀಕ್ಷಿತ ಹಾಗೂ ನನ್ನ ಕನಸಿನ ಯೋಜನೆ ಹರೇಕಳ– ಕಡವು ನದಿ ತೀರದಿಂದ ಅಡ್ಯಾರ್‌ ಅನ್ನು ಸಂಪರ್ಕಿಸುವ ಸೇತುವೆ ಕಂ ಬ್ಯಾರೇಜ್ 194 ಕೋಟಿ ವೆಚ್ಚದಲ್ಲಿ ಎರಡು ವರ್ಷಗಳ ಅವಧಿಯಲ್ಲಿ ನಿರ್ಮಾಣ ಕಾರ್ಯವು ಪೂರ್ಣಗೊಳ್ಳಲಿದೆ’ ಎಂದು ಶಾಸಕ ಯು.ಟಿ. ಖಾದರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಹಿಂದೆ ಬಜೆಟ್‍ನಲ್ಲಿ ಈ ಯೋಜನೆ ಘೋಷಣೆಯಾಗಿದ್ದು, ಸಣ್ಣ ನೀರಾವರಿ ಇಲಾಖೆಯಿಂದ ಮಾಡಲಾಗುತ್ತಿರುವ ರಾಜ್ಯದ ಪ್ರಥಮ ಅತಿ ದೊಡ್ಡ ಯೋಜನೆ ಇದು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಟೆಂಡರ್ ಆಗಿತ್ತು. ಜಿ. ಶಂಕರ್ ಸಂಸ್ಥೆಗೆ ಈ ಕಾಮಗಾರಿ ಟೆಂಡರ್‌ಗೆ ಅನುಮತಿ ದೊರಕಿದೆ. 174 ಕೋಟಿಗೆ ಟೆಂಡರ್ ವಹಿಸಿದ್ದು, 194 ಕೋಟಿಗಳ ಟರ್ನ್ ಕೀ ಟೆಂಡರ್ (ಮತ್ತೆ ಹೆಚ್ಚುವರಿ ವೆಚ್ಚವನ್ನು ಕೇಳುವಂತಿಲ್ಲ) ಆಧಾರದಲ್ಲಿ ಕಾಮಗಾರಿ ಮುಗಿಯಲಿದೆ. 520 ಮೀಟರ್ ಉದ್ದದ ಸೇತುವೆ ನಿರ್ಮಾಣವಾಗಲಿದ್ದು, 10 ಮೀಟರ್ ಅಗಲವಿದ್ದು, ಏಳೂವರೆ ಮೀಟರ್‌ನಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಎರಡೂವರೆ ಮೀಟರ್ (ಇಕ್ಕೆಲಗಳಲ್ಲಿ ತಲಾ 1.25 ಮೀಟರ್‌ನಂತೆ) ವಾಕಿಂಗ್‌ ಪಾಥ್‌ ವ್ಯವಸ್ಥೆ ಮಾಡಲಾಗುತ್ತದೆ. ಕೆಳಗಡೆ ಡ್ಯಾಂ ನಿರ್ಮಾಣ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು. ಪ್ರಸ್ತುತ ಅಡ್ಯಾರ್ ಬಳಿ ಸಮುದ್ರದ ಹಿನ್ನೀರು ತುಂಬೆಗೆ ಹರಿಯುತ್ತಿತ್ತು. ಈ ಡ್ಯಾಂ ನಿರ್ಮಾಣದಿಂದಾಗಿ ಈ ಸಮಸ್ಯೆ ತಡೆದು, ಸಂಗ್ರಹಿಸಬಹುದಾಗಿದೆ. ಅಡ್ಯಾರ್‌ನಿಂದ ತುಂಬೆಯವರಿಗೆ ಮೂರೂವರೆ ಕಿಲೋಮೀಟರ್‌ ಉದ್ದದದಲ್ಲಿ ನೀರು ಸಂಗ್ರಹವಾಗಲಿದೆ ಎಂದು ಅವರು ತಿಳಿಸಿದರು. 500 ರಿಂದ 900 ಮೀಟರ್ ಅಗಲದಲ್ಲಿ ಈ ಡ್ಯಾಂ ನಿರ್ಮಾಣವಾಗಲಿದ್ದು, ಇದರಿಂದ ಅಂತರ್ಜಲ ವೃದ್ಧಿಯಾಗಲಿದೆ. ಉಳ್ಳಾಲಕ್ಕೆ ಮಾತ್ರವಲ್ಲದೆ, ನಗರದ ಜನರಿಗೆ ತುಂಬೆಯಲ್ಲಿ ನೀರಿನ ಸಮಸ್ಯೆ ಎದುರಾದಾಗಲೂ ಇಲ್ಲಿಂದ ನೀರು ಪೂರೈಸಬಹುದಾಗಿದೆ. ಈ ಡ್ಯಾಂನಲ್ಲಿ 4 ಮೀಟರ್ ನೀರು ನಿಲ್ಲಿಸಬಹುದಾಗಿದೆ. ಆದರೆ, ಅಷ್ಟು ನೀರು ನಿಲ್ಲಿಸಿದರೆ ಸದ್ಯ ಆ ಪ್ರದೇಶದಲ್ಲಿ ಮುಳುಗಡೆ ಉಂಟಾಗಬಹುದು ಎಂಬ ಕಾರಣದಿಂದ 2 ಮೀಟರ್ ನೀರು (18.7 ಮಿಲಿಯನ್ ಕ್ಯೂಬಿಕ್ ಮೀಟರ್) ನಿಲುಗಡೆಗೊಳಿಸಲು ಚಿಂತನೆ ನಡೆಸಲಾಗಿದೆ. ಇದು ಪ್ರವಾಸೋದ್ಯಮ ತಾಣವಾಗಿಯೂ ಗುರುತಿಸಲ್ಪಡಲಿದೆ ಎಂದು ಶಾಸಕ ಯು.ಟಿ.ಖಾದರ್ ತಿಳಿಸಿದರು. ಸಂತೋಷ್ ಕುಮಾರ್ ಶೆಟ್ಟಿ, ಮುಹಮ್ಮದ್ ಮೋನು, ಮುಸ್ತಫಾ ಮಲಾರ್, ಈಶ್ವರ ಉಳ್ಳಾಲ್, ಆಲ್ವಿನ್ ಡಿಸೋಜ, ರೋಹಿತ್, ಫಾರೂಕ್ ಉಪಸ್ಥಿತರಿದ್ದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا