Urdu   /   English   /   Nawayathi

ಯೋಧರೆಂದು ನಂಬಿಸಿ ಸೈಬರ್‌ ವಂಚನೆ

share with us

ಮಂಗಳೂರು: 12 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ವಂಚಕರು ದೇಶ ಕಾಯುವ ಸೈನಿಕರ ಸೋಗಿನಲ್ಲಿ ಟೋಪಿ ಹಾಕುವ ಹೊಸ ದಾರಿ ಕಂಡುಕೊಂಡಿದ್ದಾರೆ. ಸೈಬರ್‌ ಕ್ರೈಂ ವಿಭಾಗದ ಪೊಲೀಸರ ಜನಜಾಗೃತಿಯ ಹೊರತಾಗಿಯೂ ಯಾವುದೋ ಊರಿನಲ್ಲಿದ್ದುಕೊಂಡು ಅಪರಿಚಿತರು ಹೆಣೆಯುವ ಮೋಸದ ಜಾಲಕ್ಕೆ ಅಮಾಯಕರು ಬಲಿಯಾಗಿ ಸಾವಿರಾರು ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗುವ ಸೈನಿಕರ ಫೋಟೊ, ಹೆಸರು, ಗುರುತಿನ ಚೀಟಿ ಮತ್ತು ಸೇನಾ ಶಿಬಿರಗಳ ಫೋಟೊ ಬಳಸಿ ವಂಚಿಸುವುದು ಸೈಬರ್‌ ಕಳ್ಳರ ಹೊಸ ವಿಧಾನ. ಯೋಧರ ಬಗ್ಗೆ ಗೌರವ ಮತ್ತು ಹೆಮ್ಮೆ ಹೊಂದಿರುವ ನಾಗರಿಕರು ಸುಲಭವಾಗಿ ವಂಚನೆಗೆ ಒಳಗಾಗುತ್ತಿದ್ದಾರೆ.

ವಂಚನೆ ನಡೆಯುವುದು ಹೀಗೆ
ಒಎಲ್‌ಎಕ್ಸ್‌, ಕ್ವಿಕರ್‌, ಫೇಸ್ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಕಾರು, ಬೈಕ್‌, ದುಬಾರಿ ಬೆಲೆಯ ಮೊಬೈಲನ್ನು ಮಾರಾಟಕ್ಕೆ ಇರಿಸಿ ಮೊಬೈಲ್‌ ನಂಬರ್‌ ಅಪ್‌ಲೋಡ್‌ ಮಾಡುತ್ತಾರೆ. ಕರೆ ಮಾಡುವವರಿಗೆ ತಾವು ಸೈನಿಕರೆಂದು ಪರಿಚಯಿಸಿಕೊಂಡು ಯೋಧರ ವೇಷದಲ್ಲಿರುವ ನಕಲಿ ಫೋಟೊ, ಸೇನಾ ಶಿಬಿರದ ಫೋಟೋ, ಐ.ಡಿ. ಕಾರ್ಡ್‌ಗಳನ್ನು ವಾಟ್ಸ್‌ಆ್ಯಪ್‌ ಮಾಡುತ್ತಾರೆ. “ಸೇನಾ ಕ್ಯಾಂಪ್‌ನಿಂದ ಹೊರ ಬರಲು ಸಾಧ್ಯವಿಲ್ಲ. ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದೇನೆ’ ಎಂದು ಸುಳ್ಳು ಆಮಿಷ ಒಡ್ಡುತ್ತಾರೆ. “ಹತ್ತಿರದ ಸಂಬಂಧಿಕರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಹಣದ ತುರ್ತು ಆವಶ್ಯಕತೆ ಇರುವುದರಿಂದ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದೇನೆ’ ಎಂಬುದು ಇನ್ನೊಂದು ನೆಪ. ಗ್ರಾಹಕರು ಕಡಿಮೆ ಬೆಲೆಯ ಆಸೆಗೆ ಬಲಿಬಿದ್ದು ಖರೀದಿಗೆ ಮುಂದಾದರೆ, ಹಣವನ್ನು ಆನ್‌ಲೈನ್‌ ಮೂಲಕ ವರ್ಗಾಯಿಸಲು ಸೂಚಿಸುತ್ತಾರೆ. ಅದಾದ ಕೂಡಲೇ ಖದೀಮರು ಹಣ ಡ್ರಾ ಮಾಡಿ ಕೊಂಡು ಮೊಬೈಲ್‌ ಸಂಪರ್ಕ ಕಡಿತಗೊಳಿಸುತ್ತಾರೆ.

ಮಂಗಳೂರಿನಲ್ಲಿ ಹಲವು ಪ್ರಕರಣ
ಮಂಗಳೂರಿನ ಸೈಬರ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ 8 ತಿಂಗಳ ಅವಧಿಯಲ್ಲಿ ಇಂತಹ 70-80ರಷ್ಟು ಪ್ರಕರಣಗಳು ದಾಖಲಾಗಿವೆ. 25 ಸಾವಿರ ರೂ.ಗಳಿಂದ 1.5 ಲಕ್ಷ ರೂ. ವರೆಗೆ ಮೋಸ ಹೋದವರಿದ್ದಾರೆ. ಇದಲ್ಲದೆ ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌ ವಂಚನೆ, ನೈಜೀರಿಯನ್‌ ಪಾಂಜಿ ಸ್ಕೀಮ್‌ ಅಥವಾ ವಿವಿಧ ಆಮಿಷ ಒಡ್ಡಿ ವಂಚನೆ, ಆನ್‌ಲೈನ್‌ ವಿವಾಹಕ್ಕೆ ಸಂಬಂಧಿಸಿದ ವಂಚನೆಯಂತಹ ಪ್ರಕರಣಗಳೂ ಸಾಕಷ್ಟು ವರದಿಯಾಗುತ್ತಿವೆ.

11 ತಿಂಗಳಲ್ಲಿ 117 ಪ್ರಕರಣ
ದ.ಕ. ಜಿಲ್ಲಾ ಪೊಲೀಸ್‌ಗೆ ಹೋಲಿಸಿದರೆ ಮಂಗಳೂರು ನಗರದಲ್ಲಿ ಅಧಿಕ ಸೈಬರ್‌ ಅಪರಾಧ ಪ್ರಕರಣಗಳು ವರದಿಯಾಗುತ್ತಿವೆ. ಮಂಗಳೂರು ನಗರ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ 2019ರ ಜನವರಿಯಿಂದ ನವೆಂಬರ್‌ ತನಕ 117 ಪ್ರಕರಣಗಳು ದಾಖಲಾಗಿವೆ. 2018ರಲ್ಲಿ 75 ಮತ್ತು 2017ರಲ್ಲಿ 24 ಕೇಸುಗಳು ದಾಖಲಾಗಿದ್ದವು. ಈ ಪೈಕಿ ಬೆರಳೆಣಿಕೆಯವು ಮಾತ್ರ ಪತ್ತೆಯಾಗಿದ್ದು, 3 ವರ್ಷಗಳಲ್ಲಿ 14 ಮಂದಿ ಬಂಧಿತ ರಾಗಿದ್ದಾರೆ. ಜಿಲ್ಲಾ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ 2018ರಲ್ಲಿ 3 ಮತ್ತು 2019ರಲ್ಲಿ ಇದು ತನಕ 12 ಪ್ರಕರಣಗಳು ದಾಖಲಾಗಿವೆ.

ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ. ಜನರಿಗೆ ಎಷ್ಟು ತಿಳಿವಳಿಕೆ ನೀಡಿದರೂ ಸಾಕಾಗುವುದಿಲ್ಲ. ಆದ್ದರಿಂದ ಈ ಬಗ್ಗೆ ಸೈಬರ್‌ ಅಪರಾಧ ಜಾಗೃತಿ ಕಾರ್ಯಕ್ರಮವೊಂದನ್ನು ನಡೆಸಲು ಉದ್ದೇಶಿಸಲಾಗಿದೆ.
– ಡಾ| ಹರ್ಷ ಪಿ. ಎಸ್‌., ಮಂಗಳೂರು ಪೊಲೀಸ್‌ ಆಯುಕ್ತ

ನೀವು ಮಾಡಬೇಕಾದದ್ದು
 ಒಎಲ್‌ಎಕ್ಸ್‌ ಮತ್ತು ಕ್ವಿಕರ್‌ನಲ್ಲಿ ಪರಿಕರಗಳನ್ನು ಖರೀದಿಸುವ ಮುನ್ನ ಎಚ್ಚರಿಕೆಯಿಂದ ಪರಿಶೀಲಿಸಿ.
 ವಾಹನ ಮತ್ತಿತರ ಪರಿಕರಗಳನ್ನು ಖುದ್ದಾಗಿ ನೋಡದೆ ಯಾವ ಕಾರಣಕ್ಕೂ ಹಣ ವರ್ಗಾವಣೆ ಮಾಡಬೇಡಿ.
 ಡೆಬಿಟ್‌ ಕಾರ್ಡ್‌/ ಕ್ರೆಡಿಟ್‌ ಕಾರ್ಡ್‌ ವಿವರ ಮತ್ತು ಒಟಿಪಿ ಮಾಹಿತಿ ಯನ್ನು ಯಾರು ಕೇಳಿದರೂ ಕೊಡಬೇಡಿ. ಅನುಮಾನವಿದ್ದರೆ ಸೈಬರ್‌ ಪೊಲೀಸ್‌ ಠಾಣೆಗೆ ತಿಳಿಸಿ.

– ಹಿಲರಿ ಕ್ರಾಸ್ತಾ

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا