Urdu   /   English   /   Nawayathi

ಕಳೆದ ವರ್ಷಕ್ಕಿಂತ ಏರಿಕೆ, ಕಳೆದ ತಿಂಗಳಿಗಿಂತ ಇಳಿಕೆ !

share with us

ಸುಳ್ಯ: 11 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಒಂದು ವರ್ಷಕ್ಕೆ ಹೋಲಿಸಿದರೆ ಏರಿಕೆ; ಒಂದು ತಿಂಗಳಿಗೆ ಹೋಲಿಸಿದರೆ ಇಳಿಕೆ – ಇದು ದಕ್ಷಿಣ ಕನ್ನಡ ಜಿಲ್ಲೆಯ ಅಂತರ್ಜಲ ಮಟ್ಟದ ಈಗಿನ ಸ್ಥಿತಿ!

2018ರ ನವೆಂಬರ್‌ ಮತ್ತು ಈ ನವೆಂಬರ್‌ ಹಾಗೂ 2019ರ ಅಕ್ಟೋಬರ್‌ ಮತ್ತು ನವೆಂಬರ್‌ ನಡುವಿನ ಅಂತರ್ಜಲ ಮಟ್ಟದ ಅಂಕಿ ಅಂಶವಿದು. 2018ರ ನವೆಂಬರ್‌ಗಿಂತ 2019ರ ನವೆಂಬರ್‌ನಲ್ಲಿ ಅಂತರ್ಜಲ ಮಟ್ಟ ಜಿಲ್ಲೆಯಲ್ಲಿ 0.90 ಮೀ.ನಷ್ಟು ಏರಿಕೆ ಕಂಡಿದೆ. ಆದರೆ ಜನವರಿ ಅನಂತರ ಬಿರು ಬಿಸಿಲಿನ ಬಳಿಕ ಅಂತರ್ಜಲ ಮಟ್ಟ ಇಳಿಯುವ ಬಗ್ಗೆ ಆತಂಕವೂ ಇದೆ. ಇದಕ್ಕೆ ಕಾರಣ ಈ ವರ್ಷ ಇದುವರೆಗೆ ಪ್ರತಿ ತಿಂಗಳಲ್ಲಿ ಆಗಿರುವ ಅಂತರ್ಜಲ ಮಟ್ಟದ ಏರಿಳಿತ. ಹೀಗಾಗಿ ಎಚ್ಚರ ಅತ್ಯಗತ್ಯ.

ತುಸು ಏರಿಕೆ
2018ರ ನವೆಂಬರ್‌ನಲ್ಲಿ ಮಂಗಳೂರು ತಾಲೂಕಿನಲ್ಲಿ 16.11 ಮೀ.ನಲ್ಲಿದ್ದ ಅಂತರ್ಜಲ ಮಟ್ಟ ಈ ವರ್ಷ 15.68 ಮೀ.ಗೆ ಏರಿದೆ. ಪುತ್ತೂರು 8.03 ಮೀ.ನಿಂದ 7.01 ಮೀ., ಬೆಳ್ತಂಗಡಿ 9.88ರಿಂದ 9 ಮೀ., ಬಂಟ್ವಾಳ 7.75ರಿಂದ 7 ಮೀ., ಸುಳ್ಯ 8.98 ಮೀ.ನಿಂದ 7.62 ಮೀ.ಗೆ ಏರಿದೆ. ಅಂದರೆ ಬಂಟ್ವಾಳ 0.75 ಮೀ., ಬೆಳ್ತಂಗಡಿ 0.88 ಮೀ., ಮಂಗಳೂರು 0.48 ಮೀ., ಪುತ್ತೂರು 1.02 ಮೀ., ಸುಳ್ಯದಲ್ಲಿ 1.37 ಮೀ.ನಷ್ಟು ಏರಿದೆ ಎಂದು ಭೂವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಒಂದೇ ತಿಂಗಳಲ್ಲಿ ಇಳಿಮುಖ!
2019ರ ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳ ಅಂತರ್ಜಲ ಮಟ್ಟ ಗಮನಿಸಿದರೆ ಕುಸಿತ ದಾಖಲಾಗಿರುವುದು ಕಾಣಿಸುತ್ತದೆ. ಒಂದೇ ತಿಂಗಳಲ್ಲಿ ಬಂಟ್ವಾಳ 0.01 ಮೀ., ಬೆಳ್ತಂಗಡಿ 0.40 ಮೀ., ಮಂಗಳೂರು 1.57 ಮೀ., ಸುಳ್ಯ 0.13 ಮೀ., ಪುತ್ತೂರಿನಲ್ಲಿ 0.53 ಮೀ.ನಷ್ಟು ಇಳಿಕೆ ಆಗಿದೆ. ಈ ವರ್ಷ ಜನವರಿಯಿಂದ ಅಕ್ಟೋಬರ್‌ ತನಕದ ಅಂಕಿ ಅಂಶ ಗಮನಿಸಿದರೆ ಮೇ ತನಕ ಇಳಿಕೆ, ಜೂನ್‌ನಿಂದ ಅಕ್ಟೋಬರ್‌ ತನಕ ಏರಿಳಿಕೆ ಕಾಣಿಸುತ್ತದೆ.

ಜಿಲ್ಲೆಯಲ್ಲಿ 0.90 ಮೀ. ಏರಿಕೆ
ಜಿಲ್ಲಾ ಮಟ್ಟದಲ್ಲಿ ಗಮನಿಸಿದರೆ 2018ರ ನವೆಂಬರ್‌ಗಿಂತ ಈ ವರ್ಷ ಅಂತರ್ಜಲ ಮಟ್ಟ 0.90 ಮೀಟರ್‌ನಷ್ಟು ಏರಿದೆ. 2018ರಲ್ಲಿ 10.16 ಮೀ. ಇದ್ದ ಅಂತರ್ಜಲ ಮಟ್ಟ 2019ರಲ್ಲಿ 9.26 ಮೀ. ಆಗಿದೆ.

ಮಳೆ ಅವಧಿ ಹೆಚ್ಚು
ವರ್ಷದ ಮಳೆಗಿಂತ ಈ ವರ್ಷ ಅಧಿಕ. ಅಲ್ಲದೆ ಡಿಸೆಂಬರ್‌ ಮೊದಲ ವಾರವೂ ಕೆಲವೆಡೆ ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮಳೆ ಹೆಚ್ಚು ಅನ್ನುತ್ತದೆ ಮಳೆ ಮಾಪನ ಅಂಕಿಅಂಶ. ಆದರೆ ಇದಕ್ಕೆ ತದ್ವಿರುದ್ಧ ವಿದ್ಯಮಾನ ಎಂದರೆ ವರ್ಷ-ವರ್ಷ ಮಳೆ ಹೆಚ್ಚಾದಂತೆ ಅಂತರ್ಜಲ ಮಟ್ಟ ಕಡಿಮೆ ಆಗುತ್ತಿರುವುದು. ಇದಕ್ಕೆ ಕಾರಣ ಅಪಾರ ಪ್ರಮಾಣದ ಕಾಡು ನಾಶ, ಕೃಷಿಯೇತರ ಭೂಮಿ ಹೆಚ್ಚಳ, ನದಿ ತಿರುವಿನಂತಹ ಪ್ರಕೃತಿ ವಿರೋಧಿ ಕೃತ್ಯಗಳೇ ಎನ್ನುತ್ತಾರೆ ಪರಿಸರ ತಜ್ಞರು.

ಕಳೆದ ವರ್ಷದ ನವೆಂಬರ್‌ಗಿಂತ ಈ ವರ್ಷದ ನವೆಂಬರ್‌ನಲ್ಲಿ ಅಂತರ್ಜಲ ಮಟ್ಟ ಏರಿದೆ. ಆದರೆ ಈ ವರ್ಷದ ಅಕ್ಟೋಬರ್‌- ನವೆಂಬರ್‌ ಅಂಕಿ ಅಂಶ ಗಮನಿಸಿದರೆ ಅದು ಇಳಿಕೆ ಕಂಡಿದೆ.
– ಜಾನಕಿ, ಭೂ ವಿಜ್ಞಾನಿ, ಅಂತರ್ಜಲ ವಿಭಾಗ

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا