Urdu   /   English   /   Nawayathi

ಉಪ ಸಮರಕ್ಕೆ ವೇದಿಕೆ ಸಜ್ಜು: ಬಿಜೆಪಿಗಿದೆ ಸರ್ಕಾರ ಉಳಿಸಿಕೊಳ್ಳುವ ಸವಾಲು

share with us

ಬೆಂಗಳೂರು: 21 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಡಿಸೆಂಬರ್ 5ರಂದು 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಹಿಂಪಡೆಯಲು ಕಡೆಯ ದಿನವಾದ ಇಂದು ಹಲವರು ನಾಮಪತ್ರ ಹಿಂಪಡೆದ್ದಾರೆ. ರಾಜಕೀಯ ಪಕ್ಷಗಳ ನಡುವಿನ ಜಿದ್ದಾಜಿದ್ದಿನ ಹಣಾಹಣಿಗೆ ವೇದಿಕೆ ಕೂಡ ಈಗಾಗಲೇ ಸಜ್ಜಾಗಿದೆ. ಹುಣಸೂರು, ಕೆ.ಆರ್.ಪೇಟೆ, ಹೊಸಕೋಟೆ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಕೆ.ಆರ್.ಪುರಂ, ಅಥಣಿ, ಗೋಕಾಕ್, ಕಾಗವಾಡ, ಹಿರೇಕೆರೂರು, ರಾಣೆಬೆನ್ನೂರು ಸೇರಿದಂತೆ ಒಟ್ಟು ಹದಿನೈದು ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಚುನಾವಣೆ ನಡೆಯಲಿದೆ. ಮೂರೂ ಪಕ್ಷಗಳಿಗೆ ಇದು ಪ್ರತಿಷ್ಠೆಯಾಗಿದೆ. ಆಡಳಿತಾರೂಢ ಬಿಜೆಪಿ ಸರ್ಕಾರ ಸರಳ ಬಹುಮತ ಪಡೆಯಲು ಕನಿಷ್ಠ ಏಳು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಿದ್ದು, ಸರ್ಕಾರವನ್ನು ಮತ್ತಷ್ಟು ಸುಭದ್ರಗೊಳಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಕನಿಷ್ಠ 10ರಿಂದ 12 ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂಬ ಗುರಿ ಬಿಜೆಪಿ ಇರಿಸಿಕೊಂಡಿದೆ. ಹದಿನೈದು ಕ್ಷೇತ್ರಗಳ ಉಪ ಚುನಾವಣೆ ಪೂರ್ಣಗೊಂಡರೆ ವಿಧಾನಸಭೆಯ 224 ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳ ಪ್ರತಿನಿಧಿಗಳು ವಿಧಾನಸಭೆಯಲ್ಲಿ ಉಪಸ್ಥಿತರಿರಲಿದ್ದು, ಸರ್ಕಾರ ಸರಳ ಬಹುಮತಕ್ಕೆ 111 ಸ್ಥಾನಗಳನ್ನು ಹೊಂದಲೇಬೇಕಿದೆ. ಉಳಿದಂತೆ ರಾಜರಾಜೇಶ್ವರಿ ನಗರ, ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ಸರ್ವೋಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಆ ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುವವರೆಗೆ ಸರ್ಕಾರಕ್ಕೆ ಸರಳ ಬಹುಮತ ಇರಬೇಕೆಂದಾದರೆ 111 ಶಾಸಕರು ಅದರ ಪರವಾಗಿರಬೇಕು.

ಬಿಕೋ ಎನ್ನುತ್ತಿರುವ ಆಡಳಿತ ಕೇಂದ್ರ ಕಚೇರಿ ವಿಧಾನಸೌಧ: ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೇರವಾಗಿಯೇ ಸಚಿವರಿಗೆ ಬಹುಮತದ ಕುರಿತು ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದು, ಉಪ ಚುನಾವಣೆಯಲ್ಲಿ ನಿಮಗೆ ವಹಿಸಿಕೊಟ್ಟಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸದಿದ್ದರೆ ತಲೆದಂಡ ತೆರಲು ಸಜ್ಜಾಗಿರಿ ಎಂದಿದ್ದಾರೆ. ಅದರ ಪ್ರಕಾರ ರಾಜ್ಯ ಸಚಿವ ಸಂಪುಟದ ಬಹುತೇಕ ಸಚಿವರು ಉಪ ಚುನಾವಣೆ ನಡೆಯುವ ಕ್ಷೇತ್ರಗಳಿಗೆ ತೆರಳಿದ್ದು, ಇದರ ಪರಿಣಾಮವಾಗಿ ಆಡಳಿತ ಕೇಂದ್ರ ಕಚೇರಿ ವಿಧಾನಸೌಧ ಈಗಾಗಲೇ ಬಿಕೋ ಎನ್ನತೊಡಗಿದೆ.

ಪ್ರತಿಪಕ್ಷ ಕಾಂಗ್ರೆಸ್​ಗೆ ಕೂಡ ಗೆಲುವು ಅನಿವಾರ್ಯ: ಆಡಳಿತ ಪಕ್ಷದ ಮುಂದಿರುವ ಸವಾಲು ಹೀಗಿದ್ದರೆ, ಪ್ರಮುಖ ಪ್ರತಿಪಕ್ಷವಾಗಿ ಕಾಂಗ್ರೆಸ್ ಕೂಡ ಹೆಚ್ಚು ಸೀಟುಗಳನ್ನು ಗೆಲ್ಲಬೇಕಾದ ಅನಿವಾರ್ಯತೆ ಇದೆ. ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ನಡೆದ ಆಪರೇಷನ್ ಕಮಲ ಕಾರ್ಯಾಚರಣೆಯ ಸಂದರ್ಭದಲ್ಲಿ ಬಿಜೆಪಿ ಕಡೆ ಹೋದ 17 ಶಾಸಕರ ಪೈಕಿ 14 ಶಾಸಕರು ಕಾಂಗ್ರೆಸ್ ಪಾಳೆಯದವರೇ ಆಗಿದ್ದಾರೆ. ಈ ಪೈಕಿ ಹನ್ನೆರಡು ಕ್ಷೇತ್ರಗಳು ಹಿಂದೆ ಕಾಂಗ್ರೆಸ್ ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳೇ ಆಗಿವೆ. ಹೀಗಾಗಿ ಆಯಾ ಕ್ಷೇತ್ರಗಳಲ್ಲಿ ಮರಳಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ಪಕ್ಷದ ಪ್ರಾಬಲ್ಯ ಉಳಿದುಕೊಂಡಿದೆ ಎಂದು ತೋರಿಸಬೇಕಾದ ಅನಿವಾರ್ಯತೆ ಕೈ ಪಾಳಯಕ್ಕೆ ಇದೆ. ಇನ್ನು ಹುಣಸೂರು, ಕೆ.ಆರ್.ಪೇಟೆ ಹಾಗೂ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರಗಳಲ್ಲಿ ಶತಾಯಗತಾಯ ಗೆಲ್ಲಲೇಬೇಕು ಎಂದು ಜೆಡಿಎಸ್ ಹರಸಾಹಸ ನಡೆಸಿದ್ದು, ಅದರ ಸಾಹಸಕ್ಕೆ ಯಾವ ಪ್ರತಿಫಲ ಸಿಗಲಿದೆ ಎಂದು ಕಾದು ನೋಡಬೇಕಾಗಿದೆ. ಬೆಳವಾವಿ ಜಿಲ್ಲೆಯ ಅಥಣಿ ಹಾಗೂ ಹಾವೇರಿ ಜಿಲ್ಲೆಯ ಹಿರೇಕೆರೂರು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆದುಕೊಂಡಿದ್ದು, ಇದರ ಹಿಂದೆ ವಿವಿಧ ಶಕ್ತಿಗಳು ಕೆಲಸ ಮಾಡಿವೆ ಎನ್ನಲಾಗಿದೆ. ಒಟ್ಟಿನಲ್ಲಿ ದಿನಕಳೆದಂತೆ ಮೂರು ರಾಜಕೀಯ ಪಕ್ಷಗಳ ಪೈಪೋಟಿ ತಾರಕಕ್ಕೇರಲಿದ್ದು, ಚುನಾವಣಾ ಕಣ ರಂಗೇರಿದೆ. ಈ ಉಪ ಚುನಾವಣೆ ಸರ್ಕಾರದ ಅಳಿವು-ಉಳಿವಿನ ಜೊತೆ ಯಡಿಯೂರಪ್ಪ ಅವರ ಸಿಎಂ ಪಟ್ಟವನ್ನೂ ನಿರ್ಧರಿಸಲಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا