Urdu   /   English   /   Nawayathi

ಬ್ರಿಕ್ಸ್‌: ಐದು ದೇಶಗಳ ನಂಟಿದು, ಒಂದಾಗಿ ನಡೆದರೆ ಪರಸ್ಪರ ಲಾಭ

share with us

ಬ್ರೆಜಿಲ್‌: 21 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಬ್ರೆಜಿಲ್‌ ರಾಜಧಾನಿ ಬ್ರಸಿಲಿಯಾದಲ್ಲಿ ನಡೆದ 11ನೇ ವಾರ್ಷಿಕ ಬ್ರಿಕ್ಸ್‌ ಸಮಿತಿಯು ಭಯೋತ್ಪಾದನೆ ತಡೆ ತಂತ್ರಗಳ ಕುರಿತಷ್ಟೇ ಅಲ್ಲ, ವಾಣಿಜ್ಯ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಸಹಕಾರ ಬಲಪಡಿಸುವ ಕುರಿತೂ ಚರ್ಚೆ ನಡೆದಿದೆ. ಸಮಾನ ಅವಕಾಶಗಳ ಜಗತ್ತನ್ನು ಸ್ಥಾಪಿಸುವ ಉದ್ದೇಶದಿಂದ 10 ವರ್ಷಗಳ ಹಿಂದೆ ರೂಪುಗೊಂಡಿದ್ದ ಬ್ರಿಕ್ಸ್‌ ಸಂಘಟನೆ, ಪ್ರಗತಿಯ ಹಾದಿಯಲ್ಲಿ ಎದುರಾಗುವ ಅಡೆತಡೆಗಳನ್ನು ಕರಾರುವಾಕ್ಕಾಗಿ ಗುರುತಿಸಿದೆ. ಬ್ರಿಕ್ಸ್‌ ಎಂಬುದು ಐದು ಪ್ರಮುಖ ದೇಶಗಳಾದ ಬ್ರೆಜಿಲ್‌, ರಷ್ಯ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಇರುವ ಒಕ್ಕೂಟದ ಸಂಕ್ಷಿಪ್ತ ರೂಪ. ಅಮೆರಿಕ ಮತ್ತು ಚೀನಾ ನಡುವೆ ನಡೆದಿರುವ ವಾಣಿಜ್ಯ ಯುದ್ಧದ ಪರಿಣಾಮವಾಗಿ ಜಾಗತಿಕ ಒಟ್ಟು ಆಂತರಿಕ ಉತ್ಪಾದನೆ ಪ್ರಮಾಣ ಶೇಕಡಾ 0.5 ರಷ್ಟು ಕುಸಿತವಾಗುವುದಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್‌) ಎಚ್ಚರಿಸಿತ್ತು. ಈ ಪ್ರಮಾಣವು ದಕ್ಷಿಣ ಆಫ್ರಿಕಾದ ವಾರ್ಷಿಕ ವಾಣಿಜ್ಯ ಉತ್ಪಾದನೆಗಿಂತ ಹೆಚ್ಚು. ಜಾಗತಿಕ ಆರ್ಥಿಕತೆ ಮೇಲೆ ಭಯೋತ್ಪಾದನೆ ಬೀರುವ ತೀವ್ರ ಪರಿಣಾಮಗಳ ಕುರಿತು ಬ್ರಿಕ್ಸ್‌ ನಾಯಕರು ಚರ್ಚಿಸಿದ್ದಾರೆ. ನರೇಂದ್ರ ಮೋದಿಯವರ ಮಾತುಗಳಲ್ಲಿ ಹೇಳುವುದಾದರೆ, ಭಯೋತ್ಪಾದನೆಯ ಹೆಚ್ಚಳದಿಂದ ಜಾಗತಿಕ ಆರ್ಥಿಕತೆಯು ಕೋಟ್ಯಂತರ ಡಾಲರ್‌ಗಳ ನಷ್ಟ ಅನುಭವಿಸಿದ್ದು, ಜಗತ್ತಿನಾದ್ಯಂತ 2.25 ಲಕ್ಷ ಜನರು ಜೀವ ಕಳೆದುಕೊಂಡಿದ್ದಾರೆ. ಏಳು ವಾರಗಳ ಹಿಂದೆ ನ್ಯೂಯಾರ್ಕ್‌ನಲ್ಲಿ ಭೇಟಿಯಾಗಿದ್ದ ಬ್ರಿಕ್ಸ್‌ ದೇಶಗಳ ನಾಯಕರು, ಭಯೋತ್ಪಾದನೆಯನ್ನು ತಡೆಗಟ್ಟುವ ತಂತ್ರಗಳನ್ನು ಜಾರಿಗೊಳಿಸಲು ನಿರ್ಧರಿಸಿದ್ದರು. ಪರಿಣಾಮವಾಗಿ, ರಸಾಯನಿಕ ಅಸ್ತ್ರಗಳ ನಿಷೇಧವೂ ಸೇರಿದಂತೆ ಭಯೋತ್ಪಾದನೆ ತಡೆಗೆ ತಮ್ಮ ಬೆಂಬಲವನ್ನು ಮತ್ತೆ ದೃಢಪಡಿಸಿದ್ದರು. ಒಂದೂವರೆ ವರ್ಷದ ಹಿಂದೆ, ಭಯೋತ್ಪಾದನೆಗೆ ಧನ ಸಹಾಯ ಹಾಗೂ ಕಾಳಧನ ನಿಗ್ರಹಕ್ಕೆ ಅಸಹಕಾರ ತೋರುತ್ತಿದ್ದ ಕಾರಣಕ್ಕೆ ಪಾಕಿಸ್ತಾನವನ್ನು ವಿಚಾರಣೆಗೆ ಒಳಪಡಿಸಲು ಅಮೆರಿಕ, ಇಂಗ್ಲಂಡ್‌, ಫ್ರಾನ್ಸ್‌ ಮತ್ತು ಜರ್ಮನಿ ದೇಶಗಳು ಒಪ್ಪಿಗೆ ಸೂಚಿಸಿದ್ದವು. ಆಗ ಕಾರ್ಯಾಚರಣೆ ಸಮಸ್ಯೆಗಳ ಕಾರಣ ನೀಡಿದ್ದ ಚೀನಾ ಪಾಕಿಸ್ತಾನವನ್ನು ರಕ್ಷಿಸಿತ್ತು. ಇದನ್ನು ನೋಡಿದರೆ, ಚೀನಾದ ಸಹಕಾರವಿಲ್ಲದೇ ಭಯೋತ್ಪಾದನೆ ತಡೆ ತಂತ್ರಗಳು ಯಶಸ್ವಿಯಾಗವು ಎಂಬುದು ಸ್ಪಷ್ಟ.

ಕಳೆದ ಹತ್ತು ವರ್ಷಗಳಲ್ಲಿ ಬ್ರಿಕ್ಸ್‌ ದೇಶಗಳ ನಡುವಿನ ಸಹಕಾರ, ಸಮನ್ವಯ ಮತ್ತು ಸೌಹಾರ್ದತೆಗಳ ವ್ಯಾಪ್ತಿ ಪ್ರಶ್ನಾರ್ಹವಾಗಿದೆ. ತಮ್ಮ ಸಮಗ್ರ ಭಾಷಣದಲ್ಲಿ ವಿವರ ನೀಡಿದ್ದ ಮೋದಿ, ಜಾಗತಿಕ ಮಾರುಕಟ್ಟೆಯಲ್ಲಿ ಬ್ರಿಕ್ಸ್‌ ದೇಶಗಳ ಪಾಲು ಕೇವಲ ಶೇಕಡಾ 15 ಮಾತ್ರ. ಜಗತ್ತಿನ ಜನಸಂಖ್ಯೆಯ ಶೇಕಡಾ 42 ಹಾಗೂ ಜಗತ್ತಿನ ಒಟ್ಟು ವಾರ್ಷಿಕ ಉತ್ಪಾದನೆಯ ಶೇಕಡಾ 23 ಪಾಲು ಹೊಂದಿರುವ ಬ್ರಿಕ್ಸ್‌ ದೇಶಗಳು ಪರಸ್ಪರ ಸಹಕಾರದ ಮಹತ್ವವನ್ನು ಮನಗಾಣಬೇಕು.‌ ಇಂಗ್ಲೆಂಡ್‌, ಫ್ರಾನ್ಸ್‌ ಮತ್ತು ಜರ್ಮನಿಗಳಿಗೆ ಸವಾಲೊಡ್ಡಿ ಅಮೆರಿಕ ಮತ್ತು ಜಪಾನ್ ಜೊತೆಗೆ ಬ್ರಿಕ್ಸ್‌ ದೇಶಗಳು ಜಗತ್ತಿನ ಆರ್ಥಿಕತೆಯನ್ನು ಮುನ್ನಡೆಸುತ್ತವೆ ಎಂದು ಈ ಹಿಂದೆ ಅಂದಾಜಿಸಲಾಗಿತ್ತು ಎಂಬುದನ್ನು ಅವರು ಉಲ್ಲೇಖಿಸಿದ್ದರು. ಇಂಧನ ಮತ್ತು ಆಹಾರ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸುಧಾರಣೆಗಳನ್ನು ತರುವ ಕುರಿತು ಬ್ರಿಕ್ಸ್‌ ಸಂಘಟನೆ ಠರಾವುಗಳನ್ನು ನಿರಂತರವಾಗಿ ಮಾಡುತ್ತಲೇ ಇದ್ದು, ಅವೆಲ್ಲ ದೇಶಗಳು ಒಗ್ಗಟ್ಟಾಗಿ ಹೋರಾಡಿದಾಗ ಮಾತ್ರ ಇವು ಯಶಸ್ವಿಯಾಗಿ ಜಾರಿಯಾಗಬಹುದು. ಬ್ರಿಕ್ಸ್‌, ಶಾಂಘೈ ಸಹಕಾರ ಸಂಸ್ಥೆ ಮತ್ತು ಯುರೇಶಿಯನ್‌ ಆರ್ಥಿಕ ಒಕ್ಕೂಟಗಳು ಜೊತೆಯಾಗಿ ಬಹುಧೃವ ಜಗತ್ತನ್ನು ಸ್ಥಾಪಿಸಲು ಸಾಧ್ಯ ಎಂದು ಚೀನಾ ಪ್ರಧಾನಮಂತ್ರಿ ಕ್ಸಿ ಜಿನ್‌ಪಿಂಗ್‌ ಹೇಳಿದ್ದರು. ಭಾರತದಲ್ಲಿರುವ ಅಗಣಿತ ಅವಕಾಶಗಳು ಹಾಗೂ ಸುಲಭವಾಗಿ ವ್ಯಾಪಾರ ನಡೆಸುವ ವಾತಾವರಣದ ಲಾಭ ಹೊಂದುವಂತೆ ಸದಸ್ಯ ದೇಶಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಆಹ್ವಾನಿಸಿದ್ದರು. ಇನ್ನು, ಅಂತಾರಾಷ್ಟ್ರೀಯ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಭಾರತ ಮತ್ತು ಬ್ರೆಜಿಲ್‌ ದೇಶಗಳು ಕೊನೆಯ ಸ್ಥಾನದಲ್ಲಿವೆ. ಕನಿಷ್ಠ ಮೂಲಸೌಕರ್ಯಗಳಿಗೆ ಅವಕಾಶ, ವಿದ್ಯುತ್‌ ಪೂರೈಕೆ ಮತ್ತು ಪೂರೈಕೆ ಸರಣಿಯ ಸುಧಾರಣೆಗಳ ಮೂಲಕ ಈ ದೇಶಗಳು ಹೂಡಿಕೆಗಳನ್ನು ಆಕರ್ಷಿಸಬಹುದು. ಇಂತಹ ಹಲವಾರು ವಾಣಿಜ್ಯ ಅವಕಾಶಗಳು ಬ್ರಿಕ್ಸ್‌ ಒಕ್ಕೂಟದ ದೇಶಗಳಿಗಿವೆ.

ದಕ್ಷಿಣ ಆಫ್ರಿಕಾ ಸೇರ್ಪಡೆಗೂ ಮುನ್ನ ಬ್ರೆಜಿಲ್‌, ರಷ್ಯ, ಭಾರತ ಮತ್ತು ಚೀನಾಗಳನ್ನು ಒಳಗೊಂಡಿದ್ದ ಬ್ರಿಕ್ಸ್‌ ಜಾಗತಿಕ ಆರ್ಥಿಕತೆ ಮತ್ತು ಹಣಕಾಸು ಸಂಸ್ಥೆಗಳ ಸುಧಾರಣೆಗಳನ್ನು ಬಲಗೊಳಿಸುವತ್ತ ಗಮನ ಹರಿಸಿತ್ತು. ಅದಾಗಿ ಹತ್ತು ವರ್ಷಗಳೇ ಕಳೆದು ಹೋಗಿದ್ದರೂ, ಫಲಿತಾಂಶಗಳು ಮಾತ್ರ ನಿರಾಶದಾಯಕವಾಗಿವೆ. ಈ ಕಾರಣಕ್ಕಾಗಿ ಪ್ರಸಕ್ತ ಬ್ರೆಸಿಲಿಯಾ ಶೃಂಗ ಸಭೆಯು ವಿಶ್ವಸಂಸ್ಥೆ, ಜಾಗತಿಕ ವಾಣಿಜ್ಯ ಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಸುಧಾರಣೆಯ ಮೇಲೆ ಗಮನ ಕೇಂದ್ರೀಕರಿಸಿದೆ. ವಿಶ್ವಸಂಸ್ಥೆ ಒಕ್ಕೂಟದಲ್ಲಿ ವ್ಯವಸ್ಥಿತ ಬದಲಾವಣೆಗಳನ್ನು ತರಬೇಕೆನ್ನುವ ಭಾರತದ ನಿಲುವು ಈಗ ಜಾಗತಿಕ ವೇದಿಕೆಯಲ್ಲಿ ನಿಚ್ಚಳವಾದಂತಾಗಿದೆ. ಬ್ರಿಕ್ಸ್‌ ಶೃಂಗ ಸಭೆ ಈ ಅಭಿಪ್ರಾಯವನ್ನು ಅನುಮೋದಿಸಿದ್ದು, ವಿಶ್ವ ವಾಣಿಜ್ಯ ಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಗೂ ಇಂಥದೇ ನೀತಿ ಬದಲಾವಣೆಗೆ ಆಗ್ರಹಿಸಿದೆ. ಆದರೆ, ಒಕ್ಕೂಟದಲ್ಲಿ ಚೀನಾದ ನಿಲುವು ಸದಾ ವಿರುದ್ಧವಾಗಿದ್ದು, ಇದೊಂದೇ ದೇಶ ಭಾರತದ ಪಾಲಿಗೆ ಅಪಥ್ಯವಾಗಿದೆ. ಭದ್ರತಾ ಸಮಿತಿಯಲ್ಲಿ ಶಾಶ್ವತ ಸದಸ್ಯತ್ವ ಹೊಂದಬೇಕೆಂಬ ಭಾರತದ ಬೇಡಿಕೆಯನ್ನು ಇತರ ವಿಟೊ ದೇಶಗಳು ಬೆಂಬಲಿಸಿದ್ದರೂ, ಚೀನಾ ಇದನ್ನು ಸದಾ ವಿರೋಧಿಸುತ್ತಲೇ ಬಂದಿದೆ. ಚೀನಾ ತನ್ನ ನಿಲುವನ್ನು ಬದಲಿಸಿಕೊಳ್ಳದಿದ್ದರೆ, ಬ್ರಿಕ್ಸ್‌ನ ಇತರ ಬೇಡಿಕೆಗಳೂ ಈಡೇರುವುದು ಸಾಧ್ಯವಿಲ್ಲ. ಏಕೆಂದರೆ, ವಿಶ್ವಸಂಸ್ಥೆಯ ಸನ್ನದಿನ ಪ್ರಕಾರ, ಭದ್ರತಾ ಸಮಿತಿಯಲ್ಲಿ ಏನೇ ಬದಲಾವಣೆಗಳಾಗಬೇಕಿದ್ದರೂ ಶಾಶ್ವತ ಸದಸ್ಯ ದೇಶಗಳು ಅದಕ್ಕೆ ಸಮ್ಮತಿ ಸೂಚಿಸಬೇಕು. ಬೇರೆ ಶಬ್ದಗಳಲ್ಲಿ ಹೇಳುವುದಾದರೆ, ಬ್ರಿಕ್ಸ್‌ನ ಬೇಡಿಕೆಗಳಿಗೆ ಅದರ ಸದಸ್ಯ ದೇಶವೇ ಮುಖ್ಯ ತೊಡಕಾಗಿದೆ. ತಮ್ಮ ಭೌಗೋಳಿಕ ಮತ್ತು ಸೈದ್ಧಾಂತಿಕ ವ್ಯತ್ಯಾಸಗಳ ನಡುವೆಯೂ ಪರಸ್ಪರ ಕೈ ಜೋಡಿಸಿರುವ ಈ ಐದು ದೇಶಗಳು, ಜಾಗತಿಕವಾಗಿ ಪ್ರಭಾವಿ ಶಕ್ತಿಯಾಗಿ ಹೊಮ್ಮಬೇಕೆಂದರೆ, ತಮ್ಮ ನಡುವಿನ ಆಂತರಿಕ ಸಂಘರ್ಷಗಳನ್ನು ಪರಿಹರಿಸಿಕೊಳ್ಳಲೇಬೇಕು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا