Urdu   /   English   /   Nawayathi

ಬಿಎಸ್‌ವೈ, ಕಟೀಲ್‌ಗೆ “ಪ್ರಥಮ ಪರೀಕ್ಷೆ’

share with us

ಬೆಂಗಳೂರು: 14 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ರಾಜ್ಯದಲ್ಲಿ ಎರಡನೇ ಬಾರಿಗೆ ಅಧಿಕಾರ ಹಿಡಿಯಲು ಕಾರಣರಾದ ಅನರ್ಹ ಶಾಸಕರು ಅಥವಾ ಅವರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಅಭ್ಯರ್ಥಿಗಳು ಮತ್ತೆ ಆಯ್ಕೆಯಾಗುವ ಮೂಲಕ ಸರ್ಕಾರವನ್ನು ಸುಭದ್ರಪಡಿಸಬೇಕಾದ ಸವಾಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ನೂತನ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಮುಂದಿದೆ. ಬಹುತೇಕ ಕಡೆ ಅನರ್ಹ ಶಾಸಕರೇ ಬಿಜೆಪಿಯಿಂದ ಕಣಕ್ಕಿಳಿಯುವ ಸಾಧ್ಯತೆಯಿದ್ದು, 12- 13 ಸ್ಥಾನ ಗೆಲ್ಲುವುದಾಗಿ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಐದು ಕ್ಷೇತ್ರಗಳಲ್ಲಿ ಗೆಲುವಿಗೆ ಪೂರಕ ಮಾಹಿತಿ ಇಲ್ಲದಿರುವುದು ಪಕ್ಷದ ನಾಯಕರ ಆತಂಕ ಹೆಚ್ಚಿಸಿದ್ದು, ಆ ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡಿ ಗೆಲುವಿಗೆ ಶ್ರಮಿಸಲು ನಿರ್ಧರಿಸಿದ್ದಾರೆ. ಕನಿಷ್ಠ 8 ರಿಂದ 10 ಸ್ಥಾನಗಳನ್ನು ಗೆದ್ದರಷ್ಟೇ ಸರ್ಕಾರವನ್ನು ಸುಸ್ಥಿರಗೊಳಿಸಿ ಸುಗಮ ಆಡಳಿತ ನೀಡಲು ಸಾಧ್ಯವಾಗಲಿದ್ದು, ಆ ಗುರಿಯನ್ನು ಪಕ್ಷ ಹೇಗೆ ತಲುಪಲಿದೆ ಎಂಬ ಕುತೂಹಲ ಮೂಡಿದೆ. ಇದೀಗ ಅನರ್ಹ ತೆಗೊಂಡ ಶಾಸಕರರು ಚುನಾವಣೆಗೆ ಸ್ಪರ್ಧಿಸಲು ಸುಪ್ರೀಂಕೋರ್ಟ್‌ ಹಸಿರು ನಿಶಾನೆ ತೋರಿದೆ. ಹಾಗಾಗಿ ಅನರ್ಹತೆಗೊಂಡ ಶಾಸಕರು ಗುರುವಾರ ಬಿಜೆಪಿ ಸೇರುತ್ತಿದ್ದು, ಬಹುತೇಕ ಕ್ಷೇತ್ರಗಳಲ್ಲಿ ಅನರ್ಹತೆಗೊಂಡವರೇ ಬಿಜೆಪಿಯಿಂದ ಕಣಕ್ಕಿಳಿ ಯಲಿದ್ದಾರೆ. ಕೆಲವೆಡೆಯಷ್ಟೇ ಅವರ ಸಂಬಂಧಿಗಳು ಇಲ್ಲವೇ ಅವರು ಸೂಚಿಸುವವರು ಅಭ್ಯರ್ಥಿಗಳಾಗ ಬಹುದು. ಇಷ್ಟು ಮಂದಿ ಆರಿಸಿ ಬಂದರಷ್ಟೇ ಅವರ ಮೇಲಿನ ಅನರ್ಹತೆಯ ಕಳಂಕ ಕಳಚಲಿದ್ದು, ಆ ನಿಟ್ಟಿನಲ್ಲಿ ಬಿಜೆಪಿ ಕಾರ್ಯತಂತ್ರ ಹೆಣೆಯುತ್ತಿದೆ.

ಮುಖ್ಯಮಂತ್ರಿ, ರಾಜ್ಯಾಧ್ಯಕ್ಷರಿಗೆ ಸವಾಲು: ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಸರ್ಕಾರ ರಚಿಸಿದ ನಂತರ ಹಾಗೂ ಸಂಸದ ನಳಿನ್‌ ಕುಮಾರ್‌ ಕಟೀಲ್‌ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಳಿಕ ರಾಜ್ಯದಲ್ಲಿ ಮೊದಲ ಬಾರಿಗೆ ಬರೋಬ್ಬರಿ 15 ಕ್ಷೇತ್ರಗಳಿಗೆ ಉಪಚುನಾವಣೆ ಎದುರಾಗಿದ್ದು, ಹೆಚ್ಚು ಸ್ಥಾನ ಗೆಲ್ಲಬೇಕಾದ ಸವಾಲಿದೆ. ಸರ್ಕಾರದ 100 ದಿನಗಳ ಸಾಧನೆ, ನೆರೆ ಸಂತ್ರಸ್ತರಿಗೆ ಸ್ಪಂದಿಸಿದ ರೀತಿ- ಪರಿಹಾರ ಘೋಷಣೆ, ಅಭಿವೃದ್ಧಿ ಕಾರ್ಯವನ್ನೂ ಉಪಚುನಾವಣೆಯಲ್ಲಿ ಮತದಾರರು ಓರೆಗೆ ಹಚ್ಚುವ ಸಾಧ್ಯತೆ ಇದೆ. ಇನ್ನೊಂದೆಡೆ ರಾಜ್ಯಾಧ್ಯಕ್ಷರಾಗಿ 100 ದಿನ ಪೂರೈಸಿರುವ ನಳಿನ್‌ ಕುಮಾರ್‌ ಕಟೀಲ್‌ ಅವರ ಸಂಘಟನಾ ಕೌಶಲ್ಯವನ್ನೂ ಸಾಬೀತುಪಡಿಸಬೇಕಾದ ಸ್ಥಿತಿ ಎದುರಾಗಿದೆ.

ಬಂಡಾಯ ಉಪಶಮನ ಮುಖ್ಯ: ಅನರ್ಹತೆಗೊಂಡ ಶಾಸಕರಿಗೆ ಟಿಕೆಟ್‌ ನೀಡುವುದರಿಂದ ಬೇಸರಗೊಂಡಿರುವ ಪರಾಜಿತ ಅಭ್ಯರ್ಥಿಗಳು, ಮಾಜಿ ಶಾಸಕರನ್ನು ಸಮಾಧಾನಪಡಿಸಿ ಉಪಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಾದ ಜವಾಬ್ದಾರಿಯೂ ಉಭಯ ನಾಯಕರ ಮೇಲಿದೆ. ಹೊಸಕೋಟೆಯಲ್ಲಿ ಶರತ್‌ ಬಚ್ಚೇಗೌಡ ಪಕ್ಷೇತರರಾಗಿ ಗುರುವಾರ ನಾಮಪತ್ರ ಸಲ್ಲಿಸಲಿದ್ದು, ಈಗಾಗಲೇ ಜೆಡಿಎಸ್‌ ಬೆಂಬಲ ಘೋಷಿಸಿದೆ. ಇನ್ನೊಂದೆಡೆ ಮಾಜಿ ಶಾಸಕ ರಾಜು ಕಾಗೆ, ಪರಾಜಿತ ಅಭ್ಯರ್ಥಿ ಅಶೋಕ್‌ ಪೂಜಾರಿ ಗುರುವಾರ ಕಾಂಗ್ರೆಸ್‌ ಸೇರುತ್ತಿದ್ದಾರೆ. ಕೆಲ ಕ್ಷೇತ್ರಗಳಲ್ಲೂ ಟಿಕೆಟ್‌ ಆಕಾಂಕ್ಷಿಗಳು, ಪರಾಜಿತ ಅಭ್ಯರ್ಥಿಗಳು ಅಸಮಾಧಾನಗೊಂಡಿದ್ದು, ಬಂಡಾಯ ತಲೆದೋರದಂತೆ ಪರಿಸ್ಥಿತಿ ನಿಭಾಯಿಸಿ ಸಂಘಟಿತವಾಗಿ ಉಪಚುನಾವಣೆ ಎದುರಿಸುವ ಜವಾಬ್ದಾರಿಯನ್ನು ಉಭಯ ನಾಯಕರು ಹೊರಬೇಕಿದೆ. ಎರಡು ವರ್ಷದ ಹಿಂದೆ ಯಾರ ವಿರುದ್ಧ ಪ್ರಚಾರ ನಡೆಸಿ, ಹೋರಾಟ ನಡೆಸಿದ್ದರೋ ಅವರ ಪರವಾಗಿಯೇ ಬಿಜೆಪಿ ಕಾರ್ಯಕರ್ತರು ಮತ ಯಾಚಿಸಬೇಕಿದ್ದು, ಎಷ್ಟರ ಮಟ್ಟಿಯಲ್ಲಿ ಈ ಕಾರ್ಯದಲ್ಲಿ ಸಕ್ರಿಯರಾಗಲಿದ್ದಾರೆ ಎಂಬುದೂ ನಿರ್ಣಾಯಕವೆನಿಸಿದೆ.

ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸೇ ವರದಾನ: ಸದ್ಯ ಉಪಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸುವ ಅನರ್ಹತೆಗೊಂಡ ಶಾಸಕರಿಗೆ ವೈಯಕ್ತಿಕ ವರ್ಚಸ್ಸಿದ್ದು, ವರದಾನವಾಗುವ ನಿರೀಕ್ಷೆಯಿದೆ. ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ವೈಯಕ್ತಿಕ ವರ್ಚಸ್ಸು, ಜಾತಿ ಇತರೆ ಅಂಶಗಳ ಕಾರಣಕ್ಕೆ ಗೆದ್ದು ಬರುವ ಸಾಮರ್ಥಯವಿದೆ. ಹೀಗಿರುವಾಗ ಪಕ್ಷದ ಬೆಂಬಲ, ಸಂಘಟನೆಯ ಬಲ ಸೇರಿ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ. ಕೆಲವೆಡೆ ಹಿನ್ನಡೆಯಾಗುವ ನಿರೀಕ್ಷೆಯಿದ್ದು, ಸವಾಲುಗಳೂ ಇವೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದರು.

5 ಕ್ಷೇತ್ರಗಳಲ್ಲಿ ಪೂರಕ ವಾತಾವರಣವಿಲ್ಲ: ಉಪಚುನಾವಣೆ ಘೋಷಣೆಯಾಗಿರುವ 15 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಗೆಲುವಿಗೆ ಪೂರಕ ವಾತಾವರಣವಿರುವಂತೆ ಸದ್ಯ ಕಾಣುತ್ತಿದೆ. ಹುಣಸೂರು, ಕೆ.ಆರ್‌.ಪೇಟೆ, ಹೊಸಕೋಟೆ, ರಾಣೆಬೆನ್ನೂರು ಹಾಗೂ ವಿಜಯನಗರ ಕ್ಷೇತ್ರಗಳಲ್ಲಿ ಸದ್ಯದ ಮಟ್ಟಿಗೆ ಪೂರಕ ವಾತಾವರಣವಿದ್ದಂತಿಲ್ಲ. ಈ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಯೂ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಕೆಲವೆಡೆ ಕ್ಷೇತ್ರದೊಂದಿಗೆ ಹೆಚ್ಚು ಒಡನಾಟವಿಟ್ಟುಕೊಳ್ಳದಿರುವುದು, ವೈಯಕ್ತಿಕ ನಡವಳಿಕೆಗಳ ಬಗ್ಗೆಯೂ ಅಪಸ್ವರವಿರುವುದು ಸದ್ಯಕ್ಕೆ ಕಾಣುತ್ತಿದೆ. ಹಾಗಾಗಿ ಈ ಕ್ಷೇತ್ರಗಳತ್ತ ವಿಶೇಷ ಗಮನ ನೀಡಿ ಸಂಘಟನೆ ಬಲಪಡಿಸಿ ಗೆಲುವು ಸಾಧಿಸಲು ಕಾರ್ಯತಂತ್ರ ಹೆಣೆಯಲಾಗುತ್ತಿದೆ ಎಂದು ಹೇಳಿದರು.

ಹಳೆ ಮೈಸೂರಿನಲ್ಲಿ ಲಾಭದ ಲೆಕ್ಕಾಚಾರ: ಬಿಜೆಪಿಗೆ ಈವರೆಗೆ ಭದ್ರವಾಗಿ ನೆಲೆಯೂರಲು ಸಾಧ್ಯವಾಗದ ಹಳೆ ಮೈಸೂರು ಭಾಗದಲ್ಲಿ ಈ ಬಾರಿ ಸಂಘಟನೆ ಬಲಪಡಿಸುವ ಲೆಕ್ಕಾಚಾರ ಪಕ್ಷದ ನಾಯಕರಲ್ಲಿದೆ. ಬೆಂಗಳೂರು ಸೇರಿದಂತೆ ಹಳೆ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನ ಗೆದ್ದರೆ ಪಕ್ಷದ ವರ್ಚಸ್ಸು ಇನ್ನಷ್ಟು ವಿಸ್ತರಿಸಿ ಮುಂದೆ ಅನುಕೂಲವಾಗುವ ನಿರೀಕ್ಷೆ ಇದೆ. ಹಾಗಾಗಿ ಈ ಭಾಗದ ಕ್ಷೇತ್ರಗಳಿಗೂ ವಿಶೇಷ ಆದ್ಯತೆ ನೀಡಿ ಭರ್ಜರಿ ಪ್ರಚಾರ ನಡೆಸಲು ನಾಯಕರು ಮುಂದಾಗಿದ್ದಾರೆ.

ಉ, ವಾ ವರದಿ  

Prayer Timings

Fajr فجر
Dhuhr الظهر
Asr أسر
Maghrib مغرب
Isha عشا