Urdu   /   English   /   Nawayathi

ಅನರ್ಹ ಶಾಸಕರ ಸೇರ್ಪಡೆ: ಬಿಜೆಪಿ ಕಚೇರಿ ಮುಂದೆ ಭಾರಿ ಜನಸ್ತೋಮ

share with us

ಬೆಂಗಳೂರು: 14 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ನಗರದ ಮಲ್ಲೇಶ್ವರದ ಬಿಜೆಪಿ ಕಚೇರಿಯ ಮುಂಭಾಗ ಅನರ್ಹ ಶಾಸಕರ ಬೆಂಬಲಿಗರು ಭಾರಿ ಸಂಖ್ಯೆಯಲ್ಲಿ ಸೇರಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮಕ್ಷಮ ಅನರ್ಹ ಶಾಸಕರು ಬಿಜೆಪಿ ಬಿಜೆಪಿ ಬಾವುಟ ಸ್ವೀಕರಿಸಿ ಪಕ್ಷಕ್ಕೆ ಸೇರ್ಪಡೆಯಾದರು. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. 16 ಮಂದಿ ಅನರ್ಹ ಶಾಸಕರು ಬಿಜೆಪಿಗೆ ಸೇರುತ್ತಿದ್ದಾರೆ ಎಂದು ಘೋಷಿಸಿದ ಅರವಿಂದ ಲಿಂಬಾವಳಿ.

ಬಿಜೆಪಿಗೆ ಸೇರಿದವರು: ಗೋಕಾಕದ ರಮೇಶ ಜಾರಕಿಹೊಳಿ, ಹುಣಸೂರಿನ ಎಚ್.ವಿಶ್ವನಾಥ್, ಅಥಣಿಯ ಮಹೇಶ್ ಕುಮಠಳ್ಳಿ, ಕಾಗವಾಡದ ಶ್ರೀಮಂತ ಗೌಡ ಪಾಟೀಲ, ಮಸ್ಕಿಯ ಪ್ರತಾಪ್ ಗೌಡ ಪಾಟೀಲ, ಯಲ್ಲಾಪುರದ ಶಿವರಾಮ್ ಹೆಬ್ಬಾರ್, ಹಿರೇಕೆರೂರಿನ ಬಿ.ಸಿ.ಪಾಟೀಲ, ಹೊಸಪೇಟೆಯ ಆನಂದ್ ಸಿಂಗ್, ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ, ಕೆ.ಆರ್‌.ಪುರದ ಭೈರತಿ ಬಸವರಾಜ್, ಯಶವಂತಪುರದ ಎಸ್‌.ಟಿ.ಸೋಮಶೇಖರ್, ರಾಜರಾಜೇಶ್ವರಿನಗರದ ಮುನಿರತ್ನ, ಮಹಾಲಕ್ಷ್ಮಿ ಲೇಔಟ್‌ನ ಗೋಪಾಲಯ್ಯ, ಕೆ.ಆರ್‌.ಪೇಟೆಯ ನಾರಾಯಣಗೌಡ, ಹೊಸಪೇಟೆಯ ಎಂ.ಟಿ.ಬಿ.ನಾಗರಾಜ್, ರಾಣೆಬೆನ್ನೂರಿನ ಆರ್.ಶಂಕರ್ ಬಿಜೆಪಿಗೆ ಸೇರ್ಪಡೆಗೊಂಡರು.

ನಾವು ಪಕ್ಷಾಂತರ ಮಾಡಿಲ್ಲ, ಇದು ರಾಜಕೀಯ ಧ್ರುವೀಕರಣ: ಎಚ್.ವಿಶ್ವನಾಥ್

ನಾವು ನಮ್ಮ ವೈಯಕ್ತಿಕ ಹಿತಾಸಕ್ತಿಗಳಿಂದ ರಾಜೀನಾಮೆ ಕೊಡಲಿಲ್ಲ. ದಬ್ಬಾಳಿಕೆ ಪ್ರವೃತ್ತಿಯ ಸರ್ಕಾರದಿಂದ ಹೊರಗೆ ಬಂದೆವು ಎಂದು ಬಿಜೆಪಿಗೆ ಸೇರ್ಪಡೆಯಾದ ಅನರ್ಹ ಶಾಸಕ ಎಚ್.ವಿಶ್ವನಾಥ್ ಹೇಳಿದರು. ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ನಮ್ಮ 17 ಜನರನ್ನು ರಾಜಕಾರಣದಿಂದ ದೂರ ಇಡಲು ಹುನ್ನಾರ ಮಾಡಿದ್ದರು. ಚುನಾವಣೆಗೆ ನಿಲ್ಲಬಾರದು ಎನ್ನುವ ಮೂಲಕ ನಮ್ಮ ವಿರುದ್ಧ ಹುನ್ನಾರ ಮಾಡಿದ್ದರು. ಇದನ್ನು ಸುಪ್ರೀಂಕೋರ್ಟ್‌ ತಡೆದಿದೆ. ನಮಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶವನ್ನು ಸುಪ್ರೀಂಕೋರ್ಟ್‌ ಕೊಟ್ಟಿದೆ ಎಂದು ಅವರು ವಿಶ್ಲೇಷಿಸಿದರು. ಪಕ್ಷಾಂತರದ ಬಗ್ಗೆ, ರಾಜಕಾರಣದ ಬಗ್ಗೆ ಪ್ರಸ್ತುತತೆಯ ಬಗ್ಗೆ ಸಾಕಷ್ಟು ಚರ್ಚೆಗಳು ಆಗ್ತಿವೆ. ಮೋದಿಯವರು ಈ ದೇಶದ ಭವಿಷ್ಯಕ್ಕಾಗಿ ಹೊಸ ಕನಸುಗಳ ಅನ್ವೇಷಣೆ ಮಾಡ್ತಿದ್ದಾರೆ. ಅವರ ಜೊತೆಗೆ ಕೈಜೋಡಿಸಲು ನಾವು ಮುಂದೆ ಬಂದಿದ್ದೇವೆ. ಕರ್ನಾಟಕದ ಜನರ ಕನಸುಗಳನ್ನು ನನಸು ಮಾಡಲು ನಾನು 17 ಜನರು ಇಲ್ಲಿಗೆ ಬಂದಿದ್ದೇವೆ. ಚುನಾವಣೆಯೂ ಒಂದು ಅಪರೂಪದ ನಿರ್ಧಾರವನ್ನು ರಾಜ್ಯದ ಜನರು ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಕರೆ ನೀಡಿದರು.

ಇಂದು ಮಾಜಿ ಶಾಸಕರು, ನಾಳೆ ಭಾವಿ ಸಚಿವರು: ಯಡಿಯೂರಪ್ಪ

ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ನಮಗಾಗಿ ಇವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಎಲ್ಲ ರೀತಿಯ ತ್ಯಾಗ ಮಾಡಿದ್ದಾರೆ’ ಎಂದು ಶ್ಲಾಘಿಸಿದರು. ಯಡಿಯೂರಪ್ಪ ಭಾಷಣದ ಮುಖ್ಯ ಅಂಶಗಳು ಇವು...ಸುಪ್ರೀಂಕೋರ್ಟ್ ತೀರ್ಪು ಕೊಟ್ಟ ನಂತರ ಅನರ್ಹ ಶಾಸಕರು ಬಿಜೆಪಿಗೆ ಸೇರಿದ್ದಾರೆ. ಅಧಿಕೃತವಾಗಿ ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ವೇದಿಕೆ ಮೇಲಿರುವ ನಮ್ಮೆಲ್ಲರ ರಾಜೀನಾಮೆ ಕೊಟ್ಟು ನಮ್ಮಜೊತೆಗೆ ಬಂದಿರುವ ಶಾಸಕರಿಗೆ ಅವರ ಬೆಂಬಲಿಗರಿಗೆ ನಳೀನ್ ಕುಮಾರ್ ಕಟೀಲ್ ಪರವಾಗಿ ರಾಜ್ಯದ ಮುಖ್ಯಮಂತ್ರಿಯಾಗಿ ಭರವಸೆ ಕೊಡ್ತೀನಿ. ನಾನು ಕೊಟ್ಟಿರುವ ಭರವಸೆಯನ್ನು ಅಕ್ಷರಶಃ ಈಡೇಸ್ತೀವಿ. ವಿಶ್ವಾಸ ದ್ರೋಹ ಮಾಡಲ್ಲ. ಇದು ನನ್ನ ಭರವಸೆ. ದೇಶದ ರಾಜಕಾರಣದಲ್ಲಿ ಈ ರೀತಿ 16–17 ಮಂದಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬಂದ ಉದಾಹರಣೆ ಇಲ್ಲ. ನಮಗಾಗಿ ಎಲ್ಲ ರೀತಿಯ ತ್ಯಾಗ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಕೈಜೋಡಿಸಿ ಮನವಿ ಮಾಡ್ತೀವಿ. ಸಣ್ಣಪುಟ್ಟ ಒಡಕಿನ ಮಾತು ಆಡದೆ ಎಲ್ಲ ರೀತಿಯ ಸಹಕಾರ. ತನು ಮನ ಧನದಿಂದ ಅವರ ಗೆಲುವಿಗೆ ಕಾರಣಕರ್ತರಾಗಿ. ಡಿ.5ಕ್ಕೆ ಚುನಾವಣೆ, 9ಕ್ಕೆ ಫಲಿತಾಂಶ. ಗೆದ್ದ ಎಲ್ಲ ಶಾಸಕರಿಗೆ ದೊಡ್ಡ ಮೈದಾನದಲ್ಲಿ 1 ಲಕ್ಷ ಜನರನ್ನು ಸೇರಿಸಿ ಸನ್ಮಾನ ಮಾಡುವ ಕಾರ್ಯಕ್ರಮ ಹಾಕಿಕೊಳ್ತೀವಿ. ಮಾಜಿ ಶಾಸಕರಿಗೆ ನಾನು ಭರವಸೆ ಕೊಡ್ತೀನಿ. 15ಕ್ಕೆ 15 ಕ್ಷೇತ್ರಗಳನ್ನು ನೂರಕ್ಕೆ ನೂರು ಗೆಲ್ತೀವಿ. ಇದು ನನ್ನ ಭರವಸೆ. ಕಾಗವಾಡಕ್ಕೆ ರಮೇಶ್ ಜಿಗಜಿಣಗಿ ಮತ್ತು ಉಮೇಶ್‌ ಕತ್ತಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಶಿವಾಜಿನಗರಕ್ಕೆ ಉಸ್ತುವಾರಿಯಾಗಿ ಕೆಲಸ ಮಾಡ್ತಾರೆ. ನಮ್ಮೆಲ್ಲ ಸಂಸದರು ಮತ್ತು ಕಾರ್ಯಕರ್ತರು ನಿಮ್ಮ ಜೊತೆಗೆ ಇರ್ತಾರೆ. ಕೇಂದ್ರದ ನಾಯಕತ್ವ ನಿಮ್ಮ ಜೊತೆಗಿದೆ. ನೀವು ಅಧೀರರಾಗಬೇಕಿಲ್ಲ. ಪ್ರಚಾರ ಬಯಸದೇ ಅಭ್ಯರ್ಥಿಗಳ ಗೆಲುವಿಗೆ ಪರಿಶ್ರಮ ಹಾಕಿ. ನಮ್ಮ ಪಕ್ಷಕ್ಕೆ ಬಂದಿರುವವರೊಂದಿಗೆ ಪ್ರಾಮಾಣಿಕವಾಗಿ ಹೊಂದಿಕೊಂಡು ಹೋಗಬೇಕು. ನಾವು ಬಿಜೆಪಿಗೆ ಹೊಸಬರು, ಚುನಾವಣೆ ಎದುರಿಸುವುದು ಹೇಗೆ ಎಂಬ ಆತಂಕ ಅವರಲ್ಲಿದೆ. ನಮ್ಮ ಪಕ್ಷ ಮತ್ತು ಕಾರ್ಯಕರ್ತರು ನಿಮ್ಮ ಜೊತೆಗಿದ್ದಾರೆ ಎಂದು ನಾನು ಭರವಸೆ ಕೊಟ್ಟಿದ್ದೇನೆ. ಇಂದಿನ ಮಾಜಿ ಶಾಸಕರು, ನಾಳೆಯ ಭಾವಿ ಸಚಿವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಯಡಿಯೂರಪ್ಪ ಭಾಷಣ ಮುಗಿಸಿ, ತುಮಕೂರಿನ ಕಾರ್ಯಕ್ರಮಕ್ಕೆ ತೆರಳಿದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا