Urdu   /   English   /   Nawayathi

“ಮೋದಿ..ಮೋದಿ..ಎಂದು ಅಬ್ಬರಿಸಿದವರಿಗೆ ಮೋಸ ಮಾಡಿದ ಮೋದಿ” : ಸಿದ್ದು ವಾಗ್ದಾಳಿ

share with us

ಬೆಂಗಳೂರು: 11 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಲೋಕಸಭೆ ಚುನಾವಣೆಯಲ್ಲಿ ಮೋದಿ… ಮೋದಿ… ಎಂದು ಅಬ್ಬರ ಹಾಕಿ ಕೆಲಸ ಮಾಡಿದ ಯುವ ಸಮುದಾಯಕ್ಕೆ ಮೋದಿಯವರು ವಂಚನೆ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಟೌನ್‍ಹಾಲ್ ಎದುರು ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಘಟಕಗಳು ಏರ್ಪಡಿಸಿದ್ದ ಪ್ರತಿಭಟನಾ ಮೆರವಣಿಗೆ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಯುವ ಸಮುದಾಯ ಮೋದಿಯವರಿಗೆ ಭಾರೀ ಪ್ರಮಾಣದಲ್ಲಿ ಬೆಂಬಲ ನೀಡಿತ್ತು. ಅವರಿಗೆ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಮೋದಿ ಭರವಸೆ ನೀಡಿದ್ದರು. ಆದರೆ 2 ಲಕ್ಷ ಉದ್ಯೋಗ ಸೃಷ್ಟಿಯಾಗಿಲ್ಲ. ಬದಲಾಗಿ ಉದ್ಯೋಗಗಳ ಕಡಿತದ ಪ್ರಮಾಣ ಹೆಚ್ಚಾಗುತ್ತಿದೆ. ಯುವಕರ ಕನಸುಗಳನ್ನು ಮೋದಿ ನಾಶ ಮಾಡಿದ್ದಾರೆ ಎಂದು ಕಿಡಿಕಾರಿದರು. ದೇಶದಲ್ಲಿ ಹಿಂದೆಂದೂ ಕಾಣದಷ್ಟು ಆರ್ಥಿಕ ದುಃಸ್ಥಿತಿ ಇದೆ. ಐದು ವರ್ಷ ಆಡಳಿತ ಪೂರ್ಣಗೊಳಿಸಿ ಆರನೇ ವರ್ಷದತ್ತ ಕಾಲಿಟ್ಟ ಮೋದಿಯವರು ದೇಶವನ್ನು ಅಧೋಗತಿಯತ್ತ ತೆಗೆದುಕೊಂಡು ಹೋಗುತ್ತಿದ್ದಾರೆ. ಮನ್‍ಮೋಹನ್‍ಸಿಂಗ್ ಪ್ರಧಾನಿಯಾಗಿದ್ದಾಗ ಆರ್ಥಿಕ ಬೆಳವಣಿಗೆ ಶೇ.8 ರಿಂದ 9ರ ದರದಲ್ಲಿತ್ತು. ಆರು ವರ್ಷದಲ್ಲಿ ಅದು ಕುಸಿದು ಹೋಗಿದ್ದು, ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರವೇ ಅದು ಶೇ.5 ರಷ್ಟಿದೆ. ಆದರೆ ವಾಸ್ತವವಾಗಿ ಕುಸಿತದ ಪ್ರಮಾಣ 3ಕ್ಕಿಂತಲೂ ಹೆಚ್ಚಿದೆ. ಇದು ಮೋದಿಯವರು ಪ್ರಧಾನಿಯಾದ ಮೇಲೆ ಆದ ಹಿಂಜರಿತ ಎಂದು ಆರೋಪಿಸಿದರು. ಒಂದೆಡೆ ಆರ್ಥಿಕ ಕುಸಿತವಾಗುತ್ತಿದ್ದರೆ, ಮತ್ತೊಂದೆಡೆ ನಿರುದ್ಯೋಗ ಪ್ರಮಾಣ ಶೇ.8.5ರಷ್ಟು ಹೆಚ್ಚಾಗುತ್ತಿದೆ. ನಕಲಿ ಹಣ ತಡೆಗಟ್ಟುತ್ತೇನೆ, ಭ್ರಷ್ಟಾಚಾರ ನಿಯಂತ್ರಿಸುತ್ತೇನೆ ಎಂದು ಹೇಳಿ ಮೋದಿಯವರು ನೋಟ್ ಬ್ಯಾನ್ ಮಾಡಿ ಮೂರು ವರ್ಷವಾಯಿತು. ಈವರೆಗೂ ಕಪ್ಪು ಹಣವೂ ವಾಪಸ್ ಬಂದಿಲ್ಲ, ಭ್ರಷ್ಟಾಚಾರವೂ ಕಡಿಮೆಯಾಗಿಲ್ಲ. ನೋಟ್ ಬ್ಯಾನ್ ಸಂದರ್ಭದಲ್ಲಿ ಸತ್ತವರು ಬಡವರೇ ಹೊರತು, ಶ್ರೀಮಂತರಲ್ಲ. ರೈತರು, ಮಹಿಳೆಯರು ಕಷ್ಟದಲ್ಲಿದ್ದಾರೆ. ಉದ್ಯಮವಲಯ ಕೂಡ ಸೊರಗುತ್ತಿದೆ. ನೂರಾರು ಕಂಪನಿಗಳು ಮುಚ್ಚಿಹೋಗಿವೆ. ಎಲ್ಲಾ ಕೆಲಸಗಳು ಕಡಿತಗೊಳ್ಳುತ್ತಿವೆ. ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದ ಜನ ನೆಮ್ಮದಿ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕದಲ್ಲಿ ಯಡಿಯೂರಪ್ಪ ಅವರು ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿಲ್ಲ. ಕಾಂಗ್ರೆಸ್‍ನ 14 ಜನ ಶಾಸಕರನ್ನು ಕೊಂಡುಕೊಂಡು ಹಿಂಬಾಗಿಲ ಮೂಲಕ ಸರ್ಕಾರ ರಚಿಸಿದ್ದಾರೆ. ಆಪರೇಷನ್ ಕಮಲದಿಂದ 17 ಮಂದಿ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಈಗ ಆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದೆ. ಇಂತಹ ಪರಿಸ್ಥಿತಿಗೆ ಯಡಿಯೂರಪ್ಪ ಅವರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ದಿನ ಬೆಳಗಾದರೆ ಯಡಿಯೂರಪ್ಪ ಪತ್ರಿಕೆಗಳಿಗೆ ಜಾಹೀರಾತು ಕೊಡುತ್ತಿದ್ದಾರೆ. ಛಲಗಾರ, ಧೀರ, ಶೂರ ಎಂದೆಲ್ಲ ಹೊಗಳಿಸಿಕೊಳ್ಳುತ್ತಿದ್ದಾರೆ. ಇದು ಹಾಸ್ಯಾಸ್ಪದವಾಗಿದೆ ಎಂದು ಲೇವಡಿ ಮಾಡಿದರು.ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಕೇಂದ್ರದ ಸಚಿವರಾದ ನಿರ್ಮಲಾಸೀತಾರಾಮನ್ ಅವರಿಗೆ ಏನೂ ಗೊತ್ತಿಲ್ಲ. ಹೀಗಾಗಿಯೇ ಅರ್ಥವ್ಯವಸ್ಥೆ ಹಾಳಾಗಿದೆ. ರೈತರು ಸಂಕಷ್ಟದಲ್ಲಿದ್ದಾಗ ಮೋದಿಯವರು ನೆರವಿಗೆ ಬರಲಿಲ್ಲ. ಕರ್ನಾಟಕದ ಮಟ್ಟಿಗಂತೂ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ನೆರೆ ಪೀಡಿತರಿಗೆ ನೆರವು ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಮೋದಿ ದೇಶ ಕಂಡ ದೊಡ್ಡ ಸುಳ್ಳುಗಾರ. ಸುಳ್ಳಿಗಾಗಿ ನೊಬೆಲ್ ಪ್ರಶಸ್ತಿ ಕೊಡುವುದಾದರೆ ಅದನ್ನು ಮೋದಿಗೇ ಕೊಡಬೇಕೆಂದು ಶಿಫಾರಸು ಮಾಡುತ್ತೇನೆ ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಅನ್ನಭಾಗ್ಯ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದರು. ಬಿಜೆಪಿ ಜನಪರ ಕೆಲಸ ಮಾಡುವುದಿಲ್ಲ, ರಾಮಜನ್ಮಭೂಮಿ, ಪುಲ್ವಾಮಾ ಅಂತಹ ಭಾವನಾತ್ಮಕ ವಿಷಯಗಳನ್ನಿಟ್ಟುಕೊಂಡು ರಾಜಕಾರಣ ಮಾಡುತ್ತಿದೆ. ಜನರ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುತ್ತಿಲ್ಲ ಎಂದರು. ಮಹಿಳಾ ಕಾಂಗ್ರೆಸ್‍ಅಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿ, ಕೇಂದ್ರ ಸರ್ಕಾರ ಹೆಣ್ಣು ಮಕ್ಕಳ ಜೀವನಕ್ಕೆ ಕೊಳ್ಳಿ ಇಡುತ್ತಿದೆ. ಸ್ಯಾನಿಟರಿ ಪ್ಯಾಡ್ ಮೇಲೂ ಜಿಎಸ್‍ಟಿ ತೆರಿಗೆ ಹಾಕಿದ್ದಂತಹ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ರಾಜ್ಯದಲ್ಲಿ ಆಪರೇಷನ್ ಕಮಲ ಮೂಲಕ ಅಧಿಕಾರಕ್ಕೆ ಬಂದು ಜನ ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا