Urdu   /   English   /   Nawayathi

ಹೋವರ್ ಕ್ರಾಫ್ಟ್ ನಿಲ್ದಾಣಕ್ಕೆ ಜಮೀನು

share with us

ಕಾರವಾರ: 21 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ರಕ್ಷಣಾ ಕಾರ್ಯಗಳಿಗಾಗಿ ಜಿಲ್ಲೆಗೆ ಹೋವರ್ ಕ್ರಾಫ್ಟ್​ನ ಅವಶ್ಯಕತೆ ಇದೆ. ಅದರ ನಿಲ್ದಾಣ ಪ್ರಾರಂಭಿಸಲು ಕಡಲ ತೀರದಲ್ಲಿ ಜಮೀನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ತಿಳಿಸಿದರು. ಮಂಗಳೂರಿನಿಂದ ಶನಿವಾರ ನಗರದ ಟ್ಯಾಗೋರ್ ಕಡಲ ತೀರಕ್ಕೆ ಆಗಮಿಸಿದ ಕೋಸ್ಟ್​ಗಾರ್ಡ್​ನ ಹೋವರ್ ಕ್ರಾಫ್ಟ್ ಮೇಲೆ ಭಾನುವಾರ ಸಂಚಾರ ನಡೆಸಿ ಅವರು ಪರಿಶೀಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲೇ ಜಲ ಅವಘಡಗಳು ಸಂಭವಿಸಿದರೂ ಬೋಟ್, ಮುಳುಗು ತಜ್ಞರು ಹಾಗೂ ಹೆಲಿಕಾಪ್ಟರ್​ಗಾಗಿ ಜಿಲ್ಲೆಗೆ ಕರೆ ಬರುತ್ತದೆ. ಜಿಲ್ಲೆಯಲ್ಲೂ ಅಂಥ ಹಲವು ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ನೌಕಾನೆಲೆ ಇಂಥ ಸಂದರ್ಭಗಳಲ್ಲಿ ನೆರವಿಗೆ ಬರುತ್ತಿದೆ. ಆದರೂ, ಕೋಸ್ಟ್​ಗಾರ್ಡ್​ನ ಸೇವೆ ನಮಗೆ ಅತ್ಯವಶ್ಯಕವಾಗಿದೆ. ಒಂದು ಹೋವರ್ ಕ್ರಾಫ್ಟ್ ಜೊತೆ ಹೆಲಿಪ್ಯಾಡ್ ವ್ಯವಸ್ಥೆಯನ್ನೂ ಮಾಡುವಂತೆ ಕೋಸ್ಟ್​ಗಾರ್ಡ್​ಗೆ ವಿನಂತಿಸಲಾಗಿದೆ. ಎಲ್ಲಿ ಜಾಗ ನೀಡಬೇಕು ಎಂಬುದು ಇನ್ನಷ್ಟೇ ನಿರ್ಧಾರವಾಗಲಿದೆ ಎಂದರು. ಕಾರವಾರ ಕೋಸ್ಟ್​ಗಾರ್ಡ್ ಠಾಣೆಯ ಮುಖ್ಯಸ್ಥ ಕಮಾಂಡರ್ ಸಿ.ಎಸ್. ಜೋಷಿ, ಹೋವರ್ ಕ್ರಾಫ್ಟ್ ಅತಿ ವೇಗವಾಗಿ ನದಿಯಲ್ಲಿ, ಅತ್ಯಂತ ಕಡಿಮೆ ನೀರಿರುವ ಸ್ಥಳದಲ್ಲಿ, ಗಜನಿ ಭೂಮಿಗಳಲ್ಲಿ ತೆರಳಲು ಸಮರ್ಥವಾಗಿದೆ. ನೈಸರ್ಗಿಕ ವಿಪತ್ತು, ದೋಣಿ ಅಪಘಾತಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯಗಳಿಗೆ ಇದು ಉಪಯುಕ್ತ. ಸದ್ಯ ಗೋವಾ ಮತ್ತು ಮಂಗಳೂರಿನಲ್ಲಿ ಇಂಥ ಹೋವರ್ ಕ್ರಾಫ್ಟ್​ಗಳಿವೆ. ಕಾರವಾರದಲ್ಲಿ ಸೀಬರ್ಡ್ ನೌಕಾನೆಲೆ, ಕೈಗಾ ಅಲ್ಲದೆ, ಸಾಕಷ್ಟು ಮೀನುಗಾರಿಕೆ ಚಟುವಟಿಕೆ ಇರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೇ ಒಂದು ಇಂಥ ಬೋಟ್​ನ ಅವಶ್ಯಕತೆ ಇದೆ. ಕೋಸ್ಟ್​ಗಾರ್ಡ್ ಜಿಲ್ಲೆಗೆ ಇಂಥ ಹೋವರ್ ಕ್ರಾಫ್ಟ್ ನೀಡಲು ಸಿದ್ಧವಿದೆ. ಆದರೆ, ಅದರ ನಿಲುಗಡೆಗೆ ಜಾಗವಿಲ್ಲ. ನಿಲ್ದಾಣಕ್ಕೆ ಸುಮಾರು ಐದು ಎಕರೆ ಜಮೀನು ಬೇಕಾಗಬಹುದು. ಈಗಾಗಲೇ ಜಿಲ್ಲಾಡಳಿತ ನೀಡಿದ ಜಮೀನು ಇದ್ದರೂ ಅಲ್ಲಿ ಕಾಮಗಾರಿಗೆ ಸ್ಥಳೀಯ ಕೆಲವರ ವಿರೋಧವಿದೆ ಎಂದರು.

ಕಾರವಾರ ಉಪವಿಭಾಗಾಧಿಕಾರಿ ಪ್ರಿಯಾಂಗಾ ಎಂ. ಇದ್ದರು.

ಏನಿದು ಹೋವರ್ ಕ್ರಾಫ್ಟ್?: ಸಮತಟ್ಟಾದ ರಬ್ಬರ್ ತಳಭಾಗವಿರುವ ಸ್ಪೀಡ್ ಬೋಟ್ ಇದಾಗಿದೆ. ನೀರಿನಲ್ಲಿ ಮಾತ್ರವಲ್ಲದೇ ದಡದ ಮೇಲೂ ಬಂದು ನಿಲ್ಲಬಲ್ಲದು. ಒಂದು ಹೋವರ್ ಕ್ರಾಫ್ಟ್​ನಲ್ಲಿ 10ರಿಂದ 11 ಸಿಬ್ಬಂದಿ ಇರಲಿದ್ದಾರೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا