Urdu   /   English   /   Nawayathi

ಪಾಕಿಸ್ತಾನವನ್ನು 'ಬ್ಲ್ಯಾಕ್​ ಲಿಸ್ಟ್​'ಗೆ ಸೇರಿಸುತ್ತಾ ಎಫ್​ಎಟಿಎಫ್?

share with us

ಪ್ಯಾರಿಸ್​/ನವದೆಹಲಿ: 14 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಮುಜುಗರಕ್ಕೀಡಾಗಿದೆ. ಅಂತಾರಾಷ್ಟ್ರೀಯ ಸಂಸ್ಥೆ ಎಫ್​ಎಟಿಎಫ್(ಹಣಕಾಸು ಕ್ರಿಯಾ ಕಾರ್ಯಪಡೆ) ಪಾಕಿಸ್ತಾನವನ್ನು 'ಬ್ಲ್ಯಾಕ್​ ಲಿಸ್ಟ್​'ಗೆ ಸೇರಿಸುವ ಸಾಧ್ಯತೆ ದಟ್ಟವಾಗಿದ್ದು, ಈ ಬಗ್ಗೆ ಪ್ಯಾರಿಸ್​ನಲ್ಲಿ ಎಫ್​ಎಟಿಎಫ್ ಸದಸ್ಯ ರಾಷ್ಟ್ರಗಳ ಸಭೆಯಲ್ಲಿ ಮಾತುಕತೆ ನಡೆಸಲಾಗಿದೆ ಎಂದು ಹೇಳಲಾಗ್ತಿದೆ. ಎಫ್​ಎಟಿಫ್(Financial Action Task Force) ಕೇಂದ್ರ ಕಚೇರಿ ಪ್ಯಾರಿಸ್​ನಲ್ಲಿ ಭಾನುವಾರದಿಂದ ನಡೆಯುತ್ತಿರುವ ಸಭೆಯಲ್ಲಿ ಈ ಕುರಿತು ಮಾತುಕತೆ ನಡೆದಿದೆ ಎನ್ನಲಾಗ್ತಿದ್ದು, ಇದರಿಂದ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ಗೆ ಮತ್ತೆ ಸಂಕಷ್ಟ ಎದುರಾಗಲಿದೆ. ಪಾಕಿಸ್ತಾನ ಉಗ್ರರನ್ನು ಪೋಷಿಸುತ್ತಿದೆ ಎಂದು ಭಾರತವು ಹಲವು ಬಾರಿ ನೇರ ಆರೋಪ ಮಾಡಿದೆ. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲೂ ಪ್ರತಿ ಬಾರಿ ಈ ಬಗ್ಗೆ ಭಾರತ ನೇರವಾಗಿಯೇ ಪಾಕಿಸ್ತಾನದತ್ತ ಬೊಟ್ಟು ಮಾಡಿ ತೋರಿಸಿದೆ. ಇದರಿಂದಲೇ ಪಾಕ್​ಗೆ ಜಾಗತಿಕ ಮಟ್ಟದಲ್ಲಿ ಮುಜುಗರವುಂಟಾಗಿತ್ತು. ಇನ್ನೊಂದೆಡೆ ಉಗ್ರರಿಗೆ ಪಾಕಿಸ್ತಾನ ಅಕ್ರಮವಾಗಿ ಹಣ ವರ್ಗಾವಣೆ ಮಾಡುತ್ತಿದೆ ಮತ್ತು ಉಗ್ರರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜಾಗತಿಕ ಕಾವಲುಪಡೆ (ಅಂತಾರಾಷ್ಟ್ರೀಯ ಶಾಂತಿ ಸಂಸ್ಥೆ)ಯೂ ಹೇಳಿದೆ. ಹೀಗಾಗಿ ಪಾಕ್​ ವಿರುದ್ಧ ಜಾಗತಿಕ ಸಂಸ್ಥೆಯಾದ ಹಣಕಾಸು ಕ್ರಿಯಾ ಕಾರ್ಯಪಡೆಯೂ ಈ ಗಟ್ಟಿ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.

ಎಫ್​ಎಟಿಎಫ್(Financial Action Task Force) ಅಂದರೆ ಏನು!

ಎಫ್​ಎಟಿಎಫ್ ಅಂದರೆ, ಹಣಕಾಸು ಕ್ರಿಯಾ ಕಾರ್ಯಪಡೆ. ಇದು 1989 ರಲ್ಲಿ ಸ್ಥಾಪಿತವಾದ ಅಂತಾರಾಷ್ಟ್ರೀಯ ಸ್ವತಂತ್ರ ಸಂಸ್ಥೆ. ಪ್ರಸ್ತುತ ಭಾರತ ಸೇರಿದಂತೆ ಜಗತ್ತಿನ 37 ಸದಸ್ಯ ರಾಷ್ಟ್ರಗಳು ಹಾಗೂ 2 ಪ್ರಾದೇಶಿಕ ಸಂಸ್ಥೆಗಳು ಇದರ ಸದಸ್ಯತ್ವ ಹೊಂದಿವೆ. ಅಕ್ರಮ ಹಣ ವರ್ಗಾವಣೆ, ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಉದ್ದೇಶದಿಂದ ಈ ಸಂಸ್ಥೆ ಸ್ಥಾಪನೆಗೊಂಡಿದೆ. ಹೀಗಾಗಿ ಇದನ್ನು 'ನೀತಿ ರೂಪಕ ಸಂಸ್ಥೆ' ಎಂದೇ ಹೇಳಲಾಗುತ್ತದೆ. ಇದರ ಕೇಂದ್ರ ಕಚೇರಿ ಫ್ರಾನ್ಸ್​ನ ರಾಜಧಾನಿ ಪ್ಯಾರಿಸ್​ನಲ್ಲಿದೆ.

ಈಗಾಗಲೇ ಗ್ರೇ ಲಿಸ್ಟ್​ನಲ್ಲಿದೆ ಪಾಕ್​...

ಕಳೆದ ವರ್ಷವಷ್ಟೇ ಪಾಕಿಸ್ತಾನವನ್ನು ಎಫ್​ಎಟಿಫ್ ಗ್ರೇ ಲಿಸ್ಟ್​ಗೆ ಸೇರಿಸಿತ್ತು. ಇದರ ಪ್ರಕಾರ ಪಾಕ್​ಗೆ 2019ರ ಅಕ್ಟೋಬರ್​ವರೆಗೆ, ಉಗ್ರರಿಗೆ ಹಣಕಾಸಿನ ನೆರವು ಮತ್ತು ಹಣ ವರ್ಗಾವಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತ್ತು.

'ಬ್ಲ್ಯಾಕ್​ ಲಿಸ್ಟ್​' ಅಂದರೆ ಏನು!

ಬ್ಲ್ಯಾಕ್​ ಲಿಸ್ಟ್​ಗೆ ಹಾಕಲಾದ ದೇಶಗಳನ್ನು ಸಹಕಾರೇತರ ದೇಶಗಳು ಎಂದು ಪರಿಗಣಿಸಲಾಗುತ್ತದೆ. ಅಂದರೆ ಈ ದೇಶಗಳು ಉಗ್ರರಿಗೆ ಹಣಕಾಸಿನ ನೆರವು ನೀಡುತ್ತವೆ ಮತ್ತು ಹಣ ವರ್ಗಾವಣೆ ಮಾಡುತ್ತಿವೆ ಎಂದರ್ಥ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا