Urdu   /   English   /   Nawayathi

ಅ.11ಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭಾರತಕ್ಕೆ ಆಗಮನ; ಪ್ರಧಾನಿ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ

share with us

ಬೀಜಿಂಗ್: 10 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಇದೇ 11 ಮತ್ತು 12ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಜೊತೆ ಅವರು ಎರಡನೇ ಅನೌಪಚಾರಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದು ಅದರಲ್ಲಿ ದ್ವಿಪಕ್ಷೀಯ ಸಂಬಂಧ ಮತ್ತು ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ವಿಷಯಗಳ ಕುರಿತು ವಿಸ್ತೃತ ಚರ್ಚೆ ನಡೆಸಲಿದ್ದಾರೆ. ಚೆನ್ನೈಯ ಮಹಾಬಲಿಪುರಂನಲ್ಲಿ ಎರಡನೇ ಅನೌಪಚಾರಿಕ ಸಭೆ ನಡೆಯಲಿದ್ದು, ಅಲ್ಲಿಂದ 13ರಂದು ನೇಪಾಳಕ್ಕೆ ತೆರಳಲಿದ್ದಾರೆ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಹುವಾ ಚುನೈಂಗ್ ತಿಳಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಮಧ್ಯೆ ನಡೆಯುತ್ತಿರುವ ಎರಡನೇ ಅನೌಪಚಾರಿಕ ಸಭೆಯಿದು. ಮೊದಲನೇ ಸಭೆ ಕಳೆದ ವರ್ಷ ಚೀನಾದ ವುಹಾನ್ ನಲ್ಲಿ ನಡೆದಿತ್ತು. 2017ರಲ್ಲಿ ದೋಕ್ಲಮ್ನಲ್ಲಿ ಭಾರತೀಯ ಮತ್ತು ಚೀನಾ ಮಿಲಿಟರಿ ಪಡೆಯ 73 ದಿನಗಳ ನಿಯೋಜನೆ ನಂತರ ಎರಡೂ ದೇಶಗಳ ಪರಿಸ್ಥಿತಿ ಬಿಗಡಾಯಿಸಿತ್ತು, ಅದಕ್ಕೆ ಕಳೆದ ವರ್ಷ ಉಭಯ ದೇಶಗಳ ನಾಯಕರ ಸಭೆಯಲ್ಲಿ ಸ್ವಲ್ಪ ಮಟ್ಟಿಗೆ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿತ್ತು. ಭಾರತದ ಈಶಾನ್ಯ ರಾಜ್ಯಗಳಿಗೆ ಸಂಪರ್ಕ ಕಲ್ಪಿಸಲು ಸಿಲುಗುರಿ ಕಾರಿಡಾರ್ ಹತ್ತಿರ ರಸ್ತೆ ನಿರ್ಮಿಸುವ ಯೋಜನೆಗೆ ಚೀನಾ ಮಿಲಿಟರಿ ಕೈಹಾಕಿತ್ತು. ಇದಕ್ಕೆ ಭಾರತ ವಿರೋಧ ವ್ಯಕ್ತಪಡಿಸಿತು. ಈ ನಿಟ್ಟಿನಲ್ಲಿ ಅಹಿತಕರ ಘಟನೆ ನಡೆಯದಂತೆ ಎರಡೂ ಕಡೆಗಳಿಂದ ತಮ್ಮ ತಮ್ಮ ಮಿಲಿಟರಿಗಳನ್ನು ಇಲ್ಲಿ 73 ದಿನಗಳ ಕಾಲ ನಿಯೋಜಿಸಲಾಗಿತ್ತು. ನಂತರ ಚೀನಾ ರಸ್ತೆ ನಿರ್ಮಾಣ ಮಾಡುವ ಯೋಜನೆ ಕೈಬಿಟ್ಟ ನಂತರ ಸೇನೆಯನ್ನು ಎರಡೂ ದೇಶಗಳು ಹಿಂದಕ್ಕೆ ಕರೆಸಿಕೊಂಡವು. ಒಂದೆಡೆ ಕ್ಸಿ ಜಿನ್ ಪಿಂಗ್ ಅವರು ಭಾರತಕ್ಕೆ ಬರುತ್ತಿರುವ ಸಂದರ್ಭದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅಲ್ಲಿನ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ ಚೀನಾಕ್ಕೆ ತೆರಳಿದ್ದು ನಿನ್ನೆ ಪ್ರಧಾನಿ ಲಿ ಕೆಖಿಯಾಂಗ್ ಅವರನ್ನು ಭೇಟಿ ಮಾಡಿ, ಇಂದು ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ. 

ಭಾರತ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿರುವ ಸಂದರ್ಭದಲ್ಲಿ ಪಾಕಿಸ್ತಾನ ಅದನ್ನು ತೀವ್ರವಾಗಿ ವಿರೋಧಿಸುತ್ತಿದ್ದು ಅದಕ್ಕೆ ಚೀನಾ ಬೆಂಬಲ ನೀಡುವ ಗಳಿಗೆಯ ಮಧ್ಯೆ ಚೀನಾ ಅಧ್ಯಕ್ಷರ ಭಾರತಕ್ಕೆ ಆಗಮನ ವಿಶೇಷ ರಾಜಕೀಯ ಮಹತ್ವ ಪಡೆದಿದೆ. ನಿನ್ನೆ ಹೇಳಿಕೆ ನೀಡಿದ್ದ ಚೀನಾ, ಭಾರತ ಮತ್ತು ಪಾಕಿಸ್ತಾನ ಕಾಶ್ಮೀರ ವಿವಾದವನ್ನು ಕೂಡಲೇ ಬಗೆಹರಿಸಿಕೊಳ್ಳಬೇಕು ಎಂದು ಒತ್ತಾಯಿಸಿದೆ. ಕಳೆದ ಆಗಸ್ಟ್ 6ರಂದು ಎರಡು ಪ್ರತ್ಯೇಕ ಹೇಳಿಕೆ ಬಿಡುಗಡೆ ಮಾಡಿದ್ದ ಚೀನಾ ಒಂದರಲ್ಲಿ, ಲಡಾಕ್ ನ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಅಲ್ಲಿ ಚೀನಾದ ಪ್ರದೇಶ ಬರುತ್ತದೆ ಎಂದು ಉಲ್ಲೇಖಿಸಿತ್ತು. ಮತ್ತೊಂದು ಹೇಳಿಕೆಯಲ್ಲಿ, ಭಾರತ ಮತ್ತು ಪಾಕಿಸ್ತಾನ ಕಾಶ್ಮೀರ ವಿವಾದವನ್ನು ಮಾತುಕತೆ ಮೂಲಕ ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಒತ್ತಾಯಿಸಿತ್ತು. ಈ ಮಧ್ಯೆ ಚೀನಾ ಅಧ್ಯಕ್ಷರ ಆಗಮನ ಸಂದರ್ಭದಲ್ಲಿ ಏನೇನು ವಿಷಯಗಳು ಚರ್ಚೆಗೆ ಬರಲಿವೆ ಎಂಬುದು ಮಹತ್ವದ್ದಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا