Urdu   /   English   /   Nawayathi

ಮನೆ, ಮನದಲ್ಲಿ ಸ್ವಚ್ಛತೆ ಇರಲಿ

share with us

ಕಾರವಾರ: 22 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಸ್ವಚ್ಛತೆಯ ಮನೋಭಾವ ಮನೆಯಿಂದಲೇ ಆರಂಭವಾಗಬೇಕು. ನಂತರ ಊರು, ದೇಶವನ್ನು ಸ್ವಚ್ಛವಾಗಿಡಲು ಸಾಧ್ಯ ಎಂದು ಕಾರವಾರ ಉಪ ವಿಭಾಗಾಧಿಕಾರಿ ಬಿ.ಅಭಿಜಿನ್ ಹೇಳಿದರು. ಅಂತಾರಾಷ್ಟ್ರೀಯ ಕಡಲ ತೀರ ಸ್ವಚ್ಛತಾ ದಿನಾಚರಣೆಯ ಅಂಗವಾಗಿ ಕೋಸ್ಟ್​ಗಾರ್ಡ್​ನಿಂದ ನಗರದ ಟ್ಯಾಗೋರ್ ಕಡಲ ತೀರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೋಸ್ಟ್​ಗಾರ್ಡ್ ಕಮಾಂಡೆಂಟ್ ಸಿ.ಎಸ್. ಜೋಶಿ ಮಾತನಾಡಿ, ಯುವ ಜನರಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ಬೆಳಗ್ಗೆ 7 ರಿಂದ 9 ಗಂಟೆಯವರೆಗೆ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಕೋಸ್ಟ್​ಗಾರ್ಡ್, ಮೀನುಗಾರಿಕೆ, ಅರಣ್ಯ, ಕಂದಾಯ, ಕರಾವಳಿ ಪೊಲೀಸ್ ಪಡೆ, ನಗರಸಭೆ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಸಂಘಟನೆಗಳ ಮುಖಂಡರು ಸೇರಿ 2,450 ಸ್ವಯಂ ಸೇವಕರು ಸ್ವಚ್ಚತಾ ಕಾರ್ಯದಲ್ಲಿ ತೊಡಗಿಕೊಂಡರು. ಸುಮಾರು 4 ಟನ್ ಕಸವನ್ನು ಸಂಗ್ರಹಿಸಿದರು. ಅಂಕೋಲಾ ವರದಿ: ರಾಷ್ಟ್ರೀಯ ಕಡಲ ತೀರ ದಿನಾಚರಣೆ ನಿಮಿತ್ತ ಶನಿವಾರ ತಾಲೂಕಿನ ಕೇಣಿ ಗ್ರಾಮದ ಕಡಲ ಕಿನಾರೆಯಲ್ಲಿ ವಿವಿಧ ಇಲಾಖೆಗಳ ಆಶ್ರಯದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ತಹಸೀಲ್ದಾರ್ ಅಶೋಕ ಗುರಾಣಿ ಸ್ವಚ್ಛತೆಗೆ ಚಾಲನೆ ನೀಡಿದರು. ಪುರಸಭೆ ಮುಖ್ಯಾಧಿಕಾರಿ ಬಿ. ಪ್ರಹ್ಲಾದ, ವೈದ್ಯರಾದ ಡಾ. ಅನುಪಮಾ ನಾಯಕ, ಡಾ. ಅರ್ಚನಾ ನಾಯಕ, ಮೀನುಗಾರಿಕೆ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜಾ, ಶಿಕ್ಷಕರಾದ ಪಿ.ಪಿ. ಮಲ್ಯ, ಜಿ.ಆರ್. ತಾಂಡೇಲ, ಪ್ರಭಾಕರ ಬಂಟ, ಶಿರಸ್ತೇದಾರ ಎನ್.ಬಿ. ಗುನಗಾ ಇತರರಿದ್ದರು.

4.5 ಕ್ವಿಂಟಾಲ್ ಕಸ ಸಂಗ್ರಹ
ಅಂತಾರಾಷ್ಟ್ರೀಯ ಕಡಲ ತೀರ ಸ್ವಚ್ಛತಾ ದಿನಾಚರಣೆ ಅಂಗವಾಗಿ ಕರ್ನಾಟಕ ವಿಶ್ವ ವಿದ್ಯಾಲಯ ಸ್ನಾತಕೋತ್ತರ ಅಧ್ಯಯನ ಕೇಂದ್ರದಿಂದ ಎನ್​ಸಿಆರ್​ಸಿ ಸಹಯೋಗದಲ್ಲಿ ಕೋಡಿಬಾಗದ 1.5 ಕಿಮೀ ಕಡಲ ತೀರವನ್ನು ಸ್ವಚ್ಛ ಮಾಡಲಾಯಿತು. ಕೇಂದ್ರದ ಉಪನ್ಯಾಸಕರು, ವಿದ್ಯಾರ್ಥಿಗಳು ಸೇರಿ ಒಟ್ಟು 4.5 ಕ್ವಿಂಟಾಲ್​ನಷ್ಟು ಕಸ ಸಂಗ್ರಹಿಸಿದರು. ಅದರಲ್ಲಿ 4 ಕೆ.ಜಿ.ವೈದ್ಯಕೀಯ ತ್ಯಾಜ್ಯ, 84 ಕೆಜಿಯಷ್ಟು ಗ್ಲಾಸ್ ತ್ಯಾಜ್ಯಗಳು ಇರುವುದು ಆತಂಕ ಸೃಷ್ಟಿಸುವಂತಿತ್ತು. ಅಲ್ಲದೆ, ನಗರದ ವಿವಿಧೆಡೆ ಜಾಗೃತಿ ಜಾಥಾ ನಡೆಸಲಾಯಿತು. ಅಧ್ಯಯನ ಕೇಂದ್ರದ ಡಾ.ಜೆ.ಎಲ್.ರಾಠೋಡ್, ಡಾ.ಶಿವಕುಮಾರ ಹರಗಿ, ಡಾ.ಹನುಮಂತ ಮಸ್ತಾರಿ, ಡಾ.ಸುರೇಶ ಅರಕೆರಾ, ಡಾ.ಅನು ನಾಯಕ ಇತರರು ಇದ್ದರು.

ನೈರ್ಮಲ್ಯ ನಿರಂತರ ಪ್ರಕ್ರಿಯೆಯಾಗಲಿ
ಭಟ್ಕಳ: ಸ್ವಚ್ಛತೆ ನಿರಂತರ ಪ್ರಕ್ರಿಯೆ ಆಗಬೇಕು. ದಿನದ ಅವಿಬಾಜ್ಯ ಅಂಗವಾಗಬೇಕು. ಸಂಸ್ಕೃತಿಯಾಗಬೇಕು ಎಂದು ಭಟ್ಕಳ ಉಪವಿಭಾಗಾಧಿಕಾರಿ ಸಾಜಿದ್ ಅಹ್ಮದ್ ಮುಲ್ಲಾ ಹೇಳಿದರು. ಮುರ್ಡೆಶ್ವರ ಕಡಲ ತೀರದಲ್ಲಿ ಸ್ವಚ್ಛತಾ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದಲ್ಲಿ ಇಂದು ಸ್ವಚ್ಛತಾ ಕಾರ್ಯಕ್ರಮಕ್ಕೆ ಹೆಚ್ಚಿನ ಕಾಳಜಿ ತೋರಿಸುತ್ತಿರುವುದು ಹೆಮ್ಮೆಯ ಸಂಗತಿ. ವಾರಕ್ಕೊಮ್ಮೆಯಾದರೂ ಸ್ವಚ್ಛತೆ ಮಾಡಿ ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಮುರ್ಡೆಶ್ವರ ವಿಶ್ವ ಪ್ರಸಿದ್ಧವಾಗಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ಸಮುದ್ರ ತೀರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಹೊಣೆ. ಈ ವರ್ಷ ತಾಲೂಕು ಮಟ್ಟದ ಅಧಿಕಾರಿಗಳು, ಪುರಸಭೆಯ ಅಧಿಕಾರಿಗಳು, ಪೌರ ಕಾರ್ವಿುಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಸಂತಸದ ಸಂಗತಿ ಎಂದರು. ತಹಸೀಲ್ದಾರ್ ವಿ.ಪಿ. ಕೊಟ್ರಹಳ್ಳಿ, ಪುಸರಸಭೆ, ತಾಪಂ, ಎ.ಸಿ. ಕಚೇರಿ ಸಿಬ್ಬಂದಿ, ಕರಾವಳಿ ಪಡೆ, ಮಾವಳ್ಳಿ ಪಂಚಾಯಿತಿ, ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ಲಯನ್ಸ್ ಕ್ಲಬ್, ಬೀಚ್ ರಕ್ಷಣಾ ಸಿಬ್ಬಂದಿ ಸೇರಿ 100ಕ್ಕೂ ಅಧಿಕ ಜನ ಶ್ರಮದಾನ ಮಾಡಿದರು.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا