Urdu   /   English   /   Nawayathi

ಒನ್'ವೇನಲ್ಲಿ ಆಟೋ: ಚಾಲಕನ ಮೇಲೆ ಪೊಲೀಸ್ ಹಲ್ಲೆ, ವಿಡಿಯೋ ವೈರಲ್

share with us

ಬೆಂಗಳೂರು: 21 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಒನ್'ವೇ ರಸ್ತೆಯಲ್ಲಿ ಆಟೋ ಚಾಲಕನೊಬ್ಬ ವಾಹನ ಚಲಾಯಿಸಿದ್ದಾನೆಂದು ಆರೋಪಿಸಿ ಚಾಲಕನ ಮೇಲೆ ಟ್ರಾಫಿಕ್ ಹೆಡ್ ಕಾನ್'ಸ್ಟೇಬಲ್ ವೊಬ್ಬರು ರೌದ್ರಾವತಾರ ಪ್ರದರ್ಶಿಸಿರುವ ಘಟನೆ ನಗರದ ಕಾರ್ಪೇರೇಷನ್ ವೃತ್ತ ಸಮೀಪ ಶುಕ್ರವಾರ ನಡೆದಿದೆ. ಹಲಸೂರು ಗೇಟ್ ಸಂಚಾರ ಠಾಣೆ ಹೆಡ್ ಕಾನ್'ಸ್ಟೇಬಲ್ ಮಹಾಸ್ವಾಮಿ ವಿರುದ್ಧ ಆರೋಪ ಕೇಳಿಬಂದಿದ್ದು, ಕುಂಬಾರ ಓಣಿಯಿಂದ ಸರಕು ತುಂಬಿಕೊಂಡು ಹಡ್ಸನ್ ವೃತ್ತ ಕಡೆಗೆ ಆಟೋ ತೆರಳುವಾಗ ಘಟನೆ ನಡೆದಿದೆ. ಮಹಾಸ್ವಾಮಿ ಚಾಲಕನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ದೈಹಿಕವಾಗಿ ಹಲ್ಲೆ ನಡೆಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸರಕು ತುಂಬಿಕೊಂಡು ಕುಂಬಾರ ಓಣಿ ಕಡೆಯಿಂದ ಶುಕ್ರವಾರ ಮಧ್ಯಾಹ್ನ 12.30ರ ಸುಮಾರಿಗೆ ಹಡ್ಸನ್ ಜಂಕ್ಷನ್ ಕಡೆಗೆ ಆಟೋ ಚಾಲಕ ತೆರಳುತ್ತಿದ್ದ. ಈ ವೇಳೆ ಒನ್ ವೇ ರಸ್ತೆಯಲ್ಲಿ ಬಂದ ಆತನನ್ನು ಹೆಡ್ ಕಾನ್'ಸ್ಟೇಬಲ್ ಮಹಾಸ್ವಾಮಿ ತಡೆದಿದ್ದಾರೆ. ಇದಕ್ಕೆ ಆಕ್ಷೇಪಿಸಿದ ಚಾಲಕ, ನಾನು ಬರುವುದೇ ಹೀಗೆ, ಏನ್ ಬೇಕಾದರೂ ಮಾಡಿಕೊ ಎಂದು ಧಿಮಾಕು ತೋರಿಸಿದ್ದಾನೆ. ಚಾಲಕನ ಮಾತಿನಿಂದ ಕೆರಳಿದ ಮಹಾಸ್ವಾಮಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಅಲ್ಲದೆ, ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡು ಚಾಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೇಂದ್ರೀಯ ಸಂಚಾರ ವಿಭಾಗದ ಎಸಿಪಿ, ವಿಡಿಯೋ ನಮ್ಮ ಗಮನಕ್ಕೆ ಬಂದಿದೆ. ಒನ್'ವೇ ರಸ್ತೆಯಲ್ಲಿ ಚಾಲಕ ವಾಹನ ಚಲಾಯಿಸಿದ್ದಾನೆ. ಹೀಗಾಗಿ ಟ್ರಾಫಿಕ್ ಪೊಲೀಸರು ಹಲಸೂರು ಗೇಟ್ ಠಾಣೆ ಬಳಿ ವಾಹನವನ್ನು ತಡೆದು, ದಂಡ ಹಾಕಲು ಮುಂದಾಗಿದ್ದಾರೆ. ಪೊಲೀಸರು ತಡೆದರೂ ಚಾಲಕ ವಾಹನ ಚಲಾಯಿಸಲು ಮುಂದಾಗಿದ್ದಾರೆ. ರಸ್ತೆ ಬಲಬದಿಗೆ ವಾಹನ ನಿಲ್ಲಿಸುವಂತೆ ತಿಳಿಸಿದ್ದರೂ, ಎಡಬದಿಯಲ್ಲಿ ವಾಹನ ಚಲಾಯಿಸಲು ಆರಂಭಿಸಿದ್ದಾರೆ. ಬಳಿಕ ಪೊಲೀಸರನ್ನೇ ನಿಂದಿಸಿದ್ದಾನೆ. ಹೀಗಾಗಿ ಪೇದೆ ಅತನ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೇದೆ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا