Urdu   /   English   /   Nawayathi

ಪಶ್ಚಿಮಘಟ್ಟದ 5 ಬೆಟ್ಟಗಳಲ್ಲಿ ಜಲಸ್ಫೋಟ

share with us

ಪುತ್ತೂರು: 18 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ 16 ಗ್ರಾಮಗಳು ಭಾರಿ ಪ್ರವಾಹಕ್ಕೆ ಸಿಲುಕಿ ಸಂಭವಿಸಿದ ಭಾರಿ ಹಾನಿಗೆ ನದಿಮೂಲದಲ್ಲೇ ಸಂಭವಿಸಿದ ಜಲಸ್ಫೋಟ ಕಾರಣವೆಂಬ ಅಂಶ ಬೆಳಕಿಗೆ ಬಂದಿದೆ. ಪಶ್ಚಿಮಘಟ್ಟದ ಪ್ರಮುಖ 5 ಬೆಟ್ಟಗಳಲ್ಲಿ ಜಲಸ್ಫೋಟ ನಡೆದಿದೆ. ದ.ಕ, ಚಿಕ್ಕಮಗಳೂರು ಗಡಿಭಾಗದ ಬೆಟ್ಟಗಳಿಂದ ನೇತ್ರಾವತಿ ನದಿಯ ಉಪನದಿಗಳು ಹರಿಯುತ್ತಿದ್ದು, ಜಲಸ್ಫೋಟದ ಪರಿಣಾಮ ನದಿ ಮೂಲದಲ್ಲೇ ಏಕಾಏಕಿ ಅಪಾರ ಪ್ರಮಾಣದ ನೀರು ಹರಿದಿದ್ದರಿಂದ ಈ ವ್ಯಾಪ್ತಿಯ ಪ್ರದೇಶಗಳೆಲ್ಲ ವ್ಯಾಪಕ ಹಾನಿಗೊಳಗಾಗಿವೆ. ದ.ಕ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ದುರ್ಗದ ಬೆಟ್ಟ, ಬಾಳೆಗುಡ್ಡ, ಚಿಕ್ಕಮಗಳೂರು ವ್ಯಾಪ್ತಿಯ ದೊಡ್ಡೇರಿ ಬೆಟ್ಟ, ರಾಮನಗುಡ್ಡ, ಹೊಸಮನೆ ಗುಡ್ಡ ಪೂರ್ಣ ಪ್ರಮಾಣದಲ್ಲಿ ಬಿರುಕು ಬಿಟ್ಟು ಶೇಖರಣೆಯಾಗಿದ್ದ ನೀರು ಒಮ್ಮಿಂದೊಮ್ಮೆಲೇ ಸ್ಫೋಟಗೊಂಡು ಹರಿದಿದೆ. ಈ ಬೆಟ್ಟಗಳಿಂದ ಹರಿಯುವ ನದಿಗಳು ನೇತ್ರಾವತಿಯ ಮೂಲವಾಗಿದ್ದು, ಬೆಳ್ತಂಗಡಿ ತಾಲೂಕಿನ 16 ಗ್ರಾಮಗಳ ಮೂಲಕವೇ ಹರಿದು ಅರಬ್ಬಿ ಸಮುದ್ರ ಸೇರುತ್ತವೆ. ಏಕಾಏಕಿ ಭಾರಿ ಪ್ರಮಾಣದ ನೀರು ಹರಿದುಬಂದಿದ್ದರಿಂದ ಅಪಾರ ಹಾನಿ ಸಂಭವಿಸಿದೆ.

ದುರ್ಗದ ಬೆಟ್ಟ ಇಬ್ಭಾಗ: ಜಲಸ್ಫೋಟದ ಪರಿಣಾಮ ದುರ್ಗದ ಬೆಟ್ಟ ಇಬ್ಭಾಗವಾಗಿದ್ದು, ಸುಮಾರು 60 ಪ್ರದೇಶದಲ್ಲಿ ಗುಡ್ಡ ಕುಸಿತವಾಗಿದೆ. ಈ ಬೆಟ್ಟದ ಒಂದು ಪಾಶ್ವ ದ.ಕ ಜಿಲ್ಲಾ ವ್ಯಾಪ್ತಿಯಲ್ಲಿರುವುದರಿಂದ, ಹೊರಹೊಮ್ಮಿದ ಅಪಾರ ಪ್ರಮಾಣದ ನೀರು ಕುಕ್ಕಾವು, ಕಡಿರುದ್ಯಾವರ, ಮಕ್ಕಿ, ಪರ್ಲ, ದೈಪಿತ್ತಿಲಿನ ಮೂಲಕ ಸಾಗಿ ಭೂಪ್ರದೇಶಕ್ಕೆ ಹಾನಿಯಾಗಿದೆ. ಮತ್ತೊಂದು ಪಾಶ್ವದಲ್ಲಿ ಚಿಕ್ಕಮಗಳೂರಿನ ಮಧುಗುಂಡಿ ವ್ಯಾಪ್ತಿಯಲ್ಲಿ ನಾಶವಾಗಿದೆ. ಮಧುಗುಂಡಿ ಪ್ರದೇಶವು ದುರ್ಗದ ಬೆಟ್ಟ ಹಾಗೂ ರಾಮನಗುಡ್ಡದ ಮಧ್ಯಭಾಗ. ರಾಮನಗುಡ್ಡ ಪ್ರದೇಶದಲ್ಲಿ 7 ಕಡೆ ಜಲಸ್ಫೋಟಗೊಂಡಿದ್ದು, 7 ಹೊಸ ನದಿಗಳ ಉಗಮವಾಗಿದೆ. ದುರ್ಗದ ಬೆಟ್ಟ ಹಾಗೂ ರಾಮನಗುಡ್ಡದಿಂದ ಹರಿದ ನೀರು ಮಧುಗುಂಡಿ ಮೂಲಕ ನೇರವಾಗಿ ಅಣಿಯೂರು ಹೊಳೆ ಸೇರಿದೆ.

ಅಣಿಯೂರು ನದಿಮೂಲ ಕುಸಿತ: ಅಣಿಯೂರು ನದಿಯ ಮೂಲ ಮಲೆಮನೆ ಬೆಟ್ಟ. ಮಲೆಮನೆ ಕಾಡು ಹಾಗೂ ಬಾಳೇರು ಕಾಡು ಮಧ್ಯೆ ಇರುವ ಬೆಟ್ಟ ಪ್ರದೇಶದಲ್ಲಿ ಅಣಿಯೂರು ಹೊಳೆ ಆರಂಭಗೊಳ್ಳುತ್ತದೆ. ಮುಂದೆ ಸಾಗಿದಂತೆ ದೊಡ್ಡೇರಿ ಬೆಟ್ಟ, ರಾಮನಗುಡ್ಡ, ಹೊಸಮನೆಗುಡ್ಡ, ಹೊಸಮನೆ ಗುಡ್ಡದ ತೊರೆಗಳೂ ಸೇರುತ್ತವೆ. ಆಗಸ್ಟ್ 9ರಂದು ದೊಡ್ಡೇರಿ ಬೆಟ್ಟ, ರಾಮನಗುಡ್ಡ, ಹೊಸಮನೆಗುಡ್ಡ, ಹೊಸಮನೆ ಗುಡ್ಡದಲ್ಲಿ ಏಕಕಾಲದಲ್ಲಿ ಜಲಸ್ಫೋಟ ಸಂಭವಿಸಿದಾಗ ಸಣ್ಣ ತೊರೆಗಳೆಲ್ಲ ಬೃಹತ್ ನದಿಗಳಾಗಿ ಹರಿದಿವೆ. ಬೆಟ್ಟದ ತಗ್ಗು ಪ್ರದೇಶದಲ್ಲಿ ಅಪಾರ ಪ್ರಮಾಣದ ಕಲ್ಲು, ಮಣ್ಣು ಅಲೆಕಾನದಿಂದ ಬಾಂಜಾರುಮಲೆವರೆಗೆ ಹರಿದು ಅಲ್ಲಲ್ಲಿ ಶೇಖರಣೆಗೊಂಡಿದೆ. ನೀರು ಮಾತ್ರ ನೆರಿಯ ಮುಂಡಾಜೆ ಪ್ರದೇಶದಲ್ಲಿ ಹೆಚ್ಚಿನ ಹಾನಿ ಸಂಭವಿಸುವಂತೆ ಮಾಡಿದೆ. ಇದೇ ವೇಳೆ ಅಣಿಯೂರು ನದಿ ಮೂಲ ಮಲೆಮನೆ ಕಾಡು ಹಾಗೂ ಬಾಳೇರು ಕಾಡು ಪೂರ್ಣ ಪ್ರಮಾಣದಲ್ಲಿ ಸುಮಾರು 35 ಕಡೆ ಕುಸಿದಿದ್ದು, ಇಡಿ ಅಣಿಯೂರು ನದಿಯೇ ಪ್ರವಾಹದ ಮೂಲವಾಗಿ ಪರಿಣಮಿಸಿತ್ತು.

ಇನೂ ನಡೆಯದ ಸಂಶೋಧನೆ: ಪಶ್ಚಿಮಘಟ್ಟದ ಪ್ರಮುಖ 5 ಬೆಟ್ಟಗಳಲ್ಲಿ ನಡೆದ ಜಲಸ್ಫೋಟದ ಕಾರಣ ತಿಳಿಯಲು ಸರ್ಕಾರದಿಂದ ಇನ್ನೂ ಸಂಶೋಧನೆ ನಡೆದಿಲ್ಲ. ಇದಕ್ಕೆ ಕಾರಣ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು. ಮೂಲಗಳ ಪ್ರಕಾರ ಈ ಬೆಟ್ಟಗಳು ಶೇ.60ರಷ್ಟು ಈಗಾಗಲೇ ಅತಿಕ್ರಮಣ ನಡೆದಿದ್ದು, ಎಸ್ಟೇಟ್ ಉದ್ಯಮ, ಸ್ವಾಭಾವಿಕವಲ್ಲದ ಕೃಷಿ ಚಟುವಟಿಕೆ ನಡೆದಿರುವುದು ಕಾರಣ. ಈ ಬೆಟ್ಟಗಳಲ್ಲಿ 1998-99ರ ವೇಳೆ 160ಕ್ಕೂ ಅಧಿಕ ಜಲಪಾತಗಳಿದ್ದು, ಅತಿಕ್ರಮಣಕಾರರ ಪ್ರಭಾವದಿಂದ 2012ರ ವೇಳೆಗೆ ಜಲಪಾತಗಳ ಸಂಖ್ಯೆ 48ಕ್ಕೆ ಇಳಿದಿತ್ತು ಎಂದು ಪರಿಸರವಾದಿ ದಿನೇಶ್ ಹೊಳ್ಳ ಹೇಳುತ್ತಾರೆ. ಯಾಂತ್ರೀಕೃತವಾಗಿ ಭೂ ಸಂರಚನೆ ಬದಲಾವಣೆಯಿಂದ ಭೂ ಮೇಲೆ ಹಾಗೂ ಭೂ ಅಂತರಾಳದಲ್ಲಿ ಸ್ವಾಭಾವಿಕವಾಗಿ ಹರಿಯುತ್ತಿದ್ದ ನೀರಿನ ಮೂಲಗಳಿಗೆ ತೊಂದರೆಯಾಗಿದ್ದು, ನೀರಿನ ಒತ್ತಡ ಹೆಚ್ಚಾದಾಗ ಬೆಟ್ಟದ ಯಾವುದೋ ಮೂಲದಿಂದ ಒಮ್ಮಿಂದೊಮ್ಮೆಲೆ ಸ್ಫೋಟಗೊಳ್ಳುವುದು ಪ್ರಕೃತಿ ನಿಯಮ. ಈ ಬಾರಿ ಪಶ್ಚಿಮಘಟ್ಟದಲ್ಲೂ ಇದೇ ರೀತಿ ನಡೆದಿದೆ. ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಿ, ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಇಂತಹ ದುರ್ಘಟನೆ ಮತ್ತೆ ಸಂಭವಿಸುವುದಂತೂ ಸತ್ಯ. ಇದರಲ್ಲಿ ಅನುಮಾನವೇ ಬೇಡ.
– ಪ್ರೊ. ಗಂಗಾಧರ್ ಭಟ್, ಭೂ ವಿಜ್ಞಾನಿ, ಮಂಗಳೂರು ವಿವಿ ಸಾಗರ ಭೂ ವಿಜ್ಞಾನ ವಿಭಾಗ ಪ್ರಾಧ್ಯಾಪಕ

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا