Urdu   /   English   /   Nawayathi

ಸಮೀಕ್ಷಾ ವರದಿಗೆ ತರಾತುರಿ ಬೇಡ

share with us

ಹಳಿಯಾಳ: 14 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ತಾಲೂಕಿನ ಎಲ್ಲ ಇಲಾಖೆಗಳು ನೆರೆ ಹಾಗೂ ಅತಿವೃಷ್ಟಿಯಿಂದಾದ ಹಾನಿಯ ಸಮೀಕ್ಷಾ ವರದಿಯನ್ನು ತರಾತುರಿಯಿಂದ ನೀಡದೆ ಕೂಲಂಕಷವಾಗಿ ಪರಿಶೀಲಿಸಿ ಸಮಗ್ರ ವರದಿಯನ್ನು ಸರ್ಕಾರಕ್ಕೆ ಕಳುಹಿಸಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು. ಮಿನಿವಿಧಾನ ಸೌಧದಲ್ಲಿ ಗುರುವಾರ ಜರುಗಿದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮನೆಹಾನಿ ಇತ್ಯಾದಿಗಳ ವರದಿಯನ್ನು ಮಂಡಿಸುವಾಗ ರೇಷನ್ ಕಾರ್ಡ್ ಮೊದಲಾದವುಗಳನ್ನು ಕಡ್ಡಾಯವಾಗಿ ಪರಿಗಣಿಸುವುದು ಸೂಕ್ತವಲ್ಲ. ನೆರೆ ಹಾಗೂ ಅತಿವೃಷ್ಟಿ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಘೊಷಿಸಿರುವ ಹೊಸ ಆದೇಶವನ್ನು ಬಹು ಬೇಗನೆ ಜಾರಿಗೊಳಿಸಲಿ ಎಂದು ಈ ಸಭೆಯ ಮೂಲಕ ರಾಜ್ಯ ಸರ್ಕಾರವನ್ನು ಆಗ್ರಹಿಸುವುದಾಗಿ ತಿಳಿಸಿದರು. ಸಂತ್ರಸ್ತರಿಗೆ ಅವರ ಅವಶ್ಯಕತೆಯ ಸಮಯದಲ್ಲಿ ಪರಿಹಾರ ನೀಡಬೇಕು. ಅದನ್ನು ಬಿಟ್ಟು ಅವಧಿ ಮೀರಿ ಪರಿಹಾರ ನೀಡಿದರೆ ಪ್ರಯೋಜನವಿಲ್ಲ. ಕೆಸರೊಳ್ಳಿ ಗ್ರಾಮದ ನೆರೆ ಸಂತ್ರಸ್ತರಿಗೆ ವಸತಿ ಕಲ್ಪಿಸಲು ಸರ್ಕಾರಿ ಜಮೀನಿನ ಪರಿಶೀಲನೆ ನಡೆಸಿ ವಾರದೊಳಗೆ ವರದಿಯನ್ನು ನೀಡುವಂತೆ ತಹಸೀಲ್ದಾರ್ ಮತ್ತು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಆದೇಶಿಸಿದರು. ತಾಲೂಕಿನ ಸಾಕಷ್ಟು ಭಾಗದಲ್ಲಿ ಬೆಳೆಹಾನಿಯ ಸಮೀಕ್ಷೆಯನ್ನು ನಡೆಸಲು ಕೃಷಿ ಇಲಾಖೆ ಸಿಬ್ಬಂದಿ ಬಂದಿಲ್ಲ ಎಂಬ ದೂರುಗಳು ಗ್ರಾಮಸ್ಥರಿಂದ ಕೇಳಿ ಬರುತ್ತಿದ್ದು, ಸರಿಯಾದ ಸಮೀಕ್ಷೆ ನಡೆಸಿ ವರದಿ ನೀಡಲು ಸೂಚಿಸಿದರು.

ನೆರೆ-ಮಳೆ ಹಾನಿ: ನೆರೆ ಮತ್ತು ಅತಿವೃಷ್ಟಿಯಿಂದಾಗಿ ತಾಲೂಕಿನಲ್ಲಿ ಈ ಬಾರಿ ಭತ್ತ, ಕಬ್ಬು, ಗೋವಿನಜೋಳ, ಹತ್ತಿ ಬೆಳೆಯಲ್ಲಿ ಸರಾಸರಿ ಶೇ. 20 ರಿಂದ 25 ರಷ್ಟು ಇಳುವರಿ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ಕೃಷಿ ಸಹಾಯಕ ನಿರ್ದೇಶಕ ಪಿ.ಐ. ಮಾನೆ ತಿಳಿಸಿದರು. ತೋಟಗಾರಿಕಾ ಅಧಿಕಾರಿ ಗಿರಿಯಾಲ ಇಲಾಖೆಯ ವರದಿಯನ್ನು ಮಂಡಿಸಿ, ತಾಲೂಕಿನಲ್ಲಿ ಅಂದಾಜು 75 ಎಕರೆ ತೋಟಗಾರಿಕಾ ಬೆಳೆ ಹಾನಿಯನ್ನು ಅನುಭವಿಸಿದೆ. ತಟ್ಟಿಹಳ್ಳದ ಪಾತ್ರದಲ್ಲಿರುವ ಮಾವಿನ ತೋಟಗಳು ಸಂಪೂರ್ಣವಾಗಿ ನೆಲಕಚ್ಚಿವೆ ಎಂದರು. ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಇಲಾಖೆಯ ವರದಿ ನೀಡಿ, ಹಳಿಯಾಳ ಮತ್ತು ದಾಂಡೇಲಿ ತಾಲೂಕಿನಲ್ಲಿ ಮನೆಹಾನಿಯ 852 ಪ್ರಕರಣಗಳು ದಾಖಲಾಗಿದ್ದು, ಸರ್ಕಾರದ ನಿಯಮಾವಳಿಯಂತೆ ಸಂತ್ರಸ್ತರಿಗೆ ಪರಿಹಾರ ನೀಡಲಾಗಿದೆ ಎಂದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ಮಹೇಶ ಕುರಿಯವರ ಮಾತನಾಡಿ, ವಸತಿ ಯೋಜನೆಯಲ್ಲಿ ತಾಲೂಕಿನಲ್ಲಿ 616 ಮನೆಗಳ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಈ ಮನೆಗಳ ನಿರ್ವಣಕ್ಕೆ ವಿವಿಧ ಹಂತದಲ್ಲಿ ಬರಬೇಕಾಗಿದ್ದ ಬಾಕಿ 3.26 ಕೋಟಿ ರೂ. ಅನುದಾನ ಬಿಡುಗಡೆಯಾಗಬೇಕಾಗಿದೆ ಎಂದರು. ಪಶು ಸಂಗೋಪನಾ ಇಲಾಖೆಯ ಪ್ರಭಾರಿ ಅಧಿಕಾರಿ ಡಾ.ನಧಾಪ್ ಮಾತನಾಡಿ, ತಟ್ಟಿಹಳ್ಳದ ಪಾತ್ರದಲ್ಲಿರುವ ಗ್ರಾಮಗಳ 4800 ಜಾನುವಾರಗಳಿಗೆ ಮುಂಜಾಗ್ರತೆ ಕ್ರಮವಾಗಿ ಗಂಟಲು ಬೇನೆಯ ಲಸಿಕೆ ಹಾಕಲಾಗಿದೆ ಎಂದರು. ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ ಆರ್.ಎಚ್. ಕುಲಕಣಿ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರವೀಂದ್ರ ಮೆಟಗುಡ್ಡ, ದಾಂಡೇಲಿ ಹೆಸ್ಕಾಂ ಅಧಿಕಾರಿ ಪ್ರಕಾಶ ಮಲ್ಯ, ಪುರಸಭಾ ಮುಖ್ಯಾಧಿಕಾರಿ ಕೇಶವ ಚೌಗಲೆ, ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಮುಲ್ಲಾ, ವಲಯ ಅರಣ್ಯಾಧಿಕಾರಿ ಪ್ರಸನ್ನ ಸುಬೇದಾರ ಇಲಾಖೆ ವರದಿ ಮಂಡಿಸಿದರು. ಸಹಾಯಕ ಆಯುಕ್ತ ಅಭಿಜಿನ್, ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯೆ ಲಕ್ಷ್ಮೀ ಕೊರ್ವೆಕರ, ಮಹೇಶ್ವರಿ ಮಿಶಾಳೆ, ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ಉಪಾಧ್ಯಕ್ಷೆ ನೀಲವ್ವ ಮಡಿವಾಳ, ದಯಾನಂದ ಜಾವಳೇಕರ, ಬಾಬು ಪಾಟೀಲ, ಗಿರೀಶ ಠೊಸುರ, ದೇಮಾಣಿ ಶಿರೋಜಿ, ಕೆಡಿಪಿ ಸಮಿತಿ ಸದಸ್ಯ ವಾಮನ ಮಿರಾಶಿ, ಪುರಸಭಾ ಸದಸ್ಯರು ಉಪಸ್ಥಿತರಿದ್ದರು.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا