Urdu   /   English   /   Nawayathi

ದುಬಾರಿ ದಂಡಕ್ಕೆ ಬ್ರೇಕ್‌; ಜನರ ಪ್ರತಿರೋಧಕ್ಕೆ ತಲೆಬಾಗಿದ ಸರ್ಕಾರ

share with us

ಬೆಂಗಳೂರು: 14 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಸಾರ್ವಜನಿಕರ ಪ್ರತಿರೋಧಕ್ಕೆ ತಲೆಬಾಗಿರುವ ರಾಜ್ಯ ಸರ್ಕಾರವು ಸಂಚಾರ ನಿಯಮ ಉಲ್ಲಂಘನೆಯ ದಂಡ ಪ್ರಮಾಣವನ್ನು ತಕ್ಷಣವೇ ಇಳಿಸಲು ನಿರ್ಧರಿಸಿದ್ದು, ಸೆ. 4 ಕ್ಕೂ ಹಿಂದೆ ಇದ್ದ ನಿಯಮವನ್ನೇ ಮುಂದುವರಿಸಿದೆ. ಸರ್ಕಾರದ ಈ ನಿರ್ಧಾರದಿಂದ ಸಾರ್ವಜನಿಕರು ನಿರಾಳರಾಗಿದ್ದು, ಬೆಂಗಳೂರು ಸೇರಿದಂತೆ ಹಲವು ನಗರ ಮತ್ತು ಪಟ್ಟಣಗಳಲ್ಲಿ ಶುಕ್ರವಾರ ದಂಡ ವಸೂಲಿ ಕಾರ್ಯಾಚರಣೆಗೆ ಸಂಚಾರ ಪೊಲೀಸ್‌ ಪಡೆ ಹೆಚ್ಚಿನ ಸಂಖ್ಯೆಯಲ್ಲಿ ಇಳಿಯಲಿಲ್ಲ. ಆದರೆ, ಈ ರಿಯಾಯ್ತಿ ತಾತ್ಕಾಲಿಕವಾಗಿದ್ದು ದಂಡ ಪ್ರಮಾಣವನ್ನು ಪರಿಷ್ಕರಿಸುವವರೆಗೆ ಜಾರಿಯಲ್ಲಿ ಇರಲಿದೆ. ಸಾರ್ವಜನಿಕರಿಗೆ ಹೆಚ್ಚು ಹೊರೆಯಾಗದಂತೆ ಆದರೆ ನಿಯಮ ಉಲ್ಲಂಘನೆ ಮಾಡಿದವರಿಗೆ ಬಿಸಿ ಮುಟ್ಟಿಸುವ ರೀತಿಯಲ್ಲಿ ಪರಿಷ್ಕರಿಸಲಾಗುವುದು ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ. ಕೇಂದ್ರ ಮೋಟಾರು ವಾಹನ (ತಿದ್ದುಪಡಿ) ಮಸೂದೆಯ ಅನ್ವಯ ಜಾರಿಗೊಳಿಸಿದ ದಂಡ ಪ್ರಮಾಣದ ಬಗ್ಗೆ ರಾಜ್ಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಗುಜರಾತ್‌ ಸರ್ಕಾರವು ಕೇಂದ್ರದ ನಿಯಮವನ್ನು ಯಥಾವತ್ತು ಜಾರಿ ಮಾಡದೇ ದಂಡದ ಪ್ರಮಾಣವನ್ನು ಶೇ 20 ರಿಂದ ಶೇ 90 ರಷ್ಟು ಇಳಿಸಿತ್ತು. ಆದರೆ ಯಾವುದೇ ಬಿಜೆಪಿಯೇತರ ರಾಜ್ಯ ಸರ್ಕಾರಗಳೂ ಅನುಷ್ಠಾನಕ್ಕೆ ಮುಂದಾಗಲಿಲ್ಲ. ಎರಡು ದಿನಗಳ ಹಿಂದೆ ಸಾರಿಗೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ದಂಡ ಪ್ರಮಾಣದ ಹೊರೆಯನ್ನು ತಗ್ಗಿಸಬೇಕು. ಇದಕ್ಕಾಗಿ ಗುಜರಾತ್‌ ಮಾದರಿಯ ಪರಿಷ್ಕರಣೆಗೆ ಆದೇಶ ಪ್ರತಿಗಳನ್ನು ತರಿಸಿ ಅಧ್ಯಯನ ನಡೆಸಿ ಎಂದೂ ಸಲಹೆ ನೀಡಿದ್ದರು. ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಸಾರಿಗೆ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ‘ಗುಜರಾತ್‌ ಮತ್ತು ಇತರ ರಾಜ್ಯಗಳಲ್ಲಿ ಸಂಚಾರ ನಿಯಮ ದಂಡ ಪ್ರಮಾಣ ಪರಿಷ್ಕರಣೆಯ ಆದೇಶ ಪ್ರತಿಗಳನ್ನು ತರಿಸಿ, ಅಧ್ಯಯನ ನಡೆಸಲಾಗುವುದು. ಆ ಬಳಿಕವೇ ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದೆ. ಪರಿಷ್ಕೃತ ದಂಡ ನಿಯಮವನ್ನು ಜಾರಿಗೆ ಬರುವ ತನಕ ಹಿಂದಿನ ನಿಯಮವೇ ಮುಂದುವರಿಯಲಿದೆ. ದಂಡ ನಿಯಮ ಪರಿಷ್ಕರಣೆಗೆ ಕಾಲಮಿತಿ ಹಾಕಿಕೊಂಡಿಲ್ಲ’ ಎಂದರು. 

ರಾಜ್ಯದಲ್ಲಿ ಜುಲೈನಲ್ಲಿ ಕೆಲವು ರೀತಿಯ ಸಂಚಾರ ನಿಯಮಗಳ ಉಲ್ಲಂಘನೆಗೆ ದಂಡ ಮೊತ್ತವನ್ನು ಪರಿಷ್ಕರಿಸಲಾಗಿತ್ತು. ಆ ದಂಡದ ಪ್ರಮಾಣವೇ ಮುಂದುವರಿಯಲಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ. ರಸ್ತೆ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ‘ಮೋಟಾರು ವಾಹನ (ತಿದ್ದುಪಡಿ) ಮಸೂದೆ 2019’ ಕ್ಕೆ ಸಂಸತ್ತು ಒಪ್ಪಿಗೆ ನೀಡಿತ್ತು. ಈ ಕಾನೂನು ಹಲವು ರಾಜ್ಯಗಳಲ್ಲಿ ಜಾರಿಗೆ ಬಂದಿದೆ. 

ರಾಜ್ಯದ ವಿವೇಚನೆಗೆ

ಕೇಂದ್ರದ ನಿಯಮವನ್ನು ಮಾರ್ಪಾಡು ಮಾಡಿ ಜಾರಿಗೆ ತರುವ ಅಧಿಕಾರವನ್ನು ರಾಜ್ಯಗಳಿಗೇ ನೀಡಲಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.

ಬಿಜೆಪಿ ಸರ್ಕಾರಗಳದ್ದೂ ವಿರೋಧ

* ಗುಜರಾತ್‌ನಲ್ಲಿ ಈಗಾಗಲೇ ದಂಡದ ಮೊತ್ತವನ್ನು ಕಡಿಮೆ ಮಾಡಲಾಗಿದೆ

* ಉತ್ತರಾಖಂಡದ ಬಿಜೆಪಿ ಸರ್ಕಾರ ಬುಧವಾರವೇ ದಂಡದ ಮೊತ್ತವನ್ನು ಕಡಿಮೆ ಮಾಡಿತ್ತು

* ಎನ್‌ಡಿಎ ಆಡಳಿತವಿರುವ ಬಿಹಾರವು ದಂಡದ ಮೊತ್ತವನ್ನು ಇಳಿಕೆ ಮಾಡಲು ನಿರ್ಧರಿಸಿದೆ

* ಬಿಜೆಪಿ ಸರ್ಕಾರವಿರುವ ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಂಚಾರ ನಿಯಮಗಳ ಉಲ್ಲಂಘನೆಗಳ ದಂಡದ ಮೊತ್ತವನ್ನು ಕಡಿಮೆ ಮಾಡಲು ಆದೇಶಿಸಿದ್ದಾರೆ

* ಭಾರಿ ಮೊತ್ತದ ದಂಡವು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರವು ತಕ್ಷಣವೇ ದಂಡದ ಮೊತ್ತವನ್ನು ಕಡಿಮೆ ಮಾಡಬೇಕು ಎಂದು ಮಹಾರಾಷ್ಟ್ರದ ಬಿಜೆಪಿ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ

* ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಆದರೆ, ಭಾರಿ ದಂಡದಿಂದ ಸಂಚಾರದಲ್ಲಿ ಶಿಸ್ತು ಮೂಡಿದೆ ಎಂದು ಅವರು ಹೇಳಿದ್ದಾರೆ

* ಹರಿಯಾಣ ಸರ್ಕಾರ ಭಾರಿ ದಂಡವನ್ನು ಹಿಂಪಡೆಯುವುದಿಲ್ಲ ಎಂದು ಹೇಳಿದೆ

ವಿಪಕ್ಷ ಸರ್ಕಾರಗಳ ನಿರಾಕರಣೆ

* ಈ ಕಾಯ್ದೆಯನ್ನು ಜಾರಿಗೆ ತರುವುದಿಲ್ಲ ಎಂದು ಟಿಎಂಸಿ ಆಡಳಿತವಿರುವ ಪಶ್ಚಿಮ ಬಂಗಾಳ, ಮಧ್ಯಪ್ರದೇಶದ ಕಾಂಗ್ರೆಸ್‌ ಸರ್ಕಾರ, ಕೇರಳದ ಎಡರಂಗ ಸರ್ಕಾರ, ತೆಲಂಗಾಣದ ಟಿಆರ್‌ಎಸ್‌ ಸರ್ಕಾರ ಮತ್ತು ಆಂಧ್ರಪ್ರದೇಶದ ವೈಎಸ್‌ಆರ್ ಕಾಂಗ್ರೆಸ್‌ ಸರ್ಕಾರಗಳು ಘೋಷಿಸಿವೆ. ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ ಅವರು, ‘ಕೇಂದ್ರ ಸರ್ಕಾರದ್ದು ತುಘಲಕ್ ನಿರ್ಧಾರ’ ಎಂದು ಕಿಡಿಕಾರಿದ್ದಾರೆ

ಗೊಂದಲ

ಕೃಷಿ ಮತ್ತು ನಿರ್ಮಾಣ ಕಾಮಗಾರಿಗಳಲ್ಲಿ ಬಳಕೆಯಾಗುವ ವಾಹನಗಳು ಸಮವರ್ತಿ ಪಟ್ಟಿಯಲ್ಲಿ ಬರುತ್ತವೆ. ಈ ವಾಹನಗಳಿಂದ ಆಗುವ ಸಂಚಾರ ನಿಯಮಗಳ ಉಲ್ಲಂಘನೆ ಮೇಲೆ ಕೇಂದ್ರ ಸರ್ಕಾರ ಹೇರಿರುವ ಭಾರಿ ಮೊತ್ತದ ದಂಡವನ್ನು ರಾಜ್ಯ ಸರ್ಕಾರಗಳು ಏಕಾಏಕಿ ಇಳಿಸಲು ಸಾಧ್ಯವೇ ಎಂಬ ಚರ್ಚೆ ಆರಂಭವಾಗಿದೆ. ರಾಜ್ಯಗಳಲ್ಲಿ ಜಾರಿಯಲ್ಲಿರುವ ಮೋಟಾರು ವಾಹನ ಕಾಯ್ದೆಗೆ ಅಗತ್ಯ ತಿದ್ದುಪಡಿ ತಂದು ದಂಡವನ್ನು ಇಳಿಸಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

* ಸಂಚಾರ ನಿಯಮ ಉಲ್ಲಂಘನೆಗೆ ಹಳೆಯ ನಿಯಮದ ಪ್ರಕಾರವೇ ದಂಡ ವಿಧಿಸಲು ಸೂಚಿಸಿದ್ದೇನೆ. ಈಗಾಗಲೇ ಅದು ಜಾರಿಗೆ ಬಂದಿದೆ

-ಲಕ್ಷ್ಮಣ ಸವದಿ, ಉಪ ಮುಖ್ಯಮಂತ್ರಿ

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا