Urdu   /   English   /   Nawayathi

ಬಿಬಿಎಂಪಿ ದಿವ್ಯ ನಿರ್ಲಕ್ಷ್ಯ: ರಸ್ತೆ ಗುಂಡಿಗಳನ್ನು ಮುಚ್ಚಿದ ವಿದ್ಯಾರ್ಥಿಗಳು

share with us

ಬೆಂಗಳೂರು: 25 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಸಿಲಿಕಾನ್ ಸಿಟಿ ಬೆಂಗಳೂರಿನ ಕೊತ್ತನೂರಿನಲ್ಲಿ ಹೆಣ್ಣೂರಿನಿಂದ ಬೈರತಿವರೆಗಿನ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದು, ವಾಹನ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗುತಿತ್ತು. ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಬಿಬಿಎಂಪಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗ ಬಿಬಿಎಂಪಿ ಮಾಡಬೇಕಾದ ಕಾರ್ಯವನ್ನು ಕಾಲೇಜು ವಿದ್ಯಾರ್ಥಿಗಳು ಮಾಡಿದ್ದಾರೆ. ಶ್ರಮದಾನದ ಮೂಲಕ ರಸ್ತೆ ಮೇಲಿನ ಗುಂಡಿಗಳನ್ನು ಮುಚ್ಚಿದ್ದಾರೆ. ಕ್ರಿಸ್ತ ಜಯಂತಿ ಕಾಲೇಜಿನ ಸುಮಾರು 600 ಎನ್ ಎಸ್ ಎಸ್ ವಿದ್ಯಾರ್ಥಿಗಳು,  22 ಸಿಬ್ಬಂದಿಗಳು  ಹಾಗೂ ಕೊತ್ತನೂರಿನ 100 ಮಂದಿ ಸ್ಥಳೀಯರು ಸೇರಿ ಹೆಣ್ಣೂರಿನಿಂದ ಬೈರತಿವರೆಗಿನ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿದ್ದಾರೆ. ಮೂರು ವರ್ಷಗಳಿಂದಲೂ ಹಾಳಾಗಿರುವ ರಸ್ತೆಯಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಎದುರಿಸಬೇಕಾಗಿತ್ತು. ಅದರಲ್ಲೂ ಕಳೆದ 15 ದಿನಗಳಿಂದ ಪರಿಸ್ಥಿತಿ ತೀರಾ ಕೆಟ್ಟದಾಗಿತ್ತು. ಕಟ್ಟಡ ನಿರ್ಮಾಣ ಅವಶೇಷಗಳು ಹಾಗೂ ವಿವಿಧ ಕಟ್ಟಡ ನಿರ್ಮಾಣ ಘಟಕಗಳಿಂದ ಈ ರಸ್ತೆ ತುಂಬಿತ್ತು. ಇಂತಹ ಮುಖ್ಯರಸ್ತೆಯಲ್ಲಿ ವಿದ್ಯಾರ್ಥಿಗಳು ಶ್ರಮದಾನ ಮಾಡುವ ಮೂಲಕ 100 ಗುಂಡಿಗಳನ್ನು ಮುಚ್ಚಿದ್ದಾರೆ. ರಸ್ತೆಯಲ್ಲಿನ ತ್ಯಾಜ್ಯವನ್ನು ಶುಚಿಗೊಳಿಸಿದ್ದು, ಪ್ಲಾಸ್ಟಿಕ್ ಮುಕ್ತ ರಸ್ತೆಯನ್ನಾಗಿ ಮಾಡಿದ್ದಾರೆ. ಶ್ರಮದಾನದ ಬಗ್ಗೆ ಮಾತನಾಡಿದ ಎನ್ ಎಸ್ ಎಸ್ ಸಮನ್ವಯಾಧಿಕಾರಿ ಡಾ. ಪಿಡಿ ಶ್ರೀಧರ್, ಕಳೆದ ವಾರ ಇದೇ ರೀತಿಯ ಶ್ರಮದಾನ ಮಾಡಿ ಮಣ್ಣಿನಿಂದ ಗುಂಡಿಗಳನ್ನು ಮುಚ್ಚಲಾಗಿತ್ತು ಆದರೆ, ಮಳೆಯಿಂದಾಗಿ ಎಲ್ಲವೂ ಕೊಚ್ಚಿಹೋಗಿತ್ತು. ಆದ್ದರಿಂದ ಈ ಬಾರಿ ಸಿಮೆಂಟ್ ನಿಂದ ಗುಂಡಿಗಳನ್ನು ಮುಚ್ಚಲಾಗಿದೆ. ಇದರಿಂದ ಮಳೆ ಬಂದರೂ ಏನು ಆಗುವುದಿಲ್ಲ ಎಂದರು. ವಿದ್ಯಾರ್ಥಿಗಳು ಕೆಲಸ ಆರಂಭಿಸುತ್ತಿದ್ದಂತೆ ಸಹಜವಾಗಿಯೇ ಸ್ಥಳೀಯ ಜನರು ಕೂಡಾ ಕೈಜೋಡಿಸಿದ್ದಾರೆ. ಈ ರಸ್ತೆಯನ್ನು ತುರ್ತಾಗಿ ದುರಸ್ಥಿಗೊಳಿಸಬೇಕಾಗಿದೆ. ರಸ್ತೆ ಹಾಳಾಗಿರುವುದರಿಂದ ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗುತ್ತಿದೆ. ಆದರೆ, ರಸ್ತೆ ಸರಿಪಡಿಸಲು ಬಿಬಿಎಂಪಿ ತಲೆ ಕೆಡಿಸಿಕೊಂಡಿಲ್ಲ ಎಂದು ಅವರು ಆರೋಪಿಸಿದರು. ಕೈಗೊಂಡ ಕೆಲಸವನ್ನು ತೋರಿಸಲು 8 ಸಾವಿರ ವಿದ್ಯಾರ್ಥಿಗಳು ಹಾಗೂ 1 ಸಾವಿರ ಸ್ಥಳೀಯರು ಸಹಿ ಹಾಕಿರುವ ಮನವಿಯನ್ನು ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ  ಅವರಿಗೆ ಸೋಮವಾರ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا