Urdu   /   English   /   Nawayathi

ಈ ಊರಲ್ಲಿ ನೆರೆ ಇಳಿದ ಬಳಿಕ ಅರಳುತ್ತಿದೆ ಬದುಕು

share with us

ಬೆಳ್ತಂಗಡಿ: 22 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಪ್ರತೀ ಶುಕ್ರವಾರದಂತೆ ಅಂದೂ ನಾವು ಮಧ್ಯಾಹ್ನದ ವೇಳೆಗೆ ಮಸೀದಿಗೆ ಹೋಗಿದ್ದೆವು. ಪ್ರವಾಹ ನುಗ್ಗಿ ಮನೆ ಮುಳುಗಿರುವ ಸುದ್ದಿ ಬಂತು. ಓಡೋಡಿ ಹೋದರೂ ಮನೆಯ ಬಳಿಗೆ ತೆರಳಲು ಸಾಧ್ಯವಾಗ ಲಿಲ್ಲ. ಮನೆಯಲ್ಲಿದ್ದ ತಂದೆ-ತಾಯಿಗೆ ಕರೆ ಮಾಡಿದರೆ ಪ್ರತಿಕ್ರಿಯೆ ಇಲ್ಲ. ಅರ್ಧ ತಾಸು ಅನುಭವಿಸಿದ ತಳಮಳ ಬಣ್ಣಿಸಲು ಪದಗಳಿಲ್ಲ. ಅವರ ಕರೆ ಬಂದಾಗ ಹೋದ ಜೀವ ಬಂತು…ನೆರೆಯಲ್ಲಿ ಮುಳುಗಿದ ಮನೆ, ತೋಟಗಳನ್ನು ಶುಚಿಗೊಳಿಸಿ ಹೊಸ ಬದುಕನ್ನು ಕಟ್ಟಿಕೊಳ್ಳುತ್ತಿರುವ ಕೊಲ್ಲಿ ಬಾವಲಿಬನ ನಿವಾಸಿ ಅಬ್ದುಲ್ ನಝೀರ್‌ ಆ.9ರ ಘಟನೆಯನ್ನು ನೆನಪಿಸಿಕೊಂಡದ್ದು ಹೀಗೆ. ‘ಮನೆಯ ಯಾವುದೇ ವಸ್ತು ಉಳಿಸುವುದಕ್ಕೆ ಸಾಧ್ಯವಾಗಿಲ್ಲ’ ಎಂದರು ನಝೀರ್‌. ಮಿತ್ತಬಾಗಿಲು ಗ್ರಾಮದ ಕೊಲ್ಲಿಬೆಟ್ಟು, ಚೌಕಿಬೆಟ್ಟು, ಬಾವಲಿ ಬನ, ಕೊಂಬಿನಡ್ಕ ಮೊದಲಾದ ಪ್ರದೇಶಗಳಲ್ಲಿ ಹಲವು ಮನೆಗಳು ಪ್ರವಾಹಕ್ಕೆ ತುತ್ತಾಗಿವೆ. ಮೂರು ಮನೆ ಕುಸಿದೇ ಹೋಗಿವೆ. ಕೃಷಿ ಪ್ರದೇಶ ನಾಶವಾಗಿದೆ. ಅಬ್ದುಲ್ ನಝೀರ್‌ ಮನೆ, ರೋಹಿತ್‌ ಕೊಂಬಿನಡ್ಕ, ಜಯಂತ ಪೂಜಾರಿ ನಡುಬೈಲು ಅವರ ಮನೆಗಳು ಪೂರ್ತಿ ಬಿದ್ದು ಹೋಗಿವೆ. ಚೌಕಿಬೆಟ್ಟು ಕಾವೇರಿ ಅವರ ಮನೆಗೆ ಹಾನಿಯಾಗಿದೆ. ಕೊಲ್ಲಿಬೆಟ್ಟು ಉಮ ರುಲ್ ಫಾರೂಕ್‌ ಮನೆ ಬಿರುಕು ಬಿಟ್ಟಿದೆ. ಕೃಷಿಭೂಮಿ ನಾಶವಾಗಿದೆ.

ಮುಳುಗಲು ಹತ್ತೇ ನಿಮಿಷ!

ಮಧ್ಯಾಹ್ನ ನೀರು ಏಕಾಏಕಿ ಏರತೊಡಗಿತು. ಸ್ಥಳೀಯರು ಬಂದು ತಾಯಿಯನ್ನು ರಕ್ಷಿಸಿದರು. ನಾನು ಮತ್ತು ತಮ್ಮ ಹಸುಕರು ರಕ್ಷಿಸಲು ತೆರಳಿದೆವು ಎಂದು ಚೌಕಿಬೆಟ್ಟು ನಿವಾಸಿ ಕಾವೇರಿ ಅವರ ಪುತ್ರ ಪ್ರದೀಪ್‌ ಹೇಳುತ್ತಾರೆ. ಪ್ರವಾಹದ ನೀರು ಮೇಲೇರುತ್ತಾ ಬಂತು. ಸಿಟ್ಔಟ್‌ನ ದಂಡೆಯಲ್ಲಿಟ್ಟಿದ್ದ ಮೂರು ಕ್ವಿಂಟಾಲ್ನಷ್ಟು ಅಡಿಕೆಯ ಗೋಣಿಗಳು ಕಣ್ಣೆದುರೇ ನೀರು ಪಾಲಾದವು. ರಾಶಿ ಹಾಕಿದ್ದ ಸಾವಿರದೈನೂರು ತೆಂಗಿನ ಕಾಯಿಗಳೂ ಹೋಗಿವೆ. ಎರಡು ಕರೆಂಟ್ ಪಂಪ್‌, ಒಂದು ಸೀಮೆ ಎಣ್ಣೆಯ ಪಂಪ್‌ ಎಲ್ಲಿ ಹೋಗಿವೆಯೋ ಗೊತ್ತಿಲ್ಲ. 400ರಷ್ಟು ಅಡಿಕೆ ಗಿಡಗಳು ನಾಶವಾಗಿವೆ ಎನ್ನುತ್ತಾರೆ ಪ್ರದೀಪ್‌.

ಹತ್ತು ಪವನ್‌ ಚಿನ್ನ ನೀರುಪಾಲು

ನೀರು ಬರುವ ಮುನ್ಸೂಚನೆ ಸಿಕ್ಕಿದ್ದರಿಂದ ಅಗತ್ಯ, ಅಮೂಲ್ಯ ವಸ್ತುಗಳನ್ನು ಸೂಟ್ಕೇಸ್‌ನಲ್ಲಿ ಇರಿಸಿ ಕಟ್ಟಿದ್ದೆವು. ಆದರೆ ನೀರು ಎಷ್ಟು ವೇಗವಾಗಿ ಏರಿಬಂತು ಎಂದರೆ ಅಪ್ಪ ಅಮ್ಮ ಜೀವ ಉಳಿಸಿಕೊಂಡದ್ದೇ ಹೆಚ್ಚು. ತುಂಬಿಸಿಟ್ಟಿದ್ದ ಸೂಟ್ಕೇಸ್‌ ಎತ್ತಿಕೊಳ್ಳುವುದಕ್ಕೆ ಕೂಡ ಅವಕಾಶ ಸಿಗಲಿಲ್ಲ. ಸೂಟ್ಕೇಸ್‌ನಲ್ಲಿದ್ದ ತಮ್ಮನ ಹೆಂಡತಿಯ 10 ಪವನ್‌ನಷ್ಟು ಚಿನ್ನದ ಒಡವೆಗಳು ಕಣ್ಮರೆಯಾಗಿವೆ ಎನ್ನುತ್ತಾರೆ ನಝೀರ್‌. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೆಲವು ಗ್ರಾಮಗಳು ಈ ಬಾರಿಯ ನೆರೆಯಲ್ಲಿ ಕೊಚ್ಚಿ ಹೋಗಿವೆ. ಆ ಗ್ರಾಮಗಳನ್ನು ಪುನರ್‌ ರೂಪಿಸುವುದು, ಸಂತ್ರಸ್ತರಿಗೆ ಬದುಕನ್ನು ಕಟ್ಟಿ ಕೊಡುವುದು ಎಲ್ಲರ ಹೊಣೆಗಾರಿಕೆ. ಸರಕಾರ, ಜನಪ್ರತಿನಿಧಿಗಳು, ಸಂಘ -ಸಂಸ್ಥೆಗಳು ನೊಂದವರ ಬದುಕ ಕಟ್ಟಲು ಹೊರಟಿವೆ. ಬನ್ನಿ ಜತೆಗೂಡೋಣ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا