Urdu   /   English   /   Nawayathi

ವಂಚಕ ಸ್ಯಾಮ್ ಪೀಟರ್ ತನಿಖೆ ತೀವ್ರ

share with us

ಮಂಗಳೂರು: 22 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಕೇಂದ್ರ ತನಿಖಾ ತಂಡದ ಸೋಗಿನಲ್ಲಿ ದರೋಡೆಗೆ ಸಂಚು ರೂಪಿಸಿದ ರೂವಾರಿ ಕೇರಳ ಮೂಲದ ಸ್ಯಾಮ್ ಪೀಟರ್(53)ನನ್ನು ತನ್ನ ವಶಕ್ಕೆ ಪಡೆಯಲು ಸಿಬಿಐ ತಂಡ ಆ.24ರಂದು ಮಂಗಳೂರಿಗೆ ಆಗಮಿಸಲಿದೆ. ಇದೇ ವೇಳೆ ಸ್ಯಾಮ್ ಪೀಟರ್ ಸೇರಿದಂತೆ ಎಂಟು ಮಂದಿ ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಗುರುವಾರ ಮುಕ್ತಾಯಗೊಳ್ಳಲಿದ್ದು, ಮತ್ತೆ ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ದೇಶದ ವಿವಿಧ ಕಡೆ ಸ್ಯಾಮ್ ಪೀಟರ್ ಮೇಲೆ ಪ್ರಕರಣ ದಾಖಲಾಗಿದ್ದು, ಈತನನ್ನು ಮೋಸ್ಟ್ ವಾಂಟೆಡ್ ಕ್ರಿಮಿನಲ್ ಎಂದು ಘೋಷಿಸಿ ಆತನ ಬಂಧನಕ್ಕೆ ಸಿಸಿಬಿ ರೆಡ್‌ಕಾರ್ನರ್ ನೋಟಿಸ್ ಜಾರಿ ಮಾಡಿತ್ತು. ಈತ ವಿದೇಶಕ್ಕೆ ಪರಾರಿಯಾಗಿರಬಹುದು ಎಂಬ ಸಂಶಯ ವ್ಯಕ್ತವಾಗಿ ಹಲವು ಸಮಯದಿಂದ ಶೋಧ ಕಾರ್ಯವೂ ನಡೆದಿತ್ತು. ಆದರೆ ಆ.16ರಂದು ಪಂಪ್‌ವೆಲ್ ಬಳಿ ದರೋಡೆ ಮಾಡುವ ಉದ್ದೇಶದಿಂದ ಹೊಂಚು ಹಾಕುತ್ತಿದ್ದಾಗ ನಗರ ಪೊಲೀಸರು ಲಾಡ್ಜ್‌ನಲ್ಲಿ ಈತ ಹಾಗೂ ಸಹಚರರನ್ನು ಬಂಧಿಸಿದ್ದರು. ಈ ಮೂಲಕ ಅಂತಾರಾಜ್ಯ ಮಟ್ಟದ ಲೂಟಿ ಗ್ಯಾಂಗೊಂದನ್ನು ನಗರ ಪೊಲೀಸರು ಪತ್ತೆಹಚ್ಚಿ ಮಹತ್ವದ ಸಾಧನೆ ಮಾಡಿದ್ದರು. ಪೀಟರ್ ಬಂಧನ ವಿಷಯ ತಿಳಿದ ಸಿಸಿಬಿ ತಂಡ ಗುರುವಾರ ನಗರಕ್ಕೆ ಆಗಮಿಸಬೇಕಿತ್ತು, ಆದರೆ ಒಂದು ದಿನ ವಿಳಂಬವಾಗಿ ಆಗಮಿಸಲಿದೆ ಎಂದು ಮೂಲಗಳು ತಿಳಿಸಿವೆ.

ಮತ್ತೆ ಕಸ್ಟಡಿ ಕೋರಿಕೆ: ಈ ಪ್ರಕರಣದಲ್ಲಿ ಬಂಧಿತ ಸ್ಯಾಮ್ ಪೀಟರ್ ಸಹಿತ 8 ಮಂದಿ ದರೋಡೆ ಆರೋಪಿಗಳು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ಸಲುವಾಗಿ ಗುರುವಾರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ಪೊಲೀಸ್ ಕಸ್ಟಡಿ ಕೋರಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಕದ್ರಿ ಪೊಲೀಸರು ಉಡುಪಿಯ ವಸತಿಗೃಹದ ಮಾಲೀಕನನ್ನು ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಾಲೀಕ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವುದಾಗಿ ಮೂಲಗಳು ತಿಳಿಸಿವೆ.

ಶಂಕಾಸ್ಪದ ಕಾರು ಪತ್ತೆ ತನಿಖೆ: ಮಂಗಳೂರು ನಗರ ಪೊಲೀಸರು ಆ.17ರಂದು ಪತ್ತೆ ಮಾಡಿದ ಶಂಕಾಸ್ಪದ ನಂಬರ್ ಪ್ಲೇಟ್ ಇರುವ ಕಾರಿನ ತನಿಖೆ ಎರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಆಂತರಿಕ ಭದ್ರತಾ ವಿಭಾಗದ ಡಿಐಜಿ ಲಾಬೂರಾಮ್ ಹಾಗೂ ಎಸ್‌ಪಿ ಶಂತನು ಸಿನ್ಹ ಅವರ ತಂಡ ಮಂಗಳೂರಿಗೆ ಆಗಮಿಸಿ ಈ ಬಗ್ಗೆ ತನಿಖೆ ನಡೆಸಿದೆ. ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಹಿರಿಯ ಅಧಿಕಾರಿಗಳು ಬುಧವಾರ ಬೆಂಗಳೂರಿಗೆ ಮರಳಿದ್ದಾರೆ. ಇನ್‌ಸ್ಪೆಕ್ಟರ್ ಹಂತದ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಗರದಲ್ಲಿ ಹೈ ಅಲರ್ಟ್ ಹಿನ್ನೆಲೆಯಲ್ಲಿ ಶುಕ್ರವಾರ ವ್ಯಾಪಕ ವಾಹನ ತಪಾಸಣೆ ನಡೆಯುತ್ತಿದ್ದಾಗ ಪಂಜಾಬ್ ರಾಜ್ಯದ ರಿಜಿಸ್ಟ್ರೇಶನ್ ನಂಬರ್ ಪ್ಲೇಟ್ ಹೊಂದಿದ್ದ ಕಾರು ಓಡಾಡುತ್ತಿರುವುದು ಟ್ರಾಫಿಕ್ ಪೊಲೀಸರ ಗಮನಕ್ಕೆ ಬಂದಿತ್ತು. ಟ್ರಾಫಿಕ್ ಪೊಲೀಸರು ಕಾರನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ನಂಬರ್ ಪ್ಲೇಟ್ ಸಂಕಾಸ್ಪದವಾಗಿ ಕಂಡು ಬಂದಿದ್ದು, ಹೆಚ್ಚಿನ ತನಿಖೆಗಾಗಿ ಬರ್ಕೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದರು. ಆ ಬಳಿಕ ಬೆಂಗಳೂರಿನಿಂದ ಬಂದ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಶಂಕಾಸ್ಪದ ಕಾರು ಪತ್ತೆಯಾದ ಪ್ರಕರಣ ತನಿಖೆ ಮುಂದುವರಿದಿದ್ದು, ಒಂದೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಆ ಬಳಿಕ ಸಂಪೂರ್ಣ ವಿವರ ನೀಡಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಪಿ.ಎಸ್.ತಿಳಿಸಿದ್ದಾರೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا