Urdu   /   English   /   Nawayathi

ತ್ಯಾಜ್ಯ ವಿಲೇ ಬೇಲಿಂಗ್ ಮಷಿನ್?

share with us

ಮಂಗಳೂರು: 21 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಪಚ್ಚನಾಡಿ ಬಳಿ ಮಂದಾರ ಪ್ರದೇಶದಲ್ಲಿ ತ್ಯಾಜ್ಯದ ರಾಶಿ ಜರಿದು ಬಿದ್ದಿರುವುದನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ಕೊಯಂಬತ್ತೂರಿನ ತಜ್ಞ ಕಂಪನಿಯ ಪ್ರತಿನಿಧಿಗಳು ಆಗಮಿಸಿ ಪರಿಶೀಲಿಸಿದ್ದಾರೆ. ಇಲ್ಲಿರುವ ಬೃಹತ್ ತ್ಯಾಜ್ಯ ರಾಶಿಯನ್ನು ಬೇಲರ್ ಮಷಿನ್ ಬಳಸಿ ವಿಲೇವಾರಿ ಮಾಡುವ ಬಗ್ಗೆ ಸಮಾಲೋಚನೆ ಮಾಡಿರುವ ತಜ್ಞರು ಈ ಕುರಿತು ವಿಸ್ತೃತ ವರದಿಯನ್ನು ಮಂಗಳೂರು ಮಹಾನಗರ ಪಾಲಿಕೆಗೆ ನೀಡಲಿದ್ದಾರೆ. ತ್ಯಾಜ್ಯ ರಾಶಿ ವಿಲೇವಾರಿ ಮಾಡುವ ವಿಚಾರ ಸದ್ಯ ಮಂಗಳೂರು ಮಹಾನಗರ ಪಾಲಿಕೆಗೆ ಸವಾಲಾಗಿ ಪರಿಣಮಿಸಿದ್ದು, ತಜ್ಞರ ಸಲಹೆ ಪಡೆಯಲಾಗುತ್ತಿದೆ. ಈಗಾಗಲೇ ಎನ್‌ಐಟಿಕೆ, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ತಜ್ಞರೂ ಆಗಮಿಸಿ ಪರಿಶೀಲಿಸಿದ್ದಾರೆ.

ಏನಿದು ಬೇಲಿಂಗ್ ಮಷಿನ್?
ತ್ಯಾಜ್ಯವನ್ನು ಒಟ್ಟು ಮಾಡಿ ಒಂದು ಮೀಟರ್ ಕ್ಯೂಬ್ ಗಾತ್ರದ ಚೌಕದ ತುಂಡುಗಳನ್ನಾಗಿ ಒತ್ತಿ ಕಟ್ಟುತ್ತದೆ. ಇದರಿಂದ ದೊಡ್ಡ ಪ್ರಮಾಣದ ತ್ಯಾಜ್ಯವನ್ನು ಚಿಕ್ಕ ಗಾತ್ರಕ್ಕೆ ಇಟ್ಟಿಗೆ ಮಾದರಿಯಲ್ಲಿ ಕುಗ್ಗಿಸಲಾಗುತ್ತದೆ. ಇದನ್ನು ವಿಂಚಿಂಗ್ ಮಷಿನ್ ಬಳಸಿ ಮೇಲಕ್ಕೆ ಎಳೆದು ತರಲಾಗುವುದು. ಇದಕ್ಕೆ ಹೆಚ್ಚು ಮಾನವ ಶ್ರಮ ಅಗತ್ಯವಿರುವುದಿಲ್ಲ. ಕೆಲವು ತಜ್ಞರು ಕಸದ ರಾಶಿಯನ್ನು ಜೆಸಿಬಿ ಹಾಗೂ ಟಿಪ್ಪರ್ ಬಳಸಿ ಸಾಗಿಸುವ ಬಗ್ಗೆ ತಿಳಿಸಿದ್ದಾರೆ. ಆದರೆ ಅದಕ್ಕೆ ತುಂಬ ಸಮಯ ಬೇಕಾಗಬಹುದು ಹಾಗೂ ವೆಚ್ಚವೂ ಜಾಸ್ತಿ ಆಗಬಹುದು. ಬೇಲಿಂಗ್ ಮಷಿನ್ ವೆಚ್ಚದ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಕೊಯಂಬತ್ತೂರಿನ ಫೈನ್ ಚೈನ್ ಸೆಂಟರ್ ಎಂಬ ಸಂಸ್ಥೆ ಇಂಥ ಮಷಿನ್‌ಗಳನ್ನು ಪೂರೈಸುತ್ತದೆ. ಅದರ ಮುಖ್ಯಸ್ಥ ಸುಧೀರ ಜೈಸ್ವಾಲ್ ಹಾಗೂ ತಂಡದವರು ಮಂದಾರ ಜಾಗಕ್ಕೆ ಬಂದು ಪರಿಶೀಲನೆ ಮಾಡಿದ್ದು, ಆ.21ರಂದು ವರದಿ ಹಾಗೂ ಯೋಜನೆಗಳ ರೂಪುರೇಷೆ ಒದಗಿಸಲಿದ್ದಾರೆ. ಬೇಲರ್ ಮಷಿನ್‌ನಿಂದ ದೊಡ್ಡ ಗಾತ್ರದ ತ್ಯಾಜ್ಯ ಚೌಕದ ತುಂಡುಗಳು ಹೊರಬರುತ್ತವೆ. ಅವುಗಳನ್ನು ಪೇರಿಸಿಟ್ಟರೆ ಅದು ಜಾರಿ ಹೋಗುವ ಸಾಧ್ಯತೆ ಕಡಿಮೆ. ಆದರೆ ಅದನ್ನು ಮುಂದೆ ಏನು ಮಾಡುವುದು ಎನ್ನುವ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳೂ ಸರಿಯಾದ ಮಾಹಿತಿ ಇಲ್ಲ.

ಫಲ್ಗುಣಿ ನದಿಗೆ ಮಾಲಿನ್ಯ ಭೀತಿ
ಪಚ್ಚನಾಡಿಯ ತ್ಯಾಜ್ಯ ರಾಶಿ ಮಹಾಮಳೆಗೆ ಬಿದ್ದಿದ್ದು, ಅಲ್ಲಿಂದ ಹರಿದು ಬರುವ ಕೊಳಚೆ ತ್ಯಾಜ್ಯ ನೀರು ಇಲ್ಲಿಂದ ಹರಿದು ಹೋಗುವ ತೋಡು ಮರವೂರು ಡ್ಯಾಮ್ ಸೇರುತ್ತಿದೆ. ಮಳವೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಬಜ್ಪೆ, ಜೋಕಟ್ಟೆ, ಮಳವೂರು, ಕೆಂಜಾರು, ಪೆರ್ಮುದೆ, ಕುತ್ತೆತ್ತೂರು, ಮೂಡುಶೆಡ್ಡೆ, ಪಡುಶೆಡ್ಡೆ, ತೆಂಕ ಎಕ್ಕಾರು, ಬಡಗ ಎಕ್ಕಾರು, ಬಾಳ, ಕಳವಾರು, ಸೂರಿಂಜೆ, ದೇಲಂತಬೆಟ್ಟು ಸೇರಿದಂತೆ 14 ಗ್ರಾಮಗಳು ಇದರ ಪ್ರಯೋಜನ ಪಡೆಯುತ್ತಿದೆ. ಈಗ ಮಂದಾರ ತ್ಯಾಜ್ಯ ಕುಸಿತದಿಂದ ಕಲುಷಿತ ತ್ಯಾಜ್ಯ ನೀರು ಡ್ಯಾಮ್‌ಗೆ ಸೇರ್ಪಡೆಯಾಗುತ್ತಿದ್ದು ಈ ವ್ಯಾಪ್ತಿಯ ಜನ ಆತಂಕಿತರಾಗಿದ್ದಾರೆ.

ಕಸ ಸಾಗಿಸುವ ಬದಲು ಬೇಲಿಂಗ್ ಮಷಿನ್ ಮೂಲಕ ಪರಿಣಾಮಕಾರಿಯಾಗಿ ವಿಲೇವಾರಿ ಮಾಡುವುದು ಸಾಧ್ಯ. ಆದರೆ ನಮ್ಮಲ್ಲಿನ ಕಸದಲ್ಲಿರುವ ನೀರಿನ ಪ್ರಮಾಣ ಹೆಚ್ಚು. ಇದನ್ನು ಹೇಗೆ ನಿರ್ವಹಣೆ ಮಾಡುವುದು ಎನ್ನುವುದನ್ನು ತಜ್ಞರೇ ತಿಳಿಸಬೇಕಷ್ಟೇ.
ಮಧು ಮನೋಹರ್, ಪರಿಸರ ಇಂಜಿನಿಯರ್, ಮನಪಾ

 ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا