Urdu   /   English   /   Nawayathi

ಗುಡ್ಡದ ಬುಡದಲ್ಲಿ ಗಡಗಡ…

share with us

ಕಾರವಾರ: 19 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಮಳೆ ನಿಂತಿದೆ. ನೆರೆ ಇಳಿದಿದೆ. ಆದರೂ ಜಿಲ್ಲೆಯ ಗುಡ್ಡದ ಬುಡದ ನಿವಾಸಿಗಳಲ್ಲಿ ಈಗ ಗಡಗಡ ನಡುಕ ಶುರುವಾಗಿದೆ. ಜಿಲ್ಲೆಯ ಹೊನ್ನಾವರ, ಕಾರವಾರ, ಯಲ್ಲಾಪುರ, ಸಿದ್ದಾಪುರ ಭಾಗದಲ್ಲಿ ಭಾರಿ ಭೂ ಕುಸಿತ ಕಂಡುಬರುತ್ತಿದೆ. ಹೆದ್ದಾರಿಗಳ ಪಕ್ಕದಲ್ಲಿ, ತೋಟ, ಗದ್ದೆಗಳ ಧರೆಗಳಲ್ಲಿ ಮಾತ್ರವಲ್ಲದೆ, ಕಾಡಿನ ನಡುವೆಯೂ ಭಾರಿ ಪ್ರಮಾಣದಲ್ಲಿ ಭೂಮಿ ಕುಸಿಯಲಾರಂಭಿಸಿದೆ. ಯಲ್ಲಾಪುರ ತಾಲೂಕಿನ ಕೊಡ್ಲಗದ್ದೆ ಭಾಗದಲ್ಲಿ ಕಾಡಿನ ನಡುವೆ ಈಗ ದೊಡ್ಡ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದೆ. ಸಾಕಷ್ಟು ಮರಗಳನ್ನು ಮುಚ್ಚಿ ಹಾಕಿದೆ. ಕುಮಟಾ ತಾಲೂಕಿನ ಐತಿಹಾಸಿಕ ಪ್ರಸಿದ್ಧ ತಾಣ ಯಾಣದ ಪಕ್ಕ ಗುಡ್ಡ ಕುಸಿದಿದೆ. ಕಾರವಾರ ಅರಗಾದಲ್ಲಿ, ಹೊನ್ನಾವರದ ಗೇರುಸೊಪ್ಪ ಭಾಗದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಈ ಹಿಂದೆ ಕಾಡಿನ ನಡುವೆ ಯಲ್ಲಾಪುರದ ಬೀಸಗೋಡು, ಶಿರ್ಲೆ ಜಲಪಾತ ಭಾಗದಲ್ಲಿ ಭೂ ಕುಸಿತ ಉಂಟಾಗಿತ್ತು. ಮತ್ತಿಘಟ್ಟ ಕೆಳಗಿನ ಕೇರಿ ಗುಡ್ಡದಲ್ಲಿ ಭಾರಿ ಬಿರುಕು ಕಾಣಿಸಿಕೊಂಡಿದೆ. ಹೊನ್ನಾವರದ ಗೇರುಸಪ್ಪ ಬಳಿ ನೂರಾರು ಎಕರೆ ಕಾಡು ಭೂಕುಸಿತದಿಂದ ನಾಶವಾಗಿತ್ತು.

2009ರ ನೆನಪು: 2009ರ ಅಕ್ಟೋಬರ್ 2ರಂದು ಸುರಿದ ಮಹಾ ಮಳೆಗೆ ಕಾರವಾರದ ಕಡವಾಡ ಝುರಿವಾಡದಲ್ಲಿ ಗುಡ್ಡ ಕುಸಿದು 10 ಮನೆಗಳು ನಾಪತ್ತೆಯಾಗಿದ್ದವು. 20 ಜನರು ಜೀವಂತ ಸಮಾಧಿಯಾಗಿದ್ದರು. ಇದೇ ಅವಧಿಯಲ್ಲಿ ಕಾರವಾರ ತಾಲೂಕೊಂದರಲ್ಲೇ 10ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿತ ಉಂಟಾಗಿತ್ತು. ರಾಷ್ಟ್ರೀಯ ಹೆದ್ದಾರಿ 66ರ ಅವೈಜ್ಞಾನಿಕ ಚತುಷ್ಪಥ ವಿಸ್ತರಣೆ ಕಾಮಗಾರಿಯಿಂದ ವರ್ಷದ ಹಿಂದೆ ಕುಮಟಾ ತಾಲೂಕಿನಲ್ಲಿ ಗುಡ್ಡ ಕುಸಿದು ಎರಡು ಜೀವಗಳು ಬಲಿಯಾಗಿದ್ದವು. ಇಂಥ ಘಟನೆಗಳು ಜನರ ನೆನಪಿನಲ್ಲಿ ಇನ್ನೂ ಇವೆ. ಇದರಿಂದ ಗುಡ್ಡದ ಬುಡದಲ್ಲಿ ವಾಸಿಸುವವರು ಈಗ ಪ್ರತಿ ದಿನವೂ ಆತಂಕದಲ್ಲಿ ಜೀವನ ಸಾಗಿಸುವಂತಾಗಿದೆ. ಅಲ್ಲಿಯಂತೆ ಇಲ್ಲೂ : ಕಳೆದ ಬಾರಿ ಕೊಡಗಿನಲ್ಲಿ ಭಾರಿ ಪ್ರಮಾಣದ ಭೂ ಕುಸಿತ ಉಂಟಾಗಿತ್ತು. ಈ ವರ್ಷ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೂ ಕುಸಿತ ಹೆಚ್ಚಿದೆ. ಅಲ್ಲಿನ ಕತೆಗಳಿಂದ ಜನರು ಆತಂಕಿತರಾಗಿದ್ದಾರೆ.

ಏಕೆ ಹೀಗೆ?: ಹೆದ್ದಾರಿ, ರೈಲ್ವೆ ಕಾಮಗಾರಿಗಳಿಗಾಗಿ ಹಾಗೂ ಕೆಲವೆಡೆ ಸಾಗುವಳಿ, ಮನೆ ನಿರ್ವಣಕ್ಕಾಗಿ ಗುಡ್ಡದ ಬುಡವನ್ನು ಅವೈಜ್ಞಾನಿಕವಾಗಿ ಕಡಿದಿರುವುದರಿಂದ ಗುಡ್ಡ ಕುಸಿಯುತ್ತಿದೆ ಎಂಬುದು ಒಂದು ಕಾರಣ. ಭಾರಿ ಪ್ರಮಾಣದ ಮಳೆಯೂ ಇನ್ನೊಂದು ಕಾರಣವಾಗಿದೆ. ಜಿಲ್ಲೆಯ ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ಭಾಗದಲ್ಲಿ ಕಳೆದ ವಾರ ನಿರಂತರ ಮೂರು ದಿನ 200 ಮಿಮೀಗಿಂತ ಹೆಚ್ಚು ಮಳೆಯಾಗಿದೆ. ಇದು ಇತ್ತೀಚಿನ ದಿನದಲ್ಲಿ ದಾಖಲೆ ಮಳೆಯಾಗಿದೆ. ಆಗಸ್ಟ್ ತಿಂಗಳ ಜಿಲ್ಲೆಯ ವಾಡಿಕೆ ಮಳೆಯ ಪ್ರಮಾಣ 606 ಮಿಮೀ ಇದೆ. 17 ದಿನದಲ್ಲಿ 996 ಮಿಮೀ ಮಳೆಯಾಗಿದೆ. ಇಷ್ಟು ಮಳೆಯಿಂದ ಭೂಮಿ ಸಡಿಲವಾಗಿದೆ. ಎಲ್ಲೆಡೆ ಅಂತರ್ಜಲದ ಝುರಿಗಳು ಎದ್ದು ನೀರು ಉಕ್ಕುತ್ತಿದೆ. ಇದರೊಟ್ಟಿಗೆ ಈಗ ಸ್ವಲ್ಪ ಮಳೆಯಾದರೂ ಭೂ ಕುಸಿತ ಉಂಟಾಗುತ್ತಿದೆ. ಅಲ್ಲದೆ, ಜಿಲ್ಲೆಯಲ್ಲಿ ವ್ಯಾಪಕವಾಗಿ ಕಡಿಮೆಯಾಗುತ್ತಿರುವ ಸಹಜ ಕಾಡಿನ ಪ್ರಮಾಣವೂ ಈ ವ್ಯತಿರಿಕ್ತ ಪರಿಣಾಮಕ್ಕೆ ಕಾರಣ ಎಂಬುದು ತಜ್ಞರ ಅಭಿಪ್ರಾಯ.

ಗುಡ್ಡದ ಬದುಕಿಗೆ ಗಂಡಾಂತರ ಯೋಗ ಬಂದಿದೆ. ಗುಡ್ಡಗಳಿಗೆ ಮಳೆ ಬೀಳುವುದು ಹೊಸದಲ್ಲ. ಆದರೆ, ಅಣೆಕಟ್ಟೆಗಳು, ರಸ್ತೆಗಳ ನಿರ್ವಣದಿಂದ ಗುಡ್ಡಗಳ ಛಿದ್ರೀಕರಣವಾಗಿದೆ. ಸಣ್ಣ ಸಣ್ಣ ಸಸ್ಯಗಳು ಗುಡ್ಡಗಳನ್ನು ರಕ್ಷಿಸುತ್ತಿದ್ದವು. ಈಗ ಅದು ಇಲ್ಲವಾಗಿದೆ. | ಶಿವಾನಂದ ಕಳವೆ ಪರಿಸರ ತಜ್ಞ

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا