Urdu   /   English   /   Nawayathi

ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡ್

share with us

ಮಂಗಳೂರು: 18 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಸುರಕ್ಷತೆ ದೃಷ್ಟಿಯಿಂದ ಮೀನುಗಾರಿಕೆಯಲ್ಲಿ ತೊಡಗುವ ಎಲ್ಲ ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡ್ ವಿತರಿಸುವ ಪ್ರಕ್ರಿಯೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ಮೀನುಗಾರಿಕಾ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಉಪನಿರ್ದೇಶಕ ತಿಪ್ಪೇಸ್ವಾಮಿ ತಿಳಿಸಿದ್ದಾರೆ. ಸಮುದ್ರದಲ್ಲಿ ರೆಡ್‌ಅಲರ್ಟ್ ಘೋಷಿಸಿದ ಹಿನ್ನೆಲೆಯಲ್ಲಿ ಶನಿವಾರ ನಗರದ ಮೀನುಗಾರಿಕಾ ಇಲಾಖೆ ಕಚೇರಿಯಲ್ಲಿ ಮೀನುಗಾರ ಮುಖಂಡರ ಸಭೆಯಲ್ಲಿ ಈ ಮಾಹಿತಿ ನೀಡಿದರು. ಬಯೋಮೆಟ್ರಿಕ್ ಕಾರ್ಡ್ ಈ ಹಿಂದೆ ಒದಗಿಸಿದ್ದ ಭಾರತ್ ಇಲೆಕ್ಟ್ರಾನಿಕ್ಸ್ ಲಿ. (ಬಿಇಎಲ್) ಅಧಿಕಾರಿಗಳು ಇತ್ತೀಚೆಗೆ ನಗರಕ್ಕೆ ಆಗಮಿಸಿ ಯೋಜನೆ ಅನುಷ್ಠಾನ ಕುರಿತು ಮಾತುಕತೆ ನಡೆಸಿ ಮರಳಿದ್ದಾರೆ. ಮೀನುಗಾರರು ಹಾಗೂ ಕರಾವಳಿ ಜನರ ಸುರಕ್ಷತೆ ಹೆಚ್ಚಿಸುವ ದೃಷ್ಟಿಯಿಂದ ಈ ಯೋಜನೆ ಮಹತ್ವದ್ದಾಗಿದೆ ಎಂದರು. ಜಿಲ್ಲೆಯಲ್ಲಿ 34,960 ಜನರು ಸಕ್ರಿಯ ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿದ್ದು, 2016 ತನಕ 11,270 ಮಂದಿಗೆ ಬಯೋ ಮೆಟ್ರಿಕ್ ಕಾರ್ಡ್ ವಿತರಿಸಲಾಗಿದೆ. ಬಳಿಕ ಕಾರ್ಡ್ ವಿತರಿಸಿಲ್ಲ ಎಂದು ಹೇಳಿದರು.

ಮರು ಪರಿಶೀಲನೆ: ಈ ಹಿಂದೆ ಬಯೋ ಮೆಟ್ರಿಕ್ ಕಾರ್ಡ್ ವಿತರಣೆ ಸಂದರ್ಭ ಸರ್ಕಾರಿ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ ಎಂದು ಅನೇಕ ಮಂದಿ ಮೀನುಗಾರಿಕೆ ನಡೆಸದವರು ಕೂಡ ಕಾರ್ಡ್ ಪಡೆದಿದ್ದಾರೆ. ಇದನ್ನು ಪತ್ತೆ ಹಚ್ಚಲು ಎಲ್ಲ ಹಳೇ ಕಾರ್ಡ್‌ಗಳ ದಾಖಲೆಗಳನ್ನು ಮರುಪರಿಶೀಲಿಸಲು ತೀರ್ಮಾನಿಸಲಾಗಿದೆ. ಅನಧಿಕೃತವಾಗಿ ಇರುವ ಕಾರ್ಡ್‌ಗಳನ್ನು ರದ್ದುಪಡಿಸಲಾಗುವುದು ಎಂದು ವಿವರಿಸಿದರು.

ಧಾರ್ ಕಾರ್ಡ್ ಲಿಂಕ್: ಬಯೋ ಮೆಟ್ರಿಕ್ ಕಾರ್ಡ್‌ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ತೀರ್ಮಾನಿಸಲಾಗಿದ್ದು, ಎರಡು ತಿಂಗಳಲ್ಲಿ ಇದನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಮೀನುಗಾರಿಕೆ ಸಂದರ್ಭ ಮೀನುಗಾರರು ತಮ್ಮ ಸರಹದ್ದು ದಾಟಿ ಸಮುದ್ರದಲ್ಲಿ ಪ್ರಯಾಣಿಸಿದರೆ ಅಥವಾ ಹೊರ ರಾಜ್ಯಗಳಲ್ಲಿ ಮೀನುಗಾರರು ಮೀನುಗಾರಿಕೆ ವೃತ್ತಿ ನಡೆಸುವ ಸಂದರ್ಭ ಗುರುತು ಪತ್ತೆಹಚ್ಚಲು ಆ ಕಾರ್ಡ್ ನೆರವಾಗಲಿದೆ ಎಂದು ತಿಪ್ಪೇಸ್ವಾಮಿ ತಿಳಿಸಿದರು.
ಟ್ರಾಲ್ ಬೋಟ್ ಮೀನುಗಾರರ ಸಂಘ ಅಧ್ಯಕ್ಷ ನಿತಿನ್ ಕುಮಾರ್, ನಾಡದೋಣಿ ಮೀನುಗಾರರ ಸಂಘ ಗೌರವಾಧ್ಯಕ್ಷ ಸುಭಾಷ್, ಮುಖಂಡ ಇಬ್ರಾಹಿಂ ಮತ್ತಿತರರಿದ್ದರು.

ಹೊಸ ಬೋಟ್‌ಗಳಿಗೆ ಅನುಮತಿ ಇಲ್ಲ
ಕರಾವಳಿಯಲ್ಲಿ ಮೀನುಗಾರಿಕೆ ವೃತ್ತಿಯಲ್ಲಿ ಗರಿಷ್ಠ ಮೀನುಗಾರರು ತೊಡಗಿಸಿಕೊಂಡಿದ್ದು, ಹೊಸ ಬೋಟ್‌ಗಳಿಗೆ ಅನುಮತಿ ನೀಡುವುದಿಲ್ಲ. ಮೀನುಗಾರಿಕೆ ನಷ್ಟದಲ್ಲಿ ಮುಂದುವರಿಯುವುದನ್ನು ತಡೆಯಲು ಈ ಕ್ರಮ ಅಗತ್ಯ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು ತಿಳಿಸಿದರು. 2016ರಲ್ಲಿ 285 ಅರ್ಜಿ ಸಲ್ಲಿಸಿದ್ದು, ಇದರಲ್ಲಿ ನೋಂದಣಿ ಮಾಡಿಕೊಂಡಿರುವ 85 ಮಂದಿಗೆ ಸಾಧ್ಯತಾ ಪ್ರಮಾಣಪತ್ರ ಒದಗಿಸಲಾಗಿದೆ. ನೋಂದಣಿ ಮಾಡಿಕೊಳ್ಳದ ಇತರರಿಗೆ ಇಲಾಖೆ ಒದಗಿಸಿದ ಸಾಧ್ಯತಾ ಪ್ರಮಾಣಪತ್ರ ರದ್ದುಪಡಿಸಬಹುದೇ ಎಂದು ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ಬರಲಿವೆ ಸ್ಯಾಟಲೈಟ್ ಫೋನ್
ದುಬಾರಿಯಾಗಿರುವ ಸ್ಯಾಟಲೈಟ್ ಫೋನನ್ನು ಸಹಾಯಧನದೊಂದಿಗೆ ಎಲ್ಲ ಮೀನುಗಾರಿಕೆ ಬೋಟ್‌ಗಳಿಗೆ ಒದಗಿಸಲು ಚಿಂತನೆ ನಡೆದಿದೆ ಎಂದು ತಿಪ್ಪೇಸ್ವಾಮಿ ಹೇಳಿದರು. ಇಲಾಖೆ ಅಧಿಕಾರಿಗಳು ಮೀನುಗಾರಿಕೆ ಹಾಗೂ ಭದ್ರತೆ ಸಂಬಂಧಿಸಿದ ವಿಚಾರ ವಿನಿಮಯಕ್ಕೆ ಈಗಾಗಲೇ ವಾಟ್ಸಾಪ್ ಗ್ರೂಪ್ ಆರಂಭಿಸಲಾಗಿದೆ. ಮಲ್ಪೆ ಬೋಟ್ ನಾಪತ್ತೆ ಘಟನೆ ಬಳಿಕ ಎಲ್ಲ ಬೋಟ್‌ಗಳಿಗೆ ವಯರ್‌ಲೆಸ್, ಜಿಪಿಎಸ್ ಮತ್ತು ಟ್ರಾನ್ಸ್‌ಪೋಂಡ್ ಸಂವಹನ ವ್ಯವಸ್ಥೆಗಳನ್ನು ಕಡ್ಡಾಯಗೊಳಿಸಲಾಗಿದೆ. ಬೋಟ್‌ಗಳು ಎಲ್ಲಿವೆ ಎಂಬ ನಿಖರ ಮಾಹಿತಿಗೆ ಹೊಸ ಆ್ಯಪ್ ರಚಿಸಲಾಗುತ್ತಿದೆ ಎಂದರು.

ಗುರುತಿನ ಚೀಟಿ ಜತೆಗಿರಲಿ: 
ಕರಾವಳಿಯಾದ್ಯಂತ ಸಮುದ್ರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಯಾವುದೇ ವಿದೇಶಿ ಅಥವಾ ಸಂಶಯಾಸ್ಪದ ಬೋಟ್ ಪ್ರಯಾಣಿಸುತ್ತಿರುವ ಬಗ್ಗೆ ತಿಳಿದರೆ ತಕ್ಷಣ ಪೊಲೀಸ್ ಕಂಟ್ರೋಲ್ ರೂಂ ನಂ.100ಕ್ಕೆ ಮಾಹಿತಿ ಒದಗಿಸಬೇಕು. ಮೀನುಗಾರಿಕೆ ಸಂದರ್ಭ ಮೀನುಗಾರರು ಗುರುತನ್ನು ದೃಢೀಕರಿಸುವ ದಾಖಲೆ, ಆಧಾರ್ ಕಾರ್ಡ್ ಪ್ರತಿಗಳನ್ನು ಹೊಂದಿರಬೇಕು. ಇಲ್ಲಿ ಮೀನುಗಾರಿಕೆ ನಡೆಸುತ್ತಿರುವ ಹೊರ ರಾಜ್ಯಗಳ ಮೀನುಗಾರರ ಗುರುತು ಪತ್ತೆಗೆ ಇಲಾಖೆ ಹಾಗೂ ಮೀನುಗಾರರ ಸೊಸೈಟಿಗಳಿಂದ ತಾತ್ಕಾಲಿಕ ನೆಲೆಯ ಗುರುತು ಕಾರ್ಡ್ ಒದಗಿಸಲಾಗುತ್ತಿದೆ ಎಂದು ತಿಪ್ಪೇಸ್ವಾಮಿ ತಿಳಿಸಿದರು.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا