Urdu   /   English   /   Nawayathi

ಕರಾವಳಿ ಮೇಲೆ ಎನ್‌ಐಎ ನಿಗಾ

share with us

ಮಂಗಳೂರು/ಉಡುಪಿ: 18 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಭಯೋತ್ಪಾದನಾ ದಾಳಿಗೆ ಹೊಂಚು ಹಾಕಲಾಗುತ್ತಿದೆ ಎಂಬ ಗುಪ್ತಚರ ವರದಿ ಹಿನ್ನೆಲೆಯಲ್ಲಿ ದೇಶದಾದ್ಯಂತ ಪೊಲೀಸ್ ಸಹಿತ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿರುವ ನಡುವೆಯೇ ಕರ್ನಾಟಕ ಕರಾವಳಿ ಮೂಲಕ ಉಗ್ರರ ಪ್ರವೇಶ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಮಂಗಳೂರು, ಉಡುಪಿ ಭಾಗದಲ್ಲಿ ಹದ್ದಿನ ಕಣ್ಣಿಡಲಾಗಿದೆ. ಮುಖ್ಯವಾಗಿ ಕರಾವಳಿ ಮೂಲಕ ದಾಳಿ ನಡೆಸುವ ಸಾಧ್ಯತೆಗಳಿವೆ ಎನ್ನುವ ಕೇಂದ್ರ ಸರಕಾರದ ಸೂಚನೆಯನ್ವಯ ಕರಾವಳಿಯಲ್ಲಿ ಹೆಚ್ಚಿನ ಗಮನ ನೀಡಲಾಗಿದ್ದು, ಸಮುದ್ರದಲ್ಲೂ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೋಸ್ಟ್‌ಗಾರ್ಡ್ ಮತ್ತು ಭಾರತೀಯ ನೌಕಾಪಡೆಗಳನ್ನು ಹೈಅಲರ್ಟ್‌ನಲ್ಲಿ ಇರಿಸಲಾಗಿದೆ. ಕೋಸ್ಟ್‌ಗಾರ್ಡ್ ತನ್ನ ಕಾವಲು ನೌಕೆಗಳ ಮೂಲಕ ಬಿಗು ಪಹರೆ ಕರಾವಳಿಯುದ್ದಕ್ಕೂ ಕೈಗೊಂಡಿದೆ. ಇದು ರಾಷ್ಟ್ರದ ಭದ್ರತಾ ವಿಚಾರವಾದ್ದರಿಂದ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಮಲ್ಪೆ ಕರಾವಳಿ ಕಾವಲು ಪೊಲೀಸರು ಅಲರ್ಟ್ ಆಗಿದ್ದು, ಮಲ್ಪೆ ಬಂದರಿನಲ್ಲಿ ದಿನಕ್ಕೆ ನಾಲ್ಕೈದು ಬಾರಿ ತೆರಳಿ ಪರಿಶೀಲನೆ ನಡೆಸಲಾಯಿತು. ಹೆಚ್ಚುವರಿ ಬೋಟುಗಳು, ಸಿಬ್ಬಂದಿ ನಿಯೋಜಿಸಲಾಗಿದ್ದು, ಸಮುದ್ರ ಗಸ್ತು ಹೆಚ್ಚಿಸುವ ಮೂಲಕ ತೀವ್ರ ನಿಗಾ ವಹಿಸಲಾಗಿದೆ. ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲೂ ಭದ್ರತೆ ಹೆಚ್ಚಿಸಲಾಗಿದೆ.

ಎನ್‌ಐಎ ಎಂಟ್ರಿ: ಪಾಕಿಸ್ತಾನ ಮೂಲದಿಂದ ಚಿಕ್ಕಮಗಳೂರು ಹಾಗೂ ಬೆಳ್ತಂಗಡಿಗೆ ಸ್ಯಾಟಲೈಟ್ ಕರೆಗಳು ಬಂದಿರುವ ಆಘಾತಕಾರಿ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕರೆಯ ಜಾಡು ಹಿಡಿದ ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ಮಂಗಳೂರಿಗೆ ಆಗಮಿಸಿದೆ. ಮೂರು ದಿನಗಳಿಂದ ನಗರದ ಲಾಡ್ಜ್‌ಗಳನ್ನು ಶೋಧಿಸುತ್ತಿರುವ ತಂಡ ಶನಿವಾರವೂ ಮಾಹಿತಿ ಸಂಗ್ರಹ ಮುಂದುವರಿಸಿದೆ. ಕೋಸ್ಟ್ ಗಾರ್ಡ್ ಹಾಗೂ ನೌಕಪಡೆಯ ಸಮುದ್ರದಲ್ಲಿ ತೀವ್ರ ನಿಗಾ ವಹಿಸಿದೆ. ನಿರಂತರ ಗಸ್ತು ಆರಂಭಿಸಿದೆ. ಕರಾವಳಿಯಲ್ಲಿನ ಎಲ್ಲ ಚಟುವಟಿಕೆಗಳ ಮೇಲೆ ಎನ್‌ಐಎ ತಂಡ ಈಗ ಹದ್ದಿನ ಕಣ್ಣು ಇಟ್ಟಿದೆ. ಶನಿವಾರ ಕೋಸ್ಟ್ ಗಾರ್ಡ್, ನೌಕಾಪಡೆ ಹಾಗೂ ನಗರದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ತಂಡದ ಸದಸ್ಯರು ಸುಮಾರು 3 ಗಂಟೆ ಕಾಲ ಚರ್ಚೆ ನಡೆಸಿದ್ದಾರೆ.

ಮೀನುಗಾರರಿಗೆ ಸೂಚನೆ: ಸಮುದ್ರದಲ್ಲಿ ವಿದೇಶಿ ಅಥವಾ ಸಂಶಯಾಸ್ಪದ ಬೋಟ್ ಸಂಚರಿಸುತ್ತಿದ್ದರೆ ಪೊಲೀಸ್ ಕಂಟ್ರೋಲ್ ರೂಮ್ 100ಕ್ಕೆ ಮಾಹಿತಿ ನೀಡುವಂತೆ ಮಂಗಳೂರು, ಉಡುಪಿ ಮೀನುಗಾರರಿಗೆ ಇಲಾಖೆ ತಿಳಿಸಿದೆ. ಮೀನುಗಾರಿಕೆ ಸಂದರ್ಭ ಮೀನುಗಾರರು ಗುರುತು ಚೀಟಿ ಹೊಂದಿರುವಂತೆಯೂ ಸೂಚಿಸಲಾಗಿದೆ.

ಎಲ್ಲಿ ನೋಡಿದರಲ್ಲಿ ಖಾಕಿ ಪಡೆ
ನಗರ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಭಯೋತ್ಪಾದನಾ ದಾಳಿಗೆ ಸಂಚು ನಡೆದಿರುವ ಮಾಹಿತಿ ಲಭಿಸಿದ್ದು, ಎಲ್ಲೆಡೆ ಭದ್ರತೆ, ತಪಾಸಣೆ ಚುರುಕುಗೊಳಿಸಲಾಗಿದೆ. ಮಂಗಳೂರಿನಲ್ಲಿ ನವಮಂಗಳೂರು ಬಂದರು, ಎಂಆರ್‌ಪಿಎಲ್, ಎನ್‌ಐಟಿಕೆ, ಕೆಐಒಸಿಎಲ್, ಎಂಸಿಎಫ್, ಟೋಟಲ್ ಗ್ಯಾಸ್, ನಗರ ವಾಣಿಜ್ಯ ಸಮುಚ್ಚಯ, ಆಸ್ಪತ್ರೆ, ಹೋಟೆಲ್‌ಗಳಲ್ಲಿ ಪೊಲೀಸರು, ಶ್ವಾನದಳ, ಬಾಂಬ್ ಪತ್ತೆದಳ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಕೆ.ಎಸ್ ಹೆಗ್ಡೆ, ಮುಡಿಪು ಇನ್ಫೋಸಿಸ್, ಸೂರ್ಯ ಇನ್ಫೋಟೆಕ್ ಮೊದಲಾದ ಕಡೆ ಶುಕ್ರವಾರ ರಾತ್ರಿ ಶ್ವಾನದಳ ಹಾಗೂ ಬಾಂಬ್ ಪತ್ತೆ ದಳದ ನೆರವಿನಲ್ಲಿ ಶೋಧ ನಡೆಸಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಉಡುಪಿಯಲ್ಲಿ ಇಂದ್ರಾಳಿ ರೈಲ್ವೆ ನಿಲ್ದಾಣ, ಮಣಿಪಾಲ ಮಾಹೆ ವಿದ್ಯಾಸಂಸ್ಥೆ, ಸಿಟಿ ಬಸ್ ನಿಲ್ದಾಣ, ಸರ್ವೀಸ್ ಬಸ್ ನಿಲ್ದಾಣ, ಮಲ್ಪೆ- ಗಂಗೊಳ್ಳಿ ಬಂದರು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಕಾರ್ಕಳ, ಕುಂದಾಪುರ ಬಸ್ ನಿಲ್ದಾಣಗಳಲ್ಲಿ ಶ್ವಾನದಳ, ಬಾಂಬ್ ಪತ್ತೆ ದಳ, ಪೊಲೀಸರಿಂದ ತಪಾಸಣೆ ನಡೆಸಲಾಗಿದೆ. ಎರಡೂ ಜಿಲ್ಲೆಗಳ ಪ್ರಮುಖ ಬಹುಮಹಡಿ ಕಟ್ಟಡಗಳ ಬಳಿ ಪೊಲೀಸರು ಎಚ್ಚರ ವಹಿಸಿದ್ದಾರೆ. ಆಯಕಟ್ಟಿನ ಪ್ರದೇಶಗಳಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ. ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ಮೇಲೂ ತೀವ್ರ ನಿಗಾ ಇಡಲಾಗಿದೆ.

ದಾಖಲೆಯಿಲ್ಲದೆ ರೂಂ ನೀಡದಂತೆ ಸೂಚನೆ
ಮಂಗಳೂರು ನಗರದ ಲಾಡ್ಜ್, ಹಾಸ್ಟೆಲ್, ಪೇಯಿಂಗ್ ಗೆಸ್ಟ್‌ಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಯಾವುದೇ ಗುರುತು ಚೀಟಿ ಅಥವಾ ವಿಳಾಸದ ದಾಖಲೆ ಇಲ್ಲದೆ ರೂಮು ನೀಡಬಾರದು ಎಂದು ಕಟ್ಟಡದ ಮಾಲೀಕರಿಗೆ ಸೂಚನೆ ನೀಡಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ತಕ್ಷಣ ಪೊಲೀಸ್ ಕಂಟ್ರೋಲ್ ರೂಂ 100ಗೆ ತಿಳಿಸಲು ಪೊಲೀಸರು ಸಾರ್ವಜನಿಕರಲ್ಲಿ ಕೋರಿದ್ದಾರೆ.

ಸಿಬ್ಬಂದಿ ಅಲರ್ಟ್ ಆಗಿರಲು ಸೂಚನೆ
ಕೇಂದ್ರ ಗುಪ್ತಚರ ವರದಿ ಆಧರಿಸಿ ಎಲ್ಲ ಪೊಲೀಸ್ ಕಮಿಷನರೇಟ್‌ಗಳ ಆಯುಕ್ತರಿಗೆ ಮತ್ತು ಪ್ರಮುಖ ಜಿಲ್ಲೆಗಳ ಎಸ್‌ಪಿಗಳಿಗೆ ತುರ್ತು ಸಂದೇಶ ನೀಡಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರು, ಕಟ್ಟೆಚ್ಚರ ವಹಿಸುವಂತೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಪಿ.ಎಸ್. ಖುದ್ದಾಗಿ ಶೋಧ ನೇತೃತ್ವ ವಹಿಸಿದ್ದಾರೆ. ವಾಣಿಜ್ಯ ಸಮುಚ್ಚಯ, ಆಸ್ಪತ್ರೆ, ಐಟಿ ಕಂಪನಿಗಳ ಭದ್ರತಾ ಸಿಬ್ಬಂದಿಗೆ ಹೆಚ್ಚು ಅಲರ್ಟ್ ಆಗಿರುವಂತೆ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ. ಮೇಲ್ವಿಚಾರಣೆಗೆ ಡಿಸಿಪಿ ಮತ್ತು ಎಸಿಪಿ ದರ್ಜೆಯ ಅಧಿಕಾರಿಗಳಿಗೆ ವಿವಿಧ ಪ್ರದೇಶಗಳ ಉಸ್ತುವಾರಿ ವಹಿಸಲಾಗಿದೆ. ಜನನಿಬಿಡ ಪ್ರದೇಶಗಳಲ್ಲಿ ತೀವ್ರ ತಪಾಸಣೆಗೆ ಸೂಚನೆ ನೀಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೂ ಇದೇ ರೀತಿ ಸೂಚನೆ ನೀಡಿದ್ದಾರೆ.

ದೇವಸ್ಥಾನಗಳಲ್ಲಿ ತಪಾಸಣೆ
ದ.ಕ, ಉಡುಪಿ ಜಿಲ್ಲೆಗಳ ಪ್ರಮುಖ ದೇವಾಲಯಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕುದ್ರೋಳಿ ಶ್ರೀ ಗೋಕರ್ಣನಾಥ, ಮಂಗಳಾದೇವಿ, ಕದ್ರಿ ಮಂಜುನಾಥೇಶ್ವರ, ಉಡುಪಿ ಕೃಷ್ಣ ಮಠ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಗಳ ಭದ್ರತಾ ಸಿಬ್ಬಂದಿ ಅಲರ್ಟ್ ಆಗಿರುವಂತೆ ಸೂಚನೆ ನೀಡಲಾಗಿದೆ. ಹೆಚ್ಚಿನ ಕಡೆ ತಪಾಸಣೆ, ನಿಗಾ ಇಡಲಾಗುತ್ತಿದೆ. ಜನನಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಹಾಗೆಂದು ಭಯ ಪಡುವ ಅಗತ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಸರಗೋಡಿಗೆ ಸೂಚನೆ ಇಲ್ಲ
ಕಾಸರಗೋಡು: ಉಗ್ರರಿಂದ ಬೆದರಿಕೆ ಇರುವ ಬಗ್ಗೆ ಇದುವರೆಗೆ ಯಾವುದೇ ಎಚ್ಚರಿಕೆ ಸಂದೇಶ ಬಂದಿಲ್ಲ ಎಂದು ಕಾಸರಗೋಡು ಜಿಲ್ಲಾ ಉಪಪೊಲೀಸ್ ವರಿಷ್ಠಾಧಿಕಾರಿ ಶಿಲ್ಪಾ ಡಿ. ತಿಳಿಸಿದ್ದಾರೆ. ಸಮುದ್ರದಲ್ಲಿ ಅಪರಿಚಿತ ವ್ಯಕ್ತಿಗಳು, ಬೋಟ್‌ಗಳು ಕಂಡಲ್ಲಿ ಮಾಹಿತಿ ನೀಡುವಂತೆ ಮೀನುಗಾರರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕಿ ಅಜಿತಾ ತಿಳಿಸಿದ್ದಾರೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا