Urdu   /   English   /   Nawayathi

ಇಂದಿರಾ ಕ್ಯಾಂಟೀನ್, ಅನ್ನಭಾಗ್ಯಕ್ಕೆ ಕತ್ತರಿ ಹಾಕಿದರೆ ಉಗ್ರ ಹೋರಾಟ: ಬಿಎಸ್​​ವೈಗೆ ಸಿದ್ದರಾಮಯ್ಯ ಎಚ್ಚರಿಕೆ

share with us

ಬೆಂಗಳೂರು: 17 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ನಮ್ಮ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಯೋಜನೆಗಳಾದ ಅನ್ನಭಾಗ್ಯ ಹಾಗೂ ಇಂದಿರಾ ಕ್ಯಾಂಟೀನ್ ಕಾರ್ಯಕ್ರಮಗಳಿಗೆ ಕತ್ತರಿ ಹಾಕಿದರೆ ಕಾಂಗ್ರೆಸ್ ಸದನದ ಒಳಗೆ ಮತ್ತು ಹೊರಗೆ ಉಗ್ರ ಹೋರಾಟ ನಡೆಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಬಡತನ ರೇಖೆ ಕೆಳಗಿನ 4 ಕೋಟಿ ಜನರಿಗೆ ಎರಡು ಹೊತ್ತು ಊಟ ಮಾಡಬೇಕು ಎಂದು ತೀರ್ಮಾನಿಸಿ ಉಚಿತವಾಗಿ ಏಳು ಕೆಜಿ ಅಕ್ಕಿ ಕೊಡುವ ಯೋಜನೆ ಆರಂಭಿಸಿದ್ದೇವೆ. ಆದರೆ, ಯಡಿಯೂರಪ್ಪ ಸಿಎಂ ಆದ ನಂತರ ಏಳು ಕೆಜಿಯಲ್ಲಿ ಕಡಿಮೆ ಮಾಡುವ ಚರ್ಚೆ ನಡೆದಿದೆ. ಕಿಸಾನ್ ಸಮ್ಮಾನ್ ಕಾರ್ಯಕ್ರಮಕ್ಕೆ ಹಣ ಹೊಂದಿಸಲು ಅನ್ನಭಾಗ್ಯದ ಅಕ್ಕಿ ಕಡಿಮೆ ಮಾಡವ ಚರ್ಚೆ ನಡೆದಿದೆ. ಕೇಂದ್ರದ 6 ಸಾವಿರ ಹಣದ ಜೊತೆ ರಾಜ್ಯ 4 ಸಾವಿರ ಸೇರಿಸಿ ರೈತರಿಗೆ 10 ಸಾವಿರ ಕೊಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಇದಕ್ಕೆ ಹಣ ಹೊಂದಿಸಲು ಬಡವರಿಗೆ ಕೊಡುವ ಅಕ್ಕಿ‌ ಕಡಿತ ಮಾಡಿ, ಅದರಲ್ಲಿ ಹಣ ಉಳಿಸಿ ಕಿಸಾನ್ ಸಮ್ಮಾನ್ ಕಾರ್ಯಕ್ರಮಕ್ಕ ಕೊಡುವ ನಿರ್ಧಾರ ಬಡವರಿಗೆ ಮಾಡಿದ ಅನ್ಯಾಯವಾಗಲಿದೆ, ಕಾಂಗ್ರೆಸ್ ಇದನ್ನು ತೀವ್ರ ವಿರೋಧಿಸಲಿದೆ. ನಾವು ಬೀದಿಗಿಳಿದು ತೀವ್ರ ಹೋರಾಟ ನಡೆಸುತ್ತೇವೆ. ಸದನದ ಒಳಗೆ, ಹೊರಗೆ ಹೋರಾಟ ಮಾಡಲಿದ್ದೇವೆ. ಅಂತಹ ಆಲೋಚನೆ ಮಾಡಿದ್ದರೆ, ಚರ್ಚೆ ಇದ್ದರೆ, ಚಿಂತನೆ ಇದ್ದರೆ ಕೂಡಲೇ ಸರ್ಕಾರ ಅದನ್ನು ಕೈಬಿಡಬೇಕು ಎಂದು ಒತ್ತಾಯ ಮಾಡಿದರು. ಬಡವರ ಹಸಿವು ನೀಗಿಸಲು ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ತಂದಿದ್ದೇವೆ, ಸರ್ಕಾರ ಇದಕ್ಕೆ ಹಣ ನೀಡುತ್ತಿದ್ದು, ಬಿಬಿಎಂಪಿ ಇದರ ನಿರ್ವಹಣೆ ಮಾಡುತ್ತಿದೆ. ಆದರೆ, ಈಗ ಬಿಬಿಎಂಪಿಯೇ ವೆಚ್ಚ ಭರಿಸಲಿ ಎಂದು‌ ಸರ್ಕಾರ ಹೇಳಲು ಹೊರಟಿರುವುದು ಸರಿಯಲ್ಲ. ಬೆಂಗಳೂರಿನಲ್ಲಿ 190 ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್ ಇವೆ, ವರ್ಷಕ್ಕೆ ಇದರ ನಿರ್ವಹಣೆಗೆ 200 ಕೋಟಿಯೂ ಆಗಲ್ಲ. ಇದರ ಜೊತೆ ಬೆಂಗಳೂರು ಹೊರಗೆ 248 ಕ್ಯಾಂಟೀನ್ ಮಂಜೂರು ಮಾಡಿದ್ದೆವು, ಆದರೆ, 159 ಮಾತ್ರ ಆಗಿವೆ. ಇಲ್ಲಿಯವರೆಗೂ ಎಲ್ಲಾ ಪಟ್ಟಣಗಳಲ್ಲಿ ಆರಂಭ ಮಾಡದೇ ಇರುವುದು ಸರಿಯಲ್ಲ, ಅಗತ್ಯಬಿದ್ದರೆ ಇನ್ನು ಹೆಚ್ಚು ಮಂಜೂರು ಮಾಡಲಿ. ಬಡವರಿಗೆ ಕಡಿಮೆ ದರದಲ್ಲಿ ಪೌಷ್ಟಿಕ ಆಹಾರ ಸಿಗಲು ಎಂದು ಇಂದಿರಾ ಕ್ಯಾಂಟೀನ್, ಆಹಾರ ಭಾಗ್ಯ ಎರಡನ್ನೂ ಸರ್ಕಾರ ನಡೆಸಬೇಕು. ಇದರಲ್ಲಿ ಅನುದಾನ ಕಡಿಮೆ ಮಾಡಬಾರದು. ಇವುಗಳಿಗೆ ಕತ್ತರಿ ಹಾಕುವ ಪ್ರಯತ್ನ ಮಾಡಿದರೆ ನಾವು ಸುಮ್ಮನಿರಲ್ಲ, ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಸಿದರು. ಯಡಿಯೂರಪ್ಪ ಮುಖ್ಯಮಂತ್ರಿ ಆಗಿ 22 ದಿನ ಆಯ್ತು, ಆದರೆ, ರಾಜ್ಯದಲ್ಲಿ ಇನ್ನೂ ಸರ್ಕಾರವೇ ಅಸ್ತಿತ್ವಕ್ಕೆ ಬಂದಿಲ್ಲ. ಪ್ರವಾಹ, ಬರ ಎರಡೂ ಇದೆ, ರಾಜ್ಯದಲ್ಲಿ 7 ಜಿಲ್ಲೆಯ 42 ತಾಲೂಕುಗಳಲ್ಲಿ ತೀವ್ರ ಬರ ಇದೆ‌. ಆದರೆ, ಇಂದಿನವರಗೂ ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿಲ್ಲ. ಬರಗಾಲ ಪೀಡಿತ ಎಂದು ಘೋಷಣೆ ಮಾಡದೇ ಬರ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಬೆಳೆ ನಾಶವಾಗಿ, ಬೀಜ,ಗೊಬ್ಬರದ ಹಣ ನಷ್ಟವಾಗಿದೆ, ಮಳೆ ಇಲ್ಲದೇ ಜಾನುವಾರುಗಳಿಗೆ ಮೇವಿಲ್ಲ, ಜನರಿಗೆ ಉದ್ಯೋಗ ಇಲ್ಲ, ಬರ ಪರಿಹಾರ ಕಾರ್ಯಕ್ರಮ ಆರಂಭ ಆಗಿಲ್ಲ. ಈ ಸರ್ಕಾರ ರೈತರ ಬಡವರ ಕಷ್ಟಗಳಿಗ ಸ್ಪಂದಿಸುತ್ತಿಲ್ಲ, ಕೂಡಲೇ ಬರ ಪ್ರದೇಶ ಘೋಷಣೆ ಮಾಡಿ ಬರ ಪರಿಹಾರ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಮೋದಿಯಿಂದ ಮಲತಾಯಿ‌ ಧೋರಣೆ:

25 ಸಂಸದರನ್ನು ಗೆಲ್ಲಿಸಿದರೂ ರಾಜ್ಯದ ಬಗ್ಗೆ ಪ್ರಧಾನಿ ಮೋದಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಸ್ವತಃ ನೆರೆ ವೀಕ್ಷಣೆಗೆ ಬಾರದೆ ಸಚಿವರನ್ನು ಕಳಿಸಿದ್ದಾರೆ. ಅವರೂ ಬಂದು ಏನೂ ಘೋಷಣೆ ಮಾಡಲಿಲ್ಲ, ಇಷ್ಟು ಸಾಲದು ಎನ್ನುವಂತೆ ಎಷ್ಟು ನಷ್ಟ ಎಂದು ವರದಿಯೇ ಸಿದ್ದವಾಗಿಲ್ಲ, ಕೇಂದ್ರಕ್ಕೆ ವರದಿ ಸಲ್ಲಿಕೆ ಮಾಡಿಲ್ಲ, ಸಮೀಕ್ಷೆಯನ್ನೂ ಮಾಡಿಲ್ಲ, ಪರಿಹಾರಕ್ಕೆ ಮನವಿಯೂ ಕೊಟ್ಟಿಲ್ಲ. ನಿನ್ನೆ ಸಿಎಂ ಬಿಎಸ್​​​ವೈ ಮೋದಿ ಭೇಟಿ ಮಾಡಿದ್ದಾರೆ. ಆದರೆ, ಮೋದಿ ಏನು ಮಾತನಾಡಿಲ್ಲ ಪರಿಹಾರ ಕೊಡುತ್ತಾರೆ ಎಂದು ಭರವಸೆ ಸಿಕ್ಕಿದೆ ಎಂದು ಇವರೇ ಹೇಳಿಕೊಳ್ಳುತ್ತಿದ್ದಾರಷ್ಟೇ. ಇವರು ವರದಿ ನೀಡಬೇಕು, ಕೇಂದ್ರ ತಂಡ ಕಳಿಸಬೇಕು ನಂತರ ಹಣ ಮಂಜೂರಾಗಬೇಕು. ಇದೆಲ್ಲಾ ಆಗೋದು ಯಾವಾಗ? ಇಷ್ಟು ಕುರುಡಾದ, ಕಣ್ಣು ಕಿವಿ ಇಲ್ಲದ ಸರ್ಕಾರವನ್ನ ನಾನು ನೋಡಿಲ್ಲ ಎಂದರು.

ನೆರೆಹನಿ ಪ್ರದೇಶ ಪ್ರವಾಸ:

ರಾಜ್ಯದಲ್ಲಿ ಬರ, ಪ್ರವಾಹ ಪರಿಸ್ಥಿತಿ ತಲೆದೂರಿದ್ದು, ಸೋಮವಾರದಿಂದ ಬಾದಾಮಿ‌ ಹಾಗೂ ಇತರ ಪ್ರದೇಶಕ್ಕೆ ಪ್ರವಾಸ ಮಾಡಲಿದ್ದೇನೆ. ಕೇಂದ್ರಕ್ಕೆ ಯಡಿಯೂರಪ್ಪ ಹೆದರುತ್ತಿದ್ದಾರಾ ಎನ್ನುವ ಅನುಮಾನ ಮೂಡುತ್ತಿದೆ. ಹಿಂದೆ ನಾನು ಸಾಲಮನ್ನಾ, ಮಹದಾಯಿ ವಿಚಾರದಲ್ಲಿ ಸರ್ವಪಕ್ಷ ನಿಯೋಗ ಕರೆದೊಯ್ದಾಗಲೂ ಮೋದಿ ಎದುರು ಇವರು ಮಾತನಾಡುತ್ತಿರಲಿಲ್ಲ,‌ ಸುಮ್ಮನೆ ಕೂತಿರುತ್ತಿದ್ದರು. ಈಗಲೂ ಪರಿಹಾರ ಕೇಳಲು ಭಯವಿದ್ದರೆ ಸರ್ವ ಪಕ್ಷ ನಿಯೋಗವನ್ನು ಕರೆದೊಯ್ಯಿರಿ. ಇಷ್ಟು ನಿರ್ಲಕ್ಷ್ಯ, ಲಜ್ಜೆಗೆಟ್ಟ ಸರ್ಕಾರ ನಾನು ನೋಡಿಲ್ಲ ಎಂದರು.

ಅಧಿವೇಶನ ಕರೆಯಿರಿ:

ರಾಜ್ಯದಲ್ಲಿ ನೆರೆ ಹಾವಳಿ, ಬರಗಾಲ ತಾಂಡವವಾಡುತ್ತಿದ್ದು, ಇದರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಕೂಡಲೇ ಇದು ಬಗ್ಗೆಯೂ ಚರ್ಚೆಗೆ ವಿಧಾನಸಭೆ ಅಧಿವೇಶನ ಕರೆಯಬೇಕು ರಾಜ್ಯದಲ್ಲಿನ ನೆರೆ, ಬರದ ಬಗ್ಗೆ ಸದನದಲ್ಲಿ ಚರ್ಚೆ ನಡೆಸಿ ಸಲಹೆ ನೀಡುತ್ತೇವೆ ಎಂದರು. ಇವರು ಅಧಿಕಾರಕ್ಕೆ ಬಂದಿದ್ದೇ ಸಂವಿಧಾನಬಾಹಿರ. ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ, ಇವರದ್ದು‌ ಪ್ರಜಾಪ್ರಭುತ್ವ ವಿರೋಧಿ ಸರ್ಕಾರ. ಯಾವುದೇ ತತ್ವ ಸಿದ್ದಾಂತ ಇಲ್ಲ, ಅದು ಗೊತ್ತೇ ಇಲ್ಲ. ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್, ಬರ-ನೆರೆ ಈ ಮೂರು ವಿಷಯದಲ್ಲಿ‌ ಸರ್ಕಾರದ ಗಮನ ಸೆಳೆಯುತ್ತಿದ್ದೇವೆ, ಸ್ಪಂದಿಸದೇ ಇದ್ದಲ್ಲಿ‌ ಹೋರಾಟ ಮಾಡುತ್ತೇವೆ ಎಂದರು.

ಅಧಿಕಾರಿಗಳು ಸಾಕೆಂದಾದರೆ ಸಿಎಂ ಏಕೆ ಬೇಕು:

ನೆರೆ ಪರಿಹಾರ ಕಾರ್ಯಾಚರಣೆ ನಡೆಸಲಾಗುತ್ತಿದೆ, ಸಚಿವರಿಲ್ಲದಿದ್ದರೇನು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎನ್ನುವುದಾದರೆ ನೀವು ಯಾಕೆ ಬೇಕು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳೇ ಆಡಳಿತ ನಡೆಸಲಿ. ಐದು ವರ್ಷಕ್ಕೊಮ್ಮೆ‌ ಚುನಾವಣೆ ಯಾಕೆ ಬೇಕು ಎಂದು ಯಡಿಯೂರಪ್ಪ ಸಮರ್ಥನೆಯನ್ನು ಟೀಕಿಸಿದರು. ಮೊದಲ ಬಾರಿ ಜಿಲ್ಲಾ ಉಸ್ತುವಾರಿ ಸಚಿವರಿಲ್ಲದೇ ಡಿಸಿಗಳೇ ಧ್ವಜಾರೋಹಣ ಮಾಡಿದ್ದಾರೆ. ಪ್ರಜಾಪ್ರಭುತ್ವ ಇದೆ ಎನ್ನಬೇಕಾ? ಅಧಿಕಾರಿಗಳು ಧ್ವಜಾರೋಹಣ ಮಾಡಲು ಬಿಟ್ಟಿದ್ದು ನಾಚಿಕೆಗೇಡಿನ ಸಂಗತಿ ಎಂದು‌ ಕಿಡಿಕಾರಿದರು.

ಫೋನ್ ಕದ್ದಾಲಿಕೆ‌ ತನಿಖೆಯಾಗಲಿ:

ಫೋನ್ ಕದ್ದಾಲಿಕೆ ವಿಚಾರ ನನಗೆ ಗೊತ್ತಿಲ್ಲ, ನನ್ನ ಫೋನ್ ಟ್ಯಾಪ್ ಆಗಿಲ್ಲ. ನನ್ನ ಪಿಎ ಫೋನ್ ಟ್ಯಾಪ್ ಮಾಡಿದ್ದಾರೆ ಅಂತಾ ಹೇಳಲಾಗುತ್ತಿದೆ. ಸಾಕಷ್ಟು ಜನರ ಫೋನ್ ಟ್ಯಾಪ್ ಮಾಡಿರುವ ಆರೋಪ ಕೇಳಿಬಂದಿದೆ. ಸತ್ಯ ಬಯಲಾಗಬೇಕು, ಯಾರು ಇದರಲ್ಲಿ ಭಾಗಿಯಾಗಿದ್ದಾರೋ ಅವರಿಗೆ ಶಿಕ್ಷೆಯಾಗಲಿ, ಯಾವ ತನಿಖೆ ಎಂದು ಸರ್ಕಾರವೇ ನಿರ್ಧರಿಸಲಿ, ಒಟ್ಟಿನಲ್ಲಿ ತನಿಖೆ ಆಗಲಿ ಎಂದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا