Urdu   /   English   /   Nawayathi

ಘಟ್ಟದ ಮಳೆಗೆ ಭರ್ತಿಯಾದ ನದಿಗಳು

share with us

ಮಂಗಳೂರು/ಉಡುಪಿ: 22 ಜುಲೈ 2019 (ಫಿಕ್ರೋಖಬರ್ ಸುದ್ದಿ) ದಕ್ಷಿಣ ಕನ್ನಡ, ಉಡುಪಿ ಜಿಲ್ಲಾದ್ಯಂತ ಭಾನುವಾರ ಸಾಧಾರಣ ಮಳೆಯಾಗಿದೆ. ಆದರೆ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನೇತ್ರಾವತಿ ಸಹಿತ ಪಶ್ಚಿಮಘಟ್ಟದಿಂದ ಹರಿದುಬರುವ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಈ ಬಾರಿಯ ಅಧಿಕ ಮಟ್ಟದಲ್ಲಿ ಹರಿಯುತ್ತಿವೆ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಶನಿವಾರಕ್ಕಿಂತ ಒಂದು ಮೀಟರ್ ಹೆಚ್ಚಳ ಕಂಡಿದ್ದು, 23 ಮೀ.ನಲ್ಲಿತ್ತು. ಇಲ್ಲಿ ಅಪಾಯದ ಮಟ್ಟ 26.5 ಮೀ. ಆಗಿದೆ. ಬಂಟ್ವಾಳದಲ್ಲಿ ನೇತ್ರಾವತಿ ಮಟ್ಟ 5.7 ಮೀ. (ಅಪಾಯದ ಮಟ್ಟ 8.5 ಮೀ.) ದಾಖಲಾಗಿದೆ. ರಾತ್ರಿ ವೇಳೆ ಮಳೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಕಂಟ್ರೋಲ್ ರೂಂ ತಿಳಿಸಿದೆ.

ನಿರೀಕ್ಷೆಯಷ್ಟಿಲ್ಲ ಮಳೆ: ಉಡುಪಿ ಜಿಲ್ಲೆಯಲ್ಲಿ ಶನಿವಾರ ಉತ್ತಮ ಮಳೆಯಾಗಿತ್ತು. ಆದರೆ ಭಾನುವಾರ ಮಳೆ ಪ್ರಮಾಣ ಇಳಿಕೆಯಾಗಿದ್ದು, ಬಹುಭಾಗ ಬಿಸಿಲು- ಮೋಡ ಕವಿದ ವಾತಾವರಣವಿತ್ತು. ನಡುನಡುವೆ ಸಾಮಾನ್ಯ ಮಳೆಯಾಗಿದೆ. ದ.ಕ. ಜಿಲ್ಲೆಯಲ್ಲಿ ದಿನವಿಡೀ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಅಲ್ಲಲ್ಲಿ ಕೆಲವೆಡೆ ಸಾಧಾರಣ, ಕೆಲವೆಡೆ ಉತ್ತಮ ಮಳೆ ಸುರಿದಿದೆ. ರೆಡ್ ಅಲರ್ಟ್ ನಿರೀಕ್ಷೆಯಂತೆ ಮಳೆಯಾಗಿಲ್ಲ.

ಅಲೆಗಳೇಳುವ ಎಚ್ಚರಿಕೆ: ಭಾರತೀಯ ಹವಾಮಾನ ಇಲಾಖೆ ಮತ್ತೊಮ್ಮೆ ಜುಲೈ 24ರವರೆಗೆ ರೆಡ್ ಅಲರ್ಟ್ ಘೋಷಿಸಿದ್ದು, ಕರಾವಳಿಯಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಪ್ರಕಟಿಸಿದೆ. ಸಮುದ್ರದಿಂದ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಮಂಗಳೂರಿನಿಂದ ಕಾರವಾರದವರೆಗೆ 3.7-4.3 ಮೀ. ಎತ್ತರದ ಅಲೆಗಳು ದಡದತ್ತ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಇಲಾಖೆ ಎಚ್ಚರಿಸಿದೆ.
ಭಾನುವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ ಹಿಂದಿನ 24 ಗಂಟೆಯ ಅವಧಿಯಲ್ಲಿ ದ.ಕ. ಜಿಲ್ಲೆಯ ಬೆಳ್ತಂಗಡಿ 76, ಬಂಟ್ವಾಳ 57, ಮಂಗಳೂರು 52, ಪುತ್ತೂರು 61, ಸುಳ್ಯದಲ್ಲಿ 41 ಮಿ.ಮೀ ಮಳೆಯಾಗಿದೆ. ಉಡುಪಿ 87.3, ಕುಂದಾಪುರ 100.1, ಕಾರ್ಕಳ 108.4. ಮಿ. ಮೀ. ಮಳೆಯಾಗಿದೆ. ಮಂಗಳೂರಿನಲ್ಲಿ ದಿನ ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಯಸ್ ಕನಿಷ್ಠ 23.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಕಾಸರಗೋಡಲ್ಲಿ ನಾಳೆ ರೆಡ್ ಅಲರ್ಟ್: ಕಾಸರಗೊಡು ಜಿಲ್ಲೆಯಲ್ಲಿ ಮಧ್ಯಾಹ್ನ ವೇಳೆಗೆ ಮಳೆ ಪ್ರಮಾಣ ಕಡಿಮೆಯಾಗಿದ್ದರೂ, ಸಂಜೆಯಿಂದ ಮತ್ತೆ ಬಿರುಸುಪಡೆದುಕೊಂಡಿದೆ. ರಾಜ್ಯದಲ್ಲಿ ಬುಧವಾರದವರೆಗೂ ಬಿರುಸಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜಿಲ್ಲೆಯಲ್ಲಿ ಜುಲೈ 22ರಂದು ಆರೆಂಜ್ ಹಾಗೂ 23ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ.

ಚೆಲ್ಯಡ್ಕ ಸೇತುವೆ ಮುಳುಗಡೆ
ಈಶ್ವರಮಂಗಲ: ಪುತ್ತೂರು-ಕುಂಜೂರುಪಂಜ-ಪಾಣಾಜೆ ರಸ್ತೆಯಲ್ಲಿನ ಚೆಲ್ಯಡ್ಕ ಮುಳುಗು ಸೇತುವೆ ಈ ಬಾರಿಯ ಮಳೆಗಾಲದಲ್ಲಿ ಭಾನುವಾರ ಬೆಳಗ್ಗೆ ಪ್ರಥಮ ಬಾರಿಗೆ ಮುಳುಗಡೆಯಾಗಿದೆ. ಕಳೆದ ವರ್ಷದ ಮಳೆಗಾಲದಲ್ಲಿ ಚೆಲ್ಯಡ್ಕ ಸೇತುವೆ ನಾಲ್ಕು ಬಾರಿ ಜಲಾವೃತಗೊಂಡಿತ್ತು.
ಸೇತುವೆಯ ಮೇಲೆ ನೀರು ಹರಿಯತೊಡಗಿದ ಹಿನ್ನೆಲೆಯಲ್ಲಿ ವಾಹನಗಳ ಓಡಾಟ ಸ್ಥಗಿತಗೊಂಡಿತು. ಖಾಸಗಿ ಬಸ್‌ಗಳು ಸಂಟ್ಯಾರು ಮೂಲಕ ಸಂಚರಿಸಿದ್ದು, ಪ್ರಯಾಣಿಕರು ಸಮಸ್ಯೆಗೊಳಗಾದರು.

ಅಪಾಯದ ಸೂಚನೆ: ಪ್ರತೀ ಮಳೆಗಾಲದಲ್ಲೂ ಮುಳುಗುವ ಮೂಲಕ ಸುದ್ದಿಯಾಗುವ ‘ಮುಳುಗು ಸೇತುವೆ’ ಎಂದೇ ಗುರುತಿಸಲ್ಪಟ್ಟಿರುವ ಇರ್ದೆ ಗ್ರಾಮದ ಚೆಲ್ಯಡ್ಕ ಸೇತುವೆ ತಳಭಾಗದಲ್ಲಿ ಬಿರುಕು ಬಿಟ್ಟಿದೆ. ಸೇತುವೆಯ ಆಧಾರಸ್ತಂಭದ ಕಗ್ಗಲ್ಲುಗಳು ಹಾಗೂ ಅಳವಡಿಸಲಾಗಿದ್ದ ಕಬ್ಬಿಣದ ರಾಡ್‌ಗಳು ಕಳಚಿಕೊಂಡು ಅಪಾಯಕಾರಿ ಸ್ಥಿತಿಯಲ್ಲಿದೆ. ಈ ಬಾರಿಯ ಮಳೆಗೆ ಆಧಾರಸ್ತಂಭದ ಕಲ್ಲುಗಳು ಇನ್ನಷ್ಟು ಕಳಚಿಕೊಂಡಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಅಧಿಕವಾಗಿದೆ.

ರಸ್ತೆ ಸಮುದ್ರ ಪಾಲಾಗುವ ಭೀತಿ
ಉಳ್ಳಾಲ: ಗಾಳಿಮಳೆಯಿಂದಾಗಿ ಸೋಮೇಶ್ವರ ಗ್ರಾಮದ ರಸ್ತೆ ಅಪಾಯದಲ್ಲಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದರಿಂದ ಸ್ಥಳೀಯರು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ.
ಸೋಮೇಶ್ವರ- ತಲಪಾಡಿ ಸಂಪರ್ಕಿಸುವ ರಸ್ತೆವರೆಗೆ ಸಮದ್ರದ ಅಲೆಗಳು ಬಂದಿದ್ದು, ಮಳೆ, ಗಾಳಿ ಬಂದಲ್ಲಿ ರಸ್ತೆಯೇ ಸಮುದ್ರ ಪಾಲಾಗಲಿದೆ. ಸಮುದ್ರ ತಟದಲ್ಲಿರುವ ಮರ, ವಿದ್ಯುತ್ ಕಂಬಗಳೂ ಬಿದ್ದಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಪೆರಿಬೈಲ್‌ನಲ್ಲಿ ತಡೆಗೋಡೆ ರೂಪದಲ್ಲಿ ಹಾಕಲಾಗಿದ್ದ ಕಲ್ಲುಗಳು ಸಮುದ್ರ ಪಾಲಾಗುತ್ತಿವೆ. ಇದೆಕ್ಕೆ ಅಕ್ರಮ ಮರಳುಗಾರಿಕೆಯೇ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا