Urdu   /   English   /   Nawayathi

ದಕ್ಷಿಣ ಕನ್ನಡಕ್ಕೀಗ ಡೆಂಘೆ ಕಾಟ

share with us

ಮಂಗಳೂರು/ಕಡಬ: 18 ಜುಲೈ 2019 (ಫಿಕ್ರೋಖಬರ್ ಸುದ್ದಿ) ಈ ವರ್ಷ ಮಲೇರಿಯಾ ಸಂಖ್ಯೆ ತೀವ್ರ ಕುಸಿತ ಕಂಡಿದ್ದು, ಇತ್ತೀಚಿನವರೆಗೂ ಮಲೇರಿಯಾ ರಾಜಧಾನಿಯೆಂದೇ ಕರೆಯಲ್ಪಡುತ್ತಿದ್ದ ಮಂಗಳೂರು ಈ ವರ್ಷ ಡೆಂಘೆ ತವರೂರಾಗಿ ಮಾರ್ಪಾಡು ಹೊಂದಿದೆ. ಮಂಗಳೂರು ಮಾತ್ರವಲ್ಲ, ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಡೆಂಘೆ ಜ್ವರ ವ್ಯಾಪಕವಾಗುತ್ತಿದೆ. 200ಕ್ಕೂ ಹೆಚ್ಚು ಡೆಂಘೆ ಪ್ರಕರಣಗಳು ನಗರವೊಂದರಲ್ಲೇ ಕಾಣಿಸಿಕೊಂಡಿದ್ದರೆ, ಜಿಲ್ಲಾದ್ಯಂತ 350ರಷ್ಟು ಪ್ರಕರಣಗಳು ಸದ್ಯ ವರದಿಯಾಗಿವೆ. ಈಗಲೂ ಆಸ್ಪತ್ರೆಗಳಿಗೆ ಜ್ವರದ ಹಿನ್ನೆಲೆಯಲ್ಲಿ ರೋಗಿಗಳು ಎಡತಾಕುವುದು ನಡೆಯುತ್ತಿದೆ. ಆರೋಗ್ಯ ಇಲಾಖೆ ಹೇಳುವ ಲೆಕ್ಕ ಜಿಲ್ಲೆಯಲ್ಲಿ ಆಸ್ಪತ್ರೆಗಳಿಗೆ ಬರುತ್ತಿರುವವರ ಸಂಖ್ಯೆಗೆ ಹೋಲಿಕೆಯಾಗುತ್ತಿಲ್ಲ. ಮಂಗಳೂರಿನ ದಕ್ಷಿಣ ಭಾಗದಲ್ಲಿ ಡೆಂಘೆ ತೀವ್ರಗೊಂಡಿದೆ. ಜೂನ್‌ನಲ್ಲಿ ಮುಳಿಹಿತ್ಲು ಗೋರಕ್ಷದಂಡು ಬಳಿ ಕೆಲ ಮನೆಗಳಲ್ಲಿ ಕಾಣಿಸಿಕೊಂಡ ಡೆಂಘೆ ಈಗ ಕಾಳ್ಗಿಚ್ಚಿನಂತೆ ಹರಡತೊಡಗಿದೆ. ಗುಜ್ಜರಕೆರೆಯ ಸುತ್ತಮುತ್ತಲಿನ ಅರಕೆರೆ ಬೈಲು, ಜಲಜಮ್ಮ ಕಾಂಪೌಂಡ್, ಅಂಬಾನಗರ, ಮಂಗಳಾದೇವಿ, ಜೆಪ್ಪು ಮುಂತಾದೆಡೆಗಳಲ್ಲಿ ಪ್ರಕರಣಗಳು ಪತ್ತೆಯಾಗತೊಡಗಿವೆ. ನಮ್ಮಲ್ಲಿ ಪ್ರತೀ ಬಾರಿ ಮಲೇರಿಯಾ ಬರುತ್ತಿತ್ತು, ಆದರೆ ಈ ಬಾರಿ ನಮ್ಮ ಪ್ರದೇಶದ 9 ಮನೆಗಳ 18 ಮಂದಿಗೆ ಡೆಂಘೆ ಜ್ವರ ಬಂದಿದೆ. ಒಂದೇ ಮನೆಯ ರಂಜಿತ್, ಒಮಿತಾ ದಂಪತಿ, ಅವರ ಮಕ್ಕಳಾದ ಯಶ್ವಿತ್, ರೀಶಾನ್, ದುರ್ಗೇಶ್, ಲಾವಣ್ಯ, ರಜನಿ, ಸೌಜನ್ಯಾ ಎಂಬುವರು ಆಸ್ಪತ್ರೆ ಸೇರಿದ್ದಾರೆ ಎಂದು ಜಲಜಮ್ಮ ಕಾಂಪೌಂಡ್‌ನ ಆಶಾ ‘ವಿಜಯವಾಣಿ’ಗೆ ತಿಳಿಸಿದರು. ಈ ಪ್ರದೇಶದಲ್ಲಿ ಒಂದು ಚರಂಡಿ ಹರಿಯುತ್ತಿದ್ದು, ಅದರಲ್ಲಿ ಆಗಾಗ ನೀರು ನಿಂತು ಸೊಳ್ಳೆಗಳು ಹೆಚ್ಚುತ್ತಿರುವುದು ಕಾರಣವಿರಬಹುದು ಎನ್ನುವುದು ಇಲ್ಲಿನ ಗಣೇಶ್ ಎಂಬವರ ಮಾತು. ಅರಕೆರೆ ಬೈಲಿನ ಆಶಾ ಅವರ ಅಳಿಯ, 11 ವರ್ಷದ ಗೌತಮ್ ಎನ್ನುವ ಬಾಲಕನಿಗೆ ಎರಡು ವರ್ಷ ಹಿಂದೆ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಈಗ ಆತನಿಗೂ ಡೆಂೆ ಮತ್ತು ಮಲೇರಿಯಾ ಬಂದಿದ್ದು ಹೃದಯದಲ್ಲಿ ಮತ್ತೆ ತೊಂದರೆ ಕಾಣಿಸಿಕೊಂಡಿದೆ. ಯಾರಾದರೂ ದಾನಿಗಳು ನೆರವಾಗಿ ಎಂದು ಆಶಾ ಕೇಳಿಕೊಂಡಿದ್ದಾರೆ.

ಗುಜ್ಜರಕೆರೆಯ ಕೊಳಚೆ ನೀರು: ಗುಜ್ಜರಕೆರೆಗೆ ಹತ್ತಿರದ ಅನೇಕ ಅಪಾರ್ಟ್‌ಮೆಂಟ್‌ಗಳಿಂದ ಬಂದು ಸೇರುತ್ತಿರುವ ಕೊಳಚೆ ನೀರು ಈಗ ಹತ್ತಿರದ ತೋಡುಗಳಲ್ಲೂ ಹರಿಯುತ್ತಿದೆ. ಇಡೀ ಪರಿಸರದಲ್ಲಿ ಚರಂಡಿಗಳು ನಾರುತ್ತಿವೆ. ಕುಡಿಯುವ ನೀರಿನ ಪೈಪ್ ಕೂಡ ಅದೇ ಚರಂಡಿಯಲ್ಲಿ ಹಾಕಲಾಗಿದೆ. ಇದು ಅನಾರೋಗ್ಯಕರ ಪರಿಸ್ಥಿತಿ ಎಂದು ಸ್ಥಳೀಯ ಹೋರಾಟಗಾರ ನೇಮು ಕೊಟ್ಟಾರಿ ತಿಳಿಸುತ್ತಾರೆ. ಅರಕೆರೆಬೈಲಿನಲ್ಲಿ ಹೇಮಂತ್ ಎಂಬುವರ ಮನೆಯಲ್ಲಿ ಒಂದು ತಿಂಗಳಿನಿಂದ ಡೆಂಘೆ ಕಾರುಬಾರು. ಒಬ್ಬರಾದ ಮೇಲೆ ಒಬ್ಬರಂತೆ ಮಕ್ಕಳೂ, ದನ ಸಾಕುವ ಇಬ್ಬರು ಕೆಲಸದವರೂ ಸೇರಿದಂತೆ ಏಳು ಮಂದಿಗೆ ಡೆಂಘೆ ಪಾಸಿಟಿವ್ ಬಂದಿದೆ.
ಮಹಾನಗರಪಾಲಿಕೆಯವರು ಗೋರಕ್ಷದಂಡಿನಲ್ಲಿ ತಿಂಗಳಿನಿಂದ, ಅರಕೆರೆ ಬೈಲಿನಲ್ಲಿ ವಾರದಿಂದ ಮನೆಗಳ ಒಳಗೆ ತೆರಳಿ ಫಾಗಿಂಗ್ ಮಾಡುತ್ತಿದ್ದಾರೆ. ಇದರಿಂದ ಡೆಂೆ ಬಾಧಿತ ಸೊಳ್ಳೆಗಳು ಸಾಯುತ್ತವೆ ಎನ್ನುತ್ತಾರೆ ಅಧಿಕಾರಿಗಳು.

ಕಡಬದಲ್ಲಿ ನಿಯಂತ್ರಣಕ್ಕೆ: ಕಡಬ: ತಾಲೂಕಿನ ಕೋಡಿಂಬಾಳ ಗ್ರಾಮದಲ್ಲಿ ಜ್ವರದ ತೀವ್ರತೆ ಈಗ ನಿಯಂತ್ರಣಕ್ಕೆ ಬಂದಿದೆ. ತಿಂಗಳ ಹಿಂದೆ ಗ್ರಾಮದಲ್ಲಿ ಬಹಳಷ್ಟು ಮಂದಿ ಜ್ವರ ಬಾಧೆಯಿಂದ ಬಳಲುತ್ತಿದ್ದರು. ಹೆಚ್ಚಿನ ಮಂದಿ ಕಡಬ, ಪುತ್ತೂರು, ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರಿಂದ ಜ್ವರ ಬಾಧಿತರ ನಿಖರ ಮಾಹಿತಿ ಇಲ್ಲ. ಆದರೂ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮವನ್ನು ಮುಂದುವರಿಸಿದೆ ಎಂದು ಕಡಬ ಸಮುದಾಯ ಆಸ್ಪತ್ರೆ ವೈದ್ಯಾಧಿಕಾರಿ ಸುಚಿತ್ರಾ ರಾವ್ ತಿಳಿಸಿದ್ದಾರೆ. ಕಡಬ ತಾಲೂಕಿನ ಚಾರ್ವಾಕ ಗ್ರಾಮದಲ್ಲೂ ಜ್ವರ ಬಾಧಿತರು ಹೆಚ್ಚಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ನಿಖರ ಮಾಹಿತಿಯಿಲ್ಲ.

ಬೆಳ್ತಂಗಡಿಯಲ್ಲಿ ಜಾಗೃತಿ
ಬೆಳ್ತಂಗಡಿ: ತಾಲೂಕಿನಲ್ಲಿ ಡೆಂಘೆ ಬಾಧಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕ್ಲಿನಿಕ್, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಅಂಕಿಅಂಶಕ್ಕೆ ನಿಖರ ಮಾಹಿತಿ ಸಿಗುತ್ತಿಲ್ಲ. ಕೊಕ್ಕಡ, ಪಟ್ರಮೆ, ವೇಣೂರು, ಕಳಿಯ ಮುಂತಾದೆಡೆ 12ಕ್ಕೂ ಹೆಚ್ಚು ಶಂಕಿತ ಡೆಂಘೆ ಜ್ವರ ಪ್ರಕರಣಗಳು ದಾಖಲಾಗಿವೆ. ಹೆಚ್ಚಿನವರು ಗುಣಮುಖರಾಗಿದ್ದು, ಗಂಭೀರ ಸಮಸ್ಯೆಗಳಿಲ್ಲ. ಇಲಾಖೆ ಸಿಬ್ಬಂದಿ ಮನೆಮನೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ನೀರಿನ ತೊಟ್ಟಿ, ಪ್ಲಾಸ್ಟಿಕ್ ಡ್ರಮ್‌ಗಳಲ್ಲಿ ನೀರು ನಿಂತ ಪ್ರದೇಶ ಸ್ವಚ್ಛಗೊಳಿಸಲಾಗುತ್ತಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಕಲಾಮಧು ತಿಳಿಸಿದ್ದಾರೆ.

ಬಂಟ್ವಾಳದಲ್ಲಿ 16 ಖಚಿತ
ಬಂಟ್ವಾಳದಲ್ಲಿ 16 ಡೆಂಘೆ ಪ್ರಕರಣ ಖಚಿತವಾಗಿದೆ. ವಿಟ್ಲ, ಮಾಣಿ, ಪುಂಜಾಲಕಟ್ಟೆ, ಕಲ್ಲಡ್ಕ, ಮಂಚಿ, ಸಜಿಪದಲ್ಲಿ ತಲಾ 2 ಪ್ರಕರಣ, ಅಳಿಕೆ, ಪುಣಚ, ಪುದುವಿನಲ್ಲಿ ತಲಾ 1 ಪ್ರಕರಣ ಪತ್ತೆಯಾಗಿದೆ. ಅಧಿಕಾರಿಗಳು ಜ್ವರ ನಿಯಂತ್ರಣದಲ್ಲಿದೆ ಎಂದು ಹೇಳುತ್ತಿದ್ದಾರೆ. ಆದರೆ ಕ್ಲಿನಿಕ್, ಖಾಸಗಿ ಆಸ್ಪತ್ರೆಗಳಲ್ಲಿ ಜ್ವರ ಬಾಧಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿರುವುದು ಕಂಡುಬರುತ್ತಿದೆ.

ಜ್ವರ ಕೊಂಚ ಇಳಿಮುಖ 

ಸುಳ್ಯ: 15 ದಿನಗಳ ಹಿಂದೆ ವ್ಯಾಪಕವಾಗಿದ್ದ ವೈರಲ್ ಜ್ವರ ಸ್ವಲ್ಪಮಟ್ಟಿಗೆ ಇಳಿಮುಖವಾಗಿದೆ. ತಾಲೂಕು ಆಸ್ಪತ್ರೆಯಲ್ಲಿ ಜ್ವರ ಬಾಧಿತರಾಗಿ 200ಕ್ಕೂ ಹೆಚ್ಚು ಮಂದಿ ಪ್ರತಿದಿನ ಚಿಕಿತ್ಸೆಗೆ ಆಗಮಿಸುತ್ತಿದ್ದಲ್ಲಿ ಈಗ ಸ್ವಲ್ಪ ಕಡಿಮೆಯಾಗಿದೆ. ಆದರೂ ದಿನಂಪ್ರತಿ ಸುಮಾರು 100 ಮಂದಿ ಜ್ವರ ಬಾಧೆಯಿಂದ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಡೆಂಘೆ ಜ್ವರದ ಲಕ್ಷಣಗಳೂ ಅಲ್ಲಲ್ಲಿ ಕೆಲವು ಕಡೆ ಕಂಡು ಬಂದಿದೆ. ಈಗ ಐದು ಮಂದಿ ಡೆಂೆೆ ಶಂಕಿತರೂ ಸೇರಿ ಒಟ್ಟು 28 ಮಂದಿ ಜ್ವರ ಬಾದೆಯಿಂದ ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲೂಕಿನಲ್ಲಿ ಜನವರಿಯಿಂದ ಇದುವರೆಗೆ ಒಟ್ಟು 18 ಡೆಂಘೆ ಪ್ರಕರಣ ದೃಢಪಟ್ಟಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸುಬ್ರಹ್ಮಣ್ಯ ತಿಳಿಸಿದ್ದಾರೆ.

ಡೆಂಘೆಯಿಂದ ಮೃತರಾದವರು: ಕಡಬದ ಕೋಡಿಂಬಾಳ ಗ್ರಾಮದ ಕುಕ್ಕರೆಬೆಟ್ಟು ನಿವಾಸಿ ಆನಂದ ನಾಯ್ಕ್ ಪತ್ನಿ ವೀಣಾ (43) ಜೂ.26ರಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗುಜ್ಜರಕೆರೆ ಬಳಿಯ ಅಪಾರ್ಟ್‌ಮೆಂಟ್ ನಿವಾಸಿ ಸಬೀನಾ(54) ಎಂಬುವರು ಸೋಮವಾರ ಮೃತರಾಗಿದ್ದಾರೆ. ಈ ಮಹಿಳೆಯ ಮಗಳು ಕೂಡ ಡೆಂಘೆಯಿಂದ ಬಳಲುತ್ತಿದ್ದಾರೆ. ಈ ಪ್ರಕರಣಗಳಲ್ಲಿ ಡೆಂಘೆಯಿಂದಲೇ ಸಾವು ಸಂಭವಿಸಿರುವುದು ದೃಢಪಟ್ಟಿಲ್ಲ ಎಂದು ಆರೋಗ್ಯ ಇಲಾಖೆ ಹೇಳುತ್ತಿದೆ. ಮಂಗಳವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೂರನೇ ತರಗತಿ ಬಾಲಕನೋರ್ವ ಮೃತಪಟ್ಟಿದ್ದಾನೆ. ಎಲಿಸಾ ಪರೀಕ್ಷೆಗಾಗಿ ಬಾಲಕನ ರಕ್ತಕೋಶದ ಮಾದರಿ ಕಳುಹಿಸಿದ್ದು, ಇನ್ನಷ್ಟೇ ವರದಿ ಬರಬೇಕಿದೆ ಎಂದು ಜಿಲ್ಲಾ ಪ್ರಭಾರ ಸರ್ವೇಕ್ಷಣಾಧಿಕಾರಿ ಡಾ.ನವೀನ್ ಕುಮಾರ್ ತಿಳಿಸಿದರು.

ಮಳೆಗಾಲದಲ್ಲಿ ವ್ಯಾಪಕ ಜ್ವರದ ಹಾವಳಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಜತೆ ಮಾತುಕತೆ ನಡೆಸಿದ್ದು, ತುರ್ತು ಕ್ರಮಕ್ಕೆ ಸೂಚಿಸಲಾಗಿದೆ. ಸೊಳ್ಳೆ ಉತ್ಪತ್ತಿಯಾಗುವುದನ್ನು ತಡೆಯಲು ಜನತೆ ಕೂಡ ಎಚ್ಚರ ವಹಿಸಬೇಕು. ಜಿಲ್ಲಾಡಳಿತ, ಜಿಪಂ ಸಹಿತ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳು ಆರೋಗ್ಯ ಇಲಾಖೆ ಮತ್ತು ಮೆಡಿಕಲ್ ಕಾಲೇಜುಗಳ ಸಹಯೋಗದಲ್ಲಿ ವಿಶೇಷ ಜಾಗೃತಿ ಅಭಿಯಾನ ನಡೆಸಬೇಕು. ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು.
– ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ

ಡೆಂಘೆ ಜ್ವರ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಮನಪಾ ಆಯುಕ್ತರಿಗೆ ಸೂಚಿಸಿದ್ದೇನೆ. ನಾಗರಿಕರು ಜ್ವರದ ಲಕ್ಷಣ ಕಂಡುಬಂದಲ್ಲಿ ತಡಮಾಡದೆ ವೈದ್ಯರ ಬಳಿ ಪರೀಕ್ಷೆಗೆ ಒಳಪಡಬೇಕು. ಡೆಂಘೆ ಪೀಡಿತ ಪ್ರದೇಶಗಳಿಗೆ ತೆರಳಿ ಪರಿಶೀಲಿಸಿದ್ದು ಜಿಲ್ಲಾ ಆರೋಗ್ಯಾಧಿಕಾರಿಗಳೊಡನೆ ಸಮಾಲೋಚನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ಹೇಳಿದ್ದೇನೆ.
– ವೇದವ್ಯಾಸ ಕಾಮತ್, ಮಂಗಳೂರು ದಕ್ಷಿಣ ಶಾಸಕ

ಈ ತಿಂಗಳಲ್ಲಿ ಡೆಂಘೆ ದಿಢೀರ್ ಏರಿಕೆ: ಜೂನ್ ಪ್ರಾರಂಭದಲ್ಲಿ ನಿಯಂತ್ರಿತ ಪ್ರಮಾಣದಲ್ಲಿದ್ದ ಡೆಂಘೆ ಸೋಂಕು ಜಿಲ್ಲೆಯಲ್ಲಿ ಜುಲೈನಿಂದ ದಿಢೀರ್ ಆಗಿ ಏರಿಕೆ ಕಂಡಿದೆ. ಸರಿಯಾಗಿ ಮಳೆ ಬಾರದೆ ಮಳೆ- ಬಿಸಿಲು ವಾತಾವರಣದಿಂದಾಗಿ ಡೆಂಘೆ ವಾಹಕ ಈಡಿಸ್ ಈಜಿಪ್ಟೈ ಸೊಳ್ಳೆಗಳು ಹೆಚ್ಚಾಗುತ್ತಿವೆ ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 352 ಡೆಂಘೆ ಸೋಂಕಿನ ಪ್ರಕರಣಗಳು ದೃಢಪಟ್ಟಿವೆ, 200ರಷ್ಟು ಮಂದಿ ಚಿಕಿತ್ಸೆಯ ವಿವಿಧ ಹಂತಗಳಲ್ಲಿದ್ದಾರೆ. ಮಂಗಳೂರು, ಕಡಬ, ಬಂಟ್ವಾಳದ ಹಲವೆಡೆಗಳಿಂದ ಡೆಂೆ ವರದಿಯಾಗುತ್ತಿದೆ. ಜೆಪ್ಪುವಿನಲ್ಲಿ ಮೊದಲು ಡೆಂಘೆ ಪ್ರಕರಣಗಳು ಪತ್ತೆಯಾಗಿದ್ದು, ಸದ್ಯ ಗುಜ್ಜರಕೆರೆ, ಅರಕೆರೆಬೈಲ್, ಜೆಪ್ಪು ಮಾರ್ಕೆಟ್, ಬೋಳಾರ, ಹೊಯ್ಗೆ ಬಜಾರ್ ಮುಂತಾದೆಡೆಗಳಲ್ಲಿ ಹರಡಿದೆ. ಖಾಸಗಿ ಆಸ್ಪತ್ರೆಗಳಿಂದಲೂ ವರದಿ ಬರತೊಡಗಿದೆ ಎಂದರು.

ಇಂದಿನಿಂದ ಅಭಿಯಾನ: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 200 ತಂಡ ರಚಿಸಲಾಗಿದ್ದು, ಜುಲೈ 18ರಿಂದಲೇ ಅವರು ಮನೆಗಳಿಗೆ ಭೇಟಿ ನೀಡಿ, ಪರಿಸರದಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳಿವೆಯೇ ಎಂದು ಪರಿಶೀಲಿಸುತ್ತಾರೆ. ಮನೆ ಮಂದಿಗೆ ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಎಚ್ಚರಿಸುವ ಕೆಲಸ ಕೈಗೊಳ್ಳಲಿದ್ದಾರೆ ಎಂದರು.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا