Urdu   /   English   /   Nawayathi

ರಸ್ತೆ ಮೇಲೆ ಹರಿದ ಹೈಡ್ರೊಕ್ಲೋರಿಕ್‌ ಆ್ಯಸಿಡ್‌: ತಪ್ಪಿದ ದುರಂತ

share with us

ಚಿತ್ರದುರ್ಗ: 18 ಜುಲೈ 2019 (ಫಿಕ್ರೋಖಬರ್ ಸುದ್ದಿ) ತಾಲ್ಲೂಕಿನ ಮದಕರಿಪುರ ಸಮೀಪ ಕೆಟ್ಟುನಿಂತಿದ್ದ ಟ್ಯಾಂಕರ್‌ನ ವಾಲ್‌ ತುಂಡಾಗಿ 12 ಸಾವಿರ ಲೀಟರ್‌ ಹೈಡ್ರೊಕ್ಲೋರಿಕ್‌ ಆ್ಯಸಿಡ್‌ ರಸ್ತೆಯಲ್ಲಿ ಹರಿದಿದ್ದು, ಟ್ಯಾಂಕರ್‌ ಚಾಲಕನ ಸಮಯಪ್ರಜ್ಞೆಯಿಂದ ಸಂಭವನೀಯ ಭಾರಿ ದುರಂತವೊಂದು ತಪ್ಪಿದೆ. ಅನಿರೀಕ್ಷಿತವಾಗಿ ಸಂಭವಿಸಿದ ಈ ಅವಘಡದಿಂದ ಚಳ್ಳಕೆರೆ ರಸ್ತೆಯಲ್ಲಿ ಗುರುವಾರ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ಸಾರ್ವಜನಿಕರು, ಅಗ್ನಿಶಾಮಕ ಹಾಗೂ ತುರ್ತು ಸೇವಾ ದಳದ ನೆರವಿನೊಂದಿಗೆ ಆ್ಯಸಿಡ್‌ಗೆ ಅಪಾರ ಪ್ರಮಾಣದ ನೀರು ಸುರಿದು ಅದರ ಶಕ್ತಿಯನ್ನು ಕುಂದಿಸಲಾಯಿತು. ಆ್ಯಸಿಡ್‌ ವಾಲ್‌ ತೆರೆದುಕೊಳ್ಳುವ ಸಂದರ್ಭದಲ್ಲಿ ಟ್ಯಾಂಕರ್‌ ಹಿಂದೆಯೇ ಇದ್ದ ಆಂಧ್ರಪ್ರದೇಶ ಸಾರಿಗೆ ಬಸ್‌ ಅಪಾಯದಿಂದ ಪಾರಾಗಿದೆ. ರಸ್ತೆ ಬದಿಗೆ ಬಸ್‌ ನಿಲುಗಡೆ ಮಾಡಿದ ಚಾಲಕ ಪ್ರಯಾಣಿಕರನ್ನು ಕೆಳಗೆ ಇಳಿಸಿ ದೂರ ಕಳುಹಿಸಿದ್ದಾರೆ. ಮತ್ತೊಂದು ಬಸ್ಸಿನಲ್ಲಿ ಅವರನ್ನು ಚಿತ್ರದುರ್ಗಕ್ಕೆ ಕರೆತರಲಾಯಿತು. ಆಂಧ್ರಪ್ರದೇಶದ ಕರ್ನೂಲಿನಿಂದ ದಾವಣಗೆರೆ ಜಿಲ್ಲೆಯ ಹರಿಹರಕ್ಕೆ ತೆರಳುತ್ತಿದ್ದ ಆ್ಯಸಿಡ್‌ ಟ್ಯಾಂಕರ್‌ನ ಆ್ಯಕ್ಸಲ್‌ ಮದಕರಿಪುರದ ಬೆಟ್ಟದ ಸಮೀಪ ಬುಧವಾರ ಮಧ್ಯರಾತ್ರಿ ತುಂಡಾಗಿತ್ತು. ಟ್ಯಾಂಕರ್‌ ರಿಪೇರಿ ಮಾಡಲು ಮಧ್ಯಾಹ್ನದವರೆಗೂ ಪ್ರಯತ್ನಿಸಲಾಗಿತ್ತು. ದುರಸ್ತಿ ಮಾಡುವುದು ಅಸಾಧ್ಯವೆಂದು ಮನವರಿಕೆಯಾದ ಬಳಿಕ ಟ್ಯಾಂಕರ್‌ ಚಿತ್ರದುರ್ಗಕ್ಕೆ ತರುವ ಪ್ರಯತ್ನ ಮಾಡಲಾಗಿತ್ತು. ಟ್ಯಾಂಕರ್‌ ಮುಂಭಾಗಕ್ಕೆ ಚೈನ್‌ ಕಟ್ಟಿ ಎಳೆಸಲು ಯತ್ನಿಸಲಾತು. ಸುಮಾರು 26 ಟನ್‌ ತೂಕ ಹೊಂದಿದ್ದರಿಂದ ಇದು ಅಸಾಧ್ಯವಾಗಿತ್ತು. ಕ್ರೇನ್‌ ನೆರವಿನಿಂದ ಟ್ಯಾಂಕರ್‌ ತಳ್ಳುವ ವೇಳೆ ಆಕಸ್ಮಿಕವಾಗಿ ವಾಲ್‌ ಮುರಿದು ಏಕಾಏಕಿ ಆ್ಯಸಿಡ್‌ ರಸ್ತೆಗೆ ಚೆಲ್ಲಿದೆ. ತಕ್ಷಣ ಎಚ್ಚೆತ್ತ ಟ್ಯಾಂಕರ್ ಚಾಲಕ ಹಾಗೂ ಮೆಕ್ಯಾನಿಕ್‌ಗಳು ದೂರ ತೆರಳುವಂತೆ ಎಲ್ಲರಿಗೂ ಸೂಚನೆ ನೀಡಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಸುಮಾರು ಅರ್ಧಗಂಟೆ ತಡೆಯಲಾಗಿತ್ತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಹಾಗೂ ತುರ್ತುಸೇವಾ ಸಿಬ್ಬಂದಿ ನಾಲ್ಕು ಟ್ಯಾಂಕರ್‌ ನೀರು ಸುರಿದರು. ನೀರಿನಲ್ಲಿ ಆ್ಯಸಿಡ್‌ ಮಿಶ್ರಣವಾಗಿ ಶಕ್ತಿ ಕಳೆದುಕೊಂಡಿತು. ಬಳಿಕ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಅಪಾಯಕಾರಿ ರಾಸಾಯನಿಕ ಚೆಲ್ಲಿದ್ದರಿಂದ ಸುತ್ತಲಿನ ವಾತಾವರಣವೂ ಕಲುಷಿತಗೊಂಡಿತ್ತು. ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಕೆಲವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ರಸ್ತೆಯಲ್ಲಿ ಸುಮಾರು 200 ಮೀಟರ್‌ ಉದ್ದ ಚೆಲ್ಲಿದ್ದ ಆ್ಯಸಿಡ್‌ ದಾಟುವ ವಾಹನಗಳಿಗೆ ಅಗ್ನಿಶಾಮಕ ಸಿಬ್ಬಂದಿ ಸೂಚನೆಗಳನ್ನು ನೀಡಿ ಕಳುಹಿಸುತ್ತಿದ್ದರು. ನೀರಿನೊಂದಿಗೆ ಮಿಶ್ರಣಗೊಂಡ ಆ್ಯಸಿಡ್‌ ಹಸಿರು ಬಣ್ಣಕ್ಕೆ ತಿರುಗಿತ್ತು. ಆ್ಯಸಿಡ್‌ ಖಾಲಿಯಾದ ಬಳಿಕ ಟ್ಯಾಂಕರ್‌ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا