Urdu   /   English   /   Nawayathi

ಸದನ ನಡಾವಳಿ ಕುರಿತಂತೆ ಸಿಎಲ್‍ಪಿಯಲ್ಲಿ ಸಿದ್ದು ಪಾಠ

share with us

ಬೆಂಗಳೂರು: 15 ಜುಲೈ 2019 (ಫಿಕ್ರೋಖಬರ್ ಸುದ್ದಿ) ಕ್ಷಿಪ್ರ ರಾಜಕೀಯ ಬೆಳವಣಿಗಳೇನೇ ಇದ್ದರೂ ಸಮ್ಮಿಶ್ರ ಸರ್ಕಾರ ಉಳಿದೇ ಉಳಿಯುತ್ತದೆ ಹಾಗೂ ಮುಂದುವರೆಯುತ್ತದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಭಯ ನೀಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದ ವಿಶ್ವಾಸ ಮತಯಾಚನೆಯನ್ನು ಗೆಲ್ಲುವ ಕಾರ್ಯತಂತ್ರಗಳ ಕುರಿತು ಇಂದು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮಹತ್ವದ ಚರ್ಚೆವೇಳೆ ಶಾಸಕರಿಗೆ ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ತಾಜ್‍ದಿಗಂತ ಹೋಟೆಲ್‍ನಲ್ಲಿ ನಡೆದ ಸಭೆಯಲ್ಲಿ ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್‍ಖಂಡ್ರೆ, ಸಚಿವರಾದ ಎಂ.ಬಿ.ಪಾಟೀಲ್, ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ವಿಶ್ವಾಸಮತ ಯಾಚನೆ ವೇಳೆ ಖುದ್ದು ಎಲ್ಲಾ ಶಾಸಕರು ಹಾಜರಿರುವಂತೆ ಸೂಚಿಸಿದ ಸಿದ್ದರಾಮಯ್ಯ, ವಿಪ್ ಉಲ್ಲಂಘನೆ ಮಾಡಬೇಡಿ. ಇದರಿಂದ ಮುಂದೆ ಹೆಚ್ಚಿನ ಸಮಸ್ಯೆಯಾಗುತ್ತದೆ. ನಾವು ಸರ್ಕಾರ ಉಳಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಸರ್ಕಾರ ಉಳಿದೇ ಉಳಿಯುತ್ತದೆ ಎಂದರು. ಯಾರ್ಯಾರು ಏನೇ ತಂತ್ರಗಾರಿಕೆ ಮಾಡಿದರೂ ಸರ್ಕಾರಕ್ಕೆ ದಕ್ಕೆ ತರಲು ಸಾಧ್ಯವಿಲ್ಲ. ಅದಕ್ಕೆ ಪ್ರತಿಯಾಗಿ ತಂತ್ರ ರೂಪಿಸಿ ಸರ್ಕಾರವನ್ನು ಕಾಪಾಡುತ್ತೇವೆ. ಆದರೆ, ಎಲ್ಲಾ ಕಾರ್ಯತಂತ್ರಗಳನ್ನು ಹೇಳಲಾಗುವುದಿಲ್ಲ. ಪಕ್ಷಾಂತರ ಮಾಡುವುದು ನಿಮ್ಮ ರಾಜಕೀಯ ಭವಿಷ್ಯಕ್ಕೂ ಹಾನಿತರುತ್ತದೆ ಎಂದು ತಿಳಿಸಿದ್ದಾರೆ.

ಸಮ್ಮಿಶ್ರ ಸರ್ಕಾರ ಅತಂತ್ರ ಸ್ಥಿತಿಯಲ್ಲಿದ್ದು, ಕಾಂಗ್ರೆಸ್‍ನ 16 ಮಂದಿ ಶಾಸಕರು ರಾಜೀನಾಮೆ ನೀಡಿದ್ದ ಬೆನ್ನಲ್ಲೇ ಪರಿಸ್ಥಿತಿ ಉಲ್ಬಣಿಸಿದೆ. ಇದರ ನಡುವೆಯೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮಾಡುವುದಾಗಿ ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದಾರೆ. ಸದ್ಯದ ಸಂಖ್ಯಾಬಲದಲ್ಲಿ ವಿಶ್ವಾಸಮತ ಯಾಚನೆ ಮಾಡಲು ಸಾಧ್ಯವಿಲ್ಲ. ಹಾಗೆಂದೂ ಕೈ ಚೆಲ್ಲಿ ಕೂರುವಂತೂ ಇಲ್ಲ. ಹೀಗಾಗಿ ಇಂದು ಸಿದ್ದರಾಮಯ್ಯ ಶಾಸಕರ ಸಭೆ ಕರೆದಿದ್ದರು. ಕಳೆದ 15 ದಿನಗಳಲ್ಲಿ ಇದು ಎರಡನೇ ಸಭೆಯಾಗಿದೆ. ಈ ಮೊದಲು ವಿಧಾನಮಂಡಲ ಅಧಿವೇಶನ ನಡೆಯುವ ವೇಳೆಯಲ್ಲಿ ಒಂದು ದಿನ ಮಾತ್ರ ಶಾಸಕಾಂಗ ಸಭೆ ನಡೆಸಲಾಗುತ್ತಿತ್ತು. ಅನಂತರ ಶಾಸಕರು ತಮ್ಮ ಯಾವುದೇ ಸಮಸ್ಯೆಗಳಿದ್ದರೂ ವೈಯಕ್ತಿಕವಾಗಿ ನಾಯಕರನ್ನು ಭೇಟಿ ಮಾಡಿ ಚರ್ಚೆ ಮಾಡಬೇಕಿತ್ತು. ಇದು ಬಹಳಷ್ಟು ಶಾಸಕರ ಅಸಮಾಧಾನಕ್ಕೂ ಕಾರಣವಾಗಿತ್ತು. ಕಾಲ ಕಾಲಕ್ಕೆ ಶಾಸಕಾಂಗ ಸಭೆಗಳು ನಡೆದರೆ ಸಮಸ್ಯೆಗಳನ್ನು ಹೇಳಿಕೊಳ್ಳಲು ಸುಲಭವಾಗುತ್ತದೆ ಎಂದು ಹಲವಾರು ಬಾರಿ ಮನವಿ ಮಾಡಿದ್ದರೂ ನಾಯಕರು ಕಿವಿಗೊಟ್ಟಿರಲಿಲ್ಲ. ಈಗ ಸರ್ಕಾರ ಪತನದ ಅಂಚಿಗೆ ತಲುಪಿದ ಮೇಲೆ ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿದ್ದಾರೆ. ಖಾಸಗಿ ಹೋಟೆಲ್‍ನಲ್ಲಿ ಶಾಸಕರ ಜತೆ ನಾಯಕರೂ ಉಳಿದುಕೊಂಡಿದ್ದಾರೆ. ಮುಂಬೈನಲ್ಲಿರುವ ಅತೃಪ್ತ ಶಾಸಕರ ಮನವೊಲಿಸುವುದು, ಆ ಮೂಲಕ ಸಮ್ಮಿಶ್ರ ಸರ್ಕಾರವನ್ನು ಸುಭದ್ರಗೊಳಿಸಲು ಅಗತ್ಯವಾದ ಕ್ರಮಗಳ ಬಗ್ಗೆ ಎಲ್ಲಾ ನಾಯಕರು ಚರ್ಚೆ ನಡೆಸಿದ್ದಾರೆ. ಒಂದು ಹಂತದಲ್ಲಿ ಸರ್ಕಾರ ಉಳಿಸುಕೊಳ್ಳುವುದು ಅಸಾಧ್ಯ ಎಂಬ ಪರಿಸ್ಥಿತಿ ಇರುವುದರಿಂದ ಅನಗತ್ಯವಾದ ಪ್ರಯತ್ನಗಳನ್ನು ನಿಲ್ಲಿಸಿ ವಿರೋಧ ಪಕ್ಷದ ಸಾಲಿನಲ್ಲಿ ಕೂರುವುದು ಸೂಕ್ತ ಎಂಬ ಅಭಿಪ್ರಾಯವನ್ನು ಕೆಲವು ಶಾಸಕರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ, ಇದು ಒಂದು ರಾಜ್ಯ ಅಥವಾ ಒಂದು ಸಕರ್ರದ ಪ್ರಶ್ನೆಯಲ್ಲ. ದೇಶಾದ್ಯಂತ ಬಿಜೆಪಿ ಎಲ್ಲಾ ರಾಜ್ಯಗಳ ಶಾಸಕರನ್ನು ಸೆಳೆದು ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಲು ಹೊರಟಿದೆ. ಹೀಗಾಗಿ ನಾವು ಪಕ್ಷದ ಹಿತದೃಷ್ಟಿಯಿಂದ ಹೋರಾಟ ನಡೆಸಬೇಕಿದೆ. ಅಷ್ಟು ಸುಲಭವಾಗಿ ಸೋಲು ಒಪ್ಪಿಕೊಳ್ಳುವುದು ಬೇಡ ಎಂದು ನಾಯಕರು ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا