Urdu   /   English   /   Nawayathi

ಮತ್ತೆ ಹೊತ್ತಿ ಉರಿದ ಬಂಗಾಳದ ಭತ್ಪಾರಾ

share with us

ಕೋಲ್ಕತ್ತಾ: 23 ಜೂನ್ 2019 (ಫಿಕ್ರೋಖಬರ್ ಸುದ್ದಿ) ಲೋಕಸಭೆ ಚುನಾವಣೆಗೂ ಮುನ್ನವೇ ಪಶ್ಚಿಮ ಬಂಗಾಳದಲ್ಲಿ ಎದ್ದಿರುವ ರಾಜಕೀಯ ಹಿಂಸಾಚಾರದ ಬೆಂಕಿ ಇನ್ನೂ ಆರಿಲ್ಲ. ನಿರಂತರ ಹಲ್ಲೆ, ಹತ್ಯೆಗಳಿಗೆ ಸಾಕ್ಷಿಯಾಗುತ್ತಿರುವ ರಾಜ್ಯದಲ್ಲಿ ಶನಿವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಕಳೆದ ವಾರ ಘರ್ಷಣೆಯಲ್ಲಿ ಇಬ್ಬರು ಬಲಿಯಾದಂಥ ಭತ್ಪಾರಾ ಪ್ರದೇಶಕ್ಕೆ ಶನಿವಾರ ಬಿಜೆಪಿಯ ಮೂವರು ಸದಸ್ಯರ ನಿಯೋಗವು ಭೇಟಿ ನೀಡಿದ್ದು, ಅವರು ಹಿಂತಿರುಗುತ್ತಿದ್ದಂತೆ ಹಿಂಸಾಚಾರ ತೀವ್ರಗೊಂಡಿದೆ. ಎರಡು ಗುಂಪುಗಳ ನಡುವೆ ತೀವ್ರ ಘರ್ಷಣೆ ನಡೆದಿದ್ದು, ಪರಸ್ಪರ ಬಾಂಬ್‌ಗಳನ್ನು ಎಸೆಯಲಾಗಿದೆ. ಕಲ್ಲು ತೂರಾಟವೂ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ನಿಷೇಧಾಜ್ಞೆ ಜಾರಿಯಲ್ಲಿದ್ದರೂ, ಕ್ಯಾರೇ ಎನ್ನದ ಗುಂಪುಗಳು ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಾ ಹಿಂಸಾಚಾರ ಆರಂಭಿಸಿದವು. ಕೊನೆಗೆ ಇವರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಬೇಕಾಯಿತು. ಕಳೆದ ವಾರ ಭತ್ಪಾರಾದಲ್ಲಿ ಬಿಜೆಪಿ-ಟಿಎಂಸಿ ಕಾರ್ಯಕರ್ತರ ನಡುವೆ ನಡೆದ ಘರ್ಷಣೆ ವೇಳೆ ಇಬ್ಬರು ಗುಂಡೇಟು ತಗುಲಿ ಮೃತಪಟ್ಟಿದ್ದರು. 7 ಮಂದಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ, ಘಟನೆ ಬಗ್ಗೆ ಅವಲೋಕಿಸಿ ವರದಿ ಪಡೆಯುವ ಸಲುವಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ಇತ್ತೀಚೆಗೆ ಕೇಂದ್ರದ ಮಾಜಿ ಸಚಿವ, ಬರ್ಧಮಾನ್‌-ದುರ್ಗಾಪುರ ಸಂಸದ ಎಸ್‌.ಎಸ್‌. ಅಹ್ಲುವಾಲಿಯಾ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದರು. ಸಮಿತಿಯಲ್ಲಿ ಹೊಸದಾಗಿ ಸಂಸದರಾಗಿ ಆಯ್ಕೆಯಾದ ಹಾಗೂ ಮಾಜಿ ಪೊಲೀಸ್‌ ಅಧಿಕಾರಿಗಳಾದ ಸತ್ಯಪಾಲ್ ಸಿಂಗ್‌ ಮತ್ತು ಬಿ.ಡಿ. ರಾಮ್‌ ಅವರೂ ಇದ್ದರು. 

ಪೊಲೀಸರ ಕೃತ್ಯ ಎಂದು ಆರೋಪ: ಈ ನಿಯೋಗವು ಶನಿವಾರ ಭತ್ಪಾರಾಗೆ ಭೇಟಿ ಕೊಟ್ಟು, ಮೃತರ ಕುಟುಂಬಗಳು ಹಾಗೂ ಸ್ಥಳೀಯರೊಂದಿಗೆ ಮಾತುಕತೆ ನಡೆಸಿತು. ಬಳಿಕ ಮಾತನಾಡಿದ ಅಹ್ಲುವಾಲಿಯಾ, ‘ಭತ್ಪಾರಾದಲ್ಲಿ ಪೊಲೀಸರ ಗುಂಡೇಟಿನಿಂದಲೇ ಇಬ್ಬರು ಮೃತಪಟ್ಟಿದ್ದಾರೆ. ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯುತ್ತಿದ್ದಾಗ, ಪೊಲೀಸರು ಒಂದು ಗುಂಪಿನ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ. ಮತ್ತೂಂದು ಗುಂಪಿನ ಮೇಲೆ ಗುಂಡು ಹಾರಿಸಿದ್ದಾರೆ. ಗೋಲಿಬಾರ್‌ ನಡೆಸಲು ಆದೇಶ ಕೊಟ್ಟವರಾರು ಎಂಬುದು ನಮಗೆ ಗೊತ್ತಾಗಬೇಕು. ಈ ಕುರಿತು ಸೂಕ್ತ ತನಿಖೆಯಾಗಬೇಕು’ ಎಂದು ಹೇಳಿದ್ದಾರೆ. ಜತೆಗೆ, ಈ ಕುರಿತು ಸಚಿವ ಅಮಿತ್‌ ಶಾಗೆ ವರದಿ ಸಲ್ಲಿಸುವುದಾಗಿಯೂ ಅವರು ಹೇಳಿದ್ದಾರೆ. ಸಮಿತಿಯ ಸದಸ್ಯರೊಂದಿಗೆ ರಾಜ್ಯದ ಕೆಲ ಬಿಜೆಪಿ ನಾಯಕರೂ ಇದ್ದರು. ಇವರು ಭತ್ಪಾರಾಗೆ ಆಗಮಿಸುವಾಗ ‘ಜೈ ಶ್ರೀ ರಾಂ’ ಘೋಷಣೆಗಳೂ ಮೊಳಗಿದವು. ಇದಕ್ಕೂ ಮುನ್ನ ಸಿಪಿಎಂ ಮತ್ತು ಕಾಂಗ್ರೆಸ್‌ನ ಜಂಟಿ ನಿಯೋಗವು ಭತ್ಪಾರಾ, ಜಗದ್ದಾಲ್, ಬರೂಪಾರಾ ಸೇರಿದಂತೆ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಜತೆಗೆ, ಹತ್ಯೆಗಳ ಕುರಿತು ಸಿಬಿಐ ತನಿಖೆಯಾಗಬೇಕು ಎಂದೂ ಆಗ್ರಹಿಸಿದ್ದರು.

ಇಂದು ಮುಖರ್ಜಿ ಪುಣ್ಯತಿಥಿ: ರಾಜಕೀಯ ಹಿಂಸಾಚಾರ, ಬಿಜೆಪಿ-ಟಿಎಂಸಿ ಜಗಳಗಳ ಮಧ್ಯೆಯೇ ಪಶ್ಚಿಮ ಬಂಗಾಳ ಸರ್ಕಾರವು ಭಾರತೀಯ ಜನಸಂಘದ ಸ್ಥಾಪಕ ಹಾಗೂ ಬಿಜೆಪಿ ಸಿದ್ಧಾಂತವಾದಿ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರ ಪುಣ್ಯತಿಥಿಯನ್ನು ಭಾನುವಾರ ಆಚರಿಸಲು ನಿರ್ಧರಿಸಿದೆ. ಕಳೆದ ವರ್ಷವೂ ಮುಖರ್ಜಿ ಅವರ 65ನೇ ಪುಣ್ಯತಿಥಿಯನ್ನು ಏರ್ಪಡಿಸುವ ಮೂಲಕ ಅವರಿಗೆ ದೀದಿ ಸರ್ಕಾರ ಗೌರವ ಸಲ್ಲಿಸಿತ್ತು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا