Urdu   /   English   /   Nawayathi

ಯಂತ್ರದಿಂದ ಬಂದರು ಕಾರ್ಮಿಕರು ಅತಂತ್ರ

share with us

ಮಂಗಳೂರು: 18 ಜೂನ್ 2019 (ಫಿಕ್ರೋಖಬರ್ ಸುದ್ದಿ) ನವಮಂಗಳೂರು ಬಂದರಿನಲ್ಲಿ ಪ್ರಾರಂಭಿಸಲಾಗಿರುವ ಯಾಂತ್ರೀಕೃತ ಕಲ್ಲಿದ್ದಲು ನಿರ್ವಹಣಾ ವ್ಯವಸ್ಥೆಯನ್ನು ಖಾಸಗಿ ಸಂಸ್ಥೆ ಕೈಗೆ ಒಪ್ಪಿಸಿದ್ದು, ಸ್ಥಳೀಯ ಸ್ಟೀವ್‌ಡೊರ್ (ಹಡಗಿನ ಲೋಡಿಂಗ್, ಅನ್‌ಲೋಡಿಂಗ್ ನಿರ್ವಹಿಸುವ ಕಾರ್ಮಿಕರು)ಗಳನ್ನು ಅತಂತ್ರಗೊಳಿಸಿದೆ. ಎನ್‌ಎಂಪಿಟಿಯಲ್ಲಿ ದೊಡ್ಡ ಪ್ರಮಾಣದ ಕಲ್ಲಿದ್ದಲು ಆಮದಾಗುತ್ತಿದೆ. ಅದರ ಎದುರು ಉಳಿದ ಸರಕುಗಳ ಪ್ರಮಾಣ ಕಡಿಮೆ. ಕಲ್ಲಿದ್ದಲು ನಂಬಿಕೊಂಡಿದ್ದ ಸ್ಟೀವ್‌ಡೊರ್‌ಗಳು ಹಾಗೂ ಅವರ ಅಧೀನದ ಕಾರ್ಮಿಕರ ಸಂಖ್ಯೆ 2000ಕ್ಕೂ ಅಧಿಕ. ಅವರೆಲ್ಲರೂ ಈಗ ರಸ್ತೆಗೆ ಬೀಳುವ ಪರಿಸ್ಥಿತಿಯಲ್ಲಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಎನ್‌ಎಂಪಿಟಿಯ 16ನೇ ಜೆಟ್ಟಿಯನ್ನು ಚೆಟ್ಟಿನಾಡ್ ಮಂಗಳೂರು ಕೋಲ್ ಲಿಮಿಟೆಡ್ ಸಂಸ್ಥೆಗೆ ನೀಡಲಾಗಿದ್ದು, ಹಡಗಿನಲ್ಲಿ ಬರುವ ಕಲ್ಲಿದ್ದಲನ್ನು ಯಾಂತ್ರೀಕೃತವಾಗಿ ಅನ್‌ಲೋಡ್ ಮಾಡಿ ಕನ್ವೇಯರ್ ಯಂತ್ರಗಳ ಸಹಾಯದಿಂದ ಟ್ರಕ್, ರೈಲು ವ್ಯಾಗನ್‌ಗಳಿಗೆ ಲೋಡ್ ಮಾಡುವ ವ್ಯವಸ್ಥೆಯಿದೆ.

ಸ್ಥಳೀಯರ ಕೆಲಸ ಖೋತಾ
ಎನ್‌ಎಂಪಿಟಿಯಲ್ಲಿ 1975ರಿಂದಲೂ 35ರಷ್ಟು ಸ್ಟೀವ್‌ಡೊರ್‌ಗಳು ಕಾರ್ಯಾಚರಿಸುತ್ತಿದ್ದು, ಇವುಗಳಲ್ಲಿ ಹೆಚ್ಚಿನವರು ಕಲ್ಲಿದ್ದಲು ಆಮದು ನೆಚ್ಚಿಕೊಂಡಿದ್ದರು. ಹೊಸದಾಗಿ ಜಾರಿಗೊಂಡ ವ್ಯವಸ್ಥೆಯ ಪ್ರಕಾರ ಇನ್ನು ಮುಂದೆ 16ನೇ ಜೆಟ್ಟಿಯಲ್ಲಿ ಚೆಟ್ಟಿನಾಡ್ ಸಂಸ್ಥೆ ಮಾತ್ರವೇ ಕಾರ್ಯಾಚರಿಸಲಿದ್ದು, ಉಳಿದ ಜೆಟ್ಟಿಗಳಿಗೆ ಕಲ್ಲಿದ್ದಲು ತರುವಂತಿಲ್ಲ. ಅದಕ್ಕೆ ಬೇಕಾದ ತಾಂತ್ರಿಕ ಹಾಗೂ ಇತರ ಶ್ರಮಿಕ ಸಿಬ್ಬಂದಿಯೆಲ್ಲವನ್ನೂ ಸ್ಥಳೀಯವಾಗಿ ಪಡೆಯುವುದು ಬಿಟ್ಟು ಚೆಟ್ಟಿನಾಡ್ ಸಂಸ್ಥೆ ತಮಿಳುನಾಡಿನಿಂದ ತಂದಿದೆ. ಇದರಿಂದಾಗಿ ಸ್ಥಳೀಯ ಸ್ಟೀವ್‌ಡೊರ್‌ಗಳು, ಅವರೊಂದಿಗೆ ಕೆಲಸ ಮಾಡುವ ಸಿಬ್ಬಂದಿ ಅತಂತ್ರ ಸ್ಥಿತಿಯಲ್ಲಿದ್ದೇವೆ ಎಂದು ಕೆಲವು ಸ್ಟೀವ್‌ಡೊರ್‌ಗಳು ‘ವಿಜಯವಾಣಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ. ಎನ್‌ಎಂಪಿಟಿ ಜೆಟ್ಟಿ ನಂ.16ನ್ನು 469.45 ಕೋಟಿ ರೂ. ಮೊತ್ತದಲ್ಲಿ ನಿರ್ಮಿಸಲಾಗಿದ್ದು, ಒಪ್ಪಂದದ ಪ್ರಕಾರ ಇದು 14 ಮೀಟರ್ ಆಳ ಹೊಂದಿರಬೇಕಿತ್ತು. ವರ್ಷಕ್ಕೆ ಕನಿಷ್ಠ 2.5 ಮಿಲಿಯನ್ ಟನ್ ಕಲ್ಲಿದ್ದಲು ನಿರ್ವಹಣೆ ಮಾಡಬೇಕು. ಆದರೆ ಸದ್ಯ ಈ ಜೆಟ್ಟಿ ಆಳ ಇರುವುದು 12 ಮೀಟರ್ ಮಾತ್ರ. ಹಾಗಾಗಿ ದೊಡ್ಡ ನೌಕೆಗಳು ಎನ್‌ಎಂಪಿಟಿಗೆ ಬಂದರೂ ಅವುಗಳನ್ನು ಮೊದಲು ನಂ.14 ಜೆಟ್ಟಿಗೆ ತರಲಾಗುತ್ತದೆ, 12 ಮೀಟರ್ ಆಳಕ್ಕೆ ಆಗುವಷ್ಟು ಸರಕು ಇಳಿಸಿ, ಮಾಡಿ ಮತ್ತೆ ಹಡಗನ್ನು ನಂ.16 ಜೆಟ್ಟಿಗೆ ಕೊಂಡುಹೋಗುವುದಾಗಿ ಎನ್‌ಎಂಪಿಟಿ ಅಧಿಕಾರಿಗಳು ಹೊಂದಾಣಿಕೆ ಮಾಡಿಕೊಂಡಿದ್ದಾರೆ, ಇಲ್ಲೂ ಅನ್‌ಲೋಡಿಂಗ್‌ನ್ನು ನಮಗೆ ನೀಡುತ್ತಿಲ್ಲ ಎನ್ನುತ್ತಾರೆ ಸ್ಟೀವ್‌ಡೊರ್‌ಗಳು.

ಕಂಟೈನರ್ ಕೂಡ ಕೈತಪ್ಪುವ ಆತಂಕ
ಎನ್‌ಎಂಪಿಟಿಯಲ್ಲಿ ಸ್ವಲ್ಪ ಭಾಗ ಕಬ್ಬಿಣದ ಅದಿರು, ರಸಗೊಬ್ಬರವಷ್ಟೇ ನಿರ್ವಹಣೆಗೆ ಇರುತ್ತದೆ. ಇನ್ನು ರಫ್ತಾಗುವ ಹೆಚ್ಚಿನ ವಸ್ತುಗಳು ಕಂಟೈನರ್‌ಗಳಲ್ಲಿ ಹೋಗುತ್ತವೆ. ಇನ್ನು ಕೆಲ ವರ್ಷಗಳಲ್ಲಿ ಕಂಟೈನರ್ ಕೂಡ ಪ್ರತ್ಯೇಕ ಜೆಟ್ಟಿ, ಟರ್ಮಿನಲ್ ಮೂಲಕ ನಿರ್ವಹಣೆಯಾಗಲಿವೆ. ಇದು ಸ್ಟೀವ್‌ಡೊರ್‌ಗಳು ಮತ್ತಷ್ಟು ಚಿಂತೆಗೀಡು ಮಾಡಿದೆ.

ಯಾಕಾಗಿ ಯಾಂತ್ರೀಕೃತ ಜೆಟ್ಟಿ?
ಸ್ವಚ್ಛ ಬಂದರು ಹಾಗೂ ನಿರ್ವಹಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುವ ಉದ್ದೇಶದಿಂದ ಎನ್‌ಎಂಪಿಟಿ ಜೆಟ್ಟಿಗಳನ್ನು ಯಾಂತ್ರೀಕೃತಗೊಳಿಸುವುದಕ್ಕೆ ಮುಂದಾಗಿದ್ದು, ಮೊದಲ ಹೆಜ್ಜೆಯಾಗಿ ಜೆಟ್ಟಿ ನಂ.16ನ್ನು ನಿರ್ಮಿಸಿ ಚೆಟ್ಟಿನಾಡು ಸಂಸ್ಥೆಗೆ ಹಸ್ತಾಂತರಿಸಿದೆ. ಮುಂದೆ ನಂ.14ನ್ನೂ ಕಂಟೈನರ್ ನಿರ್ವಹಣಾ ಜೆಟ್ಟಿಯಾಗಿ ಯಾಂತ್ರೀಕೃತಗೊಳಿಸುವುದಕ್ಕೂ ಯೋಜನೆ ರೂಪಿಸಿದೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا