Urdu   /   English   /   Nawayathi

ಡ್ರಾಮಾ ಮಾಡುವ ಬಿಜೆಪಿ ನಾಯಕರಿಂದ ನಾವು ಕಲಿಯಬೇಕಿಲ್ಲ : ಸಿಎಂ

share with us

ಮಂಡ್ಯ: 18 ಜೂನ್ 2019 (ಫಿಕ್ರೋಖಬರ್ ಸುದ್ದಿ) ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಸಮರ್ಪಕವಾಗಿದ್ದರೂ ಬಿಜೆಪಿ ನಾಯಕರು ನಾಟಕವಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು. ಕೆ.ಆರ್.ಪೇಟೆ ತಾಲ್ಲೂಕಿನ ಅಘಲಯ ಗ್ರಾಮದಲ್ಲಿ ಆತಹತ್ಯೆ ಮಾಡಿಕೊಂಡಿದ್ದ ರೈತ ಸುರೇಶ್ ಮನೆಗೆ ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಯಾದಗಿರಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಪರಿಶೀಲನೆ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಪ್ರವಾಸಿ ಮಂದಿರದಲ್ಲಿ ಅಲ್ಲಿನ ಜಿಲ್ಲಾಧಿಕಾರಿಗೆ ಬರನಿರ್ವಹಣೆ ಚೆನ್ನಾಗಿ ನಿರ್ವಹಿಸಿದ್ದೀರಿ ಎಂದು ಮೆಚ್ಚುಗೆ ಮಾತನಾಡಿದ್ದಾರೆ. ಆದರೆ ಹೊರಗಡೆ ಬರ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ ಎಂದು ಟೀಕೆ ಮಾಡಿ ಡ್ರಾಮವಾಡುತ್ತಿದ್ದಾರೆ ಎಂದು ಆರೋಪಿಸಿದರು. ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಬದಲಾಗಿ ರಾಜ್ಯ ಬರ ಪರಿಸ್ಥಿತಿ ನಿರ್ವಹಣೆ ಪರಿಶೀಲನೆ ಮಾಡುವಂತೆ ಸಲಹೆ ಕೊಡುತ್ತಾರೆ. ಅವರಿಂದ ತಾವು ಕಲಿಯಬೇಕಾಗಿಲ್ಲ. ಜಿಲ್ಲಾಪಂಚಾಯ್ತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಂದ ಈಗಾಗಲೇ ತಾವು ಮಾಹಿತಿ ಪಡೆದುಕೊಂಡಿರುವುದಾಗಿ ಹೇಳಿದರು. ಗ್ರಾಮವಾಸ್ತವ್ಯ ಮಾಡುತ್ತಿರುವುದು ಪ್ರಚಾರಕ್ಕಾಗಿ ಅಲ್ಲ. ಅಧಿಕಾರಿಗಳನ್ನು ಜನರ ಹತ್ತಿರಕ್ಕೆ ಕೊಂಡೊಯ್ಯುವ ಹಾಗೂ ಗ್ರಾಮೀಣ ಜನರಿಗೆ ಧೈರ್ಯ ತುಂಬುವ ಉದ್ದೇಶದಿಂದ ಮಾಡಲಾಗುತ್ತಿದೆ ಎಂದರು. ಗ್ರಾಮವಾಸ್ತವ್ಯದಿಂದ ಆಗುವ ಅನುಕೂಲ ಏನೆಂಬುದು ಗೊತ್ತಿದೆ. ಮಹರಾಷ್ಟ್ರದಲ್ಲಿ ರೈತರೇ ಮಳೆ ನೀರು ಸಂಗ್ರಹಿಸಿ ಬೆಳೆ ಪರಿವರ್ತನೆ ಮಾಡಿಕೊಂಡು ಉತ್ತಮ ಆದಾಯ ಗಳಿಸುತ್ತಿರುವ ಬಗ್ಗೆ ಅಧಿಕಾರಿಗಳನ್ನು ಕಳುಹಿಸಿ ಡಾಕುಮೆಂಟರಿ ಮಾಡಿಸಲಾಗಿದೆ. ಅದನ್ನು ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ರೈತರಿಗೆ ತೋರಿಸಿ ಸಾಲಗಾರರಾಗದಂತೆ ತಿಳುವಳಿಕೆ ನೀಡಲಾಗುವುದು. ತಾವು ಗ್ರಾಮವಾಸ್ತವ್ಯ ಮಾಡುವ ಗ್ರಾಮಕ್ಕೆ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯವನ್ನು ಒದಗಿಸಲಾಗಿದೆ ಎಂಬುದು ಪತ್ರಿಕೆಯಲ್ಲಿ ವರದಿಯಾಗಿದೆ. ಕಳೆದ 70 ವರ್ಷಗಳಲ್ಲಿ ಆಡಳಿತ ನಡೆಸಿದವರು ಯಾರು? ರಸ್ತೆ ಸೇರಿದಂತೆ ಮೂಲಸೌಕರ್ಯ ಒದಗಿಸದಿರುವುದಕ್ಕೆ ನಾವು ಕಾರಣವೇ? ಇಷ್ಟು ವರ್ಷಗಳ ಕಾಲ ದೇವೇಗೌಡರ ಕುಟುಂಬ ಆಡಳಿತ ನಡೆಸಿತ್ತೇ ಎಂದು ಪ್ರಶ್ನಿಸಿದರು. ನಾಡಿನ ಜನರಿಗೆ ಒಳ್ಳೆಯದು ಮಾಡಬೇಕು, ರಾಜ್ಯ ಅಭಿವೃದ್ಧಿಯಾಗಬೇಕೆಂದು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿರುವುದಾಗಿ ಕುಮಾರಸ್ವಾಮಿ ಹೇಳಿದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا